ಐಎಸ್‌ಎಲ್: ಗೋವಾ ವಿರುದ್ಧ ಜಯದ ನಿರೀಕ್ಷೆಯಲ್ಲಿ ಎಟಿಕೆಎಂಬಿ

16-12-20 03:15 pm       Source: MYKHEL   ಕ್ರೀಡೆ

ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಎಟಿಕೆ ಮೋಹನ್ ಬಾಗನ್ ತಂಡ ಎಫ್ ಸಿ ಗೋವಾ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿ ಮತ್ತೆ ಮೇಲಕ್ಕೇರುವ ಗುರಿ ಹೊಂದಿದೆ.

ಗೋವಾ, ಡಿಸೆಂಬರ್ 15: ಹೀರೋ ಇಂಡಿಯನ್ ಸೂಪರ್ ಲೀಗ್ ನ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ ನಂತರ ಅಗ್ರ ಸ್ಥಾನದಿಂದ ಕುಸಿದ ಎಟಿಕೆ ಮೋಹನ್ ಬಾಗನ್ ತಂಡ ಎಫ್ ಸಿ ಗೋವಾ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿ ಮತ್ತೆ ಮೇಲಕ್ಕೇರುವ ಗುರಿ ಹೊಂದಿದೆ.

ಐದು ಪಂದ್ಯಗಳನ್ನಾಡಿ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಮರಿನರ್ಸ್ ಪಡೆ ಇದ್ದರೆ, ಎಫ್ ಸಿ ಗೋವಾ 8 ಅಂಕಗಳನ್ನು ಗಳಿಸಿ ಐದನೇ ಸ್ಥಾನದಲ್ಲಿದೆ. ಲೀಗ್ ನಲ್ಲಿ ಎರಡು ಬಲಿಷ್ಠ ತಂಡಗಳ ಹೋರಾಟ ಮಾತ್ರವಲ್ಲ, ಉತ್ತಮ ರಣತಂತ್ರವನ್ನು ಹೊಂದಿರುವ ಇಬ್ಬರು ತರಬೇತುದಾರರ ಹೋರಾಟವೂ ಇದಾಗಿದೆ. ಎಟಿಕೆಎಂಬಿ ಕೋಚ್ ಆಂಟೊನಿಯೋ ಹಬ್ಬಾಸ್ ಕೇವಲ ಚೆಂಡನ್ನು ಹೆಚ್ಚು ಕಾಲ ಅಧೀನದಲ್ಲಿರುವುದರ ಬಗ್ಗೆ ಹೆಚ್ಚು ಅವಲಂಬಿತವಾಗಿಲ್ಲ. ಅವರ ತಂಡ ಆಕ್ರಮಣಕಾರಿ ಆಟಕ್ಕೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ರಕ್ಷಣಾ ವಿಭಾಗವೂ ಹೆಚ್ಚು ಸಂಘಟಿತವಾಗಿದೆ. ಕೋಲ್ಕತಾ ಮೂಲದ ತಂಡ ಇದುವರೆಗೂ ಚೆಂಡಿನ ನಿಯಂತ್ರಣದಲ್ಲಿ ಶೇ, 46 ರಷ್ಟು ಯಶಸ್ಸು ಕಂಡಿದೆ. ಇದು ಅತಿ ಕಡಿಮೆ ಸರಾಸರಿಯಲ್ಲಿ ಮೂರನೇ ಸ್ಥಾನ.

ಇದೇ ವೇಳೆ ಜುವಾನ್ ಫೆರಾಂಡೋ ಅವರ ಎಫ್ ಸಿ ಗೋವಾ ಪಡೆ, ಇದಕ್ಕೆ ವಿರುದ್ಧವಾದ ತತ್ವದೊಂದಿಗೆ ಸಾಗಿ ಬಂದಿದೆ. ಕಾಡೆತ್ತುಗಳೆಂದೇ ಜನಪ್ರಿಯಗೊಂಡಿರುವ ಗೋವಾ ಪಡೆ, ಚೆಂಡಿನ ನಿಯಂತ್ರಣದಲ್ಲಿ ಸಿಂಹಪಾಲು ಹೊಂದಿದೆ. ಸರಾಸರಿಯಲ್ಲಿ ಶೇ. 59. ಇದು ಲೀಗ್ ನಲ್ಲಿ ತಂಡವೊಂದು ಚೆಂಡಿನ ನಿಯಂತ್ರಣದಲ್ಲಿ ಕಂಡ ಅಗ್ರ ಪಾಲು. ಆದರೆ ಎಟಿಕೆಎಂಬಿ ತಂಡ ಎರಡು ಗಾಯದ ಸಮಸ್ಯೆಯನ್ನು ಎದುರಿಸುತ್ತಿದೆ. ಜಾವಿ ಹೆರ್ನಾಂಡೀಸ್ ಮತ್ತು ತಿರಿ ನಾಳೆಎಯ ಪಂದ್ಯದಲ್ಲಿ ಪಾಲ್ಗೊಳ್ಳುವುದು ಸಂಶಯವೆನಿಸಿದೆ. ಇದು ತಂಡದಲ್ಲಿನ ಸಮತೋಲಕ್ಕೆ ಅಡ್ಡಿ ಆದಂತಾಗಿದೆ. ಹೈದರಾಬಾದ್ ವಿರುದ್ಧ ಅಂಕವನ್ನು ಕಳೆದುಕೊಂಡಾಗ ಹಬ್ಬಾಸ್ ಈ ಸಂಗತಿಯನ್ನು ಒಪ್ಪಿಕೊಂಡಿದ್ದಾರೆ. "ಈ ಋತುವಿನಲ್ಲಿ ಇನ್ನೂ ಬಹಳ ದೂರ ಸಾಗಬೇಕಿದೆ." ಎಂದು ತಮ್ಮ ತಂಡ ಅಗ್ರ ಸ್ಥಾನವನ್ನು ಕಳೆದುಕೊಂಡಿರುವ ಬಗ್ಗೆ ಹಬ್ಬಾಸ್ ಹೇಳಿದ್ದಾರೆ, "ಖಂಡಿತವಾಗಿಯೂ ನಾವು ಅಗ್ರ ಸ್ಥಾನವನ್ನು ಕಳೆದುಕೊಳ್ಳ ಬಾರದಿತ್ತು.

