ಗೋವಾದಲ್ಲಿ ದಿಗ್ಗಜ ಮರಡೋನಾ ಸ್ಮರಣೆ, ಪ್ರತಿಮೆ ನಿರ್ಮಾಣ

09-12-20 12:41 pm       Source: MYKHEL Mahesh Malnad   ಕ್ರೀಡೆ

ಡಿಯಾಗೋ ಮರಡೋನಾ ಸ್ಮರಣಾರ್ಥ ಅವರ ಆಳೆತ್ತರ ಪ್ರತಿಮೆಯನ್ನು ನಿರ್ಮಿಸಲಾಗುವುದು ಎಂದು ಸಚಿವ ಮೈಕಲ್ ಲೋಬೋ ಹೇಳಿದ್ದಾರೆ.

ಪಣಜಿ, ನ. 26: ಫುಟ್ಬಾಲ್ ಅಭಿಮಾನಿಗಳನ್ನು ಅಗಲಿದ ದಿಗ್ಗಜ ಆಟಗಾರ ಅರ್ಜೆಂಟೀನಾದ ಡಿಯಾಗೋ ಮರಡೋನಾ ಅವರನ್ನು ಗೋವಾ ಶೋಕದಲ್ಲಿ ಮುಳುಗಿದೆ. ಅವರ ಸ್ಮರಣಾರ್ಥ ಆಳೆತ್ತರ ಪ್ರತಿಮೆಯನ್ನು ನಿರ್ಮಿಸಲಾಗುವುದು ಎಂದು ಸಚಿವ ಮೈಕಲ್ ಲೋಬೋ ಹೇಳಿದ್ದಾರೆ.

ಮಹಾರಾಷ್ಟ್ರ ಮೂಲದ ಶಿಲ್ಪಿಯೊಬ್ಬರು ಈಗಾಗಲೇ ಪ್ರತಿಮೆ ನಿರ್ಮಾಣದಲ್ಲಿ ತೊಡಗಿದ್ದಾರೆ ಎಂದು ಕಲಂಗುಟ್ ಶಾಸಕ, ಗೋವಾದ ಬಂದರು ಖಾತೆ ಸಚಿವ ಮೈಕಲ್ ಲೋಬೋ ಪಿಟಿಐ ಜೊತೆ ಮಾತನಾಡುತ್ತಾ ಹೇಳಿದರು. 2018ರಲ್ಲೇ ಮರಡೋನಾ ಪ್ರತಿಮೆ ನಿರ್ಮಾಣದ ಬಗ್ಗೆ ಲೋಬೋ ಘೋಷಿಸಿದ್ದರು. ಆದರೆ, ಅನಿವಾರ್ಯ ಕಾರಣಗಳಿಂದ ಪ್ರತಿಮೆ ಪೂರ್ಣಗೊಂಡಿರಲಿಲ್ಲ.

ಪ್ರತಿಮೆ ನಿರ್ಮಾಣವಾದ ಬಳಿಕ ಕಂಡೋಲಿಂ ಅಥವಾ ಕಲಂಗುಟ್ ನಡುವೆ ಸ್ಥಾಪಿಸಲಾಗುವುದು, ಮರಡೋನಾ ಇಂದಿನ ಯುವ ಪೀಳಿಗೆಗೂ ಸ್ಪೂರ್ತಿಯಾಗಲಿ ಎಂಬುದು ನಮ್ಮ ಉದ್ದೇಶ ಎಂದು ಲೋಬೋ ಹೇಳಿದರು.

ಸುಮಾರು 350 ಕೆಜಿ ತೂಗುವ ಪ್ರತಿಮೆ ನಿರ್ಮಾಣದ ಮೂಲಕ ಗೋವಾ ಸರ್ಕಾರವು ರಾಜ್ಯದ ಫುಟ್ಬಾಲ್ ಸಂಸ್ಕೃತಿ ಅಭಿವೃದ್ಧಿಗೆ ಇನ್ನಷ್ಟು ಪ್ರೋತ್ಸಾಹ ನೀಡಲಿದೆ. ಕ್ರಿಸ್ಟಿಯಾನೋ ರೊನಾಲ್ಡೋ ಪ್ರತಿಮೆ ಕೂಡಾ ನಿರ್ಮಾಣವಾಗುತ್ತಿದ್ದು, ಉತ್ತರ ಜಿಲ್ಲೆಗಳಲ್ಲಿ ಸ್ಥಾಪಿಸಲಾಗುವುದು ಎಂದ ಹೇಳಿದರು. 1986 ವಿಶ್ವಕಪ್ ವಿಜೇತ ಮರಡೋನಾ ಅವರು ಅರ್ಜೆಂಟೀನಾದ ಖಾಸಗಿ ಆಸ್ಪತ್ರೆಯಲ್ಲಿ ನವೆಂಬರ್ 25ರಂದು ಹೃದಯ ಸ್ತಂಭನಕ್ಕೊಳಗಾಗಿ ಮೃತಪಟ್ಟಿದ್ದು, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಅಗಲಿದ್ದಾರೆ.

This News Article is a Copy of MYKHEL