ಏರ್ಪೋರ್ಟ್ ಆಮೆನಡಿಗೆ ; ಎಂಪಿ ಮೌನಕ್ಕೆ 17ರ ಹುಡುಗನ ಟ್ವೀಟ್ ಅಭಿಯಾನದ ಗುದ್ದು ! 

15-09-20 03:01 pm       Mangalore Reporter   ಕರಾವಳಿ

ಮಂಗಳೂರು ಏರ್ಪೋರ್ಟ್ ಕುಂಟತೊಡಗಿದ್ದನ್ನು ತಿಳಿದ 17 ವರ್ಷದ ಹುಡುಗ ಈಗ ಪ್ರಧಾನಿ ಮೋದಿ ಗಮನ ಸೆಳೆಯುವ ರೀತಿ ಟ್ವೀಟ್ ಮಾಡಿದ್ದಾನೆ. ಇವೆಲ್ಲ ಬೆಳವಣಿಗೆ ಆಗುತ್ತಿದ್ದರೂ ಮಂಗಳೂರಿನ ಸಂಸದರು ಮಾತ್ರ ಮೌನ ರಾಗದಲ್ಲಿದ್ದಾರೆ.

ಮಂಗಳೂರು, ಸೆಪ್ಟಂಬರ್ 15: ಕರ್ನಾಟಕದಲ್ಲಿ ಬೆಂಗಳೂರು ಬಿಟ್ಟರೆ ದೊಡ್ಡ ಏರ್ಪೋರ್ಟ್ ಇರೋದು ಮಂಗಳೂರಲ್ಲಿ. ಆದರೆ, ಕೊರೊನಾ ಕಾರಣದಿಂದ ಸ್ಥಗಿತಗೊಂಡ ಏರ್ಪೋರ್ಟ್ ಇನ್ನೂ ಆಮೆ ನಡಿಗೆಯಿಂದ ಹೊರಬಂದಿಲ್ಲ. ಕೇಂದ್ರ ಸರಕಾರ ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಒಡೆತನಕ್ಕೆ ಮಾರಲು ಹೊರಟಿದ್ದರೆ, ಇತ್ತ ನಿತ್ಯ ಪ್ರಯಾಣಿಕರು ವಿಮಾನ ಸಂಚಾರ ಇಲ್ಲದೆ ಕಂಗಾಲಾಗಿದ್ದಾರೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಪುತ್ತೂರು ಮೂಲದ 17 ವರ್ಷದ ಹುಡುಗ ಕೇಂದ್ರ ಸರಕಾರದ ಗಮನ ಸೆಳೆಯಲು ಮುಂದಾಗಿದ್ದಾನೆ. ಹುಡುಗನ ಟ್ವಿಟರ್ ಅಭಿಯಾನಕ್ಕೆ ವಿಮಾನ ಪ್ರಯಾಣಿಕರು ಬೆಂಬಲಿಸಿದ್ದು, ಟ್ವಿಟರ್ ನಲ್ಲಿ ಭಾರೀ ಸದ್ದು ಮಾಡಿದೆ.

ಆತ ಪುತ್ತೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿ. ಅತ್ತ ಕೇರಳದ ಕಣ್ಣೂರು ಏರ್ಪೋರ್ಟ್ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಸ್ಪರ್ಧೆ ಒಡ್ಡುತ್ತಿದ್ದರೆ, ಇತ್ತ ಬೆಳಗಾವಿಯ ಏರ್ಪೋರ್ಟ್ ಕೂಡ ಸಚಿವ ಸುರೇಶ್ ಅಂಗಡಿಯಿಂದಾಗಿ ಏರುಗತಿಯಲ್ಲಿದೆ. ಆದರೆ, ರಾಜ್ಯದ ಎರಡನೇ ಅತಿ ದೊಡ್ಡ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಇರುವ ಮಂಗಳೂರು ಏರ್ಪೋರ್ಟ್ ಕುಂಟತೊಡಗಿದ್ದನ್ನು ತಿಳಿದ 17 ವರ್ಷದ ಹುಡುಗ ಈಗ ಪ್ರಧಾನಿ ಮೋದಿ ಗಮನ ಸೆಳೆಯುವ ರೀತಿ ಟ್ವೀಟ್ ಮಾಡಿದ್ದಾನೆ. ಒಂದಷ್ಟು ಗೆಳೆಯರ ಜೊತೆ ಸೇರಿ, ಪ್ರಧಾನಿ ಮೋದಿ, ಕೇಂದ್ರ ವಿಮಾನ ಸಚಿವಾಲಯ, ಮಂಗಳೂರು ಏರ್ಪೋರ್ಟ್ ಅಥಾರಿಟಿಗೆ ಟ್ವೀಟ್ ಮಾಡಿದ್ದು, ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಹ್ಯಾಶ್ ಟ್ಯಾಗ್ ಅಭಿಯಾನ ನಡೆಸುವಂತೆ ವಿಮಾನ ಬಳಕೆದಾರರಲ್ಲಿ ಕೋರಿದ್ದಾನೆ.

