ಕೃಷ್ಣನಗರಿಯಲ್ಲಿ ಕಂಡುಕೇಳರಿಯದ ಜಲಪ್ರಳಯ! ಸ್ವರ್ಣಾ ಅಬ್ಬರಕ್ಕೆ ಹರೋಹರ !  

20-09-20 06:24 pm       Headline Karnataka News Network   ಕರಾವಳಿ

ಕೃಷ್ಣನ ನಗರಿ ಉಡುಪಿಯಲ್ಲಿ ಜನ ಕಂಡುಕೇಳರಿಯದ ರೀತಿ ಮಳೆಯಾಗಿದ್ದು, ನಗರ ಪ್ರದೇಶ ಸಂಪೂರ್ಣ ದ್ವೀಪಸದೃಶ ಆಗಿದೆ.

ಉಡುಪಿ, ಸೆಪ್ಟಂಬರ್ 20: ಕೃಷ್ಣನ ನಗರಿ ಉಡುಪಿಯಲ್ಲಿ ಜನ ಕಂಡುಕೇಳರಿಯದ ರೀತಿ ಮಳೆಯಾಗಿದ್ದು, ನಗರ ಪ್ರದೇಶ ಸಂಪೂರ್ಣ ದ್ವೀಪಸದೃಶ ಆಗಿದೆ. ಉಡುಪಿ ತಾಲೂಕು ಪೂರ್ತಿ ಪ್ರವಾಹಕ್ಕೆ ತುತ್ತಾಗಿದ್ದು, ಸಾವಿರಾರು ಜನರು ದಿಕ್ಕೆಟ್ಟು ಹೋಗಿದ್ದಾರೆ. ಇದೇ ಮೊದಲ ಬಾರಿಗೆ ಕೃಷ್ಣಮಠ, ರಥಬೀದಿ, ಸೇರಿ ನಗರ ಪ್ರದೇಶ ದ್ವೀಪದಂತಾಗಿದ್ದು 48 ವರ್ಷಗಳ ಬಳಿಕ ಈ ಪರಿ ಮಳೆಯಾಗಿದೆ ಎನ್ನುವ ಮಾಹಿತಿಯನ್ನು ಸ್ಥಳೀಯರು ನೀಡುತ್ತಿದ್ದಾರೆ.

ನಿನ್ನೆ ರಾತ್ರಿಯಿಂದ ಉಡುಪಿ ಮತ್ತು ಕಾರ್ಕಳ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಭಾಗದ ನದಿಗಳೆಲ್ಲ ಭೋರ್ಗರೆದು ಹರಿಯತೊಡಗಿದೆ. ಉಡುಪಿ ನಗರ ಪ್ರದೇಶದಲ್ಲಿ ಕಾಂಕ್ರೀಟ್ ರಸ್ತೆಗಳಾಗಿರುವುದರಿಂದ ರಸ್ತೆಗಳೆಲ್ಲಾ ಬೆಳ್ಳಂಬೆಳಗ್ಗೆಯೇ ಹೊಳೆಯಂತಾಗಿದ್ದವು. ಉಡುಪಿ- ಮಣಿಪಾಲ ಹೆದ್ದಾರಿಯಲ್ಲಿ ಕಾರು ಮುಳುಗುವಷ್ಟರ ಮಟ್ಟಿಗೆ ನೀರು ಹರಿಯುತ್ತಿದೆ. ಮಂಗಳೂರು- ಉಡುಪಿ- ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಹೊರತುಪಡಿಸಿ ಉಳಿದೆಲ್ಲ ಸಂಪರ್ಕ ರಸ್ತೆಗಳು ಬಂದ್ ಆಗಿವೆ. ಕೆಳಗಿನ ಬಸ್ ನಿಲ್ದಾಣ ಸೇರಿ ಈ ಭಾಗದ ರಸ್ತೆಗಳಲ್ಲಿ ಜನರು ದೋಣಿಗಳಲ್ಲಿ ತೆರಳುತ್ತಿದ್ದಾರೆ. ಪೆರಂಪಳ್ಳಿ, ಕಲ್ಸಂಕ, ಮಠದ ಕೆರೆ, ನಿಟ್ಟೂರು, ಕೊಡಂಕೂರು, ಉಡುಪಿ ನಗರದಲ್ಲಿ ನೆರೆ ಆವರಿಸಿದೆ. ಹಿರಿಯಡ್ಕ, ನಿಟ್ಟೂರು, ಪೆರಂಪಳ್ಳಿ ಹೀಗೆ ಹಲವೆಡೆ ತಗ್ಗು ಪ್ರದೇಶದ ಗ್ರಾಮಗಳೆಲ್ಲ ಮುಳುಗಡೆಯಾಗಿದ್ದು, ಅಲ್ಲಿನ ಜಾನುವಾರುಗಳನ್ನು ರಕ್ಷಿಸುವುದೇ ಸವಾಲಾಗಿದೆ. ಕೆಲವೆಡೆ ತಮ್ಮ ನಾಯಿ, ದನಗಳನ್ನು ಬಿಟ್ಟು ಬರಲು ಜನ ಒಪ್ಪದೆ ಅಲ್ಲಿಯೇ ಉಳಿದುಕೊಂಡಿದ್ದಾರೆ. ಸ್ವರ್ಣಾ ನದಿಯಲ್ಲಿ ಮಹಾಪ್ರವಾಹ ಕಾಣಿಸಿಕೊಂಡಿದ್ದು, ಪೆರಂಪಳ್ಳಿಯಲ್ಲಿ ಪ್ರವಾಹದ ನೀರಿನಲ್ಲಿ ಜನರನ್ನು ಸ್ಥಳಾಂತರಿಸುವುದೇ ಸವಾಲಾಗಿದೆ.

