ಕ್ವೀನ್ಸ್‌ಲ್ಯಾಂಡ್‌ನಲ್ಲಿ ಕಠಿಣ ಲಾಕ್‌ಡೌನ್ ಘೋಷಣೆ: ಬ್ರಿಸ್ಬೇನ್ ಟೆಸ್ಟ್‌ ಮತ್ತಷ್ಟು ಅನುಮಾನ

08-01-21 03:27 pm       Source: MYKHEL   ಕ್ರೀಡೆ

ಬ್ರಿಸ್ಬೇನ್‌ ಖ್ಯಾತ ಗಾಲೆ ಕ್ರೀಡಾಂಗಣದಲ್ಲಿ ನಾಲ್ಕನೇ ಟೆಸ್ಟ್ ನಡೆಸಿಯೇ ತೀರುವ ಇಂಗಿತ ಹೊಂದಿರುವ ಕ್ರಿಕೆಟ್ ಆಸ್ಟ್ರೇಲಿಯಾಗೆ ಮತ್ತೊಂದು ಕಂಟಕ ಉಂಟಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ವಿಚಾರವಾಗಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿದೆ. ಬ್ರಿಸ್ಬೇನ್‌ ಖ್ಯಾತ ಗಾಲೆ ಕ್ರೀಡಾಂಗಣದಲ್ಲಿ ನಾಲ್ಕನೇ ಟೆಸ್ಟ್ ನಡೆಸಿಯೇ ತೀರುವ ಇಂಗಿತ ಹೊಂದಿರುವ ಕ್ರಿಕೆಟ್ ಆಸ್ಟ್ರೇಲಿಯಾಗೆ ಮತ್ತೊಂದು ಕಂಟಕ ಉಂಟಾಗಿದೆ. ಸರ್ಕಾರ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಕಠಿಣ ಲಾಕ್‌ಡೌನ್ ಘೋಷಿಸಿದ್ದು ಬ್ರಿಸ್ಬೇನ್ ಟೆಸ್ಟ್ ಪಂದ್ಯದ ಮೇಲೆ ಮತ್ತೊಂದು ಕರಿಛಾಯೆ ಮೂಡಿದಂತಾಗಿದೆ.

ಬ್ರಿಸ್ಬೇನ್‌ನಲ್ಲಿ ಕೊರೊನಾ ವೈರಸ್‌ ಹೊಸ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿದೆ. ಹೀಗಾಗಿ ಕ್ವೀನ್ಸ್‌ಲ್ಯಾಂಡ್ ರಾಜ್ಯದಲ್ಲಿ ಕನಿಷ್ಠ ಮೂರು ದಿನಗಳ ಕಾಲ ಕಠಿಣ ಲಾಕ್‌ಡೌನ್ ಘೋಷಣೆಯಾಗಿದೆ. ಇದಕ್ಕೂ ಮೊದಲೇ ಬ್ರಿಸ್ಬೇನ್‌ನಲ್ಲಿ ಕಠಿಣ ಕ್ವಾರಂಟೈನ್ ನಿಯಮಗಳು ಇರುವ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಬ್ರಿಸ್ಬೇನ್‌ಗೆ ತೆರಳಲು ಹಿಂದೇಟು ಹಾಕುತ್ತಿದೆ ಎಂದು ವರದಿಯಾಗಿತ್ತು.

ಜನವರಿ 15ರಿಂದ ಆರಂಭವಾಗಲಿರುವ ಸರಣಿಯ ಅಂತಿಮ ಹಾಗೂ ನಾಲ್ಕನೇ ಟೆಸ್ಟ್ ಪಂದ್ಯದ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಕ್ವೀನ್ಸ್‌ಲ್ಯಾಂಡ್ ಸರ್ಕಾರದ ಕಠಿಣ ಕ್ವಾರಂಟೈನ್ ಕಾರಣದಿಂದಾಗಿ ಗಾಲೆಯಲ್ಲಿ ಅಂತಿಮ ಪಂದ್ಯ ನಡೆಯದಿದ್ದಲ್ಲಿ ಮೂರನೇ ಪಂದ್ಯದ ಆತಿಥ್ಯವನ್ನು ವಹಿಸಿಕೊಂಡಿರುವ ಸಿಡ್ನಿ ಕ್ರಿಕೆಟ್ ಮೈದಾನದಲ್ಲೇ ಅಂತಿಮ ಪಂದ್ಯವೂ ನಡೆಯುವ ಸಾಧ್ಯತೆಯಿದೆ. ಬ್ರಿಸ್ಬೇನ್‌ನಲ್ಲಿ ಈಗ ನಿಗದಿಯಾಗಿರುವ ಲಾಕ್‌ಡೌನ್ ಅಂತ್ಯವಾದ ನಂತರ ಮುಂದಿನ ಮಂಗಳವಾರ ಎರಡು ತಂಡಗಳು ಕೂಡ ಬ್ರಿಸ್ಬೇನ್‌ಗೆ ತೆರಳಲು ದಿನಾಂಕ ನಿಗದಿಯಾಗಿದೆ. ಕ್ವಾರಂಟೈನಿ ಹೋಟೆಲ್‌ನಲ್ಲಿನ ಕ್ಲೀನರ್ ಓರ್ವ ಬ್ರಿಟನ್‌ನಲ್ಲಿ ಪತ್ತೆಯಾಗಿರುವ ರೂಪಾಂತರಿ ವೈರಸ್‌ಗೆ ತುತ್ತಾಗಿರುವುದು ಬೆಳಕಿಗೆ ಬಂದಿದ್ದು ಕ್ವೀನ್ಸ್‌ಲ್ಯಾಂಡ್ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲು ಕಾರಣವಾಗಿದೆ.

ಈ ಮಧ್ಯೆ ಬಲ್ಲ ಮಾಹಿತಿಯ ಪ್ರಕಾರ ಬಿಸಿಸಿಐ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ಅರ್ಲ್ ಎಡ್ಡಿಂಗ್ಸ್‌ಗೆ ಪತ್ರ ಬರೆದಿದ್ದು ಪ್ರವಾಸದ ವಿಧಾನಗಳು, ಕಠಿಣ ಕ್ವಾರಂಟೈನ್ ನಿಯಮಗಳ ಸಡಿಲಿಕೆಯ ಬಗ್ಗೆ ಬರೆಯಲಾಗಿದೆ ಎನ್ನಲಾಗಿದೆ. 'ಚರ್ಚೆಗಳು ಇನ್ನೂ ನಡೆಯುತ್ತಿವೆ ಆದರೆ ಇಂದು ಬಿಸಿಸಿಐ ತನ್ನ ಆಟಗಾರರಿಗೆ ಬ್ರಿಸ್ಬೇನ್‌ನಲ್ಲಿ ಪಂದ್ಯವನ್ನು ನಡೆಸಬೇಕಾದರೆ ಕಠಿಣ ಕ್ವಾರಂಟೈನ್ ಅನ್ನು ಸಡಿಲಿಸುವಂತೆ ಕೋರಿ ಔಪಚಾರಿಕವಾಗಿ ಪತ್ರವನ್ನು ಕಳುಹಿಸಿದೆ' ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

This News Article is a Copy of MYKHEL