ದುಂದುವೆಚ್ಚ ತಡೆಗೆ ಮಂಗಳೂರು ವಿವಿಗೆ ಸ್ವಂತ ಸಾಫ್ಟ್ ವೇರ್ ! ಲ್ಯಾಪ್ಟಾಪ್ ಖರೀದಿ ಬಗ್ಗೆ ರಾಜ್ಯಪಾಲರಿಗೆ ವರದಿ - ಕುಲಪತಿ  

06-01-22 10:52 pm       Mangalore Correspondent   ಕರಾವಳಿ

ಅಂಕಪಟ್ಟಿ ಇನ್ನಿತರ ವಿದ್ಯಾರ್ಥಿಗಳ ದಾಖಲೆ ಪತ್ರಗಳು ಖಾಸಗಿ ಕಂಪನಿಯ ಬಳಿ ಇರಬಾರದು, ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ರಾಜ್ಯ ಸರಕಾರ ಸ್ವಂತ ಸಾಫ್ಟ್ ವೇರ್ ಡೆವಲಪ್ ಮಾಡಲು ಸೂಚಿಸಿತ್ತು. ಅದರಂತೆ, ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ 2020ರಲ್ಲಿ ಎಂಯು ಲಿಂಕ್ಸ್ ಹೆಸರಲ್ಲಿ ಹೊಸ ಸಾಫ್ಟ್ ವೇರ್ ಬಳಕೆಗೆ ತರಲಾಗಿದ್ದು, ಜಾರಿ ಹಂತದಲ್ಲಿದೆ.

ಮಂಗಳೂರು, ಜ.6 : ಅಂಕಪಟ್ಟಿ ಇನ್ನಿತರ ವಿದ್ಯಾರ್ಥಿಗಳ ದಾಖಲೆ ಪತ್ರಗಳು ಖಾಸಗಿ ಕಂಪನಿಯ ಬಳಿ ಇರಬಾರದು, ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ರಾಜ್ಯ ಸರಕಾರ ಸ್ವಂತ ಸಾಫ್ಟ್ ವೇರ್ ಡೆವಲಪ್ ಮಾಡಲು ಸೂಚಿಸಿತ್ತು. ಅದರಂತೆ, ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ 2020ರಲ್ಲಿ ಎಂಯು ಲಿಂಕ್ಸ್ ಹೆಸರಲ್ಲಿ ಹೊಸ ಸಾಫ್ಟ್ ವೇರ್ ಬಳಕೆಗೆ ತರಲಾಗಿದ್ದು, ಜಾರಿ ಹಂತದಲ್ಲಿದೆ. ಇದರ ಕಾರಣ, ಅಂಕಪಟ್ಟಿ ಪ್ರಕಟಣೆಯಲ್ಲಿ ಸ್ವಲ್ಪ ವಿಳಂಬವಾಗಿದೆ. ಆದರೆ ಯಾವುದೇ ಹೊಸ ಸಾಫ್ಟ್ ವೇರ್ ಅಳವಡಿಕೆ ಸಂದರ್ಭದಲ್ಲಿ ಅಡೆತಡೆ ಸಹಜ. ಅದನ್ನು ನಿವಾರಿಸಿ ಯಶಸ್ವಿಯಾಗಿ ಜಾರಿಗೊಳಿಸುತ್ತಿದ್ದೇವೆ ಎಂದು ಮಂಗಳೂರು ವಿವಿಯ ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ.ಪಿ.ಎಲ್.ಧರ್ಮ ಹೇಳಿದ್ದಾರೆ.

ನಗರದ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಉಪ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ, ಪರೀಕ್ಷಾಂಗ ಕುಲಸಚಿವ ಪಿ.ಎಲ್.ಧರ್ಮ, ಆಡಳಿತ ವಿಭಾಗದ ಕುಲಸಚಿವ ಕಿಶೋರ್ ಕುಮಾರ್ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಹೊಸ ಸಾಫ್ಟ್ ವೇರ್ ಅನುಷ್ಠಾನ, ಲ್ಯಾಪ್ ಟಾಪ್ ಖರೀದಿಯಲ್ಲಿ ಅವ್ಯವಹಾರದ ಆರೋಪ ಸೇರಿದಂತೆ ವಿವಿಧ ವಿಚಾರಗಳಲ್ಲಿ ಮಾತನಾಡಿದ್ದಾರೆ.

