ಮಂಗಳೂರಿನಲ್ಲಿ ದೇಶದ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿ ಸ್ಥಾಪನೆ ಪಕ್ಕಾ ! 

19-09-20 11:30 pm       Mangaluru Correspondent   ಕರಾವಳಿ

ಬಹುದಿನಗಳ ನಿರೀಕ್ಷೆಯಾಗಿದ್ದ ಇಂಡಿಯನ್ ಕೋಸ್ಟ್ ಗಾರ್ಡ್ ಅಕಾಡೆಮಿ ಮಂಗಳೂರಿನಲ್ಲಿಯೇ ನೆಲೆಯಾಗುವುದು ಕೊನೆಗೂ ಪಕ್ಕಾ ಆಗಿದೆ.

ಮಂಗಳೂರು, ಸೆಪ್ಟಂಬರ್ 19: ಬಹುದಿನಗಳ ನಿರೀಕ್ಷೆಯಾಗಿದ್ದ ಇಂಡಿಯನ್ ಕೋಸ್ಟ್ ಗಾರ್ಡ್ ಅಕಾಡೆಮಿ ಮಂಗಳೂರಿನಲ್ಲಿಯೇ ನೆಲೆಯಾಗುವುದು ಕೊನೆಗೂ ಪಕ್ಕಾ ಆಗಿದೆ. ಮಂಗಳೂರಿನ ಕೆಂಜಾರಿನಲ್ಲಿರುವ ಕೆಐಎಡಿಬಿಗೆ ಸೇರಿದ 158 ಎಕ್ರೆ ಪ್ರದೇಶದಲ್ಲಿ ಮೆರೈನ್ ಅಕಾಡೆಮಿ ಸ್ಥಾಪಿಸಲು ರಕ್ಷಣಾ ಸಚಿವಾಲಯ ನಿರ್ಧರಿಸಿದೆ. 

ಈ ಬಗ್ಗೆ ರಕ್ಷಣಾ ಸಚಿವಾಲಯದ ಬೆಂಗಳೂರಿನ ಪಿಆರ್ ಓ ಕಚೇರಿ ಟ್ವಿಟರ್ ನಲ್ಲಿ ದೃಢಪಡಿಸಿದ್ದು ಭಾರತದ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿ ಮಂಗಳೂರಿಗೆ ಬರಲಿದೆ. ಕೆಐಎಡಿಬಿಗೆ ಸೇರಿದ 158 ಎಕ್ರೆ ಪ್ರದೇಶದಲ್ಲಿ ಅಕಾಡೆಮಿ ಸ್ಥಾಪನೆಗೆ ನಿರ್ಧರಿಸಲಾಗಿದ್ದು ಐಸಿಜಿ ಅಧಿಕಾರಿ ಮತ್ತು ಸಿಬಂದಿಗಳ ಪಾಲಿಗೆ ಇದೊಂದು ಮೈಲಿಗಲ್ಲು ಎಂದು ಟ್ವೀಟ್ ಮಾಡಿದೆ. 

