ಸುರತ್ಕಲ್ ಟೋಲ್ ಚಲೋ ಹೆಸರಲ್ಲಿ ಸಂಸದ, ಶಾಸಕರಿಗೆ ಧಿಕ್ಕಾರ ; ಕಾಲ್ನಡಿಗೆಯಲ್ಲಿ ಸೇರಿದ ಸಾವಿರಾರು ಜನರ ಒಕ್ಕೊರಳ ಕೂಗು, ಟೋಲ್ ಗೇಟ್ ತೆರವಿಗೆ ದಿನಾಂಕ ಘೋಷಿಸಲು ಆಗ್ರಹ  

22-03-22 07:17 pm       Mangalore Correspondent   ಕರಾವಳಿ

ಸುರತ್ಕಲ್ ಟೋಲ್ ಗೇಟ್ ರದ್ದುಗೊಳಿಸುತ್ತೇವೆ, ವಿಲೀನ ಮಾಡುತ್ತೇವೆ ಎಂದು ಸಂಸದ, ಶಾಸಕರು ನಾಲ್ಕು ವರ್ಷಗಳಿಂದ ಭರವಸೆ ನೀಡುತ್ತಿದ್ದರೂ ಅದು ಈಡೇರದೇ ಇರುವುದನ್ನು ವಿರೋಧಿಸಿ ಇಂದು ಸಾವಿರಾರು ಸಂಖ್ಯೆಯಲ್ಲಿ ಜನರು ಟೋಲ್ ಚಲೋ ಪಾದಯಾತ್ರೆ ನಡೆಸಿದ್ದಾರೆ

ಮಂಗಳೂರು, ಮಾ.22: ಸುರತ್ಕಲ್ ಟೋಲ್ ಗೇಟ್ ರದ್ದುಗೊಳಿಸುತ್ತೇವೆ, ವಿಲೀನ ಮಾಡುತ್ತೇವೆ ಎಂದು ಸಂಸದ, ಶಾಸಕರು ನಾಲ್ಕು ವರ್ಷಗಳಿಂದ ಭರವಸೆ ನೀಡುತ್ತಿದ್ದರೂ ಅದು ಈಡೇರದೇ ಇರುವುದನ್ನು ವಿರೋಧಿಸಿ ಇಂದು ಸಾವಿರಾರು ಸಂಖ್ಯೆಯಲ್ಲಿ ಜನರು ಟೋಲ್ ಚಲೋ ಪಾದಯಾತ್ರೆ ನಡೆಸಿದ್ದಾರೆ. ಹೆಜಮಾಡಿಯಿಂದ 12 ಕಿಮೀ ಉದ್ದಕ್ಕೆ ಸುಡು ಬಿಸಿಲನ್ನು ಲೆಕ್ಕಿಸದೆ, ಧಿಕ್ಕಾರ ಕೂಗುತ್ತಲೇ ಸುರತ್ಕಲ್ ಟೋಲ್ ಗೇಟ್ ವರೆಗೆ ಪಾದಯಾತ್ರೆ ನಡೆಸಿದ್ದು, ಆಡಳಿತಕ್ಕೆ ಬಿಸಿ ಮುಟ್ಟಿಸಿದ್ದಾರೆ.

ಹೆದ್ದಾರಿ ಉದ್ದಕ್ಕೂ ಒಂದು ಬದಿಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಪಾದಯಾತ್ರೆಯಲ್ಲಿ ನಡೆದುಕೊಂಡು ಬಂದಿದ್ದಾರೆ. ಟೋಲ್ ಗೇಟ್ ಮತ್ತು ಸಂಸದ, ಶಾಸಕರ ವಿರುದ್ಧ ಘೋಷಣೆ ಕೂಗುತ್ತಾ ಸಾಗಿದ್ದಾರೆ. ಹೆಜಮಾಡಿ, ಮುಲ್ಕಿ, ಕಾಪು, ಪಡುಬಿದ್ರೆ, ಸುರತ್ಕಲ್ ಭಾಗದ 60ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಪ್ರತಿಭಟನೆಗೆ ಕೈಜೋಡಿಸಿದ್ದು, ಜನರು ಮತ ಭೇದ ಮರೆತು ಕಾಲ್ನಡಿಗೆ ಯಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ಯುವಕರು ಮಾತ್ರವಲ್ಲದೆ ಮೀನುಗಾರ ಮಹಿಳೆಯರು, ಸ್ಥಳೀಯ ಸಂಘಟನೆಗಳ ಮಹಿಳೆಯರು ಕೂಡ ಭಾಗವಹಿಸಿದ್ದಾರೆ.

