ಹಿಜಾಬ್ ಸಂಘರ್ಷ ; ಕಿಡಿ ಹೊತ್ತಿಸಿದ್ದು ಯಾರು? ತುಪ್ಪ ಸುರಿದಿದ್ದು ಯಾರು? ಬೆಂಕಿ ಹಚ್ಚಿದವರು ಯಾರು ? ಕ್ಯಾಂಪಸ್ ಫ್ರಂಟ್, ಎಬಿವಿಪಿ ಪಾಲು ಎಷ್ಟು ?

10-02-22 09:39 pm       HK Desk news   ಕರಾವಳಿ

ಮುಸ್ಲಿಂ ವಿದ್ಯಾರ್ಥಿನಿಯರ ಶಿರವಸ್ತ್ರದ ವಿವಾದ ರಾಜ್ಯದಲ್ಲಿ ಈ ಪರಿ ಬೆಂಕಿ ಹತ್ತಿಕೊಳ್ಳುತ್ತೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ. ಉಡುಪಿಯಲ್ಲಿ ಕೆಲವು ವಿಚಾರಗಳು ಮುನ್ನೆಲೆಗೆ ಬಂದಿದ್ದು, ವಿವಾದ ಹುಟ್ಟಿಕೊಳ್ಳಲು ಇದೇ ಕಾರಣ ಅನ್ನುವ ಮಾತು ಕೇಳಿಬರುತ್ತಿದೆ.

ಉಡುಪಿ, ಫೆ.10 : ಮುಸ್ಲಿಂ ವಿದ್ಯಾರ್ಥಿನಿಯರ ಶಿರವಸ್ತ್ರದ ವಿವಾದ ರಾಜ್ಯದಲ್ಲಿ ಈ ಪರಿ ಬೆಂಕಿ ಹತ್ತಿಕೊಳ್ಳುತ್ತೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ. ಆದರೆ ಈ ವಿವಾದ ಹೇಗೆ ಹುಟ್ಟಿಕೊಳ್ತು ? ಅದಕ್ಕೆ ಉಪ್ಪು ಖಾರ ಹಾಕಿ ಬೆಂಕಿ ಹತ್ತಿಸಿದವರು ಯಾರು ? ಇದರ ಹಿಂದೆ ಗಲಭೆ ಎಬ್ಬಿಸುವ ಅಥವಾ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹುನ್ನಾರದ ಷಡ್ಯಂತ್ರ ಇದೆಯಾ ಅನ್ನುವ ಬಗ್ಗೆ ತೀವ್ರ ಚರ್ಚೆ ಶುರುವಾಗಿದೆ. ಇದೇ ವೇಳೆ, ಉಡುಪಿಯಲ್ಲಿ ಕೆಲವು ವಿಚಾರಗಳು ಮುನ್ನೆಲೆಗೆ ಬಂದಿದ್ದು, ವಿವಾದ ಹುಟ್ಟಿಕೊಳ್ಳಲು ಇದೇ ಕಾರಣ ಅನ್ನುವ ಮಾತು ಕೇಳಿಬರುತ್ತಿದೆ.

