ಗಂಗೂಲಿಯನ್ನು ಪರೀಕ್ಷಿಸಿದ ಡಾ.ದೇವಿ ಶೆಟ್ಟಿ, ಬುಧವಾರ ದಾದಾ ಆಸ್ಪತ್ರೆಯಿಂದ ಡಿಸ್ಚಾರ್ಜ್

05-01-21 04:59 pm       Source: MYKHEL Madhukara Shetty   ಕ್ರೀಡೆ

ಬುಧವಾರ ಅವರು ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಲಿದ್ದು ತಮ್ಮ ನಿವಾಸಕ್ಕೆ ಮರಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಲಘು ಹೃದಯಾಘಾತದಿಂದ ಕೊಲ್ಕತ್ತಾದ ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಇಂದು ಸೌರವ್ ಗಂಗೂಲಿ ದಾಖಲಾಗಿರುವ ವುಡ್‌ಲ್ಯಾಂಡ್ಸ್‌ ಆಸ್ಪತ್ರೆಗೆ ದೇಶದ ಖ್ಯಾತ ಹೃದ್ರೋಗ ತಜ್ಞ ಡಾ. ದೇವಿ ಶೆಟ್ಟಿ ಭೇಟಿ ನೀಡಿ ಸೌರವ್ ಗಂಗೂಲಿಯನ್ನು ಪರೀಕ್ಷಿಸಿದ್ದಾರೆ.

ಆ ಬಳಿಕ ಮಾತನಾಡಿದ ಹೃದ್ರೋಗ ತಜ್ಞ ಡಾ. ದೇವಿ ಶೆಟ್ಟಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಬುಧವಾರ ಅವರು ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಲಿದ್ದು ತಮ್ಮ ನಿವಾಸಕ್ಕೆ ಮರಳಲಿದ್ದಾರೆ ಎಂದು ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ಮಾಹಿತಿ ನೀಡಿದ್ದಾರೆ.

ಇದೀ ಸಂದರ್ಭದಲ್ಲಿ ವುಡ್‌ಲ್ಯಾಂಡ್ಸ್‌ ಆಸ್ಪತ್ರೆಯ ಮುಖ್ಯಸ್ಥೆ ಡಾ. ರೂಪಾಲಿ ಬಸು ಬುಧವಾರ ಸೌರವ್ ಗಂಗೂಲಿ ತಮ್ಮ ನಿವಾಸಕ್ಕೆ ಮರಳಲಿದ್ದು ಅದಾದ ಬಳಿಕವೂ ಅವರ ಆರೋಗ್ಯದ ಮೇಲೆ ನಿತ್ಯವೂ ವೈದ್ಯರು ನಿಗಾ ವಹಿಸಲಿದ್ದಾರೆ. ಮುಂದಿನ ಎರಡು ಮೂರು ವಾರಗಳಲ್ಲಿ ಸೌರವ್ ಗಂಗೂಲಿ ಮುಂದಿನ ವೈದ್ಯಕೀಯ ಕ್ರಮಗಳಿಗೆ ಸಿದ್ಧರಾಗಲಿದ್ದಾರೆ ಎಂದಿದ್ದಾರೆ. ಸೋಮವಾರ ಕೇಂದ್ರ ಸಚಿವ ಅನುರಾಗ್ ಠಾಕೂರ್ ವುಡ್‌ಲ್ಯಾಂಡ್ಸ್‌ ಆಸ್ಪತ್ರೆಗೆ ಭೆಟಿ ನೀಡಿ ಸೌರವ್ ಗಂಗೂಲಿಯವರ ಆರೋಗ್ಯವನ್ನು ವಿಚಾರಿಸಿದ್ದರು. ಬಳಿಕ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ರಾಜ್ಯಸಭಾ ಸದಸ್ಯ ಸ್ವಪ್ನ್ ದಾಸ್ ಗುಪ್ತ, ಹಿರಿಯ ಕಾಂಗ್ರೆಸ್ ಮುಖಂಡ ಅಬ್ದುಕ್ ಮನ್ನನ್ ಕೂಡ ಆಸ್ಪತ್ರೆಗೆ ಭೆಟಿ ನೀಡಿದ್ದರು.

ಇದಕ್ಕೂ ಮುನ್ನ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಸೌರವ್ ಗಂಗೂಲಿ ಜೊತೆಗೆ ಮಾತನಾಡಿದ್ದು ಶೀಘ್ರ ಚೇತರಿಕೆಗೆ ಶುಭ ಹಾರೈಸಿದ್ದರು. ಬಳಿಕ ಪತ್ನಿ ಡೋನಾ ಗಂಗೂಲಿ ಜೊತೆಗೂ ಪ್ರಧಾನಿ ಮಾತನಾಡಿದ್ದಾರೆ. ಶನಿವಾರ ಮಧ್ಯಾಹ್ನದ ವೇಳೆ ಮನೆಯ ಜಿಮ್‌ನಲ್ಲಿದ್ದ ಸಂದರ್ಭದಲ್ಲಿ ಸೌರವ್ ಗಂಗೂಲಿಗೆ ಹೃದಯದಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದೇ ಅವರಿಗೆ ಆ್ಯಂಜಿಯೋಪ್ಲಾಸ್ಟಿಯನ್ನು ಕೂಡ ನಡೆಸಲಾಯಿತು.

This News Article is a Copy of MYKHEL