ಮಾಸ್ಕ್ ಧರಿಸದಿದ್ದರೆ ದಂಡ ; ಡೀಸಿ ಗರಂ ಬಳಿಕ ಎಚ್ಚೆತ್ತ ಅಧಿಕಾರಿಗಳು !

26-09-20 10:50 pm       Mangaluru Correspondent   ಕರಾವಳಿ

ಹೆಚ್ಚಿನ ಜನ ಮಾಸ್ಕ್ ಇಲ್ಲದೇ, ಧರಿಸಿದರೂ ಮೂಗು, ಬಾಯಿ ಬಿಟ್ಟುಕೊಂಡು ಓಡಾಡುತ್ತಾರೆ. ಮಾರುಕಟ್ಟೆ, ಜನಜಂಗುಳಿ ಇರುವಲ್ಲೂ ಇದೇ ಕತೆ. ಜಿಲ್ಲಾಧಿಕಾರಿ ಡಾ‌.ರಾಜೇಂದ್ರ ಕೆ.ವಿ ಸೂಚನೆ ಮೇರೆಗೆ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯಧಿಕಾರಿಗಳು ಪೊಲೀಸರ ಜೊತೆಗೆ ಫೀಲ್ಡಿಗೆ ಇಳಿದಿದ್ದಾರೆ.

ಮಂಗಳೂರು, ಸೆಪ್ಟಂಬರ್ 26: ಕೊರೊನಾ ಸೋಂಕು ನಿಯ‌ಂತ್ರಣಕ್ಕೆ ಹೊರಗೆ ಓಡಾಡುವ ಮಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಎಂಬ ನಿಯಮ ಇದೆ. ಆದರೆ, ಈ ಕಾನೂನನ್ನು ಪಾಲನೆ ಮಾಡುವ ಮಂದಿ ಬೆರಳೆಣಿಕೆ ಜನ ಮಾತ್ರ. ಹೆಚ್ಚಿನ ಜನ ಮಾಸ್ಕ್ ಇಲ್ಲದೇ, ಧರಿಸಿದರೂ ಮೂಗು, ಬಾಯಿ ಬಿಟ್ಟುಕೊಂಡು ಓಡಾಡುತ್ತಾರೆ. ಮಾರುಕಟ್ಟೆ, ಜನಜಂಗುಳಿ ಇರುವಲ್ಲೂ ಇದೇ ಕತೆ. ಈ ಕಾರಣದಿಂದಾಗಿಯೇ ಮಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಎಂದು ಜಿಲ್ಲಾಧಿಕಾರಿ ಗರಂ ಆಗಿದ್ದಾರೆ. 

ಜಿಲ್ಲಾಧಿಕಾರಿ ಡಾ‌.ರಾಜೇಂದ್ರ ಕೆ.ವಿ ಸೂಚನೆ ಮೇರೆಗೆ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯಧಿಕಾರಿಗಳು ಪೊಲೀಸರ ಜೊತೆಗೆ ಫೀಲ್ಡಿಗೆ ಇಳಿದಿದ್ದಾರೆ. ರಸ್ತೆಯಲ್ಲಿ ಓಡಾಡುವ ಮಂದಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ಜನರನ್ನು ನಿಲ್ಲಿಸಿ ದಂಡ ಸಂಗ್ರಹ ಮಾಡಲು ಆರಂಭಿಸಿದ್ದಾರೆ. ಮಾಸ್ಕ್ ಧರಿಸದೇ ಇದ್ದವರಿಂದ ತಲಾ ನೂರು ರೂ.ನಂತೆ ದಂಡ ಕಕ್ಕಿಸುತ್ತಿದ್ದಾರೆ. ಶುಕ್ರವಾರದಿಂದ ಈ ಅಭಿಯಾನ ಆರಂಭಗೊಂಡಿದ್ದು ಮೊದಲ ದಿ‌ನ 5 ಸಾವಿರ ರೂ. ದಂಡ ಸಂಗ್ರಹ ಆಗಿತ್ತು. ಶನಿವಾರವೂ ಈ ಅಭಿಯಾನ ನಡೆಸಲಾಗಿದ್ದು ಕೆಲವೇ ಗಂಟೆಗಳಲ್ಲಿ ಆರು ಸಾವಿರ ದಂಡ ಸಂಗ್ರಹ ಆಗಿತ್ತು ಎನ್ನುತ್ತವೆ ಪಾಲಿಕೆಯ ಮೂಲಗಳು. ಅರ್ಧ ದಾರಿಯಲ್ಲಿ ನಿಲ್ಲಿಸಿದಾಗ, ಜನರು ಹಿಡಿಶಾಪ ಹಾಕುತ್ತಾ ದಂಡ ತೆತ್ತು ಮುಂದುವರಿಯುತ್ತಾರೆ.. 

ಈ ಮಾದರಿಯಲ್ಲಿ ಅಭಿಯಾನ ಇನ್ನು ಕೆಲವು ದಿನ ಇರಲಿದ್ದು ನಿರ್ಲಕ್ಷ್ಯ ತೋರುವ ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡದಿದ್ದರೆ ಕೊರೊನಾ ನಾಗಾಲೋಟಕ್ಕೆ ಬ್ರೇಕ್ ಹಾಕಲಾಗದು ಎನ್ನುವ ಸಲಹೆಯನ್ನು ಜನರ ಮುಂದಿಟ್ಟಿದ್ದಾರೆ.

Join our WhatsApp group for latest news updates (2)