ನಿರ್ಮಾಣ ಹಂತದ ಕಟ್ಟಡದಲ್ಲಿ ಸ್ಲ್ಯಾಬ್ ಕುಸಿದು ದುರಂತ ; ಒಬ್ಬ ಸ್ಥಳದಲ್ಲೇ ಮೃತ್ಯು, ಇಬ್ಬರ ಸ್ಥಿತಿ ಗಂಭೀರ

29-04-22 05:40 pm       Mangalore Correspondent   ಕರಾವಳಿ

ನಿರ್ಮಾಣ ಹಂತದ ಕಟ್ಟಡದಲ್ಲಿ ಸ್ಲ್ಯಾಬ್ ಕುಸಿದು ಬಿದ್ದು ಗೋವಾದಿಂದ ಕೆಲಸ ಕೇಳಿಕೊಂಡು ಬಂದಿದ್ದ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಉರ್ವಾ ಮಾರಿಗುಡಿ ದೇವಸ್ಥಾನದ ಬಳಿ ನಡೆದಿದೆ.

ಮಂಗಳೂರು, ಎ.29: ನಿರ್ಮಾಣ ಹಂತದ ಕಟ್ಟಡದಲ್ಲಿ ಸ್ಲ್ಯಾಬ್ ಕುಸಿದು ಬಿದ್ದು ಗೋವಾದಿಂದ ಕೆಲಸ ಕೇಳಿಕೊಂಡು ಬಂದಿದ್ದ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಉರ್ವಾ ಮಾರಿಗುಡಿ ದೇವಸ್ಥಾನದ ಬಳಿ ನಡೆದಿದೆ.

ಗೋವಾ ಮೂಲದ ಸಲೀಂ ಶೇಕ್ (45) ಎಂಬ ವ್ಯಕ್ತಿ ಮೃತರು. ಉರ್ವಾ ದೇವಸ್ಥಾನದ ಬಳಿಯಲ್ಲೇ ಬಂಗಲೆ ಮಾದರಿಯ ಮನೆ ನಿರ್ಮಿಸಲಾಗುತ್ತಿದ್ದು ಇದರ ಕಾಮಗಾರಿ ನಡೆಯುತ್ತಿದ್ದಾಗ ಘಟನೆ ಸಂಭವಿಸಿದೆ. ಕಾಂಕ್ರೀಟ್ ಸ್ಲ್ಯಾಬ್ ಗೆ ಸಪೋರ್ಟ್ ಕೊಟ್ಟಿದ್ದ ಕಂಬಗಳನ್ನು ತೆರವು ಮಾಡುತ್ತಿದ್ದಾಗ ಒಮ್ಮಿಂದೊಮ್ಮೆಲೇ ಸ್ಲ್ಯಾಬ್ ಕುಸಿದು ನೆಲಕ್ಕೆ ಅಪ್ಪಳಿಸಿದೆ. ಈ ವೇಳೆ, ಸಪೋರ್ಟ್ ತೆರವು ಮಾಡುತ್ತಿದ್ದ ಕಾರ್ಮಿಕರಾದ ಕಾವೂರು ಪಂಜಿಮೊಗರು ನಿವಾಸಿ ಕಿರಣ್ ಮತ್ತು ಶಿವಮೊಗ್ಗ ಜಿಲ್ಲೆಯ ಸೊರಬ ಮೂಲದ ಹನುಮಂತ ಅವರ ತಲೆಗೆ ಗಂಭೀರ ಗಾಯವಾಗಿದ್ದು ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುರುವಾರ ಸಂಜೆ ಘಟನೆ ನಡೆದಿದ್ದು, ಕೂಡಲೇ ಪ್ರಜ್ಞೆ ತಪ್ಪಿ ಬಿದ್ದ ಸಲೀಂ ಶೇಕ್ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಒಯ್ಯಲಾಗಿತ್ತು. ಅಷ್ಟರಲ್ಲೇ ಅವರು ಮೃತಪಟ್ಟಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಳಿಕ ಉರ್ವಾ ಠಾಣೆ ಪೊಲೀಸರು ಬಂದು ಪ್ರಕರಣ ದಾಖಲಿಸಿದ್ದು, ಕಟ್ಟಡ ನಿರ್ಮಾಣಕ್ಕೆ ಬ್ರೇಕ್ ಹಾಕಿದ್ದಾರೆ. ಕಟ್ಟಡ ಕಾಮಗಾರಿಯಲ್ಲಾದ ಲೋಪದಿಂದಾಗಿ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಪ್ರಕರಣ ದಾಖಲಾಗಿದ್ದರೂ, ವಿಷಯ ಬಹಿರಂಗ ಆಗಿರಲಿಲ್ಲ. ಸ್ಥಳೀಯರು ಘಟನೆ ಬಗ್ಗೆ ಯಾಕೆ ಸುದ್ದಿಯಾಗಿಲ್ಲ ಎಂದು ಕರೆ ಮಾಡಿದಾಗಲೇ ಅರಿವಿಗೆ ಬಂದಿದೆ.

ಗುಜರಾತ್ ಮೂಲದ ಮಂಗಳೂರಿನಲ್ಲಿ ಉದ್ಯಮ ಹೊಂದಿರುವ ರುಗುನಾಥ್ ಶರ್ಮಾ ಎಂಬವರಿಗೆ ಸೇರಿದ ಸೈಟ್ ಇದಾಗಿದ್ದು, ಜಾಗದಲ್ಲಿ ಬಂಗಲೆ ಕಟ್ಟುತ್ತಿದ್ದಾರೆ. ಕಾಮಗಾರಿಯ ಗುತ್ತಿಗೆಯನ್ನು ಮಂಗಳೂರಿನ ಮಹೇಶ್ ಕಾಮತ್ ಎಂಬವರು ನಡೆಸುತ್ತಿದ್ದಾರೆ. ಮನೆ ಮಾಲಕ, ಕಂಟ್ರಾಕ್ಟರ್ ಮತ್ತು ಸೈಟ್ ಸುಪರ್ವೈಸರ್ ನಿತಿನ್ ವಿರುದ್ಧ ನಿರ್ಲಕ್ಷ್ಯದ ಬಗ್ಗೆ ಸೆಕ್ಷನ್ 304 ಎ ಮತ್ತು 338 ಅಡಿ ಉರ್ವಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Mangalore Roof top collapses at construction site One Dead, two injured at Urwa. The deceased has been identified as Salim Sheik (45). A case has been registered at Urwa Police Station.