ಭಾರತ vs ಆಸ್ಟ್ರೇಲಿಯಾ: ಟೆಸ್ಟ್‌ನಲ್ಲೂ ಸ್ಮರಣೀಯ ಆರಂಭ ಮಾಡಿದ ಟಿ ನಟರಾಜನ್

15-01-21 03:20 pm       Source: MYKHEL Madhukara Shetty   ಕ್ರೀಡೆ

300ನೇ ಆಟಗಾರನಾಗಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆಯನ್ನು ಮಾಡಿರುವ ಟಿ ನಟರಾಜನ್ ಮೊದಲ ದಿನದಾಟದಲ್ಲಿ ಅದ್ಭುತವಾಗಿ ಬೌಲಿಂಗ್ ಪ್ರದರ್ಶನ ನೀಡಿ ಮಿಂಚಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ 300ನೇ ಆಟಗಾರನಾಗಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆಯನ್ನು ಮಾಡಿರುವ ಟಿ ನಟರಾಜನ್ ಮೊದಲ ದಿನದಾಟದಲ್ಲಿ ಅದ್ಭುತವಾಗಿ ಬೌಲಿಂಗ್ ಪ್ರದರ್ಶನ ನೀಡಿ ಮಿಂಚಿದ್ದಾರೆ. ಈ ಮೂಲಕ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲೂ ಸ್ಮರಣೀಯ ಆರಂಭವನ್ನು ಪಡೆದುಕೊಂಡಿದ್ದಾರೆ.

ಟೀಮ್ ಇಂಡಿಯಾದ ಅನುಭವಿ ವೇಗಿ ಜಸ್ಪ್ರೀತ್ ಬೂಮ್ರಾ ಗಯಗೊಂಡಿರುವ ಕಾರಣ ಟಿ ನಟರಾಜನ್‌ಗೆ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ದೊರೆಯಿತು. ಈ ಅವಕಾಶವನ್ನು ನಟರಾಜನ್ ಅದ್ಭುತವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ದಿನ ಆಸ್ಟ್ರೇಲಿಯಾ ಕಳೆದುಕೊಂಡ ಐದು ವಿಕೆಟ್‌ಗಳಲ್ಲಿ ನಟರಾಜನ್ 2 ವಿಕೆಟ್ ಕಿತ್ತು ಮಿಂಚಿದರು.

ಟಿ ನಟರಾಜನ್ ಪಡೆದ ಎರಡು ವಿಕೆಟ್‌ಗಳು ಕೂಡ ಭಾರತದ ಪಾಲಿಗೆ ಬಹಳ ಅಮೂಲ್ಯವಾಗಿತ್ತು. ಶತಕದ ಜೊತೆಯಾಟವನ್ನು ಆಡಿ ಮುನ್ನುಗ್ಗುತ್ತಿದ್ದ ಮರ್ನಾಸ್ ಲ್ಯಾಬುಶೇನ್ ಹಾಗೂ ಮ್ಯಾಥ್ಯೂ ವೇಡ್ ಜೋಡಿಯನ್ನು ಬೇರ್ಪಡಿಸಲು ಭಾರತೀಯ ಬೌಲಿಂಗ್ ಪಡೆ ಬೆವರುಹರಿಸುತ್ತಿದ್ದಾಗ ನಟರಾಜನ್ ತಂಡಕ್ಕೆ ಬಹುದೊಡ್ಡ ಬ್ರೇಕ್ ಒದಗಿಸಿದರು. 63ನೇ ಓವರ್‌ನಲ್ಲಿ ನಟರಾಜನ್ 45 ರನ್ ಗಳಿಸಿ ಮುನ್ನುಗ್ಗುತ್ತಿದ್ದಾಗ ಮ್ಯಾಥ್ಯೂ ವೇಡ್ ಅವರನ್ನು ಬಲಿ ಪಡೆದರು. ಮಿಡ್‌ಆನ್‌ನಲ್ಲಿ ಶಾರ್ದೂಲ್ ಠಾಕೂರ್‌ಗೆ ಸುಲಭ ಕ್ಯಾಚ್ ನೀಡುವ ಮೂಲಕ ವೇಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ನಟರಾಜನ್‌ಗೆ ಮೊದಲ ಬಲಿಯಾಗಿ ನಿರ್ಗಮಿಸಿದರು.

ಅದಾದ ಬಳಿಕ ಶತಕವನ್ನು ಸಿಡಿಸಿ ಟೀಮ್ ಇಂಡಿಯಾಗೆ ಕಗ್ಗಂಟಾಗಿದ್ದ ಮಾರ್ನಸ್ ಲ್ಯಾಬುಶೇನ್ ಕೂಡ ನಟರಾಜನ್ ಎಸೆತವನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗದೆ ಕೀಪರ್ ರಿಷಭ್ ಪಂತ್‌ಗೆ ಕ್ಯಾಚ್ ನೀಡಿದರು. 108 ರನ್‌ಗಳಿಗೆ ಲಾಬುಶೇನ್ ತಮ್ಮ ಇನ್ನಿಂಗ್ಸ್ ಅಂತ್ಯಗೊಳಿಸಿದರು. ಹೀಗೆ ಮೊದಲ ದಿನದಲ್ಲಿ ಎರಡು ದೊಡ್ಡ ವಿಕೆಟ್ ಪಡೆಯುವಲ್ಲಿ ಟಿ ನಟರಾಜನ್ ಯಶಸ್ವಿಯಾಗಿದ್ದಾರೆ. ಈ ಮೂಲಕ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ನಟರಾಜನ್ ಪದಾರ್ಪಣಾ ಪಂದ್ಯದಲ್ಲೇ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

This News Article is a Copy of MYKHEL