ಮಾಸ್ಕ್ ತಯಾರಿಸಿ ಯೋಧರಿಗೆ ಕಳುಹಿಸಿದ್ದ ಬಾಲಕಿಗೆ ರಕ್ಷಣಾ ಸಚಿವರ ಶಹಭಾಷ್ ಗಿರಿ ! 

24-09-20 08:54 pm       Udupi Correspondent   ಕರಾವಳಿ

ತನ್ನ ಕೈಯಾರೆ ತಯಾರಿಸಿದ 300 ಮಾಸ್ಕ್‌ಗಳನ್ನು ದೇಶದ ಗಡಿ ಕಾಯುತ್ತಿರುವ ಯೋಧರಿಗೆ ಕಳುಹಿಸಿದ್ದ ಉಡುಪಿಯ ವಿದ್ಯಾರ್ಥಿನಿ ಈಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಗಮನ ಸೆಳೆದಿದ್ದಾಳೆ.

ಉಡುಪಿ, ಸೆಪ್ಟಂಬರ್ 24: ಆಕೆಯದು ಸಣ್ಣ ವಯಸ್ಸಾದ್ರೂ ಕೊರೊನಾ ಲಾಕ್ಡೌನ್ ವೇಳೆಯನ್ನು ವೇಸ್ಟ್ ಮಾಡಿರಲಿಲ್ಲ. ಬಿಡುವಿನ ಸಮಯದಲ್ಲಿ ಹೊಲಿಗೆ ಕಲಿತ ಹುಡುಗಿ, ಮಾಸ್ಕ್ ತಯಾರಿಸಿ ದೇಶದ ಗಮನ ಸೆಳೆದಿದ್ದಾಳೆ. ಹೌದು.. ಕೋವಿಡ್-19 ತಡೆಗಟ್ಟುವ ಸಲುವಾಗಿ ತನ್ನ ಕೈಯಾರೆ ತಯಾರಿಸಿದ 300 ಮಾಸ್ಕ್‌ಗಳನ್ನು ದೇಶದ ಗಡಿ ಕಾಯುತ್ತಿರುವ ಯೋಧರಿಗೆ ಕಳುಹಿಸಿದ್ದ ಉಡುಪಿಯ ವಿದ್ಯಾರ್ಥಿನಿ ಈಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಗಮನ ಸೆಳೆದಿದ್ದಾಳೆ.

ಉಡುಪಿ ಅಂಬಲಪಾಡಿಯ ನಂದಿತಾ ಹಾಗೂ ಗಿರೀಶ್ ಆಚಾರ್ ದಂಪತಿಯ ಪುತ್ರಿ ಇಶಿತಾ ಆಚಾರ್(13) ಸಚಿವರ ಶ್ಲಾಘನೆಗೆ ಪಾತ್ರರಾಗಿರುವ ಬಾಲಕಿ. ಮಣಿಪಾಲ ಮಾಧವ ಕೃಪಾ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಇಶಿತಾ ರಕ್ಷಣಾ ಸಚಿವರ ಗಮನಸೆಳೆದ ಬಾಲಕಿ. 

ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನಲ್ಲಿ ತೊಡಗಿಸಿಕೊಂಡಿರುವ ಇಶಿತಾ, ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಹೊಲಿಗೆಯನ್ನು ಕಲಿತುಕೊಂಡಿದ್ದಳು. ಬಿಡುವಿನ ವೇಳೆ ಎಸೆಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ನೀಡಲೆಂದು 300 ಮಾಸ್ಕ್ ಗಳನ್ನು ಹೊಲಿದು ರೆಡಿ ಮಾಡಿದ್ದರು. 

ಹೀಗೆ ಮಕ್ಕಳು ಹೊಲಿದ ಮಾಸ್ಕ್‌ಗಳನ್ನು ನೇರವಾಗಿ ವಿದ್ಯಾರ್ಥಿಗಳಿಗೆ ನೀಡುವಂತಿಲ್ಲ. ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮಾಸ್ಕ್ ಬ್ಯಾಂಕ್‌ಗೆ ನೀಡಬೇಕಾಗುತ್ತದೆ. ಆದರೆ ಆಗಲೇ ಮಾಸ್ಕ್ ಬ್ಯಾಂಕ್‌ನಲ್ಲಿ ಬಹಳಷ್ಟು ಮಾಸ್ಕ್‌ಗಳು ಬಂದು ಸೇರಿದ್ದವು. ಹೀಗಾಗಿ, ಇಶಿತಾ ತನ್ನಲ್ಲಿದ್ದ ಮಾಸ್ಕ್‌ಗಳನ್ನು ಅಗತ್ಯವುಳ್ಳ ಬೇರೆಯವರಿಗೆ ನೀಡಲು ಮುಂದಾದರು. ಇದೇ ವೇಳೆ, ತನ್ನ ತಾಯಿಯ ಸ್ನೇಹಿತರೊಬ್ಬರು ದೇಶದ ಗಡಿ ಕಾಯುತ್ತಿರುವ ಯೋಧರಿಗೆ ಮಾಸ್ಕ್ ಕಳುಹಿಸಿಕೊಡಲು ಸಲಹೆ ಮಾಡಿದ್ದರು. ಅದರಂತೆ, ಇಶಿತಾ ಸುಮಾರು 300 ಮಾಸ್ಕ್‌ಗಳನ್ನು ರಕ್ಷಣಾ ಸಚಿವರ ಕಚೇರಿ ವಿಳಾಸಕ್ಕೆ ಕೊರಿಯರ್ ಮೂಲಕ ಕಳುಹಿಸಿದ್ದರು. ಬಾಲಕಿ ತೋರಿದ ದೇಶಪ್ರೇಮ ಹಾಗೂ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಇದೀಗ ತಿಂಗಳ ಬಳಿಕ ಕೇಂದ್ರ ರಕ್ಷಣಾ ಸಚಿವರ ಕಚೇರಿಯಿಂದ ಬಾಲಕಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದಿಸಿರುವ ಪತ್ರ ತಲುಪಿದ್ದು ವಿದ್ಯಾರ್ಥಿನಿ ಖುಷಿಯಾಗಿದ್ದಾಳೆ.

Join our WhatsApp group for latest news updates (2)