ಅಚ್ಚರಿಯ ಸತ್ಯ ಬಾಯ್ಬಿಟ್ಟ ಅಂಜು ಬಾಬಿ ಜಾರ್ಜ್ !!

08-12-20 03:37 pm       Headline Karnataka News Network   ಕ್ರೀಡೆ

ತಾನು ತನ್ನ ವೃತ್ತಿ ಬದುಕಿನಲ್ಲಿ ಸಾಧಿಸಿದ್ದೆಲ್ಲವೂ ಒಂದೇ ಕಿಡ್ನಿಯೊಂದಿಗೆ ಎಂದು ಅಂಜು ಬಾಬ್ಬಿ ಜಾರ್ಜ್ ಹೇಳಿದ್ದಾರೆ.

ನವದೆಹಲಿ, ಡಿ.8: ಭಾರತದ ಅತ್ಲೀಟ್, ಲಾಂಗ್ ಜಂಪರ್ ಅಂಜು ಬಾಬ್ಬಿ ಜಾರ್ಜ್ ಅಚ್ಚರಿಯ ಸತ್ಯವೊಂದನ್ನು ಹೊರಗೆಡವಿದ್ದಾರೆ. ತಾನು ತನ್ನ ವೃತ್ತಿ ಬದುಕಿನಲ್ಲಿ ಸಾಧಿಸಿದ್ದೆಲ್ಲವೂ ಒಂದೇ ಕಿಡ್ನಿಯೊಂದಿಗೆ ಎಂದು ಹೇಳಿದ್ದಾರೆ.

2003ರಲ್ಲಿ ಫ್ರಾನ್ಸ್ ನಲ್ಲಿ ನಡೆದ ವರ್ಲ್ಡ್ ಚಾಂಪ್ಯನ್ ಶಿಪ್ ನಲ್ಲಿ ಅಂಜು ಬಾಬಿ ಜಾರ್ಜ್ ಭಾರತಕ್ಕೆ ಐಜಿಹಾಸಿಕ ಕಂಚಿನ ಪದಕ ಗೆದ್ದುಕೊಟ್ಟಿದ್ದರು. ಆಮೂಲಕ ಅತ್ಲೀಟ್ ನಲ್ಲಿ ಭಾರತಕ್ಕೆ ಮೊದಲ ಬಾರಿಗೆ ಪದಕ ಜಯಿಸಿದ ಕೀರ್ತಿಯೂ ಅಂಜುಗೆ ಸಂದಿತ್ತು.

ಈ ಬಗ್ಗೆ ಟ್ವೀಟ್ ಮಾಡಿರುವ ಅಂಜು, ನೀವು ನಂಬಿದರೆ ನಂಬಿ. ಆದರೆ ನಾನು ಅದೃಷ್ಟಶಾಲಿಗರಲ್ಲಿ ಒಬ್ಬಳು. ಕೇವಲ ಒಂದೇ ಕಿಡ್ನಿಯೊಂದಿಗೆ ವಿಶ್ವದ ಟಾಪ್ ಲೆವಲ್ ಗೆ ಹೋದ ಕೆಲವೇ ಮಂದಿಯಲ್ಲಿ ನಾನೂ ಒಬ್ಬಳು. ಅಲರ್ಜಿ, ಪೈನ್ ಕಿಲ್ಲರ್ ಜೊತೆಗೆ ನಾನು ಸಾಧನೆ ಮಾಡಿದ್ದೆ. ಅದನ್ನು ಕೋಚ್ ಸಾಧಿಸಿದ ಮ್ಯಾಜಿಕ್ ಅನ್ನಬೇಕೋ, ಅವರ ಪ್ರತಿಭೆ ಅನ್ನಬೇಕೊ ತಿಳಿಯದು ಎಂದು ಬರೆದುಕೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅಂಜು, ನನಗೆ ಹುಟ್ಟಿನಿಂದಲೇ ಕಿಡ್ನಿ ಸಮಸ್ಯೆಯಿತ್ತು. ನನಗೆ ಒಂದೇ ಕಿಡ್ನಿಯಿತ್ತು. ಅದರಿಂದ ಚೇತರಿಸಿಕೊಳ್ಳಲು ಬಹಳ ಪ್ರಯತ್ನ ಪಟ್ಟಿದ್ದೆ. 2003ರಲ್ಲಿ ಚಾಂಪ್ಯನ್ ಶಿಪ್ ಗೆ 20 ದಿನಗಳಿದ್ದಾಗ ದೇಹ ಊದಿಕೊಂಡಿತ್ತು. ಹೆಚ್ಚಿನ ಕ್ರೀಡಾಕೂಟಗಳ ವೇಳೆ ನನಗೆ ಸರಿಯಾಗಿ ವಿಶ್ರಾಂತಿ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.