2020-21ನೇ ಸಾಲಿನಲ್ಲಿ ಕೊರೊನಾದಿಂದಾಗಿ ತರಗತಿ ಮೊಟಕುಗೊಂಡು ಪರೀಕ್ಷೆ ನಡೆಯದೆ ಫಲಿತಾಂಶ ಪ್ರಕಟಿಸುವುದು ಕಷ್ಟವಾಗಿತ್ತು. ಆದರೂ ಸಮಸ್ಯೆಗಳನ್ನು ನಿವಾರಿಸಿಕೊಂಡು ಹೊಸ ಸಾಫ್ಚ್ ವೇರ್ ಯಶಸ್ವಿ ಮಾಡಲಾಗಿದೆ. ಹಳೆ ಡಾಟಾಗಳನ್ನು ಪೂರ್ತಿಯಾಗಿ ಈ ಹಿಂದಿನ ಕಂಪನಿಗಳಿಂದ ಪಡೆಯಲಾಗಿದೆ. ಸದ್ಯದಲ್ಲೇ ಪದವಿ ಮತ್ತು ಸ್ನಾತಕೋತ್ತರ ವಿಭಾಗದ ಅಂಕಪಟ್ಟಿಗಳನ್ನು ನೀಡಲಾಗುವುದು. ಡಿಸೆಂಬರ್ ನಲ್ಲಿ ಕೊರೊನಾ ಬಾಧಿತರಿಗೆ, ಅಂತಾರಾಜ್ಯ ಪ್ರಯಾಣ ಸಾಧ್ಯವಾಗದೆ ಪರೀಕ್ಷೆ ಬರೆಯಲು ಆಗದವರಿಗೆ ವಿಶೇಷ ಪರೀಕ್ಷೆ ನಡೆಸಲಾಗಿತ್ತು. ಇದರಿಂದಾಗಿ ಮೌಲ್ಯಮಾಪನ ವಿಳಂಬವಾಗಿದೆ ಎಂದು ಪಿ.ಎಲ್. ಧರ್ಮ ಹೇಳಿದರು.

ಈ ಬಗ್ಗೆ ಹಿಂದೆ 5 ವರ್ಷಗಳಿಗೆ ಖಾಸಗಿ ಕಂಪನಿಗಳಿಗೆ ಪರೀಕ್ಷೆ ನಿರ್ವಹಣೆಗಾಗಿ ಹೊರ ಗುತ್ತಿಗೆ ನೀಡಲಾಗುತ್ತಿತ್ತು. 2015ರಿಂದ 2020ರ ವರೆಗೆ ಮೈಸೂರು ಮೂಲದ ಎಟ್ರಿಕ್ಸ್ ಅನ್ನುವ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆಯ ಮೊತ್ತ ಐದು ವರ್ಷಕ್ಕೆ 10ರಿಂದ 12 ಕೋಟಿ ನೀಡಲಾಗುತ್ತಿತ್ತು ಅನ್ನುವ ಮಾಹಿತಿಗಳಿವೆ. ಈ ಬಗ್ಗೆ ನಿರ್ದಿಷ್ಟ ಮೊತ್ತ ಎಷ್ಟು ಕೊಡಲಾಗಿತ್ತು ಎಂದು ಪಿ.ಎಲ್. ಧರ್ಮ ಅವರಲ್ಲಿ ಕೇಳಿದರೆ, ಸ್ಪಷ್ಟ ಉತ್ತರ ನೀಡಲಿಲ್ಲ. ಒಂದು ವಿದ್ಯಾರ್ಥಿಗೆ ಪರೀಕ್ಷೆ, ಅಂಕಪಟ್ಟಿ ಇತ್ಯಾದಿ ಸೇರಿ 189 ರೂಪಾಯಿ ನೀಡಲಾಗುತ್ತದೆ. ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ನಿರ್ದಿಷ್ಟ ಮೊತ್ತದ ಬಗ್ಗೆ ನಿಖರವಾಗಿ ಮಾಹಿತಿ ಇಲ್ಲ ಎಂದು ಹೇಳಿದರು. ಮಂಗಳೂರು ವಿವಿಯದ್ದೇ ಹೊಸ ಸಾಫ್ಟ್ ವೇರ್ ಬಳಕೆ ಬಂದರೆ, ಈ ರೀತಿಯ ದುಂದುವೆಚ್ಚಕ್ಕೆ ಕಡಿವಾಣ ಬೀಳಲಿದೆ ಎನ್ನುವ ಮಾತುಗಳಿವೆ.

ಎಸ್ಸಿ – ಎಸ್ಟಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೀಡಲು ಲ್ಯಾಪ್ ಟಾಪ್ ಖರೀದಿ ಮಾಡಲಾಗಿದ್ದು, ಕಿಯೋನಿಕ್ಸ್ ಸಂಸ್ಥೆಯಿಂದ 100 ಲ್ಯಾಪ್ ಟಾಪ್ ಖರೀದಿಸಿ ವಿತರಿಸಲಾಗಿದೆ. ಈ ನಡುವೆ ಖಾಸಗಿ ಕಂಪನಿಯಿಂದ ಟೆಂಡರ್ ಆಗಿದ್ದು ಸತ್ಯ. ಆದರೆ ಅವರು ನೀಡಿದ್ದ ಲ್ಯಾಪ್ ಟಾಪ್ ಮತ್ತು ಕಿಯೋನಿಕ್ಸ್ ನೀಡಿರುವ ಲ್ಯಾಪ್ಟಾಪ್ ನಲ್ಲಿ ವ್ಯತ್ಯಾಸ ಇದೆ. ಕಿಯೋನಿಕ್ಸ್ ಸಂಸ್ಥೆಯಿಂದ ಹೈ ಎಂಡ್ ಲ್ಯಾಪ್ಟಾಪ್ ಗಳನ್ನು ಖರೀದಿಸಲಾಗಿದೆ. ಲ್ಯಾಪ್ಟಾಪ್ ನೀಡಬೇಕೆಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ತುರ್ತಾಗಿ ಖರೀದಿಸುವ ಪ್ರಕ್ರಿಯೆ ನಡೆಸಲಾಗಿತ್ತು. ಇದರಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ ಎಂದು ಆಡಳಿತಾಂಗದ ಕುಲಸಚಿವ ಕಿಶೋರ್ ಕುಮಾರ್ ಹೇಳಿದರು.

