ಎಂಆರ್ ಪಿಎಲ್ ನಲ್ಲಿ ಸ್ಥಳೀಯರಿಗೆ ಉದ್ಯೋಗ ನಷ್ಟ ; ಮಾಧ್ಯಮದ ಪ್ರಶ್ನೆಗೆ ರೂಲ್ಸ್ ಪುಸ್ತಕ ಇದೆ, ಬೇಕಿದ್ರೆ ಕೊಡ್ತೇನೆ ಎನ್ನುತ್ತಾ ನಗೆಪಾಟಲಿಗೀಡಾದ ಸಚಿವ ನಿರಾಣಿ

03-04-22 10:43 pm       Mangalore Correspondent   ಕರಾವಳಿ

ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ಬಗ್ಗೆ ನಿಯಮಗಳಿವೆ. ರೂಲ್ಸ್ ಇರುವ ಬಗ್ಗೆ ಪುಸ್ತಕ ಬೇಕಿದ್ದರೆ ನಿಮಗೆ ಕೊಡುತ್ತೇನೆ ಎಂದು ಘನ ಕೈಗಾರಿಕೆ ಮತ್ತು ಪರಿಸರ ಖಾತೆ ಸಚಿವ ಮುರುಗೇಶ್ ನಿರಾಣಿ ಮಾಧ್ಯಮದ ಪ್ರಶ್ನೆಗೆ ಲಘುವಾದ ಮಾತುಗಳನ್ನಾಡಿ ಮಂಗಳೂರಿನಲ್ಲಿ ನಗೆಪಾಟಲಿಗೀಡಾಗಿದ್ದಾರೆ.

ಮಂಗಳೂರು, ಎ.3: ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ಬಗ್ಗೆ ನಿಯಮಗಳಿವೆ. ಯಾವ ಕೈಗಾರಿಕೆಗಳು ಪರಿಸರ ಮಾಲಿನ್ಯ ಮಾಡುತ್ತಿವೆ, ಉದ್ಯೋಗ ಕೊಡಲ್ಲ ಎನ್ನುತ್ತವೆಯೋ ಅದರ ಬಗ್ಗೆ ಲಿಸ್ಟ್ ಇದ್ದರೆ ನನಗೆ ಕೊಡಿ. ರೂಲ್ಸ್ ಇರುವ ಬಗ್ಗೆ ಪುಸ್ತಕ ಬೇಕಿದ್ದರೆ ನಿಮಗೆ ಕೊಡುತ್ತೇನೆ ಎಂದು ಘನ ಕೈಗಾರಿಕೆ ಮತ್ತು ಪರಿಸರ ಖಾತೆ ಸಚಿವ ಮುರುಗೇಶ್ ನಿರಾಣಿ ಮಾಧ್ಯಮದ ಪ್ರಶ್ನೆಗೆ ಲಘುವಾದ ಮಾತುಗಳನ್ನಾಡಿ ಮಂಗಳೂರಿನಲ್ಲಿ ನಗೆಪಾಟಲಿಗೀಡಾಗಿದ್ದಾರೆ.

ನಗರದಲ್ಲಿ ಡಿಸಿಸಿ ಬ್ಯಾಂಕ್ ಕಚೇರಿಯ ಹಾಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜ್ಯದ ಹಿರಿಯ ಸಚಿವರೂ ಆಗಿರುವ ನಿರಾಣಿ, ಮಂಗಳೂರಿನಲ್ಲಿ ಇನ್ನೊಂದು ರಸಗೊಬ್ಬರ ಕಾರ್ಖಾನೆ ಬರಲಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಕಂಪನಿ ಜೊತೆ ಮಾತುಕತೆ ನಡೆದಿದ್ದು ಏಳು ಸಾವಿರ ಕೋಟಿ ಹೂಡಿಕೆ ಆಗಲಿದ್ದು ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಸಿಗಲಿದೆ ಎಂದು ಹೇಳಿದರು. ಇದರ ಬಗ್ಗೆ ಮಾಧ್ಯಮದ ಮಂದಿ, ನೀವು ಕೈಗಾರಿಕೆಗಳನ್ನು ತರುತ್ತೀರಿ, ಆದರೆ ಇಲ್ಲಿ ಪರಿಸರ ಮಾಲಿನ್ಯ ತಡೆಯಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ಮಂಗಳೂರಿನಲ್ಲಿ ಕುಡಿಯುವ ನೀರು ಕಲುಷಿತ ಆಗಿರುವ ಬಗ್ಗೆ ಹೈಕೋರ್ಟಿನಲ್ಲಿ ದಾವೆ ಹೂಡಲಾಗಿದೆ ಎಂದು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಹೊಸತಾಗಿ ಬರುತ್ತಿರುವ ಕೈಗಾರಿಕೆಗಳು ಪರಿಸರ ಮಾಲಿನ್ಯ ತಡೆಯುವ ಬಗ್ಗೆ ವೈಜ್ಞಾನಿಕ ರೀತಿಯ ಸೌಲಭ್ಯಗಳನ್ನು ಬಳಸುತ್ತಿವೆ. ಅದರಿಂದ ಹೊಗೆ ಬರುವುದಿಲ್ಲ. ಕಲುಷಿತ ನೀರು ಕೂಡ ಹೊರಬರಲ್ಲ ಎಂದು ಹೇಳಿದರು.

