ನಾರ್ತ್‌ಈಸ್ಟ್‌ ವಿರುದ್ಧ ರೋಚಕ ಜಯದೊಂದಿಗೆ ಟಾಪ್‌ 4ಗೆ ಜಿಗಿದ ಹೈದರಾಬಾದ್

09-01-21 03:58 pm       Source: MYKHEL   ಕ್ರೀಡೆ

ಹೈದರಾಬಾದ್‌ ಎಫ್‌ಸಿ ತಂಡ ಸೂಪರ್‌ ಲೀಗ್‌ ಫುಟ್ಬಾಲ್ ಟೂರ್ನಿಯ 51ನೇ ಲೀಗ್‌ ಪಂದ್ಯದಲ್ಲಿ ಅಪಾಯಕಾರಿ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡವನ್ನು ಬಗ್ಗುಬಡಿದಿದೆ.

ಗೋವಾ: ತನ್ನ ಶ್ರೇಷ್ಠ ಲಯ ಕಂಡುಕೊಂಡಂತ್ತಿರುವ ಹೈದರಾಬಾದ್‌ ಎಫ್‌ಸಿ ತಂಡ ಇಲ್ಲಿ ನಡೆಯುತ್ತಿರುವ ಪ್ರಸಕ್ತ ಸಾಲಿನ ಇಂಡಿಯನ್ ಸೂಪರ್‌ ಲೀಗ್‌ ಫುಟ್ಬಾಲ್ ಟೂರ್ನಿಯ 51ನೇ ಲೀಗ್‌ ಪಂದ್ಯದಲ್ಲಿ ಅಪಾಯಕಾರಿ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡವನ್ನು ಬಗ್ಗುಬಡಿದಿದೆ. ಇಲ್ಲಿನ ತಿಲಕ್‌ ಮೈದಾನ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಹೈ-ವೋಲ್ಟೇಜ್‌ ಪಂದ್ಯದಲ್ಲಿ ಹೈದರಾಬಾದ್‌ ಎಫ್‌ಸಿ ತಂಡ ಒತ್ತಡ ಮೆಟ್ಟಿನಿಂತು 4-2 ಗೋಲ್‌ಗಳಿಂದ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡವನ್ನು ಮಣಿಸಿ ಸಂಪೂರ್ಣ 3 ಅಂಕಗಳನ್ನು ತನ್ನದಾಗಿಸಿಕೊಂಡಿತು.

ಈ ಅಮೋಘ ಜಯದೊಂದಿಗೆ ಹೈದರಾಬಾದ್‌ ತಂಡ ಇದೀಗ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಆಡಿದ ಒಟ್ಟು 10 ಪಂದ್ಯಗಳಿಂದ ಹೈದರಾಬಾದ್‌ ತಂಡ 15 ಅಂಕಗಳನ್ನು ಕಲೆಹಾಕುವಲ್ಲಿ ಸಫಲವಾಗಿದ್ದು, 6ನೇ ಸ್ಥಾನದಿಂದ 3ನೇ ಸ್ಥಾನಕ್ಕೇರಿದೆ. ಮತ್ತೊಂದೆಡೆ ಈ ಪಂದ್ಯಕ್ಕೂ ಮುನ್ನ 7ನೇ ಸ್ಥಾನದಲ್ಲಿದ್ದ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡ 10 ಪಂದ್ಯಗಳಿಂದ 11 ಅಂಕಗಳಿಗೆ ತೃಪ್ತಿಪಟ್ಟಿದ್ದು, ತನ್ನ ಸ್ಥಾನದಿಂದ ಅಲುಗಾಡದಂತೆ ಉಳಿದುಕೊಂಡಿದೆ.



