ದುಬೈಗೆ ಹಾರಲು ತಯಾರಾಗುತ್ತಿದೆ ಧೋನಿ ತೋಟದಲ್ಲಿ ಬೆಳೆದ ತರಕಾರಿಗಳು

02-01-21 11:41 am       Source: MYKHEL Madhukara Shetty   ಕ್ರೀಡೆ

ಕ್ರಿಕೆಟ್ ಹೊರತುಪಡಿಸಿ ಕೃಷಿ ಚಟುವಟಿಕೆಗಳ ಬಗ್ಗೆಯೂ ಧೋನಿ ಬಹಳ ಆಸಕ್ತಿ ಹೊಂದಿದವರಾಗಿದ್ದಾರೆ.

ರಾಂಚಿ, ಜ.2: ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಫ್ರಿನ್ಸ್ ಆಫ್ ರಾಂಚಿ ಎಂದೇ ಖ್ಯಾತರಾಗಿರುವ ಮಹೇಂದ್ರ ಸಿಂಗ್ ಧೋನಿ ಅವರ ವಿಭಿನ್ನ ಅಭಿರುಚಿಗಳು ಕ್ರಿಕೆಟ್ ಪ್ರೇಮಿಗಳಿಗೆ ತಿಳಿದೇ ಇದೆ. ಕ್ರಿಕೆಟ್ ಹೊರತುಪಡಿಸಿ ಕೃಷಿ ಚಟುವಟಿಕೆಗಳ ಬಗ್ಗೆಯೂ ಧೋನಿ ಬಹಳ ಆಸಕ್ತಿ ಹೊಂದಿದವರಾಗಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ರಾಂಚಿಯಲ್ಲಿರುವ ಧೋನಿ ಫಾರ್ಮ್ ಹೌಸ್‌ನಲ್ಲಿ ತರಕಾರಿಗಳು ಬೆಳೆದು ಕಟಾವಿನ ಹಂತದಲ್ಲಿದೆ.

ಎಂಎಸ್ ಧೋನಿ ಫಾರ್ಮ್ ಹೌಸ್‌ನಲ್ಲಿ ಬೆಳೆದ ತರಕಾರಿಗಳನ್ನು ವಿದೇಶಕ್ಕೆ ರಫ್ತು ಮಾಡಲು ಸಿದ್ಧತೆಗಳು ನಡೆಯುತ್ತಿದೆ. ಇಲ್ಲಿ ಬೆಳೆದ ತರಕಾರಿಗಳನ್ನು ದುಬೈಗೆ ರವಾನಿಸಲಾಗುತ್ತಿದ್ದು ಅದಕ್ಕೆ ಪೂರಕವಾದ ಅಂತಿಮ ಹಂತದ ಸಿದ್ಧತೆಗಳು ಈಗ ಧೋನಿಯ ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿದೆ.

ಧೋನಿ ಫಾರ್ಮ್ ಹೌಸ್‌ನಲ್ಲಿ ಬೆಳೆದ ತರಕಾರಿಗಳ ಮಾರಾಟಕ್ಕೆ ಸಂಬಂಧಪಟ್ಟ ಮಾತುಕತೆಗಳು ಅಂತಿಮ ಹಂತದಲ್ಲಿದ್ದು ತರಕಾರಿಗಳನ್ನು ದುಬೈಗೆ ಕಳುಹಿಸಲು ಏಜೇನ್ಸಿಗಳನ್ನು ಕೂಡ ಆಯ್ಕೆ ಮಾಡಿಕೊಳ್ಳಲಾಗಿದೆ. ಝಾರ್ಖಂಡ್‌ನ ಕೃಷಿ ಇಲಾಕೆ ಎಂಎಸ್ ಧೋನಿ ತೋಟದಲ್ಲಿ ಬೆಳೆದ ತರಕಾರಿಗಳನ್ನು ವಿದೇಶಕ್ಕೆ ರವಾನಿಸುವ ಹೊಣೆಹೊತ್ತುಕೊಂಡಿದೆ.

ಝಾರ್ಖಂಡ್‌ನ ಸೆಂಬೋ ಗ್ರಾಮದ ರಿಂಗ್‌ರೋಡ್‌ಗೆ ಸಮೀಪದಲ್ಲಿ ಎಂಎಸ್ ಧೋನಿಯ ಪಾರ್ಮ್ ಹೌಸ್ ಇದೆ. ಇಲ್ಲಿ ಸ್ಟ್ರಾಬೆರ್ರಿ, ಕ್ಯಾಬೇಜ್, ಟೊಮ್ಯಾಟೋ, ಕೋಸುಗಡ್ಡೆ, ಬಟಾಣಿ ಪಪ್ಪಾಯ ಸೇರಿದಂತೆ ಸಾಕಷ್ಟು ತರಕಾರಿ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. 43 ಎಕ್ರೆಯಲ್ಲಿರುವ ಪಾರ್ಮ್ ಹೌಸ್‌ನಲ್ಲಿ 10 ಎಕ್ರೆ ಸ್ಥಳವನ್ನು ಇವುಗಳಿಗಾಗಿಯೇ ಧೋನಿ ಮೀಸಲಿಟ್ಟಿದ್ದಾರೆ.

ಧೋನಿ ತೋಟದಲ್ಲಿ ಬೇಳೆಯಲಾಗುತ್ತಿರುವ ಕ್ಯಾಬೇಜ್, ಟೊಮ್ಯಾಟೋ ಹಾಗೂ ಬಟಾಣಿ ಕಾಳುಗಳಿಗೆ ರಾಂಚಿಯ ಮಾರುಕಟ್ಟೆಯಲ್ಲಿ ಅಪಾರವಾದ ಬೇಡಿಕೆಯಿದೆ. ಈಗ ರಾಂಚಿಯಿಂದ ನೇರವಾಗಿ ದುಬೈಗೆ ಹಾರುವ ಮೂಲಕ ಝಾರ್ಖಂಡ್ ರೈತರಿಗೆ ದುಬೈನಲ್ಲಿ ಮಾರುಕಟ್ಟೆಗೆ ವೇದಿಕೆ ಒದಗಿಸಲು ಈ ಮೂಲಕ ಧೋನಿ ಕೈಜೋಡಿಸಿದ್ದಾರೆ.

This News Article is a Copy of MYKHEL