ನಮ್ಮನ್ನು ಗಾಯದ ಸಮಸ್ಯೆ ಬಹಳವಾಗಿ ಕಾಡಿದೆ. ಆದರೆ ನಮ್ಮ ಆಟಗಾರರು ಚೇತರಿಸಿಕೊಂಡು ಮುಂದಿನ ಪಂದ್ಯಕ್ಕೆ ಸಜ್ಜಾಗಬೇಕಿದೆ," ಎಂದರು. ಗೋವಾ ತಂಡದ ಪರ ಐಗರ್ ಆಂಗುಲೊ ತಮ್ಮ ತಂಡದ ಪರ ಗೋಲು ಗಳಿಕೆಯನ್ನು ಮುಂದುವರಿಸಿಕೊಂಡು ಹೋಗುವ ಗುರಿಯಲ್ಲಿದ್ದಾರೆ. ಎಟಿಜೆಎಂಬಿ ಪರ ರಾಯ್ ಕೃಷ್ಣ ಪ್ರತಿದಾಳಿಗೆ ಸಜ್ಜಾಗಿದ್ದಾರೆ. ತಂಡ ಗಳಿಸಿರುವ ಆರು ಗೋಲುಗಳಲ್ಲಿ ಫಿಜಿ ಮೂಲದ ಆಟಗಾರ ನಾಲ್ಕು ಗೋಲುಗಳನ್ನು ತನ್ನ ಹೆಸರಿನಲ್ಲಿ ದಾಖಲಿಸಿದ್ದಾರೆ. ಈ ಎಲ್ಲ ಗೋಲುಗಳು ದಾಖಲಾಗಿರುವುದು ದ್ವಿತಿಯಾರ್ಧದಲ್ಲಿ ಎಂಬುದು ಗಮನಾರ್ಹ. ಗೋವಾ ನೀಡಿರುವ ಐದು ಗೋಲುಗಳಲ್ಲಿ ಮೂರು ಗೋಲುಗಳನ್ನು ಎದುರಾಳಿ ತಂಡ ದ್ವಿತಿಯಾರ್ಧದಲ್ಲಿ ಗಳಿಸಿದೆ, ಫೆರಾಂಡೊ ಈ ಬಗ್ಗೆ ಗಮನ ಹರಿಸಬೇಕಾಗಿದೆ.

"ನಾವು ಅತ್ಯಂತ ಬಲಿಷ್ಠ ತಂಡದ ವಿರುದ್ಧ ಆಡುತ್ತಿರುವುದರಿಂದ ಕೇವಲ ಒಂದು ಯೋಜನೆಯಾಧರಿಸಿ ಆಡುವುದು ಸೂಕ್ತ, ಕೇವಲ ಕೃಷ್ಣಗಾಗಿ ಯೋಜನೆ ರೂಪಿಸುವುದಲ್ಲ," ಎಂದಿದ್ದಾರೆ. "ಸಂಘಟಿತ ಹೋರಾಟ ನೀಡುವುದು ಗಮನಾರ್ಹ, ಆದರೆ ಕೆಲವೊಮ್ಮೆ ಚೆಂಡು, ಸ್ಥಳ ಹಾಗೂ ಅಂತರ ಇವುಗಳ ಬಗ್ಗೆಯೂ ಗಮನಹರಿಸಬೇಕು. 90 ನಿಮಿಷಗಳ ಆಟದಲ್ಲಿ ಈ ಎಲ್ಲ ಅಂಶಗಳ ಕಡೆಗೆ ಗಮನ ಹರಿಸಬೇಕು." ಎಂದಿದ್ದಾರೆ.

This News Article is a Copy of MYKHEL