ಟೀಮ್ ಇಂಡಿಯಾ ಪಾಳಯಕ್ಕೆ ನಿರಾಳತೆ: ಎಲ್ಲಾ ಆಟಗಾರರ ಕೊವಿಡ್ ವರದಿ ನೆಗೆಟಿವ್

04-01-21 03:19 pm       Source: MYKHEL   ಕ್ರೀಡೆ

ಟೀಮ್ ಇಂಡಿಯಾ ಎಲ್ಲಾ ಆಟಗಾರರ ಕೊರೊನಾ ವೈರಸ್ ಪರೀಕ್ಷೆಯ ವರದಿ ಬಂದಿದ್ದು ಎಲ್ಲಾ ಆಟಗಾರರ ವರದಿಯೂ ನೆಗೆಟಿವ್ ಬಂದಿದೆ.

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ವಿವಾದಕ್ಕೆ ಗುರಿಯಾಗಿದ್ದರು. ರೋಹಿತ್ ಶರ್ಮಾ ರಿಷಭ್ ಪಂತ್ ಸೇರಿದಂತೆ ಐವರು ಆಟಗಾರರು ಜೈವಿಕ ಸುರಕ್ಷತಾ ವಲಯವನ್ನು ಬೇಧಿಸಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿತ್ತು. ಈ ಮಧ್ಯೆ ಟೀಮ್ ಇಂಡಿಯಾ ಎಲ್ಲಾ ಆಟಗಾರರ ಕೊರೊನಾ ವೈರಸ್ ಪರೀಕ್ಷೆಯ ವರದಿ ಬಂದಿದ್ದು ಎಲ್ಲಾ ಆಟಗಾರರ ವರದಿಯೂ ನೆಗೆಟಿವ್ ಬಂದಿದೆ.

ಭಾನುವಾರ ಟೀಮ್ ಇಂಡಿಯಾದ ಆಟಗಾರರು ಹಾಗೂ ಸಿಬ್ಬಂಧಿಗಳ ಕೊವಿಡ್ ಪರೀಕ್ಷೆಯನ್ನು ನಡೆಸಲಾಗಿತ್ತು. ಇದರಲ್ಲಿ ಜೈವಿಕ ವಲಯ ಬೇಧಿಸಿರುವ ಅನುಮಾನಗಳಿರುವ ಆಟಗಾರರಾದ ರೋಹಿತ್ ಶರ್ಮಾ, ರಿಷಭ್ ಪಂತ್, ಶುಭ್ಮನ್ ಗಿಲ್, ನವ್‌ದೀಪ್ ಸೈನಿ ಹಾಗೂ ಪೃಥ್ವಿ ಶಾ ವರದಿಯೂ ಸೇರಿದ್ದು ಎಲ್ಲರೂ ಕೊರೊನಾ ವೈರಸ್‌ ನೆಗೆಟಿವ್ ವರದಿಯನ್ನು ಹೊಂದಿದ್ದಾರೆ.

ಮೆಲ್ಬರ್ನ್‌ನ ಹೋಟೆಲ್‌ನಲ್ಲಿ ಟೀಮ್ ಇಂಡಿಯಾದ ಐವರು ಆಟಗಾರರು ಆಹಾರವನ್ನು ಸೇವಿಸುತ್ತಿದ್ದ ವಿಚಾರವಾಗಿ ಅನಗತ್ಯ ವಿವಾದವೊಂದು ಎದ್ದಿತ್ತು. ಅಭಿಮಾನಿಯೋರ್ವ ಟ್ವಿಟ್ಟರ್‌ನಲ್ಲಿ ಟೀಮ್ ಇಂಡಿಯಾದ ಐವರು ಆಟಗಾರರು ಸೇವಿಸಿದ ಆಹಾರದ ಹೋಟೆಲ್ ಬಿಲ್‌ಅನ್ನು ಪಾವತಿಸಿರುವುದಾಗಿಯೂ ಹಾಗೂ ರಿಷಬ್ ಪಂತ್ ತನ್ನನ್ನು ತಬ್ಬಿಕೊಂಡಿಉವುದಾಗಿಯೂ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದ. ಇದು ಕೊರೊನಾ ವೈರಸ್ ಜೈವಿಕ ವಲಯವನ್ನು ಬೇಧಿಸಿ ಆರೋಪಕ್ಕೆ ಕಾರಣವಾಗಿದೆ.

ಈ ಆರೋಪವನ್ನು ಟೀಮ್ ಇಂಡಿಯಾ ತಳ್ಳಿ ಹಾಕಿದೆ. ಆದರೆ ವಿವಾದಕ್ಕೆ ಕಾರಣವಾದ ಅಭಿಮಾನಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು ರಿಷಭ್ ಪಂತ್ ತನ್ನನ್ನು ತಬ್ಬಿಕೊಂಡಿಲ್ಲ. ಉತ್ಸಾಹದಲ್ಲಿ ಆ ರೀತಿ ಸಾಮಾಜಿಕ ಜಾಲತಾಣದಲ್ಲಿ ನರೆದುಕೊಂಡಿದ್ದೆ. ನಾವು ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿದ್ದೆವು. ಆಗಿರುವ ಸಂವಹನ ಕೊರತೆಗೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾನೆ.

ಆದರೆ ಟೀಮ್ ಇಂಡಿಯಾದ ಐವರು ಆಟಗಾರರನ್ನು ಸದ್ಯ ಮುನ್ನೆಚ್ಚರಿಕಾ ಕ್ರಮವಾಗಿ ಪ್ರತ್ಯೇಕವಾಗಿರಿಸಿಕೊಳ್ಳಲಾಗಿದೆ. ಪ್ರಯಾಣದ ಸಂದರ್ಭದಲ್ಲಿ ಹಾಗೂ ತರಬೇತಿಯ ಸ್ಥಳದಲ್ಲೂ ಈ ಐವರು ಆಟಗಾರರು ಭಾರತೀಯ ಹಾಗೂ ಆಸ್ಟ್ರೇಲಿಯಾ ಆಟಗಾರರಿಂದ ಬೇರ್ಪಡಲಿದ್ದಾರೆ.

This News Article is a Copy of MYKHEL