ಟೆಸ್ಟ್‌ ರ್‍ಯಾಂಕಿಂಗ್: ನಂ.1 ಸ್ಥಾನಿ ಸ್ಟೀವ್ ಸ್ಮಿತ್ ಕೆಳಗಿಳಿಸಿದ ವಿಲಿಯಮ್ಸನ್

31-12-20 02:25 pm       Source: MYKHEL Sadashiva   ಕ್ರೀಡೆ

ಟೆಸ್ಟ್ ಕ್ರಿಕೆಟ್ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ವಿಲಿಯಮ್ಸನ್ ನಂ.1 ಸ್ಥಾನಕ್ಕೇರಿದ್ದಾರೆ.

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ 2020ರ ಕೊನೇ ದಿನ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪದ ಸಾಧನೆ ತೋರಿದ್ದಾರೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗುರುವಾರ (ಡಿಸೆಂಬರ್ 31) ಪ್ರಕಟಿಸಿರುವ ಪುರಷರ ಟೆಸ್ಟ್ ಕ್ರಿಕೆಟ್ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ವಿಲಿಯಮ್ಸನ್ ನಂ.1 ಸ್ಥಾನಕ್ಕೇರಿದ್ದಾರೆ. ನ್ಯೂಜಿಲೆಂಡ್-ಪಾಕಿಸ್ತಾನ ಟೆಸ್ಟ್ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ನೀಡಿರುವ ವಿಲಿಯಮ್ಸನ್, 2020ರ ಇಸವಿಯನ್ನು ಗಮನಾರ್ಹ ಸಾಧನೆಯೊಂದಿಗೆ ಮುಗಿಸಿದ್ದಾರೆ.

ಕೇನ್ ವಿಲಿಯಮ್ಸನ್ ಅವರು ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರನ್ನು ಕೆಳಗಿಳಿದ್ದಾರೆ. ಸದ್ಯ ನಡೆಯುತ್ತಿರುವ ಭಾರತ ಆಸ್ಟ್ರೇಲಿಯಾ ಸರಣಿಯ ಎರಡೂ ಪಂದ್ಯಗಳಲ್ಲೂ ಸ್ಮಿತ್ ಉತ್ತಮ ಪ್ರದರ್ಶನ ನೀಡಿರಲಿಲ್ಲ. ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಸ್ಮಿತ್ ಕೇವಲ 1, 1, 0, 8 ರನ್ ಗಳಿಸಿದ್ದಾರೆ.



ಪಾಕ್ ವಿರುದ್ಧ ಉತ್ತಮ ಪ್ರದರ್ಶನ

ಇತ್ತೀಚೆಗಷ್ಟೇ ಮುಕ್ತಾಯಗೊಂಡ ನ್ಯೂಜಿಲೆಂಡ್-ಪಾಕಿಸ್ತಾನ ಮೊದಲನೇ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ 101 ರನ್ ಜಯ ಗಳಿಸಿತ್ತು. ಈ ಪಂದ್ಯದ ಫಲಿತಾಂಶ ಕೇನ್ ಅವರ ರ್‍ಯಾಂಕಿಂಗ್‌ ಜಿಗಿತಕ್ಕ ಸಹಾಯ ಮಾಡಿದೆ. ಯಾಕೆಂದರೆ ಈ ಪಂದ್ಯದಲ್ಲಿ ಕೇನ್ 129+21 ರನ್ ಬಾರಿಸಿದ್ದರು. ಆದರೆ ನ್ಯೂಜಿಲೆಂಡ್-ಪಾಕಿಸ್ತಾನ, ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ಇನ್ನೂ ಮುಗಿದಿಲ್ಲವಾದ್ದರಿಂದ 2021ಕ್ಕೆ ಮತ್ತೆ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಏರಿಳಿತಗಳಾಗುವ ಸಾಧ್ಯತೆಯಿದೆ.



ಸ್ಮಿತ್‌ಗಿಂತ ಕೊಹ್ಲಿ ಉತ್ತಮ ಸ್ಥಾನ

ವಿಶೇಷವೆಂದರೆ ಸದ್ಯದ ಟೆಸ್ಟ್ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಅವರು ಸ್ಮಿತ್‌ಗಿಂತ ಉತ್ತಮ ಸ್ಥಾನದಲ್ಲಿದ್ದಾರೆ. ನಂ.1 ಸ್ಥಾನದಲ್ಲಿ ವಿಲಿಯಮ್ಸನ್ (890 ರೇಟಿಂಗ್ ಪಾಯಿಂಟ್ಸ್‌), ಅನಂತರದ ಸ್ಥಾನಗಳಲ್ಲಿ ವಿರಾಟ್ ಕೊಹ್ಲಿ (879), ಸ್ಟೀವ್ ಸ್ಮಿತ್ (877), ಆಸ್ಟ್ರೇಲಿಯಾದ ಮಾರ್ನಸ್ ಲ್ಯಬುಶೇನ್, ಪಾಕಿಸ್ತಾನದ ಬಾಬರ್ ಅಝಾಮ್ ಇದ್ದಾರೆ.



ತಂಡಗಳ ರ್‍ಯಾಂಕಿಂಗ್

ಟೆಸ್ಟ್ ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ (906), ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ (845), ನ್ಯೂಜಿಲೆಂಡ್‌ನ ನೀಲ್ ವ್ಯಾಗ್ನರ್ (833) ಅಗ್ರ 3ರಲ್ಲಿ ಇದ್ದಾರೆ. ಆಲ್ ರೌಂಡರ್‌ಗಳಲ್ಲಿ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್, ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್, ಭಾರತದ ರವೀಂದ್ರ ಜಡೇಜಾ ಮೊದಲ 3 ಸ್ಥಾನಗಳಲ್ಲಿ ಇದ್ದಾರೆ. ತಂಡಗಳಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಭಾರತ, ಇಂಗ್ಲೆಂಡ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮೊದಲ 5 ಸ್ಥಾನ ಪಡೆದಿದೆ. ಇದರಲ್ಲಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ 116 ರೇಟಿಂಗ್ ಪಾಯಿಂಟ್ಸ್‌ನೊಂದಿಗೆ ಮೊದಲ ಸ್ಥಾನದಲ್ಲಿದೆ.

This News Article is a Copy of MYKHEL