ಟೋಲ್ ಗೇಟ್ ಬಗ್ಗೆ ದೆಹಲಿಯಲ್ಲಿ ಸಭೆ ವಿಳಂಬ ತಂತ್ರ ; ಮಾರ್ಚ್ 15 ರಂದು ಹೆಜಮಾಡಿಯಿಂದ ಸುರತ್ಕಲ್ ಗೆ ಬೃಹತ್ ಪಾದಯಾತ್ರೆ ನಿರ್ಣಯ 

01-03-22 10:48 pm       Mangalore Correspondent   ಕರಾವಳಿ

ಸುರತ್ಕಲ್ ಟೋಲ್ ಕೇಂದ್ರ ತೆರವಿಗೆ ಸಂಬಂಧಿಸಿ ಮುಂದಿನ ಹೋರಾಟದ ಕುರಿತು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸಮಾನ ಮನಸ್ಕ ಸಂಘಟನೆಗಳ ಪ್ರಮುಖರು ಬಪ್ಪನಾಡು ದೇವಸ್ಥಾನದ ಅನ್ನಪೂರ್ಣೇಶ್ವರಿ ಸಭಾಗೃಹದಲ್ಲಿ ಸಭೆ ನಡೆಸಿದ್ದು ಮಾರ್ಚ್ 15 ರಂದು ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.‌

ಮಂಗಳೂರು, ಮಾ.1: ಸುರತ್ಕಲ್ ಟೋಲ್ ಕೇಂದ್ರ ತೆರವಿಗೆ ಸಂಬಂಧಿಸಿ ಮುಂದಿನ ಹೋರಾಟದ ಕುರಿತು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸಮಾನ ಮನಸ್ಕ ಸಂಘಟನೆಗಳ ಪ್ರಮುಖರು ಬಪ್ಪನಾಡು ದೇವಸ್ಥಾನದ ಅನ್ನಪೂರ್ಣೇಶ್ವರಿ ಸಭಾಗೃಹದಲ್ಲಿ ಸಭೆ ನಡೆಸಿದ್ದು ಮಾರ್ಚ್ 15 ರಂದು ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.‌ 

ನೂರೈವತ್ತಕ್ಕೂ ಹೆಚ್ಚು ವಿವಿಧ ಸಂಘ- ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದು ಹೋರಾಟಗಳ ಕುರಿತು ಚರ್ಚಿಸಿದ್ದಾರೆ. ಮಾರ್ಚ್ 15 ರಂದು ಹೆಜಮಾಡಿ ಟೋಲ್ ಕೇಂದ್ರದಿಂದ ಸುರತ್ಕಲ್ ಟೋಲ್ ಕೇಂದ್ರದ ವರೆಗೆ ಬೃಹತ್ ಪಾದಯಾತ್ರೆಯನ್ನು ಸಾಮೂಹಿಕ ನೆಲೆಯಲ್ಲಿ ನಡೆಸಲು ಸಭೆ ನಿರ್ಧರಿಸಿದೆ. ಆರು ವರ್ಷಗಳ ನಿರಂತರ ಹೋರಾಟಗಳ ಹೊರತಾಗಿಯೂ ಸುರತ್ಕಲ್ ತಾತ್ಕಾಲಿಕ ಟೋಲ್ ಕೇಂದ್ರವನ್ನು ತೆರವಿನ ಭರವಸೆ ಕಾರ್ಯಗತಗೊಳ್ಳದ ಕುರಿತು ಸಭೆಯಲ್ಲಿ ಪ್ರಮುಖರು ಖೇದ ವ್ಯಕ್ತಪಡಿಸಿದ್ದಾರೆ. 