ಸುರತ್ಕಲ್ ನಲ್ಲಿರುವ ಅಕ್ರಮ ಟೋಲ್ ಗೇಟ್ ತೆರವುಗೊಳಿಸಿ ಅನ್ನುವುದೇ ಬೇಡಿಕೆಯಾಗಿತ್ತು. ಬೆಳಗ್ಗೆ 9 ಗಂಟೆಗೆ ಹೊರಟ ಪಾದಯಾತ್ರೆ ಮಧ್ಯಾಹ್ನ 1 ಗಂಟೆ ವೇಳೆಗೆ ಸುರತ್ಕಲ್ ಎನ್ಐಟಿಕೆ ಬಳಿ ಸೇರಿತ್ತು. ಕಾಲ್ನಡಿಗೆ ಉದ್ದಕ್ಕೂ ಸ್ಥಳೀಯರು ನೀರು, ಶರಬತ್ತು, ಹಣ್ಣುಗಳನ್ನು ನೀಡಿ, ಪಾದಯಾತ್ರೆ ನಡೆಸುತ್ತಿದ್ದ ಜನರ ದಣಿವು ನೀಗಿಸುವ ಕೆಲಸ ಮಾಡಿದ್ದಾರೆ. ಸುರತ್ಕಲ್ ಟೋಲ್ ಗೇಟ್ ಬಳಿ ಸಮಾವೇಶಗೊಂಡು ಸುರತ್ಕಲ್ ಟೋಲ್ ಗೇಟ್ ರದ್ದು ಮಾಡಬೇಕು. ಅದರ ಜೊತೆಗೆ ಹೆಜಮಾಡಿ ಟೋಲ್ ಗೇಟ್ ನಲ್ಲಿ ಸ್ಥಳೀಯರಿಗೆ ಉಚಿತ ಅವಕಾಶ ನೀಡಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಸಂಸದ ನಳಿನ್ ಕುಮಾರ್ ದೆಹಲಿಯಲ್ಲಿ ಗಡ್ಕರಿ ಜೊತೆ ಸಭೆ ನಡೆಸಿ, ಟೋಲ್ ಗೇಟನ್ನು ಎನ್ಎಂಪಿಟಿ ಬಂದರು ಒಳಗೆ ಸೇರಿಸ್ತೀವಿ ಎಂದಿದ್ದಾರೆ. ಆದರೆ ಟೋಲ್ ಗೇಟನ್ನು ಯಾವಾಗ ಇಲ್ಲಿಂದ ತೆರವು ಮಾಡುತ್ತೀರಿ ಎನ್ನೋದನ್ನು ಹೇಳಬೇಕು. ಇದಕ್ಕಾಗಿ ಕೂಡಲೇ ದಿನಾಂಕ ಘೋಷಣೆ ಮಾಡಿ. ನಿಮ್ಮ ಹುಸಿ ಭರವಸೆಯನ್ನು ಕೇಳಿ ಕುಳಿತುಕೊಳ್ಳುವುದಿಲ್ಲ. ಇಲ್ಲಿ 60 ಕಿಮೀ ವ್ಯಾಪ್ತಿಯಲ್ಲಿ ನಾಲ್ಕು ಟೋಲ್ ಗೇಟ್ ಬರುವಂತಾಗಲು ಇಲ್ಲಿನ ಸಂಸದ ಮತ್ತು ಸ್ಥಳೀಯ ಶಾಸಕರ ನಿರ್ಲಕ್ಷ್ಯವೇ ಕಾರಣ. ಜನರು ಹೋರಾಟ ನಡೆಸುತ್ತಿದ್ದರೂ, ಮೌನ ವಹಿಸುತ್ತಿದ್ದಾರೆ ಅಂದರೆ ಟೋಲ್ ವಸೂಲಿಯಲ್ಲಿ ಇವರಿಗೆ ಲಾಭ ಇದೆ ಎಂದೇ ಅರ್ಥ. ಅದಿಲ್ಲ ಎಂದಾದಲ್ಲಿ ಕೂಡಲೇ ಈ ಬಗ್ಗೆ ತುಟಿ ಬಿಚ್ಚಿ ಸಮಸ್ಯೆ ಸರಿಪಡಿಸಿ ಎಂದು ಸವಾಲು ಹಾಕಿದರು.

ಇದೇ ವೇಳೆ, ಮಾತನಾಡಿದ ಮಾಜಿ ಸಂಸದ ವಿನಯ ಕುಮಾರ್ ಸೊರಕೆ, ಹೆದ್ದಾರಿಯಲ್ಲಿ ಟೋಲ್ ಮಾಡುವುದಕ್ಕೆ 60 ಕಿಮೀ ನಡುವೆ ಒಂದೇ ಟೋಲ್ ಅನ್ನುವ ನಿಯಮ ಇದ್ದರೂ, ಇಲ್ಲಿ ಮಾತ್ರ 60 ಕಿಮೀ ನಡುವೆ ನಾಲ್ಕು ಟೋಲ್ ಹಾಕಲಾಗಿದೆ. ಇದು ಜನರನ್ನು ಲೂಟಿ ಮಾಡುತ್ತಿರುವುದಾ, ಆಡಳಿತಗಾರರು ವಸೂಲಿ ಮಾಡುತ್ತಿರುವುದಾ ಅನ್ನೋದು ತಿಳಿಯುತ್ತಿಲ್ಲ. ಇದರ ಬಗ್ಗೆ ಮಾತನಾಡಬೇಕಾದವರು ಮೌನವಾಗಿದ್ದಾರೆ. ಉಡುಪಿ ಸಂಸದೆ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಇಲ್ಲಿನ ಮಂದಿಯೇ ರಾಜ್ಯ ಮತ್ತು ಕೇಂದ್ರದಲ್ಲಿ ಪ್ರಭಾವ ಹೊಂದಿದ್ದಾರೆ. ಆದರೆ ಒಂದು ಟೋಲ್ ಗೇಟ್ ತೆರವುಗೊಳಿಸಲು ಇವರಿಂದ ಸಾಧ್ಯವಾಗುತ್ತಿಲ್ಲ ಎಂದರೆ ಇವರು ಯಾಕೆ ಇರಬೇಕು ಎಂದು ಪ್ರಶ್ನೆ ಮಾಡಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಮೊಯ್ದೀನ್ ಬಾವಾ ಸೇರಿದಂತೆ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳ ನಾಯಕರು, ಸ್ಥಳೀಯ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.

The Toll Gate Horata Samithi along with like minded organizations took out a protest rally, "Toll Gate Chalo" from Hejmady toll gate to Surathkal toll gate on Tuesday, March 22. The protesters demanded scrapping of the Surathkal toll gate. They also urged for giving toll free entry to the public residing close to the Hejamady toll gate.