ಕಳೆದ ಅಕ್ಟೋಬರ್ ತಿಂಗಳಲ್ಲಿ ಮಣಿಪಾಲದಲ್ಲಿ ನಡೆದಿದ್ದ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಘಟನೆ ಖಂಡಿಸಿ ಎಬಿವಿಪಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಮಣಿಪಾಲದ ಕಾಲೇಜು ವಿದ್ಯಾರ್ಥಿನಿಯೇ ಮಹಿಳಾ ಠಾಣೆಗೆ ದೂರು ನೀಡಿದ್ದು, ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದರು. ಆದರೆ, ಪ್ರಕರಣದಲ್ಲಿ ಇನ್ನೇನೋ ಇದೆಯೆಂದು ಹೇಳಿ ವಿದ್ಯಾರ್ಥಿನಿಯರನ್ನು ಒಟ್ಟುಗೂಡಿಸಿ ಪ್ರತಿಭಟನೆ ನಡೆಸಲಾಗಿತ್ತು. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆದಿದ್ದು, ಅದರಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಕೂಡ ಕಾಣಿಸಿಕೊಂಡಿದ್ದರು. ಅಕ್ಟೋಬರ್ 29ರಂದು ಪ್ರತಿಭಟನೆ ನಡೆದಿದ್ದು, ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಅಲ್ಲದೆ, ಕಾರ್ಯಕ್ರಮದ ಫೋಟೋ, ವಿಡಿಯೋಗಳು ಫೇಸ್ಬುಕ್ ಇನ್ನಿತರ ಜಾಲತಾಣದಲ್ಲಿಯೂ ಹರಿದಾಡಿತ್ತು. ಆದರೆ ಮುಂಚೂಣಿಯಲ್ಲಿ ಹಿಜಾಬ್ ಧರಿಸಿ ನಿಂತಿದ್ದ ಮುಸ್ಲಿಂ ವಿದ್ಯಾರ್ಥಿನಿ ಎಬಿವಿಪಿ ಬ್ಯಾನರ್ ಹಿಡಿದಿದ್ದು ಕೆಲವರ ಕಣ್ಣು ಕುಕ್ಕುವಂತೆ ಮಾಡಿತ್ತು ಅನ್ನೋ ಮಾತು ಕೇಳಿಬರುತ್ತಿದೆ. ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದ ಏಳೆಂಟು ಮಂದಿಯನ್ನು ಆಬಳಿಕ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು ಭೇಟಿಯಾಗಿ, ಎಬಿವಿಪಿ ಆಯೋಜಿಸಿದ್ದ ಪ್ರತಿಭಟನೆಗೆ ನೀವ್ಯಾಕೆ ಹೋಗಿದ್ದು ಎಂದು ತರಾಟೆಗೆತ್ತಿಕೊಂಡಿದ್ದಾರೆ. ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಘಟನೆಯನ್ನು ಖಂಡಿಸಿ, ಆಕೆಗೆ ನ್ಯಾಯ ಸಿಗಬೇಕು ಎನ್ನುವ ಏಕೈಕ ಉದ್ದೇಶದಿಂದ ಪ್ರತಿಭಟನೆಗೆ ತೆರಳಿದ್ದ ವಿದ್ಯಾರ್ಥಿನಿಯರಲ್ಲಿ ಧರ್ಮದ ಲೇಪ ಹಚ್ಚುವ ಪ್ರಯತ್ನ ನಡೆದಿತ್ತು.

ಎಬಿವಿಪಿ ಬ್ಯಾನರ್ ಹಿಡಿದು ಕೇಸರಿ ಬಾವಟು ಹಿಡಿದುಕೊಂಡಿದ್ದರು ಎಂಬ ಏಕೈಕ ಕಾರಣಕ್ಕೆ ಶಾಕ್ ಆಗಿದ್ದ ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರು, ಅದೇ ವಿದ್ಯಾರ್ಥಿನಿಯರಿಂದ ಉಡುಪಿ ಹೆಮ್ಮಕ್ಕಳ ಸರಕಾರಿ ಕಾಲೇಜಿನಲ್ಲಿ ಮೊದಲ ಬಾರಿಗೆ ಕ್ಯಾಂಪಸ್ ಫ್ರಂಟ್ ಬೋರ್ಡ್ ಹಿಡಿಯುವಂತೆ ಮಾಡಿದ್ದರು. ಹಿಂದುಗಳ ಸಂಘಟನೆಯ ವಿರುದ್ಧ ನಾವು ದನಿ ಎತ್ತಬೇಕು ಎಂದು ಯುವತಿಯರ ಮೆದುಳನ್ನು ವಾಶ್ ಮಾಡಿದ್ದರು. ಎಂಟು ಮಂದಿ ಹುಡುಗಿಯರು ಸೇರಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಬ್ಯಾನರ್ ಹಿಡಿದು ನಿಂತ ಫೋಟೋವನ್ನು ತೆಗೆದು ನಾಯಕರು ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಹಾಕಿದ್ದರು.

