ಸಂಸದನ ಹೆದ್ದಾರಿ ಶಂಕುಸ್ಥಾಪನೆ ನಾಟಕ ; 2016ರಲ್ಲಿ ಶಿಲಾನ್ಯಾಸ ನಡೆಸಿದ ರಸ್ತೆಗೇ ಮತ್ತೆ ತಿಥಿಕಾರ್ಯ! ಆರು ವರ್ಷಗಳಲ್ಲಿ ಮೂರು ಬಾರಿ ಗಡ್ಕರಿ ಶಿಲಾನ್ಯಾಸ ! ಮಂಗಳೂರಿನಲ್ಲಿ ಕಾಮಗಾರಿ ನಡೆದಿದ್ದು ಸೊನ್ನೆ, ಪ್ರಚಾರ ಮಾತ್ರ!   

28-02-22 07:50 pm       Mangalore Correspondent   ಕರಾವಳಿ

ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತೆ ಮಂಗಳೂರಿಗೆ ಬಂದಿದ್ದಾರೆ. ಕಳೆದ ಜನವರಿ ಆರಂಭದಲ್ಲಿ ಗಡ್ಕರಿ ಮಂಗಳೂರಿಗೆ ಬರುತ್ತಾರೆ, ಟೋಲ್ ಗೇಟ್ ರದ್ದತಿ ಬಗ್ಗೆ ಹೈವೇ ಅಧಿಕಾರಿಗಳಲ್ಲಿ ಸಭೆ ನಡೆಸುತ್ತಾರೆ ಎಂದು ಸಂಸದ ನಳಿನ್ ಕುಮಾರ್ ಹೇಳಿಕೊಂಡಿದ್ದರು.

ಮಂಗಳೂರು, ಫೆ.28: ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತೆ ಮಂಗಳೂರಿಗೆ ಬಂದಿದ್ದಾರೆ. ಕಳೆದ ಜನವರಿ ಆರಂಭದಲ್ಲಿ ಗಡ್ಕರಿ ಮಂಗಳೂರಿಗೆ ಬರುತ್ತಾರೆ, ಟೋಲ್ ಗೇಟ್ ರದ್ದತಿ ಬಗ್ಗೆ ಹೈವೇ ಅಧಿಕಾರಿಗಳಲ್ಲಿ ಸಭೆ ನಡೆಸುತ್ತಾರೆ ಎಂದು ಸಂಸದ ನಳಿನ್ ಕುಮಾರ್ ಹೇಳಿಕೊಂಡಿದ್ದರು. ಅಲ್ಲಲ್ಲಿ ಬ್ಯಾನರ್ ಗಳೂ ಬಿದ್ದಿದ್ದವು. ಆದರೆ, ಗಡ್ಕರಿ ಬಂದಿರಲಿಲ್ಲ. ಈ ಬಾರಿ ದಿಢೀರ್ ಎಂಬಂತೆ ಬಂದಿದ್ದಲ್ಲದೆ, ಒಂದಷ್ಟು ರಸ್ತೆಗಳಿಗೆ ಮತ್ತೆ ಶಂಕುಸ್ಥಾಪನೆಯ ನಾಟಕ ನೆರವೇರಿಸಿದ್ದಾರೆ.

ನಾಟಕ ಅನ್ನೋದು ಯಾಕೆ ಅಂದ್ರೆ, ಕಳೆದ 2016ರಲ್ಲಿ ಶಂಕುಸ್ಥಾಪನೆ ನಡೆಸಿದ್ದ ಅದೇ ರಾಷ್ಟ್ರೀಯ ಹೆದ್ದಾರಿಗೆ ಮತ್ತೆ ಶಂಕುಸ್ಥಾಪನೆ ನೆರವೇರಿಸಿಕೊಳ್ಳುವ ದೌರ್ಭಾಗ್ಯ ಮಂಗಳೂರಿನ ಜನರದ್ದು. ಮಂಗಳೂರು- ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಬಿಸಿ ರೋಡಿನಿಂದ ಅಡ್ಡಹೊಳೆಗೆ ಚತುಷ್ಪಥ ರಸ್ತೆಯಾಗಿಸಲು ಸಚಿವ ನಿತಿನ್ ಗಡ್ಕರಿ 2016ರಲ್ಲಿ ಮಂಗಳೂರಿನಲ್ಲಿಯೇ ಶಂಕುಸ್ಥಾಪನೆ ನಡೆಸಿದ್ದರು. 2016ರ ಮಾರ್ಚ್ 28ರಂದು ಪಣಂಬೂರು ಎನ್ಎಂಪಿಟಿ ಬಳಿಯ ಸಭಾಂಗಣದಲ್ಲಿ ಸಚಿವ ಗಡ್ಕರಿ, ಆಗಿನ ಕೇಂದ್ರ ಸಚಿವ ಸದಾನಂದ ಗೌಡ, ರಾಜ್ಯ ಹೆದ್ದಾರಿ ಸಚಿವ ಮಹದೇವಪ್ಪ, ಸಂಸದ ನಳಿನ್ ಕುಮಾರ್ ಸೇರಿಕೊಂಡು ಶಂಕುಸ್ಥಾಪನೆಯ ಸಮಾರಂಭ ಮಾಡಿದ್ದರು.

