ನಳಿನ್ ಕುಮಾರ್ ತಾಕತ್ತಿದ್ದರೆ ಎರಡು ಸಾವಿರ ರೂ.ಗೆ ಮರಳು ನೀಡಲಿ ; ರಮಾನಾಥ ರೈ ಸವಾಲು 

19-09-20 05:08 pm       Mangalore Reporter   ಕರಾವಳಿ

ತಮ್ಮ ಹೇಳಿಕೆಯಂತೆ ಎರಡು ಸಾವಿರ ರೂ.ಗೆ ಒಂದು ಲೋಡ್ ಮರಳು ಜನರಿಗೆ ತಲುಪಿಸಲಿ ಎಂದು ಮಾಜಿ ಸಚಿವ ರಮಾನಾಥ ರೈ ಸಂಸದ ನಳಿನ್ ಕುಮಾರ್ ಗೆ ಸವಾಲು ಹಾಕಿದಿದ್ದಾರೆ.

ಮಂಗಳೂರು, ಸೆ.19: ಸಂಸದ ನಳಿನ್ ಕುಮಾರ್ ಹೇಳಿದ ಹಾಗೇ ನಡೆದುಕೊಳ್ಳಬೇಕು. ತಮ್ಮ ಹೇಳಿಕೆಯಂತೆ ಎರಡು ಸಾವಿರ ರೂ.ಗೆ ಒಂದು ಲೋಡ್ ಮರಳು ಜನರಿಗೆ ತಲುಪಿಸಲಿ ಎಂದು ಮಾಜಿ ಸಚಿವ ರಮಾನಾಥ ರೈ ಸವಾಲು ಹಾಕಿದಿದ್ದಾರೆ.

ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತ ಇದ್ದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 105 ಪರವಾನಿಗೆದಾರರು ಮರಳುಗಾರಿಕೆ ನಡೆಸುತ್ತಿದ್ದರು. ಆದರೆ, ಕಳೆದ ಒಂದು ವರ್ಷದಿಂದ ಯಾರಿಗೂ ಅಧಿಕೃತ ಪರವಾನಿಗೆ ನೀಡಿಲ್ಲ. ಹೀಗಿದ್ದರೂ ಡ್ರೆಜ್ಜಿಂಗ್, ಜೆಸಿಬಿ ಬಳಸಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ. ನಳಿನ್ ಕುಮಾರ್ ಬೆಂಬಲಿಗರೇ ನೇರವಾಗಿ ಇದರಲ್ಲಿದ್ದಾರೆ. ಪರವಾನಿಗೆ ಪಡೆಯದೆ ಮರಳುಗಾರಿಕೆ ನಡೆಸುವುದು ದಂಧೆಯೋ, ಅಲ್ಲವೋ ಎಂದು ಸಂಸದರೇ ಜನತೆಗೆ ತಿಳಿಸಲಿ ಎಂದು ಟೀಕಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಯಾವುದೇ ಹತ್ಯೆಗಳಲ್ಲಿ ಕಾಂಗ್ರೆಸ್ ನ ಯಾವೊಬ್ಬ ಕಾರ್ಯಕರ್ತನೂ ಭಾಗಿಯಾಗಿಲ್ಲ. ಯಾವುದೇ ದೋಷಾರೋಪಣೆ ಪಟ್ಟಿ, ಎಫ್‌ಐಆರ್ ನಲ್ಲಿ ಕಾಂಗ್ರೆಸಿಗರ ಹೆಸರಿಲ್ಲ. ಅದರಲ್ಲಿ ಎರಡು ಸಂಘಟನೆಗಳ ಕಾರ್ಯಕರ್ತರು ಇದ್ದಾರೆ. ಬಂಟ್ವಾಳ ತಾಲೂಕಿನ ಹರೀಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಆಡಳಿತ ಪಕ್ಷದ ಸಂಘಟನೆಗಳಲ್ಲಿ ಉನ್ನತ ಸ್ಥಾನ ನೀಡಿ, ಪದಾಧಿಕಾರಿಗಳನ್ನಾಗಿ ಮಾಡಿದ್ದಾರೆ. ಹತ್ಯೆಗೆ ಪ್ರೋತ್ಸಾಹಿಸುತ್ತಿರುವವರು ಯಾರು ಎಂದು ಬಿಜೆಪಿ ದಾಖಲೆ ಸಹಿತ ಬಹಿರಂಗಪಡಿಸಲಿ ಎಂದು ನಳಿನ್ ಆರೋಪಕ್ಕೆ ರಮಾನಾಥ ರೈ ತಿರುಗೇಟು ನೀಡಿದ್ದಾರೆ.

ಈ ಹಿಂದೆ ಡಾಲರ್ ಬೆಲೆ 15 ರೂ.ಗೆ ಬರಲಿದೆ ಎಂದಿದ್ದ ನಳಿನ್ ಕುಮಾರ್, ಮರಳನ್ನು ಎರಡು ಸಾವಿರಕ್ಕೆ ಮರಳು ಕೊಡಿಸುವುದಾಗಿ ಹೇಳಿದ್ದಾರೆ. ಇವರ ಹೇಳಿಕೆಗಳು ನರೇಂದ್ರ ಮೋದಿ ಹೇಳಿಕೆಯಂತಿದೆ. ಅವರು 15 ಲಕ್ಷ ಖಾತೆಗೆ ಹಾಕ್ತೀವಿ ಎಂದು ವ್ಯಂಗ್ಯವಾಡಿದ ರೈ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ ಹಾಗೆ, ಈ ‘ಡಾಲರ್ ನಳಿನ್’ ಒಬ್ಬ ಹಾಸ್ಯಗಾರ. ಅವರು ಮೊದಲು ಈ ರೀತಿಯ ಬಾಲಿಶ ಹೇಳಿಕೆಗಳನ್ನು ನಿಲ್ಲಿಸಲಿ ಎಂದರು. 

ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ದಕ್ಷಿಣ ಕನ್ನಡ ಕ್ಷೇತ್ರದ ಸಂಸದರು ಹೇಳಿಕೆ ನೀಡಿರುವಂತೆ ಎರಡು ಸಾವಿರ ರೂಪಾಯಿಗೆ ಒಂದು ಲೋಡ್ ಮರಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಕೆಲಸ ಮಾಡಲಿ. ಇದನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದರು. 

ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ದ.ಕ. ಜಿಲ್ಲಾ ಅಧ್ಯಕ್ಷ ಮಿಥುನ್ ರೈ, ಕಾಂಗ್ರೆಸ್ ಮುಖಂಡರಾದ ಚಂದ್ರಪ್ರಕಾಶ್ ತುಂಬೆ, ವಿಶ್ವಾಸ್ ಅಮೀನ್, ಸುಬೋಧ್ ಆಳ್ವ, ಸದಾಶಿವ ಶೆಟ್ಟಿ, ಬೇಬಿ ಕುಂದರ್, ಪ್ರವೀಣ್ ಚಂದ್ರ ಆಳ್ವ, ಸಂತೋಷ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Join our WhatsApp group for latest news updates