ಆದರೆ ಮುಯ್ಯಿಗೆ ಮುಯ್ಯಿ ಎನ್ನುವ ರೀತಿ ನಡೆದಿದ್ದ ಈ ಘಟನೆಯಿಂದ ಕಾಲೇಜು ಕ್ಯಾಂಪಸ್ ನಲ್ಲಿ ಬೇರೆಯದ್ದೇ ರೀತಿಯ ಪರಿಣಾಮಗಳು ಆಗಿದ್ದವು. ಕ್ಯಾಂಪಸ್ ಫ್ರಂಟ್ ಸೇರಿದ್ದ ಒಂದಷ್ಟು ಮುಸ್ಲಿಂ ವಿದ್ಯಾರ್ಥಿನಿಯರು, ಹಿಂದು ವಿದ್ಯಾರ್ಥಿನಿಯರ ಜೊತೆ ಬೆರೆಯುವುದನ್ನು ಕಡಿಮೆ ಮಾಡಿದ್ದರು. ನಿಧಾನಕ್ಕೆ ವಿದ್ಯಾರ್ಥಿನಿಯರ ನಡುವೆ ವೈಮನಸ್ಸು ಏರ್ಪಟ್ಟಿದ್ದು, ಇದರ ನಡುವೆ ಹಿಜಾಬ್ ವಿಚಾರ ಮುನ್ನೆಲೆಗೆ ಬಂದಿತ್ತು. ಆ ಕಾಲೇಜಿನಲ್ಲಿ ಹಿಂದಿನಿಂದಲೂ ತರಗತಿಯೊಳಗೆ ಹಿಜಾಬ್ ಧರಿಸುವುದು ನಿಷೇಧ ಇತ್ತಾದರೂ ಅಷ್ಟೇನು ಕಟ್ಟುನಿಟ್ಟು ಇರಲಿಲ್ಲ. ಕೆಲವೊಬ್ಬರು ಹಿಜಾಬ್ ಧರಿಸಿ ಬರುತ್ತಿದ್ದರೆ, ಮತ್ತೊಂದಷ್ಟು ಮಂದಿ ಹಿಜಾಬನ್ನು ತರಗತಿಯಲ್ಲಿ ತೆಗೆದಿಟ್ಟು ಭುಜಕ್ಕೆ ಹಾಕ್ಕೊಳ್ಳುತ್ತಿದ್ದರು. ಇದಕ್ಕೆ ಆಕ್ಷೇಪ ಏನೂ ಇದ್ದಿರಲಿಲ್ಲ. ಆದರೆ ಯಾವಾಗ ಹಿಂದು – ಮುಸ್ಲಿಂ ಎಂದು ಆಂತರಿಕ ಭಿನ್ನಾಭಿಪ್ರಾಯ ಎದ್ದಿತ್ತೋ, ಹಿಜಾಬ್ ಬಗ್ಗೆಯೂ ಪ್ರಶ್ನೆ ಎದ್ದಿತ್ತು.

