ಸ್ಪಿನ್ ಮಾಂತ್ರಿಕ ಕನ್ನಡಿಗ ಬಿಎಸ್ ಚಂದ್ರಶೇಖರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು

18-01-21 03:32 pm       Source: MYKHEL Madhukara Shetty   ಕ್ರೀಡೆ

ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಸ್ಪಿನ್ ಬೌಲರ್ ದಿಗ್ಗಜ ಆಟಗಾರ ಬಿಎಸ್ ಚಂದ್ರಶೇಖರ್ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಸ್ಪಿನ್ ಬೌಲರ್ ದಿಗ್ಗಜ ಆಟಗಾರ ಬಿಎಸ್ ಚಂದ್ರಶೇಖರ್ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಎಸ್ ಚಂದ್ರಶೇಖರ್ ಅವರಿಗೆ 75 ವರ್ಷ ವಯಸ್ಸಾಗಿದ್ದು ಬೆಂಗಳೂರಿನ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಬಿಎಸ್ ಚಂದ್ರ ಶೇಖರ್ ಅವರ ಆರೋಗ್ಯದ ಬಗ್ಗೆ ಆಸ್ಪತ್ರೆಯ ಮೂಲಗಳು ಮಾಹಿತಿಯನ್ನು ನೀಡಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಂದ್ರಶೇಖರ್ ಅವರ ಆರೋಗ್ಯ ಸ್ಥಿರವಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಿಎಸ್ ಚಂದ್ರಶೇಖರ್ 1960-70ರ ದಶಕದಲ್ಲಿ ಭಾರತೀಯ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿದ್ದರು. ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಿದ್ದರು. ಇಎಎಸ್ ಪ್ರಸನ್ನ, ಬಿಷನ್ ಸಿಂಗ್ ಬೇಡಿ ಹಾಗೂ ಎಸ್ ವೆಂಕಟ ರಾಘವನ್ ಅವರ ಜೊತೆಗೆ ಬಿಎಸ್ ಚಂದ್ರ ಶೇಖರ್ ಭಾರತ ತಂಡದ ದೊಡ್ಡ ಅಸ್ತ್ರವಾಗಿದ್ದರು. ಚಂದ್ರ ಶೇಖರ್ 16 ವರ್ಷಗಳ ಕಾಲ ಅಂತಾರಾಷ್‌ಟರೀಯ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಅವಧಿಯಲ್ಲಿ ಅವರು 58 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು 242 ವಿಕೆಟ್‌ಗಳನ್ನು ಕಿತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಳಿಸಿದ ರನ್‌ಗಿಂತ ಅಧಿಕ ವಿಕೆಟ್ ಪಡೆದ ವಿಶ್ವದ ಕೇವಲ ಇಬ್ಬರೇ ಆಟಗಾರರ ಪೈಕಿ ಚಂದ್ರ ಶೇಖರ್ ಕೂಡ ಒಬ್ಬರಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಚಂದ್ರ ಶೇಖರ್ ಒಟ್ಟಾರೆ 167 ರನ್ ಗಳಿಸಿದ್ದಾರೆ.

1972ರಲ್ಲಿ ಚಂದ್ರ ಶೇಖರ್ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. 2002ರಲ್ಲಿ ವಿಸ್ಡನ್‌ನ "ಶತಮಾನದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ" ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಬಿಎಸ್ ಚಂದ್ರಶೇಖರ್ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ಪ್ರೇಮಿಗಳು ಅವರ ಶೀಘ್ರ ಚೇತರಿಕೆಗಾಗಿ ಹಾರೈಸುತ್ತಿದ್ದಾರೆ.

This News Article is a Copy of MYKHEL