ಬೇಕಲ್ ಉಸ್ತಾದ್ ಎಂದೇ ಹೆಸರಾಗಿದ್ದ ಇಬ್ರಾಹಿಂ ಮುಸ್ಲಿಯಾರ್ ನಿಧನ

24-09-20 03:01 pm       Mangalore Correspondent   ಕರಾವಳಿ

ಹಿರಿಯ ಧಾರ್ಮಿಕ ಮುಖಂಡ, ಖಾಝಿ ಆಗಿರುವ ಅಲ್ಹಾಜ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್ (71) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. 

ಮಂಗಳೂರು, ಸೆಪ್ಟಂಬರ್ 24: ಹಿರಿಯ ಧಾರ್ಮಿಕ ಮುಖಂಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳ ಸಂಯುಕ್ತ ಖಾಝಿ ಆಗಿರುವ ಅಲ್ಹಾಜ್ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್ (71) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. 

ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸುನ್ನಿ ಜಂಇಯ್ಯತುಲ್ ಉಲಮಾದ ರಾಜ್ಯಾಧ್ಯಕ್ಷರಾಗಿದ್ದ ಬೇಕಲ್ ಉಸ್ತಾದ್ ಅವರು, ಜಾಮಿಯಾ ಸಅದಿಯಾ ಅರಬಿಯಾ ಶರೀಅತ್ ಕಾಲೇಜಿನ ಪ್ರಾಚಾರ್ಯರು, ಸಮಸ್ತ ಉಲಮಾ ಒಕ್ಕೂಟದ ಕೇಂದ್ರ ಮುಶಾವರ ಸದಸ್ಯರಾಗಿ, ಅಲ್ ಅನ್ಸಾರ್ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಮೂಲತಃ ಬಂಟ್ವಾಳ ತಾಲೂಕಿನ ನರಿಂಗಾನ ನಿವಾಸಿಯಾಗಿರುವ ಮುಸ್ಲಿಯಾರ್, ದೇವಬಂದ್ ಅರೆಬಿಕ್ ಕಾಲೇಜಿನಿಂದ ಪದವಿ ಪಡೆದಿದ್ದರು. ಸೂರಿಂಜೆ ಮತ್ತು ಬಂಟ್ವಾಳದ ಮಸೀದಿಗಳಲ್ಲಿ ತಲಾ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಬಳಿಕ ಸುದೀರ್ಘ 43 ವರ್ಷಗಳಿಂದ ಬೇಕಲದಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸುವ ಮೂಲಕ ‘ಬೇಕಲ್ ಉಸ್ತಾದ್’ ಎಂದೇ ಜನಪ್ರಿಯರಾಗಿದ್ದರು. ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಫೂಡಲ್ ಎಂಬಲ್ಲಿನ ಮುಹಮ್ಮದ್ ಮತ್ತು ಖದೀಜಾ ದಂಪತಿಯ ಪುತ್ರನಾಗಿ 1949ರಲ್ಲಿ ಜನಿಸಿದ್ದ ಅವರು ನರಿಂಗಾನ ಗ್ರಾಮದ ಡಿಜಿ ಕಟ್ಟೆಯ ಶಾಲೆಯಲ್ಲಿ 7ನೇ ತರಗತಿ ಕಲಿತ ಬಳಿಕ ಧಾರ್ಮಿಕ ಶಿಕ್ಷಣ ಕಲಿಯಲು ಆಸಕ್ತಿ ವಹಿಸಿದ್ದರು. ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅಪ್ರತಿಮ ಸೇವೆಗೆ ‘ತಾಜುಲ್ ಫುಖಹಾಅ್’ ಎಂಬ ಬಿರುದು ಪಡೆದಿದ್ದಾರೆ. ಉಸ್ತಾದರು, ಕರ್ಮಶಾಸ್ತ್ರ, ಖಗೋಳಶಾಸ್ತ್ರದ ಬಗ್ಗೆ ಉನ್ನತ ಜ್ಞಾನ ಹೊಂದಿದ್ದರು.

Join our WhatsApp group for latest news updates (2)