ಈ ಪ್ರಶ್ನೆಯನ್ನು ಮೊದಲು ಎತ್ತಿಕೊಂಡು ಪ್ರಿನ್ಸಿಪಾಲ್ ಬಳಿಗೆ ಹೋಗಿದ್ದು ಹಿಂದು ವಿದ್ಯಾರ್ಥಿನಿಯರು. ಒಂದಷ್ಟು ಮಂದಿ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಿಕೊಂಡೇ ತರಗತಿಗೆ ಬರುತ್ತಾರೆ. ಇದಕ್ಕೆ ಅವಕಾಶ ನೀಡಬಾರದು ಎಂಬ ಮನವಿಯನ್ನು ಎಬಿವಿಪಿ ಪರ ಇದ್ದ ವಿದ್ಯಾರ್ಥಿನಿಯರು ಪ್ರಾಂಶುಪಾಲರ ಬಳಿಗೆ ಒಯ್ದಿದ್ದರು. ಅದನ್ನೇ ನೆಪವಾಗಿಸಿದ ಪ್ರಿನ್ಸಿಪಾಲ್, ಎಂಟು ಮಂದಿ ವಿದ್ಯಾರ್ಥಿನಿಯರನ್ನು ಕರೆದು ಹಿಜಾಬ್ ಧರಿಸಿ ತರಗತಿಗೆ ಬರಬಾರದು. ನಮ್ಮಲ್ಲಿ ಹಿಂದಿನಿಂದಲೂ ಸಮವಸ್ತ್ರದ ಕಡ್ಡಾಯ ಇದೆಯಲ್ಲಾ ಎಂದು ಮೂಗು ಮುರಿದಿದ್ದರು.

ಆದರೆ ವಿದ್ಯಾರ್ಥಿನಿಯರ ಮೂಲಕ ಈ ಬಗ್ಗೆ ಮಾಹಿತಿ ಪಡೆದ ಕ್ಯಾಂಪಸ್ ಫ್ರಂಟ್, ಹಿಜಾಬ್ ಧರಿಸಿಕೊಂಡೇ ತರಗತಿಗೆ ಹೋಗುವಂತೆ ಸೂಚನೆ ನೀಡಿತ್ತು. ಕ್ಯಾಂಪಸ್ ಫ್ರಂಟ್ ನಾಯಕರ ಸೂಚನೆಯಂತೆ, ವಿದ್ಯಾರ್ಥಿನಿಯರು ತಮ್ಮ ಶಿರವಸ್ತ್ರವನ್ನು ತೆಗೆದಿಡಲು ನಿರಾಕರಿಸಿದ್ದಲ್ಲದೆ ಪ್ರಾಂಶುಪಾಲರ ಮುಂದೆಯೇ ಪಟ್ಟು ಹಿಡಿದಿದ್ದರು. ನವೆಂಬರ್ ವೇಳೆಗೆ ಈ ರೀತಿಯ ಅಸಮಾಧಾನದ ಹೊಗೆ ಎದ್ದಿತ್ತು. ಅಷ್ಟರಲ್ಲೇ ಕಾಲೇಜು ಪ್ರಾಂಶುಪಾಲರು, ವಿದ್ಯಾರ್ಥಿನಿಯರ ಪೋಷಕರನ್ನು ಕರೆದು ಮನವೊಲಿಕೆ ಮಾಡಿದ್ದರು. ಪೋಷಕರು ಒಪ್ಪಿಗೆ ನೀಡಿದ್ದು, ವಿದ್ಯಾರ್ಥಿನಿಯರು ನಾಲ್ಕು ದಿನದ ಮಟ್ಟಿಗೆ ಹಿಜಾಬ್ ತೆಗೆದಿಟ್ಟೇ ತರಗತಿಗೆ ಬರತೊಡಗಿದ್ದರು. ಆದರೆ ನಾಲ್ಕು ದಿನಗಳ ನಂತರ ಹಿಜಾಬ್ ತೆಗೆಯದೇ ತರಗತಿಗೆ ಬಂದಿದ್ದನ್ನು ಕಾಲೇಜಿನ ಎಬಿವಿಪಿ ಪರ ಇದ್ದ ವಿದ್ಯಾರ್ಥಿನಿಯರು ವಿರೋಧಿಸಿದ್ದು ಕ್ಯಾಂಪಸ್ ಒಳಗಡೆಯೇ ಬಿಸಿಯೇರುವಂತೆ ಮಾಡಿತ್ತು.