ಇದರ ಬೆನ್ನಲ್ಲೇ ದೇಶದ ಹೆಸರಾಂತ ಕಂಪನಿ ಎಲ್ ಅಂಡ್ ಟಿ ಕಾಮಗಾರಿ ವಹಿಸ್ಕೊಂಡು ರಾಷ್ಟ್ರೀಯ ಹೆದ್ದಾರಿ 75ರ ಪೆರ್ನೆಯಿಂದ ತೊಡಗಿ ಉಪ್ಪಿನಂಗಡಿ- ಗುಂಡ್ಯದ ವರೆಗೂ ಕಾಮಗಾರಿ ಆರಂಭಿಸಿತ್ತು. ಬಹುತೇಕ ಕಡೆಗಳಲ್ಲಿ ಗುಡ್ಡವನ್ನು ಅಗೆದು ರಸ್ತೆಯನ್ನು ನೇರವಾಗಿಸುವ ಕೆಲಸ ನಡೆದಿತ್ತು. ಆಗಿನ ಕಾಮಗಾರಿ ನೋಡಿದರೆ, ಇನ್ನೆರಡೇ ವರ್ಷದಲ್ಲಿ ಕಾಮಗಾರಿ ಪೂರ್ತಿಯಾಗುವ ಲಕ್ಷಣ ಕಂಡಿತ್ತು. ಆದರೆ, ನೆಲ್ಯಾಡಿ, ಗುಂಡ್ಯ ಭಾಗದಲ್ಲಿ ರಸ್ತೆ ಅಗಲೀಕರಣಕ್ಕೆ ಭೂಸ್ವಾಧೀನ ನಡೆಸಲು ಅರಣ್ಯ ಇಲಾಖೆಯಿಂದ ಅಡ್ಡಿ ಎದುರಾಗಿತ್ತು. ಇದನ್ನು ರಾಜ್ಯ ಸರಕಾರದ ಮಟ್ಟದಲ್ಲಿ ಮಾತುಕತೆ ಮೂಲಕ ಬಗೆಹರಿಸಬೇಕಿದ್ದ ಸಂಸದ ನಳಿನ್ ಕುಮಾರ್ ಮೌನ ವಹಿಸಿದ್ದು ಎಲ್ ಎಂಡ್ ಟಿ ಕಂಪನಿಯ ಸಿಟ್ಟಿಗೆ ಗುರಿಯಾಗಿತ್ತು.

