ಚಾಂಪಿಯನ್ಸ್ ಲೀಗ್‌ನಲ್ಲಿ ಮೊದಲ ಮಹಿಳಾ ರೆಫರೀಯಾಗಿ ಸ್ಟೆಫನಿ ದಾಖಲೆ

03-12-20 05:47 pm       Source: MYKHEL   ಕ್ರೀಡೆ

ಪುರುಷರ ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಚೊಚ್ಚಲ ಮಹಿಳಾ ರೆಫರೀ ಆಗಿ ಕಾರ್ಯ ನಿರ್ವಹಿಸುವ ಮೂಲಕ ಫ್ರೆಂಚ್ ಫುಟ್ಬಾಲ್ ರೆಫರೀ ಸ್ಟೆಫನಿ ಫ್ರಾಪ್ಪಾರ್ಟ್ ಇತಿಹಾಸ ನಿರ್ಮಿಸಿದ್ದಾರೆ.

ಪ್ಯಾರಿಸ್: ಪುರುಷರ ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಚೊಚ್ಚಲ ಮಹಿಳಾ ರೆಫರೀ ಆಗಿ ಕಾರ್ಯ ನಿರ್ವಹಿಸುವ ಮೂಲಕ ಫ್ರೆಂಚ್ ಫುಟ್ಬಾಲ್ ರೆಫರೀ ಸ್ಟೆಫನಿ ಫ್ರಾಪ್ಪಾರ್ಟ್ ಇತಿಹಾಸ ನಿರ್ಮಿಸಿದ್ದಾರೆ. ಗುರುವಾರ (ಡಿಸೆಂಬರ್ 3) ನಡೆದ ಪಂದ್ಯದಲ್ಲಿ ರೆಫರೀ ಆಗಿ ಸ್ಟೆಫನಿ ಗಮನ ಸೆಳೆದಿದ್ದಾರೆ.

ಗುರುವಾರದ ಪಂದ್ಯದಲ್ಲಿ ಯುವೆಂಟಸ್ ಮತ್ತು ಡೈನಮೋ ಕ್ವಿವ್ ತಂಡಗಳು ಮುಖಾಮುಖಿಯಾಗಿದ್ದವು. ಇದರಲ್ಲಿ ಯುವೆಂಟಸ್ ಎಫ್‌ಸಿ ಡೈನಮೋ ಕ್ವಿವ್ ವಿರುದ್ಧ 3-0ರ ಜಯ ದಾಖಲಿಸಿತ್ತು. ಈ ಪಂದ್ಯದಲ್ಲಿ ಸ್ಟೆಫನಿ ಫ್ರಾಪ್ಪಾರ್ಟ್ ರೆಫರೀ ಜವಾಬ್ದಾರಿ ನಿರ್ವಹಿಸಿ ಸೈ ಎನಿಸಿದ್ದಾರೆ.

ಫುಟ್ಬಾಲ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಕ್ಕಾಗಿ ದ ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಇಎಫ್‌ಎ) ಸ್ಟೆಫನಿ ಫ್ರಾಪ್ಪಾರ್ಟ್ ಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದೆ. ಸ್ಟೆಫನಿ ರೆಫರೀ ಜವಾಬ್ದಾರಿ ನಿರ್ವಹಿಸುತ್ತಿರುವ ವಿಡಿಯೋವನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ.

'ಬುಧವಾರ ರಾತ್ರಿ, ಸ್ಟೆಫನಿ ಫ್ರಾಪ್ಪಾರ್ಟ್ ಪುರುಷರ ಯುಸಿಎಲ್ ಪಂದ್ಯವನ್ನು ತೀರ್ಪು ನೀಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಭಿನಂದನೆಗಳು ಸ್ಟೆಫನಿ,' ಎಂದು ಯುಇಎಫ್‌ಎ ಬರೆದುಕೊಂಡಿದೆ.

This News Article is a Copy of  MYKHEL