ನಮ್ಮ ವಿದ್ಯಾರ್ಥಿಗಳು ಉಕ್ರೇನಲ್ಲಿ ಬಂಕರಿನಡಿ ಅಡಗಿಕೊಂಡಿದ್ದಾರೆ, ರಾಜ್ಯ, ಕೇಂದ್ರ ಸರಕಾರಗಳ ಬೇಜವಾಬ್ದಾರಿಯೇ ಇದಕ್ಕೆ ಕಾರಣ ! 

26-02-22 06:34 pm       Mangalore Correspondent   ಕರಾವಳಿ

ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರುವುದು 10-15 ದಿನಗಳ ಹಿಂದೆಯೇ ತಿಳಿದಿತ್ತು. ಭಾರತದ, ಕರ್ನಾಟಕದ ವಿದ್ಯಾರ್ಥಿಗಳು ಅಲ್ಲಿದ್ದಾರೆ ಎಂಬುದು ಗೊತ್ತಿದ್ದರೂ, ನಮ್ಮ ರಾಜ್ಯ, ಕೇಂದ್ರ ಸರಕಾರ ನಿರ್ಲಕ್ಷ್ಯ ಮಾಡಿದೆ.

ಮಂಗಳೂರು, ಫೆ.26 : ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರುವುದು 10-15 ದಿನಗಳ ಹಿಂದೆಯೇ ತಿಳಿದಿತ್ತು. ಭಾರತದ, ಕರ್ನಾಟಕದ ವಿದ್ಯಾರ್ಥಿಗಳು ಅಲ್ಲಿದ್ದಾರೆ ಎಂಬುದು ಗೊತ್ತಿದ್ದರೂ, ನಮ್ಮ ರಾಜ್ಯ, ಕೇಂದ್ರ ಸರಕಾರ ನಿರ್ಲಕ್ಷ್ಯ ಮಾಡಿದೆ. ಈಗಿನ ಸ್ಥಿತಿಗೆ ಸರಕಾರ ನಡೆಸುವ ಮಂದಿಯ ಬೇಜವಾಬ್ದಾರಿ ನಡೆಯೇ ಕಾರಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ.‌

ಅಲ್ಲಿನ ವಿದ್ಯಾರ್ಥಿಗಳನ್ನು ಕರೆತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಈಗ ವಿದ್ಯಾರ್ಥಿಗಳು ಬಂಕರ್ಸ್ ಗಳಲ್ಲಿ, ಬೇರೆ ಬೇರೆ ಕಡೆಗಳಲ್ಲಿ ಅಡಗಿಕೊಳ್ಳುವ ಸ್ಥಿತಿ ಬಂದಿದೆ. ವಿದ್ಯಾರ್ಥಿಗಳಿರುವ ಪಕ್ಕದಲ್ಲಿಯೇ ಬಾಂಬ್ ಗಳು ಸ್ಫೋಟ ಆಗುತ್ತಿದೆ.‌ ಈಗ ಅಲ್ಲಿ ಫ್ಲೈಟ್ ಗಳನ್ನು ಸ್ಥಗಿತಗೊಳಿಸಲಾಗಿದೆ.‌ ಇದರಿಂದ ವಿದ್ಯಾರ್ಥಿಗಳಿಗೆ ಮರಳಿ ತಾಯ್ನಾಡಿಗೆ ಬರಲು ಸಮಸ್ಯೆಯಾಗಿದೆ.‌ ಬಹಳ ಮಂದಿ ವಿದ್ಯಾರ್ಥಿಗಳಿಗೆ ಊಟಕ್ಕೂ ತೊಂದರೆಯಾಗಿದ್ದು, ದುಡ್ಡೂ ಇಲ್ಲ‌‌. ಸರಕಾರ ಇಂತಹ ವಿಚಾರಗಳಲ್ಲಿ ಈ ರೀತಿ ಮೈಮರೆಯಬಾರದು.‌ ಇಂತಹ ವಿಷಯಗಳಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಸಿದ್ದರಾಮಯ್ಯ ಹೇಳಿದರು.‌

ಮಂಗಳೂರಿನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಿದ್ದರಾಮಯ್ಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.‌ ಉಕ್ರೇನ್ ವಿಚಾರದಲ್ಲಿ ಸಿಎಂ ಬೊಮ್ಮಾಯಿ ತುರ್ತಾಗಿ ಕೇಂದ್ರ ಸರಕಾರದ ರಕ್ಷಣಾ ಇಲಾಖೆಯ ಮೂಲಕ ಮಾತನಾಡಿ ವ್ಯವಹರಿಸಬೇಕು.‌ ಫ್ಲೈಟ್ ಚಾರ್ಜ್ ಕೊಟ್ಟು ತಕ್ಷಣ ರಾಜ್ಯದ ಎಲ್ಲಾ ವಿದ್ಯಾರ್ಥಿಗಳನ್ನು ಕರೆತರುವ ವ್ಯವಸ್ಥೆ ಮಾಡಬೇಕು.‌ ಇದು ಭಾರತ ಸರ್ಕಾರ ಹಾಗೂ ರಾಜ್ಯ ಸರಕಾರದ ಕರ್ತವ್ಯ.‌ ಇದು ಅವರ ಜವಾಬ್ದಾರಿ, ಇಲ್ಲಿಯವರೆಗೆ ಅವರು ಈ ಕೆಲಸ ಮಾಡಿಲ್ಲ.‌ ಈ ಸರಕಾರಕ್ಕೆ ಜವಾಬ್ದಾರಿಯೇ ಇಲ್ಲ.‌ ನಮ್ಮ ಮಕ್ಕಳು ಅಲ್ಲಿದ್ದಾರೆ, ಅವರನ್ನು ವಾಪಸ್ ಕರೆದುಕೊಂಡು ಬರಬೇಕಲ್ಲ..? ಪುಟಿನ್ ಅವರು ಉಕ್ರೇನ್ ಮೇಲೆ ಯುದ್ಧ ಮಾಡುತ್ತೇವೆ ಎಂದು ಓಪನ್ ಆಗಿ ಹಿಂದೆಯೇ ಹೇಳಿದ್ದರು.‌ ಹಾಗಿದ್ದರೂ ಅಲ್ಲಿರುವ ಭಾರತೀಯರನ್ನು ಕರೆತರಲು ಮುಂದಾಗಿಲ್ಲ ಎಂದ್ರೆ, ಇದು ಸರಕಾರದ ಬೇಜವಾಬ್ದಾರಿತನ ಎಂದು ಟೀಕಿಸಿದರು. 