ಅಲ್ಲೀ ವರೆಗೂ ಶಾಂತವಾಗಿದ್ದ ಕಾಲೇಜಿನಲ್ಲಿ ನಿಧಾನಕ್ಕೆ ಹಿಜಾಬ್ ವಿಚಾರ ಅಪಸ್ವರ ಎಬ್ಬಿಸಿತ್ತು. ಬಳಿಕ ವಿಷಯ ಕಾಲೇಜು ಆಡಳಿತದ ಗಮನಕ್ಕೆ ಬಂದಿದ್ದು ಎಸ್ಡಿಎಂಸಿ ಅಧ್ಯಕ್ಷ ರಘುಪತಿ ಭಟ್ ಎಂಟ್ರಿಯಾಗಿದ್ದರು. ಅಲ್ಲದೆ, ಪೋಷಕರು ಮತ್ತು ವಿದ್ಯಾರ್ಥಿನಿಯರನ್ನು ಕರೆದು ತಿಳಿಹೇಳಿ ಮನವೊಲಿಕೆಯನ್ನೂ ಮಾಡಿದ್ದಾರೆ. ಎಂಟು ಮಂದಿ ವಿದ್ಯಾರ್ಥಿನಿಯರಲ್ಲಿ ಇಬ್ಬರು ಶಾಸಕರ ಮಾತಿಗೆ ಒಪ್ಪಿ ಹಿಜಾಬ್ ತೆಗೆದಿಟ್ಟು ಕಾಲೇಜಿಗೆ ಬರತೊಡಗಿದ್ದರು. ಆದರೆ ಆರು ಮಂದಿ ಹಿಜಾಬ್ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರಿಂದ ವಿಚಾರ ಗಂಭೀರ ಹಂತಕ್ಕೆ ಹೋಗಿತ್ತು. ಶಾಸಕರು ಕೂಡಲೇ ಈ ಬಗ್ಗೆ ಶಿಕ್ಷಣ ಇಲಾಖೆಗೆ ಪತ್ರ ಬರೆದು, ರಾಜ್ಯ ಸರಕಾರದ ಗಮನಕ್ಕೆ ತಂದಿದ್ದಾರೆ. ಇದೇ ವೇಳೆಗೆ ಕೋವಿಡ್ ಸೋಂಕು ಹೆಚ್ಚಿದ್ದರಿಂದ ಶಾಲೆ, ಕಾಲೇಜಿಗೆ ಹತ್ತು ದಿನ ರಜೆ ಸಾರಲಾಗಿತ್ತು.

ಡಿಸೆಂಬರ್ ಮಧ್ಯೆ ಮತ್ತೆ ಕಾಲೇಜು ಆರಂಭಗೊಂಡಾಗ, ಹಿಜಾಬ್ ಮುಂದಿಟ್ಟು ಆರು ವಿದ್ಯಾರ್ಥಿನಿಯರು ತಗಾದೆ ತೆಗೆದಿದ್ದರು. ಡಿಸೆಂಬರ್ ಕೊನೆಯಲ್ಲಿ ಈ ಬಗ್ಗೆ ವಿದ್ಯಾರ್ಥಿನಿಯರು ಲಿಖಿತವಾಗಿ ತಮಗೆ ಹಿಜಾಬ್ ಧರಿಸಿಯೇ ತರಗತಿಗೆ ಎಂಟ್ರಿ ನೀಡಬೇಕೆಂದು ಮನವಿಯನ್ನೂ ಕೊಟ್ಟಿದ್ದರು. ಮನವಿಯ ಬಗ್ಗೆ ಕಾಲೇಜು ಆಡಳಿತದಿಂದ ತಿರಸ್ಕಾರ ಬರುತ್ತಿದ್ದಂತೆ, ಮರುದಿನವೇ ವಿದ್ಯಾರ್ಥಿನಿಯರು ಕಾಲೇಜು ಹೊರಗಡೆ ನಿಂತಿದ್ದರು. ಡಿ.31ರಂದು ಮೊದಲ ಬಾರಿಗೆ ಜೊತೆಯಾಗಿ ಕಾಲೇಜು ಹೊರಭಾಗದಲ್ಲಿ ನಿಂತುಕೊಂಡಿದ್ದ ಫೋಟೋಗಳು ಜಾಲತಾಣದಲ್ಲಿ ಹರಿದಾಡಿದ್ದವು. ಸ್ಥಳೀಯ ವಾಹಿನಿ, ಮಾಧ್ಯಮಗಳಲ್ಲಿ ಬರದಿದ್ದರೂ, ಹೊರ ದೇಶದ ಅಲ್ ಝಜೀರಾ ಟಿವಿಯಲ್ಲಿ ಈ ಫೋಟೋ, ಸುದ್ದಿ ಬಂದಿತ್ತು ಅನ್ನುವುದನ್ನು ಶಾಸಕ ರಘುಪತಿ ಭಟ್ ಹೇಳುತ್ತಾರೆ.