ಈ ಹ್ಯಾಶ್ ಟ್ಯಾಗ್ ಅಭಿಯಾನಕ್ಕೆ ಮಂಗಳೂರು ಏರ್ಪೋರ್ಟ್ ಯೂಸರ್ಸ್ ಎನ್ನುವ ಪೇಜ್ ನವರು ಬೆಂಬಲ ಸೂಚಿಸಿದ್ದು, ರಿ ಟ್ವೀಟ್ ಮಾಡತೊಡಗಿದ್ದಾರೆ. ಹುಡುಗನ ದೂರಿಗೆ ಸ್ಪಂದಿಸಿರುವ ಮಂಗಳೂರು ಏರ್ಪೋರ್ ಅಥಾರಿಟಿ, ದೂರು ದಾಖಲಿಸಿಕೊಂಡ ಬಗ್ಗೆ ಖಚಿತಪಡಿಸಿದ್ದು ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲು ಸಚಿವಾಲಯದ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ. ಈಗ ದಿನಕ್ಕೆ ಕೇವಲ 20 ವಿಮಾನಗಳಷ್ಟೇ ಲ್ಯಾಂಡ್ ಆಗ್ತಿದೆ. ಹಿಂದೆಲ್ಲಾ ದಿನ ಒಂದರಲ್ಲಿ 70 ವಿಮಾನಗಳು ಬಂದು ಹೋಗುತ್ತಿದ್ದವು. ನಾವು ದೇಶೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಿರಂತರ ವಿಮಾನಗಳ ಹಾರಾಟ ಆಗಬೇಕೆಂಬುದನ್ನು ಬಯಸುತ್ತೇವೆ ಎಂದು ಒಬ್ಬರು ಪ್ರಯಾಣಿಕರು ಬರೆದುಕೊಂಡಿದ್ದಾರೆ.

ಮಂಗಳೂರು ದೇಶದಲ್ಲಿ ಶೈಕ್ಷಣಿಕ ಹಬ್ ಆಗಿ ಗುರುತಿಸ್ಕೊಂಡಿದೆ. ದೇಶದ ವಿವಿಧೆಡೆಯಿಂದ ಮತ್ತು ವಿದೇಶಗಳಿಂದಲೂ ವಿದ್ಯಾರ್ಥಿಗಳು ಮಂಗಳೂರಿಗೆ ಬರುತ್ತಾರೆ. ಇಂಥ ಸಂದರ್ಭದಲ್ಲಿ ಎಲ್ಲ ಕಡೆಯಿಂದಲು ವಿಮಾನ ಸೌಲಭ್ಯಗಳಿದ್ದರೆ ಒಳ್ಳೆದು. ಹಾಗೆಯೇ ದೆಹಲಿ, ಕೊಲ್ಕತಾ, ಚೆನ್ನೈ, ಮುಂಬೈ, ಹೈದ್ರಾಬಾದ್, ತಿರುವನಂತಪುರ ಹೀಗೆ ದೇಶದ ಎಲ್ಲೆಡೆಗೂ ಮಂಗಳೂರಿನಿಂದ ವಿಮಾನ ಸೌಲಭ್ಯ ಏರ್ಪಡಿಸಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ.

ಒಂದೆಡೆ ಕೇಂದ್ರ ಸರಕಾರ ಮಂಗಳೂರು ಏರ್ಪೋಟನ್ನು ಅದಾನಿ ಕಂಪನಿಗೆ ಗುತ್ತಿಗೆ ಕೊಟ್ಟು ಅಭಿವೃದ್ಧಿ ಪಡಿಸುವುದಾಗಿ ಹೇಳುತ್ತಿದೆ. ಇದೇ ವೇಳೆ, ಕಣ್ಣೂರು ವಿಮಾನ ನಿಲ್ದಾಣ ಮಂಗಳೂರಿನ ಪ್ರಯಾಣಿಕರನ್ನು ತನ್ನತ್ತ ಸೆಳೆಯಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ವಿದೇಶಕ್ಕೆ ತೆರಳುವ ಮಂಗಳೂರಿನ ಜನ ದೆಹಲಿ, ಮುಂಬೈ ಹೋಗುವ ಕಷ್ಟದಲ್ಲಿದ್ದಾರೆ. ಇವೆಲ್ಲ ಬೆಳವಣಿಗೆ ಆಗುತ್ತಿದ್ದರೂ ಮಂಗಳೂರಿನ ಸಂಸದರು ಮಾತ್ರ ಮೌನ ರಾಗದಲ್ಲಿದ್ದಾರೆ. ಹೀಗಾಗಿ ಜನರೇ ಸೇರಿ ಈಗ ಅಭಿಯಾನ ಶುರು ಮಾಡಿದ್ದು ಹೊಸ ಬೆಳವಣಿಗೆ.