ಬಸ್ಸಿನಲ್ಲಿ ಬಂತು ನಾರಾಯಣ ಗುರು ಸರ್ಕಲ್ ಸ್ಟಿಕ್ಕರ್ ! ಗುರುಗಳ ಹೆಸರಲ್ಲಿ ವಿವಾದ ಬೇಕೇ..?

23-09-20 03:51 pm       Mangalore Correspondent   ಕರಾವಳಿ

ಖಾಸಗಿ ಬಸ್ ಗಳ ಮುಂದೆ ನಾರಾಯಣ ಗುರು ಸರ್ಕಲ್ ಎಂದು ಸ್ಟಿಕ್ಕರ್ ಅಂಟಿಸಿದ್ದಾರೆ. ಲೇಡಿಹಿಲ್ ದಾರಿಯಾಗಿ ಸಾಗುವ ಬಸ್ ಗಳ ಮುಂಭಾಗದಲ್ಲಿ ಈ ಸ್ಟಿಕ್ಕರ್ ಕಾಣಿಸಿಕೊಂಡಿದೆ. ಬಿರುವೆರ್ ಕುಡ್ಲ ಸಂಘಟನೆಯ ವತಿಯಿಂದ ಹೀಗೊಂದು ಅಭಿಯಾನ ನಡೀತಿದ್ಯಾ ಅನುಮಾನ ಕೇಳಿಬಂದಿದೆ.

ಮಂಗಳೂರು, ಸೆಪ್ಟಂಬರ್ 23: ಮುಲ್ಕಿ ಸುಂದರರಾಮ ಶೆಟ್ಟಿ ಹೆಸರು ರಸ್ತೆ ನಾಮಕರಣದ ವಿವಾದ ಮುಗಿಯುತ್ತಲೇ ಒಂದು ವಿಭಾಗದವರು ನಾರಾಯಣ ಗುರು ಹೆಸರನ್ನು ಮಂಗಳೂರಿನ ವೃತ್ತವೊಂದಕ್ಕೆ ಇಡಬೇಕೆಂದು ಒತ್ತಾಯ ಆರಂಭಿಸಿದ್ದಾರೆ. ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರು ಹೆಸರು ಇಡಬೇಕೆಂದು ಬಿರುವೆರ್ ಕುಡ್ಲ ಸಂಘಟನೆಯಿಂದ ಮಹಾನಗರ ಪಾಲಿಕೆಗೆ ಮನವಿಯನ್ನೂ ನೀಡಲಾಗಿದೆ. ಈ ವಿಚಾರ ಪ್ರಸ್ತಾಪ ಆಗುತ್ತಲೇ ಲೇಡಿಹಿಲ್ ವೃತ್ತದ ಬಳಿ ಇರುವ ಶಾಲಾಡಳಿತ ಮಂಡಳಿಗಳು ವಿರೋಧ ಸೂಚಿಸಿದ್ದು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ. 

ಈ ನಡುವೆ, ಕೆಲವರು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು ಖಾಸಗಿ ಬಸ್ ಗಳ ಮುಂದೆ ನಾರಾಯಣ ಗುರು ಸರ್ಕಲ್ ಎಂದು ಸ್ಟಿಕ್ಕರ್ ಅಂಟಿಸಿದ್ದಾರೆ. ಲೇಡಿಹಿಲ್ ದಾರಿಯಾಗಿ ಸಾಗುವ ಬಸ್ ಗಳ ಮುಂಭಾಗದಲ್ಲಿ ಈ ಸ್ಟಿಕ್ಕರ್ ಕಾಣಿಸಿಕೊಂಡಿದೆ. ಬಿರುವೆರ್ ಕುಡ್ಲ ಸಂಘಟನೆಯ ವತಿಯಿಂದ ಹೀಗೊಂದು ಅಭಿಯಾನ ನಡೀತಿದ್ಯಾ ಅನುಮಾನ ಕೇಳಿಬಂದಿದೆ. ಆದರೆ ಬಸ್ಸಿನ ಮುಂದೆ ಸ್ಟಿಕ್ಕರ್ ಅಂಟಿಸಿದ ಮಾತ್ರಕ್ಕೆ ಅಲ್ಲಿನ ಹೆಸರು ಬದಲಾವಣೆ ಆಗಲ್ಲ..! ಅಂಥ ಒತ್ತಾಯಕ್ಕೆ ಮತ್ತೊಂದಷ್ಟು ಒತ್ತಡ ಬೀಳುವುದಂತೂ ಖಚಿತ. 

ಹೀಗೊಂದು ವಿವಾದ ಎದ್ದಿರುವ ಬಗ್ಗೆ ಬಿಲ್ಲವ ಸಂಘಗಳ ಅಭಿಪ್ರಾಯ ಕೇಳಿದರೆ ನಾವೇನು ಅಂತಹ ಒತ್ತಾಯ ಮಾಡಿಲ್ಲ ಎನ್ನುತ್ತಾರೆ. ನಾರಾಯಣ ಗುರು ಶಾಂತಿಪ್ರಿಯರು. ಎಲ್ಲರೂ ಒಂದೇ ಎಂದು ಸಾರಿದವರು. ಅಂಥ ವ್ಯಕ್ತಿಯ ಹೆಸರಲ್ಲಿ ವಿವಾದ ಎಬ್ಬಿಸಬಾರದು. ಈ ವಿವಾದಗಳ ಹಿಂದೆ ರಾಜಕೀಯ ಇದೆ. ಗುರುಗಳ ಹೆಸರಿಡುವ ವಿಚಾರವನ್ನು ಶಾಂತಿಯುತವಾಗೇ ಮುಗಿಸಬೇಕು. ಗುರುಗಳ ಹೆಸರಿಡುವುದಿದ್ದರೆ ಲೇಡಿಹಿಲ್ ವೃತ್ತವೇ ಆಗಬೇಕಂತಿಲ್ಲ. ಹೆಸರು ಇಲ್ಲದ ವೃತ್ತಗಳಿಗೆ ಇಟ್ಟು ಸೌಹಾರ್ದದಿಂದ ಕೆಲಸ ಮುಗಿಸಬಹುದು. ಹಂಪನಕಟ್ಟೆಯ ವೃತ್ತಕ್ಕೆ ಯಾವುದೇ ಹೆಸರಿಲ್ಲ. ಮಂಗಳೂರಿನಲ್ಲಿ ಪ್ರಮುಖ ವೃತ್ತವೂ ಹೌದು.. ಹಾಗೆ ನೋಡಿದರೆ ಹಂಪನಕಟ್ಟೆ ಸಿಗ್ನಲ್ ವೃತ್ತಕ್ಕೆ ನಾರಾಯಣ ಗುರುಗಳ ಹೆಸರು ಇಡಬಹುದು ಎಂದು ಬಿಲ್ಲವ ಸಂಘಟನೆಯ ಪ್ರಮುಖರೊಬ್ವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

Join our WhatsApp group for latest news updates (2)