ಆನಂತರ ದಿನವೂ ವಿದ್ಯಾರ್ಥಿನಿಯರು ಹೊರಗೆ ನಿಂತಿದ್ದು ನಿಧಾನಕ್ಕೆ ಹಿಜಾಬ್ ವಿವಾದ ಕಾವೇರತೊಡಗಿತ್ತು. ಈ ಬಗ್ಗೆ ಶಾಸಕರು, ಕಾಲೇಜಿನ ಆಡಳಿತ ಸರದಿಯಂತೆ ಸಭೆ ನಡೆಸಿದರೂ, ಪ್ರಯೋಜನಕ್ಕೆ ಬರಲಿಲ್ಲ. ಜನವರಿ ಕೊನೆಯ ವಾರದಲ್ಲಿ ಶಾಸಕರು ಈ ಬಗ್ಗೆ ಸ್ಪಷ್ಟ ಮಾತುಗಳಲ್ಲಿ ಹಿಜಾಬ್ ಬೇಕೆಂದು ಪಟ್ಟು ಹಿಡಿಯುವ ಮಂದಿ ಕಾಲೇಜಿಗೆ ಬರಬೇಡಿ ಎಂದಿದ್ದು ಮತ್ತಷ್ಟು ಉಪ್ಪು ಸುರಿದಿತ್ತು. ನೀವು ಬೇಕಾದರೆ ಆನ್ಲೈನ್ ಕ್ಲಾಸ್ ತೆಗೆದುಕೊಳ್ಳಿ. ಕಾಲೇಜು ಮುಂದೆ ಬಂದು ಹೈಡ್ರಾಮಾ ನಡೆಸುವುದು ಬೇಡ. ಸಮವಸ್ತ್ರದ ಪದ್ಧತಿ ನಮ್ಮ ಕಾಲೇಜಿನಲ್ಲಿ ಹಿಂದಿನಿಂದಲೂ ಇತ್ತು. ಈಗ ಹೊಸತಲ್ಲ. ಇದರ ಹಿಂದೆ ಯಾರಿದ್ದಾರೆ ಗೊತ್ತು ಎನ್ನುವ ಮೂಲಕ ಸ್ವರ ಎಬ್ಬಿಸಿದ್ದರು.