Mangaluru: Water position improves - MRPL, MCF resume production -  Daijiworld.com

ಈಗಾಗಲೇ ಮಂಗಳೂರಿನ ಎಂಆರ್ ಪಿಎಲ್, ಎಂಸಿಎಫ್ ಕೈಗಾರಿಕೆಯಿಂದ ಬಹಳಷ್ಟು ಪರಿಸರ ಮಾಲಿನ್ಯ ಆಗುತ್ತಿದ್ದು, ಇದರಿಂದಾಗಿ ಫಲ್ಗುಣಿ ನದಿಯ ನೀರು ಸಂಪೂರ್ಣ ಕಲುಷಿತ ಆಗಿದೆ. ನೀರಿಗೆ ಇಳಿಯಲು ಸಾಧ್ಯವಾಗುತ್ತಿಲ್ಲ ಎಂದು ಮೀನುಗಾರರು ದೂರುತ್ತಾರೆ. ನಿಮ್ಮ ಆಧುನಿಕ ತಂತ್ರಜ್ಞಾನ ಈ ಕೈಗಾರಿಕೆಗಳಿಗೆ ಅಳವಡಿಸಲು ಆಗಲ್ಲವೇ ಎಂದು ಪ್ರಶ್ನೆ ಮಾಡಲಾಯಿತು. ಅದಕ್ಕೆ ಉತ್ತರಿಸಿದ ನಿರಾಣಿ, ನಿಧಾನಕ್ಕೆ ಈ ವ್ಯವಸ್ಥೆ ಬರಲಿದೆ, ಪರಿಸರ ಮಾಲಿನ್ಯ ಮಂಡಳಿಯ ಅಧಿಕಾರಿಗಳಿಗೆ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಎಲ್ಲಿ ಲೋಪ ಆಗಿದೆಯೋ ಅದರ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದರು.

ಎಂಆರ್ ಪಿಎಲ್ ನಲ್ಲಿ ಉದ್ಯೋಗ ಸಿಗುತ್ತಿಲ್ಲ. ಕಳೆದ ಬಾರಿ 250ಕ್ಕೂ ಹೆಚ್ಚು ಉದ್ಯೋಗ ಆಯ್ಕೆ ಸಂದರ್ಭದಲ್ಲಿ ಕರ್ನಾಟಕದ 11 ಮಂದಿಗೆ ಮಾತ್ರ ಉದ್ಯೋಗ ಸಿಕ್ಕಿದೆ ಎಂದು ಪ್ರಶ್ನೆ ಮಾಡಿದ್ದಕ್ಕೆ ಉತ್ತರಿಸಿದ ನಿರಾಣಿ, ಸರೋಜಿನಿ ಮಹಿಷಿ ವರದಿಯ ಪ್ರಕಾರ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ಆದೇಶ ಇದೆ, ಅದರಂತೆ ಕೈಗಾರಿಕೆಗಳು ಪಾಲನೆ ಮಾಡಬೇಕು. ಹೊಸತಾಗಿ ಬರುವ ಕೈಗಾರಿಕೆಗಳಿಗೂ ಈ ಬಗ್ಗೆ ಶಿಷ್ಟಾಚಾರ ಇದೆ ಎಂದು ಹೇಳಿದರು. ಆದರೆ ಎಂಆರ್ ಪಿಎಲ್ ಕಡೆಯವರು ನಮಗೆ ಯಾವುದೇ ಗೈಡ್ ಲೈನ್ಸ್ ಇಲ್ಲ ಎಂದು ಹೇಳುತ್ತಾರಲ್ಲಾ ಎಂದು ಕೇಳಿದ್ದಕ್ಕೆ, ರೂಲ್ಸ್ ಇದೇರೀ... ನಿಮಗೆ ಬೇಕಾದರೆ ರೂಲ್ಸ್ ಇರುವ ಬಗ್ಗೆ ಪುಸ್ತಕ ಕೊಡುತ್ತೇನೆ ಎಂದು ಲಘುವಾದ ಉತ್ತರ ನೀಡಿದರು.

ನಿಮ್ಮ ರೂಲ್ಸ್ ಪುಸ್ತಕ ಯಾಕ್ರೀ.. ರೂಲ್ಸ್ ಇದ್ದರೆ ಅನುಷ್ಠಾನಕ್ಕೆ ಬರಬೇಕಲ್ಲಾ ಎಂದು ನಿರಾಣಿಯವರನ್ನು ತರಾಟೆಗೆತ್ತಿಕೊಂಡಿದ್ದಲ್ಲದೆ, ಸರೋಜಿನಿ ಮಹಿಷಿ ವರದಿ ಕೊಟ್ಟಿದ್ದಾರೆ, ಅದನ್ನು ಅನುಷ್ಠಾನ ಮಾಡಿಲ್ಲ ನೀವು ಎಂದು ನಿರಾಣಿಗೆ ಮರು ಪ್ರಶ್ನೆ ಹಾಕಿದಾಗ, ಆ ಮನುಷ್ಯ ತಬ್ಬಿಬ್ಬು ಆಗಿದ್ದರು. ರೂಲ್ಸ್ ಪುಸ್ತಕ ಇದೆ ಎನ್ನುತ್ತಾ ಸುದ್ದಿಗೋಷ್ಠಿಯಿಂದಲೇ ಹೊರನಡೆದರು.

There are regulations on environmental pollution control and employment for locals. Minister of solid industry and environment Murugesh Nirani has laughed at the media queries in Mangalore, saying, "If you want a book on the existence of the rules, you will give it."