ಆನ್ ಲೈನ್ ರಮ್ಮಿ ಆಡಿ ಎಂದ ವಿರಾಟ್ ಕೊಹ್ಲಿಗೆ ಕೋರ್ಟ್ ನೋಟಿಸ್

27-01-21 03:15 pm       Source: MYKHEL Mahesh Malnad   ಕ್ರೀಡೆ

ಆನ್ ಲೈನ್ ಜೂಜು ಪರ ಪ್ರಚಾರ ಕೈಗೊಂಡ ಅನೇಕ ಸೆಲೆಬ್ರಿಟಿಗಳಿಗೆ ಮತ್ತೊಮ್ಮೆ ತೊಂದರೆ ಆರಂಭವಾಗಿದೆ.

ತಿರುವನಂತಪುರಂ, ಜನವರಿ 27: ಆನ್ ಲೈನ್ ಜೂಜು ಪರ ಪ್ರಚಾರ ಕೈಗೊಂಡ ಅನೇಕ ಸೆಲೆಬ್ರಿಟಿಗಳಿಗೆ ಮತ್ತೊಮ್ಮೆ ತೊಂದರೆ ಆರಂಭವಾಗಿದೆ. ಮದ್ರಾಸ್ ಹೈಕೋರ್ಟ್ ನಂತರ ಕೇರಳ ಹೈಕೋರ್ಟಿನಿಂದ ಬುಧವಾರದಂದು ಕ್ರಿಕೆಟರ್ ವಿರಾಟ್ ಕೊಹ್ಲಿ, ನಟಿ ತಮನ್ನಾ ಭಾಟಿಯಾ, ನಟ ಅಜು ವರ್ಗೀಸ್ ಅವರಿಗೆ ನೋಟಿಸ್ ಜಾರಿಯಾಗಿದೆ.

ಐಪಿಎಲ್ ಸಂದರ್ಭದಲ್ಲಿ ಆನ್ಲೈನ್ ಜೂಜು ಪ್ರಚಾರ ಮಾಡುತ್ತಿರುವ ಈ ಸೆಲೆಬ್ರಿಟಿಗಳಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿವೆ ಸಾವು ನೋವು ಸಂಭವಿಸಿದೆ. ಆಪ್ ಆಧಾರಿತ ಜೂಜು ನಿಲ್ಲಿಸಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿತ್ತು. ತ್ರಿಶ್ಶೂರ್ ಮೂಲದ ಪಾಲಿ ವರ್ಗೀಸ್ ಎಂಬುವರು ಆನ್ ಲೈನ್ ರಮ್ಮಿ ನಿಷೇಧ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಿಚಾರಣೆ ನಡೆಸಿದೆ.

ಆನ್ಲೈನ್ ಜೂಜು ಪರ ಪ್ರಚಾರ ಮಾಡುವ ಕ್ರಿಕೆಟರ್ಸ್ , ನಟ, ನಟಿಯರ ವಿರುದ್ಧದ ಈ ಪಿಐಎಲ್ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಎಲ್ಲರಿಗೂ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಈ ಬಗ್ಗೆ ವರದಿ ನೀಡುವಂತೆ ಪಿಣರಾಯಿ ವಿಜಯನ್ ಸರ್ಕಾರಕ್ಕೆ ಸೂಚಿಸಿದೆ. ಕೇರಳ ಗೇಮಿಂಗ್ ಕಾಯ್ದೆ 1960ರ ಅನ್ವಯ ಎಲ್ಲಾ ಬಗೆಯ ದುಡ್ಡು ಕಟ್ಟಿ ಆಡುವ ರಮ್ಮಿ ಗೇಮ್ ಮೇಲೆ ನಿಷೇಧ ಹೇರಬೇಕಾಗುತ್ತದೆ. ಆದರೆ, ಆನ್ ಲೈನ್ ಗೇಮ್ ರಮ್ಮಿ ಇದಕ್ಕೆ ಸೇರ್ಪಡೆಗೊಂಡಿಲ್ಲ, ಕಾಯ್ದೆ ತಿದ್ದುಪಡಿ ಮಾಡಿ ರಮ್ಮಿ ನಿಷೇಧ ಹೇರಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಬಹುಭಾಷಾ ನಟ ಸುದೀಪ್, ಪ್ರಕಾಶ್ ರಾಜ್, ರಾಣಾ ದಗ್ಗುಬಾಟಿ, ನಟಿ ತಮನ್ನಾ ಭಾಟಿಯಾ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮುಂತಾದವರಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೊಹ್ಲಿ ಹಾಗೂ ತಮನ್ನಾ ಮೊಬೈಲ್ ಪ್ರೀಮಿಯರ್ ಲೀಗ್ ಪರ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಸುದೀಪ್, ಗಂಗೂಲಿ ಮೈ11 ಸರ್ಕಲ್ ಪರ ಪ್ರಚಾರ ಮಾಡಿದ್ದಾರೆ. ಎಂಪಿಎಲ್ ಸದ್ಯ ಟೀಂ ಇಂಡಿಯಾದ ಕಿಟ್ ಪ್ರಾಯೋಜಕತ್ವ ಕೂಡಾ ಪಡೆದಿದೆ. ಫ್ಯಾಂಟಸಿ ಲೀಗ್ ಡ್ರೀಮ್11 ಸದ್ಯ ಐಪಿಎಲ್ ನ ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡಿದೆ.

This News Article is a Copy of MYKHEL