ಭಾರತ - ದುಬೈ ವಿಮಾನ ಹಾರಾಟ 15 ದಿನ ರದ್ದು ! 

18-09-20 01:31 pm       Mangalore Reporter   ಕರಾವಳಿ

ಭಾರತ - ಯುಎಇ ನಡುವಿನ ವಿಮಾನ ಹಾರಾಟವನ್ನು 15 ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ. ಸೆ.18ರಿಂದ ಅಕ್ಟೋಬರ್ 3 ರ ವರೆಗೆ ನಿಗದಿಯಾಗಿದ್ದ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. 

ಮಂಗಳೂರು, ಸೆಪ್ಟಂಬರ್ 18: ಭಾರತ - ಯುಎಇ ನಡುವಿನ ವಿಮಾನ ಹಾರಾಟವನ್ನು 15 ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ. ಇತ್ತೀಚೆಗೆ ಭಾರತದಿಂದ ದುಬೈಗೆ ತೆರಳಿದ್ದ ಏರ್ ಇಂಡಿಯಾ ವಿಮಾನದಲ್ಲಿ ಇಬ್ಬರು ಪ್ರಯಾಣಿಕರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಈ ಹಿನ್ನೆಲೆಯಲ್ಲಿ ಸೆ.18ರಿಂದ ಅಕ್ಟೋಬರ್ 3 ರ ವರೆಗೆ ನಿಗದಿಯಾಗಿದ್ದ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. 

ಭಾರತ ಮತ್ತು ದುಬೈ ನಡುವೆ ಉಭಯ ರಾಷ್ಟ್ರಗಳ ಒಪ್ಪಂದದಂತೆ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗಿತ್ತು. ಅದರಂತೆ ಭಾರತ ಮತ್ತು ದುಬೈನಲ್ಲಿ ಲಾಕ್ಡೌನ್ ಸಮಯದಲ್ಲಿ ಬಾಕಿಯಾಗಿದ್ದ ಪ್ರಯಾಣಿಕರಿಗೆ ತೆರಳಲು ಅನುಕೂಲವಾಗಿತ್ತು. ಆದರೆ, ಈ ಒಪ್ಪಂದ ಪ್ರಕಾರ ಪ್ರಯಾಣಿಕರು ತಮಗೆ ಕೊರೊನಾ ಸೋಂಕು ಇಲ್ಲವೆಂದು ವೈದ್ಯರ ದೃಢೀಕರಣ ಪತ್ರ ತರಬೇಕು. ಅಲ್ಲದೆ, ಪ್ರಯಾಣಿಕರು ಕಠಿಣ ಶಿಸ್ತನ್ನು ಪಾಲಿಸಬೇಕೆಂಬ ನಿಯಮ ಹೇರಲಾಗಿತ್ತು. ಇದೀಗ ದುಬೈಗೆ ಪ್ರಯಾಣಿಸಿದ ಇಬ್ಬರಲ್ಲಿ ಕೊರೊನಾ ದೃಢಪಟ್ಟಿದ್ದು ವಿಮಾನ ಹಾರಾಟಕ್ಕೆ ತೊಡಕಾಗಿ ಪರಿಣಮಿಸಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ದುಬೈಗೆ ತೆರಳಬೇಕಿದ್ದ ವಿಮಾನಗಳು ನಿಗದಿಯಂತೆ ಶಾರ್ಜಾಕ್ಕೆ ಹಾರಾಟ ನಡೆಸಲಿವೆ. 

ಇದೇ ವೇಳೆ, ವಂದೇ ಭಾರತ್ ಮಿಷನ್ ಯೋಜನೆಯಡಿ ವಿವಿಧ ದೇಶಗಳಲ್ಲಿ ಸಿಕ್ಕಿಬಿದ್ದಿರುವ ಭಾರತ ಮೂಲದವರನ್ನು ತಾಯ್ನಾಡಿಗೆ ಕರೆತರುವ ಕೆಲಸ ಮುಂದುವರಿದಿದ್ದು ಇದರ ಮುಂದುವರಿದ ಭಾಗವಾಗಿ ಕಠಿಣ ನಿಮಯಗಳೊಂದಿಗೆ ಕೆಲವು ದೇಶಗಳಿಗೆ ವಿಮಾನ ಹಾರಾಟ ಆರಂಭಗೊಂಡಿತ್ತು.

Join our WhatsApp group for latest news updates