ಭಾರತ ವಿರುದ್ದದ ಟಿ20, ಒಡಿಐ ಸರಣಿಗಳಿಗೆ ನ್ಯೂಜಿಲೆಂಡ್‌ ತಂಡ ಪ್ರಕಟ!

15-11-22 01:08 pm       Source: Vijayakarnataka   ಕ್ರೀಡೆ

ಭಾರತ ವಿರುದ್ದ ಮುಂಬರುವ ಟಿ20 ಹಾಗೂ ಒಡಿಐ ಸರಣಿಗಳಿಗೆ ನ್ಯೂಜಿಲೆಂಡ್‌ ತಂಡವನ್ನು ಪ್ರಕಟಿಸಲಾಗಿದೆ. ಇತ್ತೀಚೆಗೆ ಆಸ್ಟ್ರೇಲಿಯಾ ಆತಿಥ್ಯದಲ್ಲಿ ಮುಕ್ತಾಯವಾಗಿದ್ದ 2022ರ ಐಸಿಸಿ ಟ20 ವಿಶ್ವಕಪ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದ ಹಿರಿಯ ಆಟಗಾರರಾದ ಮಾರ್ಟಿನ್‌ ಗಪ್ಟಿಲ್‌ ಹಾಗೂ ಟ್ರೆಂಟ್‌ ಬೌಲ್ಟ್ ಅವರನ್ನು ಕೈ ಬಿಡಲಾಗಿದೆ.

ಭಾರತ ವಿರುದ್ದ ಮುಂಬರುವ ಟಿ20 ಹಾಗೂ ಒಡಿಐ ಸರಣಿಗಳಿಗೆ 15 ಸದಸ್ಯರ ನ್ಯೂಜಿಲೆಂಡ್‌ ತಂಡವನ್ನು ಪ್ರಕಟಿಸಲಾಗಿದೆ. ಇತ್ತೀಚೆಗೆ ಮುಕ್ತಾಯವಾಗಿದ್ದ 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದ ಮಾರ್ಟಿನ್‌ ಗಪ್ಟಿಲ್‌ ಹಾಗೂ ಹಿರಿಯ ವೇಗಿ ಟ್ರೆಂಟ್‌ ಬೌಲ್ಟ್‌ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

ಕಳೆದ ಟಿ20 ವಿಶ್ವಕಪ್‌ ಟೂರ್ನಿಯ ನ್ಯೂಜಿಲೆಂಡ್‌ ತಂಡದಲ್ಲಿ ಮಾರ್ಟಿನ್‌ ಗಪ್ಟಿಲ್‌ ಇದ್ದರು. ಆದರೆ, ಅವರು ಒಂದೇ ಒಂದು ಪಂದ್ಯದಲ್ಲಿಯೂ ಆಡಿರಲಿಲ್ಲ. ಇವರ ಬದಲು ಡೆವೋನ್‌ ಕಾನ್ವೇ ಜೊತೆ ಫಿನ್‌ ಆಲೆನ್ ಅವರಿಗೆ ಇನಿಂಗ್ಸ್‌ ಆರಂಭಿಸಲು ಅವಕಾಶ ಮಾಡಿಕೊಡಲಾಗಿತ್ತು. ಮುಂದಿನ ಏಕದಿನ ವಿಶ್ವಕಪ್‌ ಆಡಲು ಎದುರು ನೋಡುತ್ತಿದ್ದ ಮಾರ್ಟಿನ್‌ ಗಪ್ಟಿಲ್‌ರನ್ನು ಕೈ ಬಿಟ್ಟಿರುವ ಹಿನ್ನೆಲೆಯಲ್ಲಿ ಅವರಿಗೆ ಭಾರಿ ಹಿನ್ನಡೆಯಾಗಿದೆ.

Why Trent Boult Has Not Been Named In New Zealand Squad For Series vs India?  Head Coach Explains | Cricket News

"ಯುವ ಬ್ಯಾಟ್ಸ್‌ಮನ್‌ ಫಿನ್‌ ಆಲೆನ್ ಅವರು ಇತ್ತೀಚೆಗೆ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಸೀಮಿತ ಓವರ್‌ಗಳ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಹಾಗಾಗಿ ಮಾರ್ಟಿನ್‌ ಗಪ್ಟಿಲ್‌ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಅಗ್ರ ದರ್ಜೆಯ ಪ್ರದರ್ಶನದ ಕ್ರೀಡೆಯ ಸ್ವರೂಪ ಇದಾಗಿದ್ದರಿಂದ ಉತ್ತಮ ಫಾರ್ಮ್‌ನಲ್ಲಿರುವ ಆಟಗಾರರನ್ನುಆಡಿಸಬೇಕಾಗುತ್ತದೆ" ಎಂದು ನ್ಯೂಜಿಲೆಂಡ್‌ ಕೋಚ್‌ ಗ್ಯಾರಿ ಸ್ಟೀಡ್‌ ತಿಳಿಸಿದ್ದಾರೆ.

