ಆಸೀಸ್‌ ವಿರುದ್ಧದ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ಹೆಗಲೇರಿದ ಅನಗತ್ಯ ದಾಖಲೆ!

21-09-22 02:43 pm       Source: Vijayakarnataka   ಕ್ರೀಡೆ

ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಭರದ ಸಿದ್ಧತೆ ಕೈಗೊಂಡಿರುವ ಟೀಮ್ ಇಂಡಿಯಾ, ತಾಯ್ನಾಡಿನಲ್ಲಿ ಈಗ ಬ್ಯಾಕ್‌ ಟು ಬ್ಯಾಕ್‌ ಟಿ20.

ಮೊಹಾಲಿ: ಟೀಮ್ ಇಂಡಿಯಾ, ಮುಂಬರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೂ ಮುನ್ನ ತಾಯ್ನಾಡಿನಲ್ಲಿ ಬ್ಯಾಕ್‌ ಟು ಬ್ಯಾಕ್‌ ಸರಣಿಯನ್ನು ಆಡಿ ಸಮರಾಭ್ಯಾಸ ನಡೆಸುತ್ತಿದೆ. ಆದರೆ, ಆಸ್ಟ್ರೇಲಿಯಾ ಎದುರಿನ ಸರಣಿಯ ಮೊದಲ ಪಂದ್ಯದಲ್ಲೇ ಭಾರತ ತಂಡ ಅಚ್ಚರಿಯ ಸೋಲುಂಡಿದೆ. ಕಾಂಗರೂ ಪಡೆ ಎದುರು 208/6 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿದರೂ ಕಳಪೆ ಬೌಲಿಂಗ್‌ ಪ್ರದರ್ಶನ ಕಾರಣ ಭಾರತ ತಂಡ 4 ವಿಕೆಟ್‌ಗಳ ಅಚ್ಚರಿಯ ಸೋಲುಂಡಿತು. ಇದರ ಬೆನ್ನಲ್ಲೇ ಅನಗತ್ಯ ದಾಖಲೆ ಒಂದು ಟೀಮ್ ಇಂಡಿಯಾದ ಹೆಗಲೇರಿದೆ.

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ, ಆರಂಭದಲ್ಲೇ ರೋಹಿತ್‌ ಶರ್ಮಾ (11) ಮತ್ತು ವಿರಾಟ್‌ ಕೊಹ್ಲಿ (2) ವಿಕೆಟ್‌ ಕಳೆದುಕೊಂಡರೂ, ಓಪನರ್‌ ಕೆ.ಎಲ್‌ ರಾಹುಲ್‌ (55), ಸೂರ್ಯಕುಮಾರ್‌ ಯಾದವ್‌ (25 ಎಸೆತಗಳಲ್ಲಿ 46 ರನ್‌) ಮತ್ತು ಹಾರ್ದಿಕ್‌ ಪಾಂಡ್ಯ (30 ಎಸೆತಗಳಲ್ಲಿ ಅಜೇಯ 71 ರನ್‌) ಸ್ಪೋಟಕ ಬ್ಯಾಟಿಂಗ್‌ ನಡೆಸಿದ ಪರಿಣಾಮ ಭಾರತ 20 ಓವರ್‌ಗಳಲ್ಲಿ 208/6 ದಾಖಲಿಸಲು ಯಶಸ್ವಿಯಾಯಿತು.

Team India sets unwanted unique record with 4-wicket loss to Australia in  Mohali

ಆದರೆ, ರೋಹಿತ್‌ ಶರ್ಮಾ ಸಾರಥ್ಯದ ಭಾರತ ತಂಡದ ಬೌಲಿಂಗ್‌ ವಿಭಾಗ ಸಂಪೂರ್ಣ ಕೈಕೊಟ್ಟಿತು. ಎಡಗೈ ಸ್ಪಿನ್ನರ್‌ ಅಕ್ಷರ್‌ ಪಟೇಲ್ ಇನಿಂಗ್ಸ್‌ ಮಧ್ಯದಲ್ಲಿ ತಮ್ಮ 4 ಓವರ್‌ಗಳಲ್ಲಿ 17ಕ್ಕೆ 3 ವಿಕೆಟ್‌ ಪಡೆದು ಆಸೀಸ್‌ ಆರ್ಭಟಕ್ಕೆ ಕೊಂಡ ಕಡಿವಾಣ ಹಾಕಿದರು. ಆದರೆ, ವೇಗಿಗಳಾದ ಭುವನೇಶ್ವರ್‌ ಕುಮಾರ್‌ ಮತ್ತು ಉಮೇಶ್‌ ಯಾದವ್‌ 13ಕ್ಕೂ ಹೆಚ್ಚಿನ ಸರಾಸರಿಯಲ್ಲಿ ರನ್‌ ಬಿಟ್ಟುಕೊಟ್ಟರು. ಹರ್ಷಲ್‌ ಪಟೇಲ್‌, ಹಾರ್ದಿಕ್‌ ಪಾಂಡ್ಯ ಮತ್ತು ಯುಜ್ವೇಂದ್ರ ಚಹಲ್‌ ಕೂಡ 11ಕ್ಕೂ ಹೆಚ್ಚು ರನ್‌ಗಳ ಸರಾಸರಿಯಲ್ಲಿ ಹೊಡೆಸಿಕೊಂಡರು.