ಆದರೆ ಮುಸ್ಲಿಂ ವಿದ್ಯಾರ್ಥಿನಿಯರು, ನಾವು ಹಿಂದಿನಿಂದಲೂ ಇದೇ ರೀತಿ ಹಿಜಾಬ್ ಹಾಕ್ಕೊಂಡೇ ಬರುತ್ತಿದ್ದೇವೆ. ಈವರೆಗೂ ಇಲ್ಲದ ನಿಯಮ ಈಗ ಯಾಕೆ.. ನಮ್ಮ ಧಾರ್ಮಿಕ ಹಕ್ಕನ್ನು ಅನುಸರಿಸಲು ಅವಕಾಶ ಕೊಡಿ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದು ವಿವಾದಕ್ಕೆ ತಿರುಗಿಸಿತ್ತು. ಇದೇ ವೇಳೆ, ಹಿಂದು ಹುಡುಗಿಯರು ಕೂಡ ಕೇಸರಿ ಶಾಲು ಹಾಕ್ಕೊಂಡು ಕಾಲೇಜಿಗೆ ಎಂಟ್ರಿಯಾಗಿದ್ದು ವಿವಾದ ಏಳುವಂತೆ ಮಾಡಿತ್ತು. ಕೆಲವರ ರಾಜಕೀಯ ಕುಮ್ಮಕ್ಕಿನಿಂದ ಕೇಸರಿ ಶಾಲು ಎಂಟ್ರಿಯಾಗಿದೆ ಎನ್ನಲಾಗುತ್ತಿದ್ದರೂ, ಅದನ್ನು ಬಿಜೆಪಿ ನಾಯಕರು ಕ್ರಿಯೆಗೆ ಪ್ರತಿಕ್ರಿಯೆ ಎಂದು ಸಮರ್ಥಿಸಿದ್ದರು. ಆನಂತರ ಧಿಗ್ಗನೆ ಕುಂದಾಪುರದ ಕಾಲೇಜಿನಲ್ಲೂ ಇದೇ ರೀತಿಯ ಕೇಸರಿ ಶಾಲಿನ ಕಿಚ್ಚು ಹೊತ್ತಿಕೊಂಡಿತ್ತು. ಅಲ್ಲಿಯೂ ಕೇಸರಿ ಶಾಲು ಕಾಣಿಸಿಕೊಂಡು ಹಿಜಾಬ್ ಬ್ಯಾನ್ ಮಾಡುವಂತೆ ಒತ್ತಡ ಹಾಕಲಾಗಿತ್ತು. ಕ್ಯಾಂಪಸ್ ಫ್ರಂಟ್ ಹೊತ್ತಿಸಿದ್ದ ಬೆಂಕಿಯನ್ನು ಹಿಂದು ಸಂಘಟನೆಗಳು ತುಪ್ಪ ಹಾಕಿ ಮತ್ತಷ್ಟು ಉರಿಯುವಂತೆ ಮಾಡಿದವು. ಕುಂದಾಪುರ, ಉಡುಪಿಯ ಖಾಸಗಿ ಕಾಲೇಜುಗಳಲ್ಲಿಯೂ ಕೇಸರಿ ಕಾಣಿಸಿಕೊಂಡಿತ್ತು. ಶಾಸಕ ರಘುಪತಿ ಭಟ್ಟರ ಕೋರಿಕೆಯಂತೆ ಫೆಬ್ರವರಿ 5ರಂದು ರಾಜ್ಯ ಸರಕಾರ, ಎಲ್ಲ ಸರಕಾರಿ ಪಿಯು ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ಆದೇಶ ಮಾಡಿದ್ದು ಇಡೀ ರಾಜ್ಯಕ್ಕೆ ಹಿಜಾಬ್ ಕಿಚ್ಚು ಆವರಿಸುವಂತೆ ಮಾಡಿತ್ತು.

ಒಂದು ಕಡೆ ಹಿಂದು ಸಂಘಟನೆಗಳ ಕುಮ್ಮಕ್ಕಿನಿಂದ ಕೇಸರಿ ಶಾಲು, ಪೇಟ ಬಂದಿದ್ದರೆ, ಹಿಜಾಬ್ ಧರಿಸಿಕೊಂಡೇ ಮೊದಲಿನಿಂದಲೂ ಶಾಲೆ, ಕಾಲೇಜು ಹತ್ತಿದ್ದವರು ತಮ್ಮ ಧಾರ್ಮಿಕ ಹಕ್ಕೆಂದು ಹೇಳಿ ಕ್ಯಾಂಪಸ್ ಫ್ರಂಟ್, ಎಸ್ಡಿಪಿಐ ನಾಯಕರ ಕುಮ್ಮಕ್ಕಿನಲ್ಲಿ ಬೀದಿಗೆ ಬಂದಿದ್ದಾರೆ. ಶಿವಮೊಗ್ಗ, ಬಾಗಲಕೋಟದಲ್ಲಂತೂ ಕಿಚ್ಚು ಹೊತ್ತಿಕೊಂಡು ಹಿಂಸೆಗೆ ತಿರುಗಿತ್ತು. ಉಡುಪಿ, ಕುಂದಾಪುರದಲ್ಲಿ ಹೊತ್ತಿದ್ದ ಹಿಜಾಬ್ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯ ವಸ್ತುವಾಗಿ ಬಿಟ್ಟಿದೆ. ಇದಕ್ಕೆಲ್ಲ ಯಾರು ಕಾರಣ ಅಂದ್ರೆ, ಎರಡು ಕಡೆಯೂ ಬೆರಳು ತೋರಿಸಲೇಬೇಕು ಅಷ್ಟೇ. 