ಭೂಸಾರಿಗೆ ಸಚಿವರ ಕಾರ್ಯಕ್ರಮದಲ್ಲಿ ಸಂಸದರು, ಸಚಿವರು ಟೋಲ್ ಗೇಟ್ ತೆರವಿಗೆ ಸಂಬಂಧಿಸಿ ದೆಹಲಿಯಲ್ಲಿ ಅಧಿಕಾರಿಗಳ ಸಭೆ ನಡೆಸುವುದಕ್ಕೆ ಮಾತ್ರ ಸೀಮಿತಗೊಂಡಿದೆ. ಸುಲಭದಲ್ಲಿ ಪರಿಹರಿಸಬಹುದಾದ ತಾಂತ್ರಿಕ ತೊಡಕುಗಳನ್ನು ಅನಗತ್ಯವಾಗಿ ಕಾನೂನಿನ ತೊಡಕುಗಳು ಎಂಬಂತೆ ಬಿಂಬಿಸುವುದು, ಅವುಗಳ ಪರಿಹಾರಕ್ಕೆ ಸಭೆ ನಡೆಸುವುದು ಎಂಬ ಹೇಳಿಕೆ ಟೋಲ್ ಗೇಟ್ ತೆರವು ಪ್ರಕ್ರಿಯೆಯನ್ನು ವಿಳಂಬಗೊಳಿಸುವ ಸಾಧ್ಯತೆ ಇದೆ. ಈ ಎಲ್ಲ ಕಾರಣಗಳಿಂದ ಜನ ಹೋರಾಟವನ್ನು ತೀವ್ರಗೊಳಿಸಿದರೆ ಮಾತ್ರ ಟೋಲ್ ಗೇಟ್ ತೆರವು ಭರವಸೆ ಸಾಕಾರಗೊಳ್ಳಬಹುದು. ತೆರವು ಘೋಷಣೆ ಅಧಿಕೃತ ಆದೇಶವಾಗಿ ಬರುವ ವರೆಗೆ ಭರವಸೆಯ ಮಾತುಗಳನ್ನು ನಂಬಿ ಹೋರಾಟವನ್ನು ಹಿಂಪಡೆಯದಿರಲು ಒಕ್ಕೊರಳ ಅಭಿಪ್ರಾಯ ವ್ಯಕ್ತವಾಯಿತು.‌ ಸುರತ್ಕಲ್ ಟೋಲ್ ಗೇಟ್ ತಕ್ಷಣ ತೆರವು, ಮೂಲ್ಕಿ, ಪಡುಬಿದ್ರೆ ಪ್ರದೇಶದ ಪ್ರಯಾಣಿಕರಿಗೆ ಸಾಸ್ತಾನ ಟೋಲ್ ಗೇಟ್ ಮಾದರಿಯಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಒದಗಿಸುವುದು ಮುಂತಾದ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಮಾರ್ಚ್ 15 ರಂದು ಬೆಳಗ್ಗೆ 9 ಗಂಟೆಗೆ  ಹೆಜಮಾಡಿ ಟೋಲ್ ಗೇಟ್ ನಿಂದ ಸುರತ್ಕಲ್ ಟೋಲ್ ಕೇಂದ್ರದ ವರಗೆ ಅವಳಿ ಜಿಲ್ಲೆಗಳ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ‌ ಬೃಹತ್ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ. 