"ಮುಂದಿನ ಏಕದಿನ ವಿಶ್ವಕಪ್‌ ಟೂರ್ನಿಗೆ ಇನ್ನೂ ಒಂದು ವರ್ಷ ಮಾತ್ರ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಫಿನ್‌ ಆಲೆನ್‌ ಅವರಿಗೆ ಹೆಚ್ಚಿನ ಅವಕಾಶಗಳನ್ನ ನೀಡಬೇಕಾಗಿದೆ. ಆ ಮೂಲಕ ಅವರು ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚಿನ ಅನುಭವ ಪಡೆದುಕೊಳ್ಳುವಂತಾಗಬೇಕು. ಅದರಲ್ಲೂ ಭಾರತ ದಂತಹ ಅಗ್ರ ದರ್ಜೆಯ ತಂಡದ ಎದುರು ಅವರು ಹೆಚ್ಚಿನ ಅನುಭವ ಪಡೆದುಕೊಳ್ಳಬೇಕು," ಎಂದು ಹೇಳಿದ್ದಾರೆ.

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಆಡಿದ್ದ ಭಾರತ ತಂಡಕ್ಕೆ ನ್ಯೂಜಿಲೆಂಡ್‌, ಮೂರು ಪಂದ್ಯಗಳ ಟಿ20 ಹಾಗೂ ಒಡಿಐ ಸರಣಿಗಳಿಗೆ ಆತಿಥ್ಯ ವಹಿಸುತ್ತಿದೆ. ನವೆಂಬರ್‌ 18 ರಂದು ವಲ್ಲಿಂಗ್ಟನ್‌ನಲ್ಲಿ ಮೊದಲನೇ ಟಿ20 ಪಂದ್ಯ ನಡೆಯಲಿದ್ದು, 20 ರಂದು ಮೌಂಟ್‌ ಮೌಂಗನುಯಿ ಹಾಗೂ 22 ರಂದು ಮೂರನೇ ಹಾಗೂ ಕೊನೆಯ ಟಿ20 ಪಂದ್ಯ ನೇಪಿಯರ್‌ನಲ್ಲಿ ಜರುಗಲಿದೆ.

ಟಿ20 ಸರಣಿ ಅಂತ್ಯದ ಬಳಿಕ ಉಭಯ ತಂಡಗಳು ನವೆಂಬರ್‌ 25 ರಿಂದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಾದಾಟ ನಡೆಸಲಿವೆ. ಮೊದಲನೇ ಏಕದಿನ ಪಂದ್ಯ ಅಕ್ಲೆಂಡ್‌ನಲ್ಲಿ ನಡೆದರೆ, ನ.27 ರಂದು ಹ್ಯಾಮಿಲ್ಟನ್‌ ಹಾಗೂ 30 ರಂದು ಕ್ರೈಸ್ಟ್‌ ಚರ್ಚ್‌ನಲ್ಲಿ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಜರುಗಲಿದೆ.

ಟಿಮ್‌ ಸೌಥೀ, ಮ್ಯಾಟ್‌ ಹೆನ್ರಿ, ಲಾಕಿ ಫರ್ಗ್ಯೂಸನ್‌, ಬ್ಲೈರ್‌ ಟಿಕ್ಕರ್‌ ಹಾಗೂ ಆಡಂ ಮಿಲ್ನೆ ಅವರು ನ್ಯೂಜಿಲೆಂಡ್‌ ತಂಡದ ವೇಗದ ಬೌಲಿಂಗ್‌ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ ಗಾಯದಿಂದಾಗಿ ಬೆನ್‌ ಸೀರ್ಸ್‌ ಹಾಗೂ ಕೈಲ್‌ ಜೇಮಿಸನ್‌ ಅವರನ್ನು ಸೀಮಿತ ಓವರ್‌ಗಳ ತಂಡಕ್ಕೆ ಪರಿಗಣಿಸಿಲ್ಲ.

ಭಾರತ ವಿರುದ್ಧ ಟಿ20 ಹಾಗೂ ಒಡಿಐ ಸರಣಿಗಳಿಗೆ ನ್ಯೂಜಿಲೆಂಡ್‌ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಆಲೆನ್, ಮೈಕಲ್ ಬ್ರೇಸ್‌ವೆಲ್, ಡೆವೋನ್ ಕಾನ್ವೇ, ಲಾಕಿ ಫರ್ಗ್ಯೂಸನ್, ಮ್ಯಾಟ್ ಹೆನ್ರಿ, ಟಾಮ್ ಲೇಥಮ್, ಡ್ಯಾರಿಲ್ ಮಿಚೆಲ್, ಆಡಮ್ ಮಿಲ್ನೆ, ಜಿಮ್ಮಿ ನೀಶಮ್*, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಬ್ಲೈರ್ ಟಿಕ್ಕರ್‌.

 

Ind Vs Nz 2022 Martin Guptill, Trent Boult Dropped From New Zealand Squad For Limited Overs Series Vs India.