ಸಂಸದನ ನಿರ್ಲಕ್ಷ್ಯದಿಂದಲೇ ರಸ್ತೆ ಅರ್ಧಕ್ಕೆ ನಿಂತಿತ್ತು

ಅಧಿಕಾರಿಗಳ ಜೊತೆ ಸಂವಹನ ಕೊರತೆ, ಅದನ್ನು ನಿರ್ವಹಿಸಬೇಕಿದ್ದ ಸಂಸದನ ನಿರ್ಲಕ್ಷ್ಯ ಧೋರಣೆಯಿಂದಾಗಿ ಎಲ್ ಅಂಡ್ ಟಿ ಕಂಪನಿ ಕಾಮಗಾರಿಯನ್ನೇ ಅರ್ಧಕ್ಕೆ ಬಿಟ್ಟು ನಡೆದಿತ್ತು. ಅದರಿಂದ ಸಮಸ್ಯೆ ಅನುಭವಿಸಿದ್ದು ಉಪ್ಪಿನಂಗಡಿ, ಮಾಣಿ ಭಾಗದ ಜನರು. ಆರು ವರ್ಷಗಳಿಂದಲೂ ರಸ್ತೆ ಧೂಳು, ಮಣ್ಣು, ಕೆಸರಿನ ನಡುವೆ ಜೀವನ ಮಾಡಿದ್ದರು. ಮಂಗಳೂರಿನಿಂದ ಬೆಂಗಳೂರು ಹೆದ್ದಾರಿಯಲ್ಲಿ ಸಾಗುವ ಸಾವಿರಾರು ಪ್ರಯಾಣಿಕರು, ವಾಹನ ಸವಾರರು ಕಂಗೆಟ್ಟಿದ್ದರು. 2018ರ ವೇಳೆಗೆ ಸಿಟ್ಟಿಗೆದ್ದ ಜನರು ಟ್ವಿಟರ್, ವಾಟ್ಸಪ್ ಜಾಲತಾಣದಲ್ಲಿ ಜಾಗೃತಿ ಅಭಿಯಾನ ನಡೆಸಿದ್ದರು. ಸೇವ್ ಎನ್ಎಚ್-75 ಎಂದು ಹೇಳಿ ಟ್ವೀಟ್ ಅಭಿಯಾನ ನಡೆಸಿದ್ದರಿಂದ ನಿಧಾನಕ್ಕೆ ಜನಪ್ರತಿನಧಿಗಳಿಗೆ ಎಚ್ಚರ ಆಗಿತ್ತು. ಆನಂತರ, ಸಂಸದ ನಳಿನ್ ಕುಮಾರ್ ಅರಣ್ಯ ಇಲಾಖೆಯ ಕಾನೂನು ಅಡ್ಡಿಯೆಂದು ಹೇಳಿಕೊಂಡು ಹೊಸ ರಾಗ ಶುರು ಮಾಡಿದ್ದರು. ಕೊನೆಗೆ, ಬೇರೆ ಕಂಪನಿಗಳಿಗೆ ಟೆಂಡರ್ ವಹಿಸಲು ಪ್ರಯತ್ನ ನಡೆಯಿತು. ಆನಂತರ ಎರಡೆರಡು ಕಂಪನಿಗಳು ಟೆಂಡರ್ ಪಡೆದು ಕಾಮಗಾರಿಗೆ ಮುಂದಾದರೂ, ಕೆಲಸ ವೇಗ ಪಡೆಯಲಿಲ್ಲ.

ವರ್ಷದ ಹಿಂದೆ ಇದೇ ಹೆದ್ದಾರಿ ಕಾಮಗಾರಿಯನ್ನು ಎರಡಾಗಿ ವಿಭಜಿಸಿ, ಪ್ರತ್ಯೇಕವಾಗಿ ಎರಡು ಕಂಪನಿಗಳಿಗೆ ಗುತ್ತಿಗೆ ವಹಿಸುವ ನಿರ್ಧಾರಕ್ಕೆ ಬರಲಾಗಿತ್ತು. ಟೆಂಡರ್ ಮೊತ್ತವನ್ನೂ ಹೆಚ್ಚಿಸಿಕೊಂಡು ಹೊಸತಾಗಿ ಪ್ಲಾನ್ ಹಾಕಲಾಗಿತ್ತು. ಕಲ್ಲಡ್ಕದಲ್ಲಿ ಬೈಪಾಸ್ ರಸ್ತೆ, ಫ್ಲೈಓವರ್ ಮಾಡುವುದಕ್ಕೆ ಯೋಜನೆ ತಯಾರಿಸಿ, ಕಾಮಗಾರಿ ಈಗ ಕಲ್ಲಡ್ಕ ಭಾಗದಲ್ಲಿ ವೇಗ ಪಡೆದಿದೆ. ಇಂಥ ಸಂದರ್ಭದಲ್ಲಿಯೇ ಸಂಸದ ನಳಿನ್ ಕುಮಾರ್ ಹಳೆಯ ರಸ್ತೆಗೇ ಮತ್ತೆ ಶಂಕುಸ್ಥಾಪನೆಯನ್ನು ಸಚಿವ ನಿತಿನ್ ಗಡ್ಕರಿ ಕೈಯಲ್ಲಿ ನೆರವೇರಿಸಿ ನಗೆಪಾಟಲಿಗೀಡಾಗಿದ್ದಾರೆ. ಕಾಮಗಾರಿ ಪ್ರಗತಿಯಲ್ಲಿರುವಾಗ ಎರಡನೇ ಬಾರಿಗೆ ಅದೇ ರಸ್ತೆಗೆ ಶಿಲಾನ್ಯಾಸ ನೆರವೇರಿಸುವ ಔಚಿತ್ಯ ಏನಿದೆ ಎಂದು ಬಿಜೆಪಿ ಮಂದಿಯೇ ಪ್ರಶ್ನಿಸುತ್ತಿದ್ದಾರೆ. ಅದರಲ್ಲೂ ಆಡಳಿತ ಪಕ್ಷದ ರಾಜ್ಯಾಧ್ಯಕ್ಷನಾಗಿದ್ದುಕೊಂಡು, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಆಡಳಿತದಲ್ಲಿದ್ದರೂ ನಾಚಿಕೆಗೇಡಿನ ಕೆಲಸ ಮಾಡುತ್ತಿದ್ದಾರೆ.

