ಫಲ್ಗುಣಿ ನದಿಗೆ ಕೈಗಾರಿಕೆಗಳ ಮಾಲಿನ್ಯ ; ಸತ್ತು ಬಿದ್ದ ಮೀನುಗಳು, ಪರಿಸರ ಅಧಿಕಾರಿಗಳ ಪರಿಶೀಲನೆ ನಾಟಕ

25-04-22 09:07 pm       Mangalore Correspondent   ಕರಾವಳಿ

ಬೈಕಂಪಾಡಿ ಕೈಗಾರಿಕಾ ಪ್ರದೇಶದ ಆವರಣದಲ್ಲಿರುವ ತೋಕೂರು ಹಳ್ಳಕ್ಕೆ ಕೈಗಾರಿಕೆಗಳ ಮಾಲಿನ್ಯ ಬಿಡಲಾಗುತ್ತಿದ್ದು, ತ್ಯಾಜ್ಯ ನೀರಿನಿಂದಾಗಿ ಫಲ್ಗುಣಿ ನದಿ ಸೇರುವಲ್ಲಿ ಮೀನುಗಳು ಸತ್ತು ಬಿದ್ದಿರುವ ಘಟನೆ ನಡೆದಿದೆ. ಘಟನೆ ಬಗ್ಗೆ ಸ್ಥಳೀಯರ ದೂರಿನಂತೆ ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಮಂಗಳೂರು, ಎ.25: ಬೈಕಂಪಾಡಿ ಕೈಗಾರಿಕಾ ಪ್ರದೇಶದ ಆವರಣದಲ್ಲಿರುವ ತೋಕೂರು ಹಳ್ಳಕ್ಕೆ ಕೈಗಾರಿಕೆಗಳ ಮಾಲಿನ್ಯ ಬಿಡಲಾಗುತ್ತಿದ್ದು, ತ್ಯಾಜ್ಯ ನೀರಿನಿಂದಾಗಿ ಫಲ್ಗುಣಿ ನದಿ ಸೇರುವಲ್ಲಿ ಮೀನುಗಳು ಸತ್ತು ಬಿದ್ದಿರುವ ಘಟನೆ ನಡೆದಿದೆ. ಘಟನೆ ಬಗ್ಗೆ ಸ್ಥಳೀಯರ ದೂರಿನಂತೆ ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ತೋಕೂರು ಹಳ್ಳಕ್ಕೆ ಎಂಆರ್ ಪಿಎಲ್ ಕಡೆಯಿಂದ ನೀರು ಹರಿದು ಬರುತ್ತಿದೆ. ಅದು ಮುಂದೆ ತೋಕೂರು, ಜೋಕಟ್ಟೆ ಮೂಲಕ ಫಲ್ಗುಣಿ ನದಿ ಸೇರುತ್ತದೆ. ಪ್ರತಿ ಬಾರಿ ಬೇಸಗೆಯಲ್ಲಿ ಮಲಿನ ನೀರನ್ನು ಕೈಗಾರಿಕೆಗಳು ನದಿಗೆ ಬಿಡುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪರಿಸರದ ಬಾವಿಗಳಲ್ಲಿಯೂ ಕಲುಷಿತ ನೀರು ಸೇರುವಂತಾಗಿದೆ. ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅವಕಾಶಗಳಿದ್ದರೂ, ಅದನ್ನು ನಿರ್ಲಕ್ಷಿಸಿದ್ದಾರೆ.

ಬೈಕಂಪಾಡಿ ಕೈಗಾರಿಕಾ ಪ್ರಾಂಗಣದ ಬಳಿಯೇ ತೋಕೂರು ಹಳ್ಳ ಇದೆ. ಇಲ್ಲಿ ಸದಾ ನೀರು ನಿಲ್ಲುವುದರಿಂದ ತ್ಯಾಜ್ಯವೂ ಸೇರ್ಪಡೆಗೊಂಡು ಪೂರ್ತಿ ಮಲಿನವಾಗಿದೆ. ಈಗ ಕಪ್ಪಗಿನ ಮಾಲಿನ್ಯ ನೀರಿನಲ್ಲಿ ಹರಿಯುತ್ತಿದ್ದು, ಫಲ್ಗುಣಿ ನದಿ ಸೇರುವಲ್ಲಿ ಕಲುಷಿತವಾಗಿದೆ. ಕಳೆದ ಮೂರ್ನಾಲ್ಕು ದಿನಗಳಲ್ಲಿ ಫಲ್ಗುಣಿ ನದಿಯಲ್ಲಿ ಮೀನುಗಳು ಸತ್ತು ಬಿದ್ದಿರುವುದನ್ನು ಕಂಡು ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳು ಜನರ ಕಣ್ಣೋಟಕ್ಕೆ ಭೇಟಿ ನೀಡಿ ಪರಿಶೀಲಿಸುವ ನಾಟಕ ಮಾಡಿದ್ದಾರೆ. ಆದರೆ, ಕೈಗಾರಿಕೆಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

Mangalore Factory water spilled to Palguni river, large number of fishes found dead, officials arrive at spot.