ಸಮುದ್ರ ಮಧ್ಯೆ ನೋಡ ನೋಡುತ್ತಲೇ ಮುಳುಗೇ ಬಿಡ್ತು ಪರ್ಸಿನ್ ಬೋಟ್ ! 29 ಜನರ ರಕ್ಷಣೆ 

16-09-20 04:16 pm       Udupi Reporter   ಕರಾವಳಿ

ಪರ್ಸಿನ್ ಬೋಟ್ ಅಪಘಾತಕ್ಕೀಡಾಗಿ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಮಲ್ಪೆಯಲ್ಲಿ ನಡೆದಿದೆ.

ಉಡುಪಿ, ಸೆಪ್ಟೆಂಬರ್ 16: ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೋಟ್ ಅಪಘಾತಕ್ಕೀಡಾಗಿ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಮಲ್ಪೆಯಲ್ಲಿ ನಡೆದಿದೆ.

ಮಲ್ಪೆಯ ಶ್ರೀಕಾಂತ ಪುತ್ರನ್ ಎಂಬವರಿಗೆ ಸೇರಿದ ಹನುಮಂತ ತೀರ್ಥ ಹೆಸರಿನ ಬೋಟ್‌ ಮಲ್ಪೆ ಬಂದರಿನಿಂದ  ಮೀನುಗಾರಿಕೆಗೆ ಆಳ ಸಮುದ್ರಕ್ಕೆ ತೆರಳಿತ್ತು. ಈ ನಡುವೆ, ಹವಾಮಾನ ವೈಪರೀತ್ಯಗಳಿಂದ ಮೀನುಗಾರಿಕೆ ನಡೆಸಲಾಗದೇ ಮೀನುಗಾರರು ಮಲ್ಪೆಗೆ ಹಿಂದಿರುಗುತ್ತಿದ್ದಾಗ ತಾಂತ್ರಿಕ ಸಮಸ್ಯೆಯಿಂದ ಸೈಂಟ್ ಮೇರಿಸ್ ದ್ವೀಪದ ಬಳಿ ಬೋಟ್ ನ ಸ್ಟೇರಿಂಗ್ ತುಂಡಾಗಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಬೋಟ್ ಮುಳುಗುವ ಹಂತಕ್ಕೆ ತಲುಪಿತು.

ಕೂಡಲೇ ಬೋಟ್‌ನಲ್ಲಿ ಇದ್ದ ಮೀನುಗಾರರು ಕರಾವಳಿ ಕಾವಲು ಪಡೆಯವರಿಗೆ ಮಾಹಿತಿ ನೀಡಿದ್ದರು. ಆ ಹೊತ್ತಿಗೆ ಮಲ್ಪೆಯ ನಾಡದೋಣಿಯಲ್ಲಿ ತೆರಳಿದ್ದ ಮೀನುಗಾರರು ಬೋಟ್‌ನಲ್ಲಿ ಇದ್ದ 29 ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ನಂತರ ಬೋಟ್ ಸಂಪೂರ್ಣ ಮುಳುಗಡೆಯಾಗಿದ್ದು, ಬೋಟ್ ಅನ್ನು ದಡಕ್ಕೆ ಎಳೆದು ತರುವ ಪ್ರಯತ್ನ ಮಾಡಲಾಯಿತಾದರೂ ಬೋಟ್ ಈ ವೇಳೆ ಎರಡು ತುಂಡಾಗಿದೆ.

Join our WhatsApp group for latest news updates