ಗೋಲ್‌ಗಳಿಗೆ ಸಾಕ್ಷಿಯಾದ ರೋಚಕ ಪಂದ್ಯ

ಇನ್ನು ಒಟ್ಟಾರೆ 5 ಗೋಲ್‌ಗಳಿಗೆ ಸಾಕ್ಷಿಯಾದ ರೋಚಕ ಪಂದ್ಯದಲ್ಲಿ ಹೈದರಾಬಾದ್‌ ಎಫ್‌ಸಿ ತಂಡದ ಪರ ಸ್ಟ್ರೈಕರ್‌ ಲಿಸ್ಟನ್‌ ಕೊಲಾಕೊ (85ನೇ ನಿ. ಮತ್ತು 90+4ನೇ ನಿಮಿಷ) ಡಬಲ್‌ ಗೋಲ್‌ ಬಾರಿಸುವ ಮೂಲಕ ಭರ್ಜರಿ ಗೆಲುವಿನ ರೂವಾರಿ ಎನಿಸಿದರೆ, ಇದಕ್ಕೂ ಮುನ್ನ ಪಂದ್ಯದ ಪ್ರಥಮಾರ್ಧದಲ್ಲೇ ಸ್ಟ್ರೈಕರ್‌ ಅರಿದಾನೆ ಸ್ಯಾಂಟಾನ (3ನೇ ನಿಮಿಷ) ಮತ್ತು ಮಿಡ್‌ಫೀಲ್ಡರ್‌ ಜೊಯೆಲ್ ಚಿಯಾನಿಸ್ (36) ಮೇಲುಗೈ ಒದಗಿಸಿದ್ದರು.



ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದ ನಾರ್ತ್‌ಈಸ್ಟ್‌

ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡದ ಪರ ಪ್ರಥಮಾರ್ಧದ ಅಂತ್ಯದ ಹೊತ್ತಿಗೆ ಮಿಡ್‌ಫೀಲ್ಡರ್‌ ಫೆಡೆರಿಕೊ ಗಲೇಗೊ (45ನೇ ನಿ.) ಪೆನಾಲ್ಟಿ ಸ್ಪಾಟ್‌ ಕಿಕ್‌ ಮೂಲಕ ಮೊದಲ ಗೋಲ್‌ ತಂದುಕೊಟ್ಟರೆ, ಹೆಚ್ಚುವರಿ ಸಮಯದಲ್ಲಿ ಡಿಫೆಂಡರ್‌ಬೆನ್ಜಮಿನ್ ಲಾಂಬೊಟ್ (45+2ನೇ ನಿ.) ಎರಡನೇ ಗೋಲ್‌ ತಂದುಕೊಟ್ಟರು. ಆದರೆ, 2ನೇ ಅವಧಿಯಲ್ಲಿ ಬಿಟ್ಟುಕೊಟ್ಟ 2 ಗೋಲ್‌ ಪರಿಣಾಮ ನಾರ್ತ್‌ಈಸ್ಟ್‌ ತಂಡ ಸೋಲಿನ ಕಡಲಲ್ಲಿ ಮುಳುಗುವಂತ್ತಾಯಿತು.



17 ಬಾರಿ ಗೋಲ್‌ ಗಳಿಕೆಯ ಅವಕಾಶ

ಪಂದ್ಯದಲ್ಲಿ ಆಕ್ರಮಣಕಾರಿ ಆಟವಾಡಿ 17 ಬಾರಿ ಗೋಲ್‌ ಗಳಿಕೆಯ ಅವಕಾಶ ಸೃಷ್ಟಿಸಿದ್ದ ನಾರ್ತ್‌ಈಸ್ಟ್‌ ತಂಡ 8 ಬಾರಿ ಚೆಂಡನ್ನು ಗುರಿಯತ್ತ ಕಳುಹಿಸಿತ್ತು. ಆದರೆ, ಯಶಸ್ಸು ಲಭ್ಯವಾಗಿದ್ದು 2 ಬಾರಿ ಮಾತ್ರ. ಮತ್ತೊಂದೆಡೆ ಹೈದರಾಬಾದ್‌ ತಂಡ 13 ಅವಕಾಶಗಳಲ್ಲಿ 5 ಬಾರಿ ಚೆಂಡನ್ನು ಗುರಿಯತ್ತ ಕಳುಹಿಸಿ 4 ಗೋಲ್‌ಗನ್ನು ದಕ್ಕಿಸಿಕೊಳ್ಳುವಲ್ಲಿ ಸಫಲವಾಗಿ ಗೆಲುವಿನ ನಗೆ ಬೀರಿತು.

This News Article is a Copy of MYKHEL