ಮೆಲ್ಬರ್ನ್ ಅಂಗಳದಲ್ಲಿ ಸೆಹ್ವಾಗ್ ಏಕಾಂಗಿ ಸಾಧನೆಗೆ ಸಮವಾದ ಆಸ್ಟ್ರೇಲಿಯಾ ಮೊತ್ತ

26-12-20 02:30 pm       Source: MYKHEL Madhukara Shetty   ಕ್ರೀಡೆ

ಆಸ್ಟ್ರೇಲಿಯಾ ಬ್ಯಾಟಿಂಗ್ ಪಡೆಯನ್ನು ಟೀಮ್ ಇಂಡಿಯಾ ಬೌಲರ್‌ಗಳು 195 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 36 ರನ್‌ಗಳಿಗೆ ಆಲೌಟ್ ಆಗಿದ್ದಲ್ಲದೆ ಹೀನಾಯ ಸೋಲು ಕಂಡಿದ್ದ ಭಾರತ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮತ್ತೆ ತಿರುಗಿ ಬಿದ್ದಿದೆ. ಆಸ್ಟ್ರೇಲಿಯಾ ಬ್ಯಾಟಿಂಗ್ ಪಡೆಯನ್ನು ಟೀಮ್ ಇಂಡಿಯಾ ಬೌಲರ್‌ಗಳು 195 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಅದ್ಭುತ ಪ್ರದರ್ಶನ ನಿಡಿದೆ ಟೀಮ್ ಇಂಡಿಯಾ.

ಕುತೂಹಲಕಾರಿ ಸಂಗತಿಯೆಂದರೆ 17 ವರ್ಷಗಳ ಹಿಂದೆ ಟೀಮ್ ಇಂಡಿಯಾದ ಸ್ಪೋಟಕ ಆಟಗಾರ ವಿರೇಂದ್ರ ಸೆಹ್ವಾಗ್ ಏಕಾಂಗಿಯಾಗಿ 195 ರನ್‌ಅನ್ನು ಇದೇ ಅಂಗಳದಲ್ಲಿ ದಾಖಲಿಸಿದ್ದರು. ಇಷ್ಟು ಮಾತ್ರವಲ್ಲ ಸೆಹ್ವಾಗ್ ಒಬ್ಬರೇ ಸಿಡಿಸಿದ ಬೌಂಡರಿ ಸಂಖ್ಯೆಗಳು ಕೂಡ ಆಸ್ಟ್ರೇಲಿಯಾ ಇಡೀ ತಂಡ ಸಿಡಿಸಿದ ಬೌಂಡರಿಗಳಿಗಿಂತ ಹೆಚ್ಚಿನದಾಗಿದೆ. ಜೊತೆಗೆ ಆಸ್ಟ್ರೇಲಿಯಾ ಆಟಗಾರರ ಒಟ್ಟು ಸ್ಟ್ರೈಕ್‌ರೇಟ್‌ಗಿಂತಲೂ ಸೆಹ್ವಾಗ್ ಸ್ಟ್ರೈಕ್‌ರೇಟ್ ಅದ್ಭುತವಾಗಿತ್ತು.

ವೀರೇಂದ್ರ ಸೆಹ್ವಾಗ್ ಅಂದು ತಮ್ಮ 195 ರನ್‌ಗಳ ಅದ್ಭುತ ಇನ್ನಿಂಗ್ಸ್‌ನಲ್ಲಿ 5 ಸಿಕ್ಸರ್ ಹಾಗೂ 25 ಬೌಂಡರಿಗಳು ಒಳಗೊಂಡಿತ್ತು. ಆದರೆ ಟಿಮ್ ಪೈನ್ ಬಳಗ ಇಡೀ ಇನ್ನಿಂಗ್ಸ್‌ನಲ್ಲಿ ಒಂದು ಸಿಕ್ಸರ್ ಮಾತ್ರ ಸಿಡಿಸಿದ್ದಲ್ಲದೆ 18 ಬೌಂಡರಿ ಮಾತ್ರವೇ ಸಿಡಿಸಲು ಶಕ್ತವಾಗಿತ್ತು. ಭಾರತದ ಸ್ಪೋಟಕ ಆರಂಭಿಕ ಆಟಗಾರ ಅಂದು 195 ರನ್ ಗಳಿಸಲು 233 ಎಸೆತ ತೆಗೆದುಕೊಂಡಿದ್ದರೆ ಆಸ್ಟ್ರೇಲಿಯಾ ಇಷ್ಟೇ ಮೊತ್ತವನ್ನು ದಾಖಲಿಸಲು 435 ಎಸೆತವನ್ನು ಬಳಸಿಕೊಂಡಿತು.

ಆಸ್ಟ್ರೇಲಿಯಾ ತಂಡದ ಪರವಾಗಿ ಇಂದಿನ ಇನ್ನಿಂಗ್ಸ್‌ ಯಾವ ಬ್ಯಾಟ್ಸ್‌ಮನ್ ಕೂಡ ಅರ್ಧ ಶತಕವನ್ನು ಬಾರಿಸಲು ಯಶಸ್ವಿಯಾಗಲಿಲ್ಲ. ಮರ್ನಾಸ್ ಲ್ಯಾಬುಶೈನ್ ಬಾರಿಸಿದ 48 ರನ್ ಆಸಿಸ್ ಇನ್ನಿಂಗ್ಸ್‌ನ ಅತಿ ಹೆಚ್ಚಿನ ಸ್ಕೋರ್ ಆಗಿದೆ. ಲ್ಯಾಬುಶೈನ್ ಹಾಗೂ ಟ್ರಾವಿಸ್ ಹೆಡ್ 86 ರನ್‌ಗಳ ಜೊತೆಯಾಟವನ್ನು ನೀಡಿ ತಂಡಕ್ಕೆ ಆಸರೆಯಾದರು. ಈ ಜೋಡಿಯನ್ನು ಬೂಮ್ರಾ ಬೇರ್ಪಡಿಸುವ ಮೂಲಕ ಮತ್ತೆ ಯಶಸ್ಸು ನೀಡಿದರು.

This News Article is a Copy of MYKHEL