Ind vs Aus: KL Rahul-Hardik Pandya's innings, Australia

ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡದ 5 ಬೌಲರ್‌ಗಳು 10ಕ್ಕೂ ಹೆಚ್ಚು ರನ್‌ ಹೊಡೆಸಿಕೊಂಡಿರುವುದು ಮೊದಲ ಬಾರಿ ಆಗಿದೆ. ಭಾರತೀಯ ಬೌಲರ್‌ಗಳ ಈ ಹೀನಾಯ ಪ್ರದರ್ಶನದೊಂದಿಗೆ ಅನಗತ್ಯ ದಾಖಲೆ ಟೀಮ್ ಇಂಡಿಯಾ ಹೆಗಲೇರಿದೆ. ಆಸೀಸ್‌ ಬ್ಯಾಟರ್‌ಗಳಾದ ಕ್ಯಾಮರೂನ್‌ ಗ್ರೀನ್‌ (30 ಎಸೆತಗಳಲ್ಲಿ 61 ರನ್‌) ಮತ್ತು ಮ್ಯಾಥ್ಯೂ ವೇಡ್‌ (21 ಎಸೆತಗಳಲ್ಲಿ 45 ರನ್‌) ಅಬ್ಬರದ ಬ್ಯಾಟಿಂಗ್‌ ನಡೆಸಿ ಭಾರತೀಯ ಬೌಲರ್‌ಗಳನ್ನು ಬೆಂಡೆತ್ತಿದರು.

ಇನ್ನು ಭಾರತ ತಂಡ ಟಿ20-ಐನಲ್ಲಿ 200ಕ್ಕೂ ಹೆಚ್ಚು ರನ್‌ ಗಳಿಸಿದರೂ, ಸೋತಿರುವುದು ಇದು ಎರಡನೇ ಬಾರಿ ಆಗಿದೆ. ಇದಕ್ಕೂ ಮುನ್ನ ಕಳೆದ ಜುಲೈನಲ್ಲಿ ದಕ್ಷಿಣ ಆಫ್ರಿಕಾ ಎದುರು ಟೀಮ್ ಇಂಡಿಯಾ 200ಕ್ಕೂ ಹೆಚ್ಚಿನ ಗುರಿ ಕಾಯ್ದುಕೊಳ್ಳಲು ವಿಫಲವಾಗಿತ್ತು.

Team India sets unwanted unique record with 4-wicket loss to Australia in  Mohali

"ನಮ್ಮ ತಂಡದ ಬೌಲಿಂಗ್‌ ಪ್ರದರ್ಶನ ಹೇಳಿಕೊಳ್ಳುವಂತ್ತಿರಲಿಲ್ಲ. 200 ರನ್‌ಗಳನ್ನು ಕಾಯ್ದುಕೊಳ್ಳುವುದು ಸುಲಭ. ಆದರೆ, ಸಿಕ್ಕ ಅವಕಾಶಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲರಾದೆವು. ನಮ್ಮ ಬ್ಯಾಟರ್‌ಗಳು ಅದ್ಭುತ ಆಟವಾಡಿದರು. ಆದರೆ, ಬೌಲರ್‌ಗಳಿಂದ ಅಂಥದ್ದೇ ಆಟವಾಡಲು ಸಾಧ್ಯವಾಗಲಿಲ್ಲ. ಇಲ್ಲಿ ಕಲಿಯಲು ಸಾಕಷ್ಟಿದೆ. ನಮ್ಮಿಂದ ಆದ ತಪ್ಪುಗಳನ್ನು ತಿದ್ದುಕೊಳ್ಳಲು ಉತ್ತಮ ಅವಕಾಶ. ತಪ್ಪು ಎಲ್ಲಿ ಆಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು," ಎಂದು ಪಂದ್ಯದ ಬಳಿಕ ಮಾತನಾಡಿದ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಹೇಳಿದ್ದಾರೆ.

ಸಂಕ್ಷಿಪ್ತ   ಸ್ಕೋರ್‌
ಭಾರತ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 208 ರನ್‌ (ಕೆ.ಎಲ್‌ ರಾಹುಲರ್ 55, ಸೂರ್ಯಕುಮಾರ್‌ ಯಾದವ್‌ 46, ಹಾರ್ದಿಕ್ ಪಾಂಡ್ಯ ಅಜೇಯ 71; ಜಾಶ್ ಹೇಝಲ್‌ವುಡ್‌ 39ಕ್ಕೆ 2, ನೇಥನ್‌ ಎಲಿಸ್‌ 30ಕ್ಕೆ 3).

ಆಸ್ಟ್ರೇಲಿಯಾ: 19.2 ಓವರ್‌ಗಳಲ್ಲಿ 6 ವಿಕೆಟ್‌ಗೆ 211 ರನ್‌ (ಆರೊನ್‌ ಫಿಂಚ್‌ 22, ಕ್ಯಾಮರೂನ್‌ ಗ್ರೀನ್‌ 61, ಸ್ಟೀವ್‌ ಸ್ಮಿತ್‌ 35, ಜಾಶ್‌ ಇಂಗ್ಲಿಸ್‌ 17, ಟಿಮ್‌ ಡೇವಿಡ್‌ 18, ಮ್ಯಾಥ್ಯೂ ವೇಡ್‌ ಅಜೇಯ 45; ಅಕ್ಷರ್‌ ಪಟೇಲ್ 17ಕ್ಕೆ 3, ಉಮೇಶ್‌ ಯಾದವ್‌ 27ಕ್ಕೆ 2).
ಪಂದ್ಯಶ್ರೇಷ್ಠ: ಕ್ಯಾಮರೂನ್ ಗ್ರೀನ್‌

Team India Sets Unwanted Unique Record With 4 Wicket Loss To Australia In Mohali.