ಸಭೆಯ ಅಧ್ಯಕ್ಷತೆಯನ್ನು ಮೂಲ್ಕಿ ತಾಲೂಕು ಅಭಿವೃದ್ದಿ ಸಮಿತಿಯ ಅಧ್ಯಕ್ಷ ಹರೀಶ್ ಪುತ್ರನ್ ವಹಿಸಿದ್ದರು. ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಾಸ್ತಾವಿಕ ಮಾತನಾಡಿ ಹೋರಾಟದ ರೂಪುರೇಷೆ ಮಂಡಿಸಿದರು. ಮಾಜಿ ಸಚಿವ ಅಭಯ ಚಂದ್ರ ಜೈನ್, ಹಿರಿಯ ದಲಿತ ಮುಖಂಡ ಎಂ. ದೇವದಾಸ್, ಸಹಬಾಳ್ವೆ ಉಡುಪಿಯ ಅಮೃತ್ ಶೆಣೈ, ಹಿರಿಯ ಕಾರ್ಮಿಕ ನಾಯಕ ಬಾಲಕೃಷ್ಣ ಶೆಟ್ಟಿ ಉಡುಪಿ, ದ.ಕ ಬಸ್ಸು ಮಾಲಕರ ಸಂಘದ ನಿಕಟಪೂರ್ವ ಅಧ್ಯಕ್ಷ ದಿಲ್ ರಾಜ್ ಆಳ್ವ, ಎಂ.ಜಿ. ಹೆಗ್ಡೆ, ಬಿಲ್ಲವ ಮಹಾ ಮಂಡಲದ ರಾಜಶೇಖರ ಕೋಟ್ಯಾನ್, ಶಾಲೆಟ್ ಪಿಂಟೊ, ಜೆಡಿಎಸ್ ನಾಯಕ ಇಕ್ಬಾಲ್ ಮೂಲ್ಕಿ, ಶೇಖರ ಹೆಜಮಾಡಿ, ವಸಂತ ಬೆರ್ನಾಡ್, ನೂರುಲ್ಲಾ ಮೂಲ್ಕಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸು‌ನಿಲ್ ಕುಮಾರ್ ಬಜಾಲ್, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಮಾಜಿ ಕಾರ್ಮೊರೇಟರ್ ಗಳಾದ ದಯಾನಂದ ಶೆಟ್ಟಿ, ಅಯಾಜ್ ಕೃಷ್ಣಾಪುರ, ಡಿಎಸ್ಎಸ್ ನ ರಘು ಎಕ್ಕಾರು, ವಿಶು ಕುಮಾರ್ ಮೂಲ್ಕಿ, ಟಿ.ಎನ್ ರಮೇಶ್ ಸುರತ್ಕಲ್, ಡಿವೈಎಫ್ಐ ಮುಖಂಡರಾದ ಬಿ.ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಶ್ರೀನಾಥ್ ಕುಲಾಲ್, ಶೇಕಬ್ಬ ಕೋಟೆ, ಪಡುಬಿದ್ರೆ ನಾಗರಿಕ ಸಮಿತಿಯ ಸುಧಾಕರ ಕರ್ಕೆರ, ಸುಧೀರ್ ಕರ್ಕೇರ, ಕೇಶವ ಸಾಲ್ಯಾನ್, ರಾಲ್ಫಿ ಡಿಕೋಸ್ತ, ಟ್ಯಾಕ್ಸಿ ಮೆನ್, ಮ್ಯಾಕ್ಸಿ ಕ್ಯಾಬ್ ಅಸೋಷಿಯೇಷನ್ ಪದಾಧಿಕಾರಿಗಳಾದ ರಮೇಶ್ ಕೋಟ್ಯಾನ್, ದಿನೇಶ್ ಕುಂಪಲ, ಲಾರಿ ಮಾಲಕರ ಸಂಘದ ಮೂಸಬ್ಬ ಪಕ್ಷಿಕೆರೆ, ಸಾಮಾಜಿಕ ಕಾರ್ಯಕರ್ತರಾದ ಆಸಿಫ್ ಆಪತ್ಭಾಂಧವ, ರಾಜೇಶ್ ಶೆಟ್ಟಿ ಪಡ್ರೆ,  ಧನಂಜಯ ಮಟ್ಟು, ಚರಣ್ ಶೆಟ್ಟಿ, ಅಜ್ಮಲ್ ಸುರತ್ಕಲ್ ಸಹಿತ ಹಲವು ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು. ರಾಘವೇಂದ್ರ ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜೀವನ್ ಶೆಟ್ಟಿ ವಂದಿಸಿದರು.

Mangalore Mass protest against Surathkal toll closure to be held on March 15th.