ರಾಜಕೀಯ ಅಸ್ತ್ರವಾಯ್ತು ಕೇಸರಿ- ಹಿಜಾಬ್ !

ಸದ್ಯಕ್ಕೆ ರಾಜ್ಯದ 12 ಜಿಲ್ಲೆಗಳ 25ಕ್ಕೂ ಹೆಚ್ಚು ಸರಕಾರಿ ಮತ್ತು ಖಾಸಗಿ ಪಿಯು ಕಾಲೇಜುಗಳಲ್ಲಿ ಹಿಜಾಬ್ ಕಿಚ್ಚು ಹೊತ್ತಿಕೊಂಡಿದೆ. ಆಯಾ ಭಾಗಗಳಲ್ಲಿ ಪ್ರಬಲವಾಗಿರುವ ಹಿಂದು ಜಾಗರಣ ವೇದಿಕೆ. ಬಜರಂಗದಳ, ಶ್ರೀರಾಮ ಸೇನೆ ಹೀಗೆ ಕೇಸರಿ ಪಡೆಗಳು ಹಿಂದು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಒದಗಿಸಿ, ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದೆ. ಜೈಶ್ರೀರಾಮ್ ಘೋಷಣೆಗೆ ಪ್ರತಿಯಾಗಿ ಅಲ್ಲಾಹು ಅಕ್ಬರ್ ಘೋಷಣೆಯೂ ಕೇಳಿಬಂದಿದೆ. ಶಿರವಸ್ತ್ರದ ಕಾರಣಕ್ಕೆ ಹೊತ್ತಿಕೊಂಡ ವಿವಾದ ಈಗ ರಾಷ್ಟ್ರ ಮಟ್ಟದಲ್ಲಿ ಹಿಂದು- ಮುಸ್ಲಿಂ ನಡುವೆ ಬಿಸಿ ಏರುವಂತೆ ಮಾಡಿದೆ. ಕರಾವಳಿಯಲ್ಲಿ ಎಸ್ಡಿಪಿಐ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಇದನ್ನು ಅಸ್ತ್ರವಾಗಿಸಿಕೊಂಡರೆ, ಇತರ ಕಡೆಗಳಲ್ಲಿ ಬಿಜೆಪಿ ತಮ್ಮ ಪರಿವಾರ ಸಂಘಟನೆಗಳ ಮೂಲಕ ಕೇಸರಿ ಮುಂದಿಟ್ಟು ಕೋಮು ಧ್ರುವೀಕರಿಸುವ ಯತ್ನಕ್ಕೆ ಮುಂದಾಗಿದೆ ಅನ್ನುವುದಕ್ಕೆ ಪ್ರತ್ಯೇಕ ಸಾಕ್ಷ್ಯ ಬೇಕಿಲ್ಲ.

Visuals of students in saffron scarves and turbans protesting, chanting ‘Jai Sri Ram’, and in some cases heckling their classmates in hijab have consumed our screens in the past week. What started as a voice of assertion of their Muslim identity by one group of girls in a government pre-university college in Udupi has now spread across the state, with a legal battle raging in the Karnataka High Court, that will dictate a lot in terms of religious and person freedoms for not just Karnataka, but the rest of the country as well. So how did this saffron movement against the hijab start spreading, and who were the driving forces?