ಮಂಗಳೂರಿನಲ್ಲಿ ಮಳೆ ಕಡಿಮೆ, ಮೂಲ್ಕಿಯಲ್ಲಿ ಹೆಚ್ಚು ; ಶಾಂಭವಿ ನದಿಯಲ್ಲಿ ನೆರೆ

20-09-20 05:01 pm       Mangaluru Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ - ಮೂಡುಬಿದ್ರೆ ಹೋಬಳಿಯಲ್ಲಿ ಮಳೆಯ ತೀವ್ರತೆ ಹೆಚ್ಚಿದ್ದು, ಶಾಂಭವಿ ನದಿಯಲ್ಲಿ ನೆರೆ ಕಾಣಿಸಿಕೊಂಡಿದೆ. ಕಟೀಲು ಭಾಗದಿಂದ ಹರಿಯುವ ಶಾಂಭವಿ ನದಿ ಅಪಾಯ ಮಟ್ಟ ಮೀರಿ ಹರಿದಿದ್ದು, ಆಸುಪಾಸಿನಲ್ಲಿ ಕೃಷಿಭೂಮಿಗೆ ನೀರು ನುಗ್ಗಿದೆ.

ಮಂಗಳೂರು, ಸೆಪ್ಟಂಬರ್ 20: ಕರಾವಳಿಯಲ್ಲಿ ಭಾರೀ ಮಳೆ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ - ಮೂಡುಬಿದ್ರೆ ಹೋಬಳಿಯಲ್ಲಿ ಮಳೆಯ ತೀವ್ರತೆ ಹೆಚ್ಚಿದ್ದು, ಶಾಂಭವಿ ನದಿಯಲ್ಲಿ ನೆರೆ ಕಾಣಿಸಿಕೊಂಡಿದೆ. ಕಟೀಲು ಭಾಗದಿಂದ ಹರಿಯುವ ಶಾಂಭವಿ ನದಿ ಅಪಾಯ ಮಟ್ಟ ಮೀರಿ ಹರಿದಿದ್ದು, ಆಸುಪಾಸಿನಲ್ಲಿ ಕೃಷಿಭೂಮಿಗೆ ನೀರು ನುಗ್ಗಿದೆ.

ಬಪ್ಪನಾಡು ದುರ್ಗಾಪರಮೇಶ್ವರಿ ದೇಗುಲಕ್ಕೆ ನೀರು ನುಗ್ಗಿದ್ದು, ದೇವಸ್ಥಾನ ಜಲಾವೃತವಾಗಿದೆ. ಹಾಗೆಯೇ ಶಿಮಂತೂರು ಆದಿಜನಾರ್ದನ ದೇವಸ್ಥಾನಕ್ಕೂ ನೀರು ನುಗ್ಗಿದ್ದು, ಅರ್ಚಕರಿಗೂ ದೇಗುಲದ ಅಂಗಣ ಪ್ರವೇಶಿಸುವುದು ಕಷ್ಟಕರ ಆಗಿತ್ತು. ಬೆಳಗ್ಗಿನಿಂದಲೇ ನೆರೆ ನೀರು ನುಗ್ಗತೊಡಗಿದ್ದು, ಮುಲ್ಕಿ ಹೋಬಳಿಯ ಆಸುಪಾಸಿನಲ್ಲಿ ಹಲವೆಡೆ ಕೃಷಿ ಗದ್ದೆಗಳು, ಅಡಿಕೆ ತೋಟಗಳು ಜಲಾವೃತ ಆಗಿವೆ. ಅಲ್ಲದೆ, ಶಿಮಂತೂರು, ತೋಕೂರು, ಕಿಲೆಂಜಾರು ಪರಿಸರದಲ್ಲಿ ನೆರೆ ಕಾಣಿಸಿಕೊಂಡು ಒಳರಸ್ತೆಗಳೆಲ್ಲ ಹೊಳೆಯ ರೂಪ ಪಡೆದಿತ್ತು. ಸ್ಥಳೀಯರು ನಾಡದೋಣಿಗಳನ್ನು ಬಳಸಿ, ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದ್ದಾರೆ. ಉಡುಪಿ ಜಿಲ್ಲೆಗೆ ಹೊಂದಿಕೊಂಡಿರುವ ಮೂಲ್ಕಿ ಹೋಬಳಿಗೆ ಅತ್ತ ಪಡುಬಿದ್ರಿ ಕಡೆಯಿಂದಲೂ ನೀರು ನುಗ್ಗಿದ್ದರಿಂದ ನೆರೆನೀರು ಹರಿಯಲು ಜಾಗ ಇಲ್ಲದಾಗಿತ್ತು. ಈ ಭಾಗದಲ್ಲಿ ಹಲವಾರು ಮನೆಗಳಿಗೆ ನೆರೆನೀರು ನುಗ್ಗಿತ್ತು.

ನಿರಂತರ ಮಳೆಯಿಂದಾಗಿ ವಿಟ್ಲ ಸಮೀಪದ ಮಂಗಳಪದವು ಎಂಬಲ್ಲಿ ಅಬ್ದುಲ್ಲ ಎಂಬವರ ಮನೆಗೆ ಗುಡ್ಡ ಕುಸಿದು ಬಿದ್ದಿದೆ. ಗುಡ್ಡ ಕುಸಿತದಿಂದಾಗಿ ಮನೆ ಸಂಪೂರ್ಣ ನೆಲಸಮವಾಗಿದ್ದು, ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯರು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಜ್ಪೆ ವಿಮಾನ ನಿಲ್ದಾಣದಿಂದ ಹೊರಬರುವ ಕೆಂಜಾರಿನಲ್ಲಿ ರಸ್ತೆಗೆ ಗುಡ್ಡ ಕುಸಿದು ಸಂಚಾರ ಸ್ಥಗಿತವಾಗಿದೆ. ಏರ್ಪೋರ್ಟ್ ನಿಂದ ಹೊರಬರುವ ರಸ್ತೆಯನ್ನು ಬ್ಲಾಕ್ ಮಾಡಿದ್ದು, ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇನ್ನು ಪಡೀಲಿನಲ್ಲಿ ರೈಲ್ವೇ ಹಳಿಗೆ ಗುಡ್ಡ ಕುಸಿದು ಬಿದ್ದಿದ್ದು ಮಂಗಳೂರು – ಬೆಂಗಳೂರು ರೈಲು ಸಂಚಾರಕ್ಕೆ ತೊಡಕಾಗಿದೆ. ಬೆಳಗ್ಗೆ ಮಣ್ಣು ಕುಸಿದು ಬಿದ್ದಿದ್ದು ಕೂಡಲೇ ರೈಲ್ವೇ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದ್ದಾರೆ.

ಮಂಗಳೂರು ಭಾಗದಲ್ಲಿ ಮಳೆಯ ತೀವ್ರತೆ ಕಡಿಮೆ ಇದ್ದರೂ, ನಿರಂತರವಾಗಿ ತುಂತುರು ಮಳೆಯಾಗುತ್ತಿದೆ. ಇದರಿಂದ ಮಣ್ಣು ಸಡಿಲಗೊಂಡು ಗುಡ್ಡ ಕುಸಿತದಂತಹ ಪ್ರಕರಣಗಳು ನಡೆಯುತ್ತಿದೆ. ಇನ್ನೂ ಎರಡು ದಿನ ಹೀಗೆಯೇ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

Join our WhatsApp group for latest news updates