ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

02-01-21 03:03 pm       Headline Karnataka News Network   ಕ್ರೀಡೆ

ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(48) ಹೃದಯಾಘಾತಕ್ಕೆ ಒಳಗಾಗಿದ್ದಾರೆ.

ಕೊಲ್ಕತಾ, ಜ.2: ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(48) ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಅವರನ್ನು ಕೊಲ್ಕತಾದಲ್ಲಿ ವುಡ್ ಲ್ಯಾಂಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೊಲ್ಕತಾದ ತನ್ನ ಮನೆಯಲ್ಲಿ ಗಂಗೂಲಿ ಜಿಮ್ ಅಭ್ಯಾಸದಲ್ಲಿ ನಿರತರಾಗಿದ್ದ ವೇಳೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ದೇಹಸ್ಥಿತಿ ಸ್ಥಿರವಾಗಿದೆ. ವೈದ್ಯರು ಆಂಜಿಯೋ ಪ್ಲಾಸ್ಟ್ ಮಾಡಲು ಸೂಚಿಸಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

ಸೌರವ್ ಗಂಗೂಲಿಗೆ ಹೃದಯಾಘಾತ ಆಗಿರುವುದನ್ನು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಟ್ವೀಟ್ ಮೂಲಕ ದೃಢಪಡಿಸಿದ್ದಾರೆ. ಸೌರವ್ ಜೊತೆಗೆ ಕ್ರಿಕೆಟ್ ಆಡುತ್ತಿದ್ದ ವಿರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ ಸೇರಿದಂತೆ ಹಲವರು ದಾದಾ ಬೇಗನೆ ಹುಷಾರಾಗಿ ಬರಲಿ ಎಂದು ಹಾರೈಸಿ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗಷ್ಟೆ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಮಾಜಿ ಸಚಿವ ಅರುಣ್ ಜೈಟ್ಲಿಯವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಗಂಗೂಲಿ ಭಾಗವಹಿಸಿದ್ದರು. ಆಬಳಿಕ ಹೊಸ ವರ್ಷದ ಸಂಭ್ರಮಕ್ಕೆಂದು ಎರಡು ದಿನಗಳ ಹಿಂದಷ್ಟೇ ಕೊಲ್ಕತ್ತಾಗೆ ಮರಳಿದ್ದರು. ಕೊಲ್ಕತ್ತಾದಲ್ಲಿ ಈಡನ್ ಗಾರ್ಡನ್ ಮೈದಾನದ ಸಿದ್ಧತೆಯ ಬಗ್ಗೆ ಪರಿಶೀಲನೆ ನಡೆಸಿದ್ದರು. ಕೊಲ್ಕತ್ತಾದ ಮೈದಾನ ಸೈಯದ್ ಮುಷ್ಕಾತ್ ಆಲಿ ಟ್ರೋಫಿ ಟೂರ್ನಮೆಂಟ್ ಹಿನ್ನೆಲೆಯಲ್ಲಿ ಸಿದ್ಧತೆಯಲ್ಲಿ ತೊಡಗಿದೆ. ಇದರ ಉಸ್ತುವಾರಿಯನ್ನು ಖುದ್ದಾಗಿ ಸೌರವ್ ಗಂಗೂಲಿ ಗಮನಿಸುತ್ತಿದ್ದರು.

BCCI President and former India captain Sourav Ganguly was admitted to a hospital in his hometown Kolkata on Saturday with a "mild cardiac arrest"