ಉಡುಪಿಯಲ್ಲಿ ಭಾರೀ ಮಳೆಗೆ ಪ್ರವಾಹ ; ಪೇಟೆಯ ವಿವಿಧೆಡೆ ಮುಳುಗಡೆ, ಸಂಚಾರ ಸ್ತಬ್ಧ , ನೂರಾರು ಮನೆಗಳು ಜಲಾವೃತ ! 

20-09-20 10:06 am       Udupi Correspondent   ಕರಾವಳಿ

ಶನಿವಾರ ಮಧ್ಯಾಹ್ನದಿಂದ ಧಾರಾಕಾರ ಮಳೆಯಾಗುತ್ತಿದ್ದು ಉಡುಪಿ ನಗರದ ಪ್ರಮುಖ ಬೀದಿಗಳು ಜಲಾವೃತವಾಗಿವೆ. ಉಡುಪಿ- ಮಣಿಪಾಲ ಸಂಪರ್ಕದ ಹೆದ್ದಾರಿಯಲ್ಲಿ ನಿನ್ನೆ ರಾತ್ರಿಯಿಂದಲೇ ನೀರು ತುಂಬಿ ಹೊಳೆಯಂತೆ ಹರಿಯುತ್ತಿದೆ.

ಉಡುಪಿ, ಸೆಪ್ಟಂಬರ್ 21: ಉಡಪಿ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟಕ್ಕೆ ಜನಜೀವನ ಸ್ತಬ್ಧವಾಗುವ ಲಕ್ಷಣ ಗೋಚರಿಸಿದೆ. ಉಡುಪಿ ಪೇಟೆ ಆಸುಪಾಸಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಂಡುಕೇಳರಿಯದ ರೀತಿ ನೆರೆ ಕಾಣಿಸಿಕೊಂಡಿದ್ದು ಉಡುಪಿ - ಮಣಿಪಾಲ ಸಂಪರ್ಕಿಸುವ ಹೆದ್ದಾರಿ ಹೊಳೆಯ ರೂಪ ಪಡೆದು ಪ್ರವಾಹ ಕಾಣಿಸಿದೆ. ಹೆದ್ದಾರಿಯಲ್ಲಿ ನೀರು ತುಂಬಿದ್ದರಿಂದ ಸಂಪರ್ಕ ಕಡಿತಗೊಂಡಿದೆ.‌

ಶನಿವಾರ ಮಧ್ಯಾಹ್ನದಿಂದ ಧಾರಾಕಾರ ಮಳೆಯಾಗುತ್ತಿದ್ದು ಉಡುಪಿ ನಗರದ ಪ್ರಮುಖ ಬೀದಿಗಳು ಜಲಾವೃತವಾಗಿವೆ. ಉಡುಪಿ- ಮಣಿಪಾಲ ಸಂಪರ್ಕದ ಹೆದ್ದಾರಿಯಲ್ಲಿ ನಿನ್ನೆ ರಾತ್ರಿಯಿಂದಲೇ ನೀರು ತುಂಬಿ ಹೊಳೆಯಂತೆ ಹರಿಯುತ್ತಿದೆ. ಕೃಷ್ಣಮಠ ಪರಿಸರದ ಕಲ್ಸಂಕ ಬೈಲಕೆರೆ ಆಸುಪಾಸಿನಲ್ಲಿ ಭಾರೀ ನೆರೆ ಕಾಣಿಸಿಕೊಂಡಿದ್ದು ಹಲವಾರು ಮನೆಗಳು ನೀರಿನಲ್ಲಿ ಮುಳುಗಿವೆ. 

ಬನ್ನಂಜೆ ಕೊಡವೂರು ಪಾಡಿಗಾರು ಗುಂಡಿಬೈಲಿನ ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಂಡಿವೆ.  ಪೆರ್ಡೂರಿನ ಪುತ್ತಿಗೆ ಮಠದ ಪರಿಸರದಲ್ಲಿ ರಸ್ತೆ ಸಂಚಾರ ಬಂದ್ ಆಗಿದೆ.‌ ನೆರೆಯಿಂದಾಗಿ ಮಲ್ಪೆ- ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿದ್ದು ಸಂಚಾರ ವ್ಯತ್ಯಯಗೊಂಡಿದೆ‌. ಹಿರಿಯಡ್ಕ ಸಮೀಪದ ಪುತ್ತಿಗೆ ಸೇತುವೆ ಪರಿಸರವೂ ಮುಳುಗಡೆಯಾಗಿದ್ದು ಈ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿದೆ. 

ಸ್ವರ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ಆಸುಪಾಸಿನಲ್ಲಿ ನೆರೆ ಕಾಣಿಸಿಕೊಂಡಿದೆ ಎನ್ನಲಾಗ್ತಿದೆ. ‌ಮಳೆನೀರು ಹರಿಯಲು ಜಾಗ ಇಲ್ಲದೆ ಉಡುಪಿ ಪೇಟೆಯ ವಿವಿಧೆಡೆ ಮುಳುಗಡೆಯಾಗಿದೆ.‌ ಮಾಣೈ ಪರಿಸರದಲ್ಲಿ ನೀರು ಪ್ರವಾಹದ ರೂಪದಲ್ಲಿ ಹರಿಯುತ್ತಿದ್ದು ಆ ಭಾಗದ ಸುಮಾರು ಇಪ್ಪತ್ತು ಮನೆಗಳು ಮುಳುಗಡೆಯಾಗಿವೆ. ಸ್ಥಳೀಯ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. 

ಉಡುಪಿ- ಮಣಿಪಾಲ ಹೆದ್ದಾರಿ ಬಂದ್ ಆಗಿರುವುದರಿಂದ ಉಡುಪಿ-  ಆಗುಂಬೆ - ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಸಂಚಾರವೂ ಸ್ಥಗಿತವಾಗಿದೆ.‌

ಪುತ್ತಿಗೆ ವಿದ್ಯಾಪೀಠಕ್ಕೆ ನುಗ್ಗಿದ ನೀರು ! 

ಇನ್ನು ಹಿರಿಯಡ್ಕ ಪರಿಸರದಲ್ಲಿ ಸ್ವರ್ಣಾ ನದಿಯ ನೆರೆಯಿಂದಾಗಿ ಪುತ್ತಿಗೆ ಶ್ರೀಗಳ ಮೂಲಮಠಕ್ಕೆ ನೀರು ನುಗ್ಗಿದೆ. ಮಠದ ಗೋಶಾಲೆಯೂ ಜಲಾವೃತಗೊಂಡಿದ್ದು ಸ್ಥಳೀಯರ ನೆರವಿನೊಂದಿಗೆ ಗೋವುಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.

Join our WhatsApp group for latest news updates