ಲ್ಯಾಪ್ ಟಾಪ್ ಖರೀದಿ ಬಗ್ಗೆ ರಾಜ್ಯಪಾಲರಿಗೆ ದೂರು ಹೋಗಿದ್ದು, ತನಿಖೆಗೆ ಆದೇಶವಾಗಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ವಿವಿಯ ಕುಲಪತಿ ಯಡಪಡಿತ್ತಾಯ, ಕೆಲವರ ಪಿತೂರಿಯಿಂದಾಗಿ ಈ ವಿಚಾರ ರಾಜ್ಯಪಾಲರಲ್ಲಿಗೆ ಹೋಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರ ಕಚೇರಿಯಿಂದ ನನಗೆ ಸೂಚನೆ ಬಂದಿದೆ. ಯಾವುದೇ ತನಿಖೆಗೆ ಆದೇಶ ಮಾಡಿಲ್ಲ. ಅದಕ್ಕೆ ಉತ್ತರ ಕೊಡಲಿದ್ದೇನೆ ಎಂದು ಹೇಳಿದ್ದಾರೆ. ಕೆಲವು ಮಾಧ್ಯಮಗಳಲ್ಲಿ ಲ್ಯಾಪ್ ಟಾಪ್ ಹಗರಣವೆಂದು ಸುದ್ದಿ ಹಬ್ಬಿಸಲಾಗಿತ್ತು. ಇಲ್ಲಿ ಹಗರಣದ ರೂಪ ಪಡೆದಿದ್ದು ಹೇಗೆ ಎನ್ನುವುದು ಗೊತ್ತಿಲ್ಲ ಎಂದಿದ್ದಾರೆ.

ಎಲ್ಲ ಕಾಲೇಜುಗಳಿಗೆ ಯೂನಿಫಾರ್ಮ್ ಸುತ್ತೋಲೆ

ಇದೇ ವೇಳೆ, ಕಾಲೇಜುಗಳಲ್ಲಿ ಸ್ಕಾರ್ಫ್ – ಕೇಸರಿ ಶಾಲು ವಿವಾದ ಎದ್ದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಲಪತಿ ಯಡಪಡಿತ್ತಾಯ, ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಲಿಕೆಗೆ ಬರುವುದೇ ಕಷ್ಟದಲ್ಲಿ. ಇಂಥ ಸಂದರ್ಭದಲ್ಲಿ ಈ ರೀತಿ ವರ್ತಿಸಿ ಸೆನ್ಸಿಟಿವ್ ಮಾಡುವುದು ಸರಿಯಲ್ಲ. ಇದರಿಂದ ಮನಸ್ಸಿಗೆ ನೋವಾಗಿದೆ. ಮನಸ್ಸುಗಳ ನಡುವೆ ಹಾಳು ಮಾಡುವ ಕೆಲಸ ಆಗಬಾರದು. ಈ ಬಗ್ಗೆ ಒಂದು ಕಮಿಟಿ ರಚಿಸಿ, ಎಲ್ಲ ಕಾಲೇಜುಗಳಿಗೆ ಸಮಾನತೆ ಕಾಪಾಡುವ ವಿಚಾರದಲ್ಲಿ ಸುತ್ತೋಲೆ ಕಳಿಸುವ ಉದ್ದೇಶವಿದೆ. ವಿದ್ಯಾರ್ಥಿಗಳು ಧಾರ್ಮಿಕ ವಿಚಾರ ಬಿಟ್ಟು ನೈತಿಕ ಮೌಲ್ಯ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.

ಮಂಗಳೂರು ವಿವಿಯಲ್ಲಿ ಕಿಯೋನಿಕ್ಸ್ ಲ್ಯಾಪ್ಟಾಪ್ ಖರೀದಿ ಅವ್ಯವಹಾರ ! 62,950 ಮೊತ್ತಕ್ಕೆ ಖಾಸಗಿ ಟೆಂಡರ್, 99,750 ರೂ.ಗೆ ಖರೀದಿ ! ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಹೆಸರಲ್ಲಿ ಕೋಟ್ಯಂತರ ಗೋಲ್ಮಾಲ್ ?!

Mangalore Laptop distribution mafia scam inside Mangalore University, Chancellor shares details says it's a false information shared.