ಹರ್ಷ ಸಾವಿಗೂ ಹಿಜಾಬಿಗೂ ಸಂಬಂಧ ಇಲ್ಲ ! 

ಶಿವಮೊಗ್ಗದಲ್ಲಿ ಹತ್ಯೆಯಾದ ಬಜರಂಗದಳ ಕಾರ್ಯಕರ್ತನ ಮನೆಗೆ ಕಾಂಗ್ರೆಸ್ ನಾಯಕರು ಹೋಗಿಲ್ಲ ಎಂಬ ಪ್ರಶ್ನೆಗೆ, ಹರ್ಷ ಮನೆಗೆ ಕಾಂಗ್ರೆಸ್ ಪಕ್ಷದಿಂದ ಯಾರು ಹೋಗಿಲ್ಲ ಅನ್ನೋದು ನಿಜ.‌ ಆದ್ರೆ ಅದು ವೈಯಕ್ತಿಕ ದ್ವೇಷದಿಂದ ನಡೆದಿರುವ ಘಟನೆ. ಅದಕ್ಕೆ ರಾಜಕೀಯ ಬಣ್ಣ ಕಟ್ಟಲಾಗಿದೆ. ಹರ್ಷ ಸಾವಿಗೂ ಹಿಜಾಬ್ ಗೂ ಸಂಬಂಧವಿಲ್ಲ.‌ ಹರ್ಷ ಸಾವಿನ ಬಳಿಕ ನಡೆದ ಗಲಭೆಗೆ ಸಚಿವ  ಈಶ್ವರಪ್ಪನೇ ಕಾರಣ. 144 ಸೆಕ್ಷನ್ ಅನ್ನು ಈಶ್ವರಪ್ಪ ಉಲ್ಲಂಘಿಸಿದ್ದಾರೆ. ಗಲಭೆ ಆಗುವಂತೆ ಮಾಡಿದ್ದಾರೆ ಎಂದರು. 

ಹರ್ಷ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಪಿಎಫ್ ಐ, ಎಸ್ ಡಿಪಿ ಐ ಸಂಘಟನೆ ಬ್ಯಾನ್ ಮಾಡಬೇಕೆಂಬ ಆಗ್ರಹದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬ್ಯಾನ್ ಮಾಡೋದಾದ್ರೆ ಮಾಡಿ ಯಾರು ಬೇಡ ಅಂತಾರೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ನಿಮ್ಮ ಕೈಯಲ್ಲೇ ಇದೆ.‌ ನಾವು ಬ್ಯಾನ್ ಮಾಡೋದು ಬೇಡ ಎಂದು ಹೇಳಿದ್ದೇವಾ ಎಂದು ಮರು ಪ್ರಶ್ನೆ ಹಾಕಿದರು. 

ಮೇಕೆದಾಟು ಪಾದಯಾತ್ರೆ ಬಗ್ಗೆ ಕೇಳಿದ ಪ್ರಶ್ನೆಗೆ, ರಾಮನಗರದಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ಮಾಡಲಿದ್ದೇವೆ.‌ ಮೇಕೆದಾಟು ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಕ್ಕೆ ಒತ್ತಾಯಿಸಿ ಪಾದಯಾತ್ರೆ ಮಾಡುತ್ತಿದ್ದೇವೆ.‌ ಕಳೆದ ಬಾರಿ ಎಲ್ಲಿ ಪಾದಯಾತ್ರೆ ನಿಂತಿತ್ತೋ ಅಲ್ಲಿಂದಲೇ ಪಾದಯಾತ್ರೆ ಆರಂಭ ಮಾಡುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ.‌ ಇಂದಿಗೂ ಬೆಂಗಳೂರಿನಲ್ಲಿ 20% ನಾಗರಿಕರಿಗೆ ಕಾವೇರಿ ನೀರು ಸಿಗುತ್ತಿಲ್ಲ.‌ ನೀರು ಪೂರೈಸಲು ಈ ಯೋಜನೆ ಆಗಲೇಬೇಕು ಎಂದು ಹೇಳಿದರು.

Karnataka students standard in Ukraine, BJP govt doesn't care for it slams Siddaramaiah in Mangaluru.