ಕೇರಳದ ಕಣ್ಣೂರು ಜಿಲ್ಲೆಯ ಅಝಿಕ್ಕಲ್ ಎಂಬಲ್ಲಿ 164 ಎಕ್ರೆ ಪ್ರದೇಶದಲ್ಲಿ ಈ ಹಿಂದೆ ಕೋಸ್ಟ್ ಗಾರ್ಡ್ ಅಕಾಡೆಮಿ ಸ್ಥಾಪನೆಗೆ ನಿರ್ಧರಿಸಲಾಗಿತ್ತು. 2011ರಲ್ಲಿ ಎ.ಕೆ.ಆ್ಯಂಟನಿ ರಕ್ಷಣಾ ಸಚಿವರಾಗಿದ್ದ ಸಂದರ್ಭ ಅಕಾಡೆಮಿ ಸ್ಥಾಪನೆಗೆ ಶಿಲಾನ್ಯಾಸವನ್ನೂ ಮಾಡಲಾಗಿತ್ತು. ಆದರೆ, ಆನಂತರದ ಪ್ರಕ್ರಿಯೆಗಳು ನಡೆದಿರಲಿಲ್ಲ. ಎರಡು ವರ್ಷಗಳ ಹಿಂದೆ ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವರಾಗಿದ್ದ ವೇಳೆ ಮಂಗಳೂರಿನಲ್ಲಿ ಅಕಾಡೆಮಿ ಸ್ಥಾಪನೆಗೆ ಒಲವು ವ್ಯಕ್ತಪಡಿಸಿದ್ದರು. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ನಿರ್ಮಲಾ ಸೀತಾರಾಮನ್ ತಾವು ಪ್ರತಿನಿಧಿಸುವ ರಾಜ್ಯಕ್ಕೆ ಕೊಡುಗೆ ಕೊಡಬೇಕೆಂಬ ನೆಲೆಯಲ್ಲಿ ಮಂಗಳೂರಿನಲ್ಲಿ ಕೋಸ್ಟ್ ಗಾರ್ಡ್ ಅಕಾಡೆಮಿ ನಿರ್ಮಾಣ ವಿಚಾರದಲ್ಲಿ ಒತ್ತು ನೀಡಿದ್ದರು. ಇದೇ ಹಿನ್ನೆಲೆಯಲ್ಲಿ ಈಗ ರಕ್ಷಣಾ ಸಚಿವಾಲಯ ದೇಶದ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿಯನ್ನು ಮಂಗಳೂರಿನಲ್ಲಿ ಸ್ಥಾಪಿಸಲು ಮುಂದಾಗಿದೆ. 

ಈ ಹಿಂದೆ ಕೋಸ್ಟ್ ಗಾರ್ಡ್ ಅಧಿಕಾರಿಗಳ ತರಬೇತಿ ನೌಕಾ ದಳದಲ್ಲಿಯೇ ನೀಡಲಾಗ್ತಿತ್ತು. ಆಬಳಿಕ ಕೊಚ್ಚಿಯಲ್ಲಿ ತರಬೇತಿ ಕೇಂದ್ರ ಆರಂಭಿಸಲಾಗಿತ್ತು. ಅಲ್ಲಿ ಸಾಕಷ್ಟು ಸ್ಥಳಾವಕಾಶ ಇಲ್ಲದ ಕಾರಣ ವಿದೇಶಿ ತಜ್ಞರು ಬಂದು ತರಬೇತು ಕೊಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಪ್ರತ್ಯೇಕ ಜಾಗಕ್ಕಾಗಿ ಹುಡುಕಾಟ ನಡೆದಿತ್ತು. ಇದಕ್ಕಾಗಿ ಕಣ್ಣೂರಿನ ನೇವಲ್ ಅಕಾಡೆಮಿ ಬಳಿಯಲ್ಲೇ ಜಾಗದ ಹುಡುಕಾಟ ನಡೆದು ಅಝಿಕ್ಕಲ್ ನಲ್ಲಿರುವ 164 ಎಕ್ರೆ ಪ್ರದೇಶವನ್ನು ಅಂತಿಮಗೊಳಿಸಲಾಗಿತ್ತು. ಆದರೆ, ಪರಿಸರ ಸಚಿವಾಲಯ ಅಝಿಕ್ಕಲ್ ಏರಿಯಾದಲ್ಲಿ ಚಟುವಟಿಕೆ ನಡೆಸಲು ಅವಕಾಶ ನೀಡಿರಲಿಲ್ಲ. ಈ ಕಾರಣದಿಂದ ದೇಶದ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿ ಸ್ಥಾಪನೆ ಪ್ರಸ್ತಾಪ ನೆನೆಗುದಿಗೆ ಬಿದ್ದಿತ್ತು. 

ಮಂಗಳೂರಿನಲ್ಲಿ ಬಂದರು ಮತ್ತು ಏರ್ಪೋರ್ಟ್ ಬಳಿಯಲ್ಲೇ ಇರುವುದರಿಂದ ಮತ್ತು ರಾಜ್ಯ ಸರಕಾರದ ಕೆಐಎಡಿಬಿಗೆ ಸೇರಿದ ಭೂಮಿ ಇರುವುದರಿಂದ ಕೋಸ್ಟ್ ಗಾರ್ಡ್ ಬಳಕೆಗೆ ಸೂಕ್ತವೆಂದು ಪರಿಗಣಿಸಿ, ಅಂತಿಮ ನಿರ್ಧಾರಕ್ಕೆ ಬರಲಾಗಿದೆ.