ಮಿತಿಮೀರಿದ ಮರಳು ಮಾಫಿಯಾ ; ಶಾಸಕರು ಮೌನವಾಗಿದ್ದೇಕೆ - ಬಾವಾ ಪ್ರಶ್ನೆ 

16-09-20 09:43 am       Mangalore Reporter   ಕರಾವಳಿ

ಮರಳು ಮಾಫಿಯಾದಲ್ಲಿ ಶಾಸಕರ ಕೈವಾಡ ಇರುವ ಶಂಕೆಯಿದೆ ಎಂದು ಮಾಜಿ ಶಾಸಕ ಮೊಯ್ದಿನ್ ಬಾವ ಹೇಳಿದ್ದಾರೆ.

ಮಂಗಳೂರು, ಸೆ.16: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನಧಿಕೃತ ಮರಳು ಸಾಗಾಟ ಹೆಚ್ಚಿದ್ದು, ಶಾಸಕ ಭರತ್ ಶೆಟ್ಟಿ ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ. ಮರಳು ಮಾಫಿಯಾದಲ್ಲಿ ಶಾಸಕರ ಕೈವಾಡ ಇರುವ ಶಂಕೆಯಿದೆ ಎಂದು ಮಾಜಿ ಶಾಸಕ ಮೊಯ್ದಿನ್ ಬಾವ ಹೇಳಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೈಕಂಪಾಡಿ, ತಣ್ನೀರುಬಾವಿ, ನಾಯರ್ ಕುದ್ರು, ಮೀನಕಳಿಯ, ಅಡ್ಯಾರ್, ಪಡೀಲ್, ಅದ್ಯಪಾಡಿ ಮೊದಲಾದೆಡೆ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ. ಶಾಸಕರು ವೌನ ವಹಿಸಿದ್ದು ನೋಡಿದರೆ ಅವರ ಕೈವಾಡ ಇರುವ ಸಂದೇಹ ಮೂಡುತ್ತದೆ. ಈ ಬಗ್ಗೆ ಕಾಂಗ್ರೆಸ್ ಲೋಕಾಯುಕ್ತಕ್ಕೆ ದೂರು ನೀಡಲಿದೆ ಎಂದು ಹೇಳಿದರು.

ಪಚ್ಚನಾಡಿ ಸಂತೋಷ ನಗರದಲ್ಲಿ ಕುಡಿಯುವ ನೀರು ಸಿಗದ ಸ್ಥಿತಿಯಿದೆ. ಕ್ಷೇತ್ರದ ಶಾಸಕರು ಹಾಗು ಕಾರ್ಪೋರೇಟರ್‌ಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಸರಕಾರಿ ಸ್ಥಳದಲ್ಲಿ ಅನಧಿಕೃತವಾಗಿ ಮನೆ ಕಟ್ಟಿದರೂ ಶಾಸಕರು ಚಕಾರ ಎತ್ತಿಲ್ಲ. ಕಾಂಗ್ರೆಸ್ ಮತ್ತು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಕಾರಣ ಕೆಲಸ ಸ್ಥಗಿತವಾಗಿದೆ ಎಂದರು.

ಆರ್ಥಿಕ ಕುಸಿತದಿಂದ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳು ಭಾಗಶಃ ಮುಚ್ಚಿವೆ. ಸಾವಿರಾರು ಜನ ಉದ್ಯೋಗ ಇಲ್ಲದಾಗಿದ್ದಾರೆ. ಆದರೆ ಶಾಸಕರು ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಮೊಯ್ದಿನ್ ಬಾವ ಹೇಳಿದರು.

ಈ ವೇಳೆ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಶೆಟ್ಟಿ, ಮನಪಾ ಸದಸ್ಯ ಅನಿಲ್, ಜಿಪಂ ಮಾಜಿ ಸದಸ್ಯ ಮೆಲ್ವಿನ್ ಡಿಸೋಜ, ಉಮೇಶ್ ದಂಡಕೇರಿ ಉಪಸ್ಥಿತರಿದ್ದರು.

Join our WhatsApp group for latest news updates