ಕೊನೆ ಘಟ್ಟದಲ್ಲಿ ಎಫ್‌ಸಿ ಗೋವಾಗೆ ಶರಣಾದ ಹೈದರಾಬಾದ್‌ ಎಫ್‌ಸಿ

31-12-20 02:34 pm       Source: MYKHEL   ಕ್ರೀಡೆ

ತಿಲಕ್‌ ಮೈದಾನ್‌ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್‌ ಪಂದ್ಯದಲ್ಲಿ ಹೈದರಾಬಾದ್‌ ಎಫ್‌ಸಿ ತಂಡಕ್ಕೆ ಗೆಲ್ಲುವ ಉತ್ತಮ ಅವಕಾಶವಿತ್ತು.

ಗೋವಾ: ಪಂದ್ಯ ಮುಗಿಯುವುದಕ್ಕೆ ಇನ್ನು ಕೆಲವೇ ನಿಮಿಷಗಳು ಬಾಕಿ ಇರುವಾಗ ಮಿಡ್‌ಫೀಲ್ಡರ್‌ ಇಶಾನ್‌ ಪಂಡಿತಾ (87ನೇ ನಿಮಿಷ) ಮತ್ತು ಹೆಚ್ಚುವರಿ ಅವಧಿಯಲ್ಲಿ ಸ್ಟ್ರೈಕರ್‌ ಇಗೋರ್‌ ಅಂಗುಲೊ (90+1ನೇ ನಿಮಿಷ) ದಾಖಲಿಸಿದ ಗೋಲ್‌ಗಳಿಂದ ಆರಂಭಿಕ ಹಿನ್ನಡೆ ಮೆಟ್ಟಿನಿಂತ ಎಫ್‌ಸಿ ಗೋವಾ ತಂಡ, ಪ್ರಸಕ್ತ ಸಾಲಿನ ಇಂಡಿಯನ್ ಸೂಪರ್‌ ಲೀಗ್‌ ಟೂರ್ನಿ 43ನೇ ಲೀಗ್‌ ಪಂದ್ಯದಲ್ಲಿ ಹೈದರಾಬಾದ್‌ ಎಫ್‌ಸಿ ಎದುರು 2-1 ಗೋಲ್‌ಗಳ ರೋಚಕ ಜಯ ದಾಖಲಿಸಿತು.

ಇಲ್ಲಿನ ತಿಲಕ್‌ ಮೈದಾನ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಹೈವೋಲ್ಟೇಜ್‌ ಪಂದ್ಯದಲ್ಲಿ ಹೈದರಾಬಾದ್‌ ಎಫ್‌ಸಿ ತಂಡಕ್ಕೆ ಗೆಲ್ಲುವ ಉತ್ತಮ ಅವಕಾಶವಿತ್ತು. 58ನೇ ನಿಮಿಷದಲ್ಲಿ ಸ್ಟರೈಕರ್‌ ಅರಿದಾನೆ ಸ್ಯಾಂಟಾನ ತಂದುಕೊಟ್ಟ ಅದ್ಭುತ ಗೋಲ್‌ ನೆರವಿನಿಂದ ಹೈದರಾಬಾದ್ ತಂಡ 1-0 ಅಂತರದ ಮೇಲುಗೈ ಹೊಂದಿತ್ತು.



ಗೆಲುವಿನತ್ತ ಕೊಂಡೊಯ್ದಿತ್ತು

ನಿರೀಕ್ಷೆಯಂತೆ ಎಫ್‌ಸಿ ಗೋವಾ ತಂಡದ ಡಿಫೆನ್ಸ್‌ ವಿಭಾಗದ ವೈಫಲ್ಯದ ಲಾಭ ಪಡೆದಿದ್ದ ಹೈದರಾಬಾದ್‌ ತಂಡ ಮೇಲುಗೈ ಪಡೆದು ತಂಡವನ್ನು ಗೆಲುವಿನತ್ತ ಕೊಂಡೊಯ್ದಿತ್ತು. ಆದರೆ ಅಂತಿಮ ಘಟ್ಟದಲ್ಲಿ ಮೈಮರೆತ ಪರಿಣಾಮ ಎಫ್‌ಸಿ ಗೋವಾ ಕೇವಲ 4 ನಿಮಿಷಗಳ ಅಂತರದಲ್ಲಿ ಎರಡು ಗೋಲ್‌ಗಳನ್ನು ಬಾರಿಸಿ ಹೈದರಾಬಾದ್‌ ಮುಷ್ಠಿಯಲ್ಲಿದ್ದ ಗೆಲುವನ್ನು ಕಸಿದುಕೊಂಡಿತು.

3ನೇ ಸ್ಥಾನಕ್ಕೆ ಜಿಗಿತ

ಈ ಗೆಲುವಿನೊಂದಿಗೆ ಎಫ್‌ಸಿ ಗೋವಾ ತಂಡ ಲೀಗ್‌ನಲ್ಲಿ ಆಡಿದ ಒಟ್ಟು 9 ಪಂದ್ಯಗಳಿಂದ 14 ಅಂಕಗಳನ್ನು ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ. ಮತ್ತೊಂದೆಡೆ ಬ್ಯಾಕ್‌ ಟು ಬ್ಯಾಕ್‌ ಸೋಲಿನ ಆಘಾತಕ್ಕೆ ಒಳಗಾಗಿರುವ ಹೈದರಾಬಾದ್‌ ತಂಡ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲೇ ಉಳಿದುಕೊಂಡಿದೆ.



ಯಶಸ್ಸು ಕೈ ಹಿಡಿಯಲಿಲ್ಲ

ಪಂದ್ಯದ ಮೊದಲ ಅವಧಿಯಲ್ಲಿ ಒಂದು ಗೋಲ್‌ ಕೂಡ ದಾಖಲಾಗಲಿಲ್ಲ. ಇತ್ತಂಡಗಳು ಹಲವು ಬಾರಿ ಪ್ರಯತ್ನ ನಡೆಸಿದರೂ ಕೂಡ ಯಶಸ್ಸು ಕೈ ಹಿಡಿಯಲಿಲ್ಲ. ಮತ್ತೊಂದೆಡೆ 2ನೇ ಅವಧಿ ಸಂಪೂರ್ಣ ವಿಭಿನ್ನವಾಗಿತ್ತು. ಗೋಲ್‌ಗಳ ಸುರಿಮಳೆಗೆ ಸಾಕ್ಷಿಯಾದ ಈ ಅವಧಿಯಲ್ಲಿ ಭರಪೂರ ಮನೋರಂಜೆ ಲಭ್ಯವಾಯೊತು. ಹೈದರಾಬಾದ್‌ ಆರಂಭಿಕ ಮುನ್ನಡೆ ಗಳಿಸಿದರೂ, ಬ್ಯಾಕ್‌ ಟು ಬ್ಯಾಕ್‌ ಗೋಲ್‌ಗಳೊಂದಿಗೆ ಗೋವಾ ರೋಚಕ ಜಯ ತನ್ನದಾಗಿಸಿಕೊಂಡಿತು.

This News Article is a Copy of MYKHEL