ಶಿಲಾನ್ಯಾಸ ಮಾತ್ರ, ಕಾರ್ಯರೂಪಕ್ಕಿಲ್ಲ !  

ಇದಲ್ಲದೆ, 2016ರಲ್ಲಿ ಸಚಿವ ನಿತಿನ್ ಗಡ್ಕರಿ ಮಂಗಳೂರಿಗೆ ಬಂದಿದ್ದಾಗ, ಮೂಲ್ಕಿ-ಕಟೀಲು-ಕೈಕಂಬ-ಮೆಲ್ಕಾರ್ ರಸ್ತೆಯನ್ನು ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಘೋಷಣೆಯೂ ಆಗಿತ್ತು. ಮಂಗಳೂರು- ಕಾರ್ಕಳ ಹೆದ್ದಾರಿ 169 ಅನ್ನು ಚತುಷ್ಪಥ ನಡೆಸುವುದಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. 2019ರಲ್ಲಿ ಮತ್ತೊಮ್ಮೆ ಸಚಿವ ನಿತಿನ್ ಗಡ್ಕರಿಯವರು ಮಂಗಳೂರಿನ ಎನ್ಎಂಪಿಟಿಯಲ್ಲಿ ಜರಗಿದ್ದ ಕಾರ್ಯಕ್ರಮದಲ್ಲಿ ಈ ಭಾಗದ ಹೆದ್ದಾರಿ ಕೆಲಸಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಿದ್ದರು. ಅದೇ ಸಂದರ್ಭ ಮೂಲ್ಕಿ-ಕಟೀಲು- ಕೈಕಂಬ- ಮೆಲ್ಕಾರ್- ತೊಕ್ಕೊಟ್ಟು ಹೆದ್ದಾರಿಗೆ 2500 ಕೋಟಿ ಬಿಡುಗಡೆಯನ್ನೂ ಘೋಷಿಸಿದ್ದರು. ಕುಳಾಯಿಯಲ್ಲಿ ಹೊಸತಾಗಿ ಮೀನುಗಾರಿಕಾ ಜೆಟ್ಟಿ ನಿರ್ಮಿಸುವುದಕ್ಕೂ ಸಚಿವ ಗಡ್ಕರಿ ಶಿಲಾನ್ಯಾಸ ನೆರವೇರಿಸಿದ್ದರು. 196 ಕೋಟಿ ವೆಚ್ಚದಲ್ಲಿ ಟೆಂಡರ್ ಆಗಿದ್ದು, ಜೆಟ್ಟಿ ಕಾಮಗಾರಿ ಆದಷ್ಟು ಬೇಗ ನೆರವೇರಲಿದೆ. ಈ ಭಾಗದ 4500 ಮೀನುಗಾರರಿಗೆ ಸಹಕಾರಿಯಾಗಲಿದೆ. ಜೆಟ್ಟಿಯಲ್ಲಿ 27 ಸಾವಿರ ಟನ್ ಸರಕು ನಿರ್ವಹಣೆ ಆಗಲಿದ್ದು, 170 ಕೋಟಿ ಆದಾಯ ಬರಲಿದೆ ಎಂದು ಅಧಿಕಾರಿಗಳು ಹೇಳಿಕೊಟ್ಟಿದ್ದನ್ನು ಸಂಸದ ನಳಿನ್ ಕುಮಾರ್ ಬಡಾಯಿ ಕೊಚ್ಚಿಕೊಂಡಿದ್ದರು.