ಕೃಷ್ಣಮಠ ಮಳೆ ನೀರಿನಲ್ಲಿ ಅರ್ಧ ಮುಳುಗಿದ್ದು, ರಥಬೀದಿ, ಭೋಜನ ಶಾಲೆ, ಗೋಶಾಲೆ, ಕೃಷ್ಣಮಠದ ರಾಜಾಂಗಣಕ್ಕೆ ನೆರೆ ನೀರು ನುಗ್ಗಿದ್ದು ಸಂಪರ್ಕ ಕಡಿತಗೊಂಡು ದ್ವೀಪದಂತಾಗಿದೆ. ಇನ್ನು ಬ್ರಹ್ಮಾವರ ಮತ್ತು ಕಾರ್ಕಳ ತಾಲೂಕಿನಲ್ಲಿ ಹಲವು ಗ್ರಾಮಗಳು ಮುಳುಗಡೆಯಾಗಿದ್ದು, ಅಲ್ಲಿ ಸಂತ್ರಸ್ತರಾದ ಸಾವಿರಾರು ಜನರನ್ನು ಸ್ಥಳಾಂತರ ಮಾಡಲಾಗಿದೆ. ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ತಂಡಗಳು ವಿಶೇಷ ಬೋಟ್ಗಳ ಮೂಲಕ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಸ್ವರ್ಣಾ ನದಿ ಭೋರ್ಗರೆಯುತ್ತಿದ್ದು, ನದಿ ಪಾತ್ರದ ಗ್ರಾಮಗಳೆಲ್ಲ ಮುಳುಗಡೆಯಾಗಿವೆ. ನದಿಯಲ್ಲಿ ನೀರು ಹರಿಯಲು ಜಾಗ ಸಾಲದೆ ಮಳೆನೀರು ಎಲ್ಲೆಂದರಲ್ಲಿ ಹರಿಯತೊಡಗಿದ್ದು, ಕೃಷ್ಣನಗರಿ ಉಡುಪಿಯನ್ನು ಮುಳುಗಿಸಿದೆ.

ಉಡುಪಿ ಜಿಲ್ಲಾಧಿಕಾರಿಯವರ ಪ್ರಕಾರ, 24 ಗಂಟೆಯಲ್ಲಿ 45 ಸೆಂಟಿ ಮೀಟರ್ ಮಳೆಯಾಗಿದೆ, 700 ರಷ್ಟು ಮನೆಗಳು ಮುಳುಗಡೆಯಾಗಿವೆ. 2500 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ. ಇನ್ನೂ ಎರಡು ದಿನ ಮಳೆಯಾಗುವುದರಿಂದ ತಗ್ಗುಪ್ರದೇಶಗಳ ಜನರು ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚನೆ ನೀಡಿದ್ದಾರೆ.