ಇದ್ಯಾವುದೇ ರಸ್ತೆಯಾಗಲೀ, ಕುಳಾಯಿ ಜೆಟ್ಟಿ ಬಂದರು ಆಗಲೀ ಕಾರ್ಯರೂಪಕ್ಕೆ ಬಂದಿಲ್ಲ. ಕನಿಷ್ಠ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯೇ ಆಗಿಲ್ಲ. ಬಂಡಲ್ ಬಡಾಯಿ ಮಾಧವನ ಕತೆಯಂತೆ ಸಂಸದ ನಳಿನ್ ಕುಮಾರ್, ಮತ್ತೆ ಒಂದಷ್ಟು ಬಡಾಯಿ ಬಿಟ್ಟು ಮತ್ತೊಮ್ಮೆ ಗಡ್ಕರಿ ಅವರನ್ನೇ ಕರೆಸಿ ಹಳೇ ರಸ್ತೆಗೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಅದರ ಜೊತೆಗೆ ಇನ್ನೊಂದಷ್ಟು ಆಸುಪಾಸಿನ ಜಿಲ್ಲೆಯ ರಸ್ತೆಗಳ ಹೆಸರನ್ನೂ ಸೇರಿಸಿದ್ದಾರೆ. ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಅನ್ನುವಂತೆ ಅದ್ದೂರಿ ಕಾರ್ಯಕ್ರಮ. ಉತ್ತರ ಭಾರತದಲ್ಲಿ ಕಾಶಿಯ ಸ್ಥಿತಿಯೇ ಬದಲಾಗಿದೆ. ಅಲ್ಲಿ ನೂರು ಕಿಮೀ ರಸ್ತೆಯನ್ನು ಎರಡೇ ವರ್ಷದಲ್ಲಿ ಹೊಳೆಯುವ ರೀತಿ ಮೋದಿ ಮಾಡಿದ್ದಾರೆ. ವಾರಣಾಶಿಯಲ್ಲಿ ಅಭಿವೃದ್ಧಿಯ ಪರ್ವವೇ ನಡೆದಿದೆ ಅನ್ನುವುದನ್ನು ಮಾಧ್ಯಮದಲ್ಲಿ ನೋಡುತ್ತೇವೆ. ಆದರೆ, ಅವು ಇಲ್ಲಿ ಯಾಕೆ ಆಗುತ್ತಿಲ್ಲ ಅಂದರೆ, ನಮ್ಮ ಜನಪ್ರತಿನಿಧಿಗಳು ಅಷ್ಟು ಹುಷಾರಿನವರು ಇದ್ದಾರೆ ಎಂದರ್ಥ. 

ಇದು ನಿತಿನ್ ಗಡ್ಕರಿಯ ತಪ್ಪಲ್ಲ. ಅವರಿಗೆ ಈ ಹಿಂದೆ ಶಿಲಾನ್ಯಾಸ ನೆರವೇರಿಸಿದ್ದು ಯಾವ ರಸ್ತೆ, ಈಗ ಆಗ್ತಿರೋ ರಸ್ತೆ ಯಾವುದು ಎಂದು ತಿಳಿದಿರಲಿಕ್ಕಿಲ್ಲ. ಸಾವಿರದಲ್ಲಿ ಇದೂ ಒಂದು ಎನ್ನುವಂತೆ ಕಾರ್ಯಕ್ರಮಕ್ಕೆ ಬಂದು ಹೋಗುತ್ತಾರೆ. ಆದರೆ, ಒಮ್ಮೆ ಶಿಲಾನ್ಯಾಸ ಆಗಿದ್ದನ್ನು ಟೆಂಡರ್ ಆಗುವಂತೆ ನೋಡಿಕೊಂಡು ಕಾಮಗಾರಿ ಮಾಡಿಸುವುದು ಆಯಾ ಭಾಗದ ಸಂಸದ, ಶಾಸಕನ ಕರ್ತವ್ಯ. ಅಧಿಕಾರಿಗಳ ಜೊತೆ ಮಾತನಾಡುವುದಕ್ಕೇ ಆಗದವರು ಸಂಸದರಾದರೆ, ಶಂಕುಸ್ಥಾಪನೆಯ ನಾಟಕವನ್ನಷ್ಟೇ ಮಾಡುತ್ತಿರಬೇಕಾಗುತ್ತದೆ.

As National Highway infrastructure in coastal Karnataka continues to remain awful despite BJP’s claim of having double engine governments for development in Karnataka, Union Road Transport Minister Nitin Gadkari will be in Mangaluru on Monday to lay foundation stone for many highway works, including the ones on National Highway 75, for which he had laid the foundation stone in March 2016. Mr. Gadkari, during his visit to Mangaluru in March 2016, had laid the foundation stone for the four-lane widening of NH 75 between Hassan and B.C. Road in two packages — Hassan-Maranahalli and Addahole-B.C. Road. With the contractor chosen for Hassan-Maranahalli stretch going insolvent, the National Highways Authority of India (NHAI) awarded the work to the sub-contractor two years ago. The stretch yet remains awful.