ಪುಣೆಯ ಅನಾಥಾಶ್ರಮದಿಂದ ಐಸಿಸಿ ಹಾಲ್ ಆಫ್ ಫೇಮ್‍ವರೆಗೆ- ಆಸೀಸ್ ಆಟಗಾರ್ತಿ ಲಿಸಾ ಸ್ಥಳೇಕರ್ ಜರ್ನಿ

27-08-20 10:34 pm       Headline Karnataka News Network   ಕ್ರೀಡೆ

ಲೀಸಾ ಸ್ಥಳೇಕರ್ ಈ ಪ್ರಶಸ್ತಿಯನ್ನು ಪಡೆದ 9ನೇ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

ಮೆಲ್ಬೊರ್ನ್: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹಾಲ್ ಆಫ್ ಫೇಮ್ ಕ್ರಿಕೆಟಿಗರ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಅತ್ಯಂತ ಗೌರವದ ಸಾಧನೆಯಾಗಿದೆ.

ಕ್ರಿಕೆಟ್‍ನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಮಂದಿಗೆ ಮಾತ್ರ ಈ ಗೌರವ ಪಡೆಯುವ ಅರ್ಹತೆ ಲಭಿಸುತ್ತದೆ. ಕಳೆದ ವಾರ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಲಿಸಾ ಸ್ಥಳೇಕರ್, ಪಾಕ್ ಮಾಜಿ ಆಟಗಾರ ಜಹೀರ್ ಅಬ್ಬಾಸ್, ದಕ್ಷಿಣ ಆಫ್ರಿಕಾ ಆಲ್‍ರೌಂಡರ್ ಜಾಕ್ ಕಾಲಿಸ್ ಅವರಿಗೆ ಐಸಿಸಿ ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡಿದೆ. ಲೀಸಾ ಸ್ಥಳೇಕರ್ ಈ ಪ್ರಶಸ್ತಿಯನ್ನು ಪಡೆದ 9ನೇ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

ಭಾರತದಲ್ಲಿ ಜನಿಸಿದ್ದ ಲಿಸಾ ಸ್ಥಳೇಕರ್ ಅವರನ್ನು ಆಸ್ಟ್ರೇಲಿಯಾದ ಹರೇನ್ ಮತ್ತು ಸ್ಯೂ ಸ್ಥಳೇಕರ್ ಅವರು ಪುಣೆಯ ಒಂದು ಅನಾಥ ಆಶ್ರಮದಲ್ಲಿ ದತ್ತು ಪಡೆದ ಸಂದರ್ಭದಲ್ಲಿ ಆಕೆಗೆ ಕೇವಲ ಮೂರು ವಾರ ವಯಸ್ಸಾಗಿತ್ತು. ಬಳಿಕ ಆಸ್ಟ್ರೇಲಿಯಾಗೆ ಲಿಸಾ ಪೋಷಕರು ಕರೆದುಕೊಂಡು ಹೋಗಿದ್ದರು. ಇತ್ತೀಚೆಗೆ ತಮ್ಮ ತಂದೆಗೆ ಬಗ್ಗೆ ಮಾತನಾಡಿದ್ದ ಸ್ಥಳೇಕರ್, ನನ್ನ ತಂದೆಗೆ ಕ್ರಿಕೆಟ್ ಎಂದರೇ ತುಂಬಾ ಇಷ್ಟ. ಆದ್ದರಿಂದ ನಾನು ಕ್ರಿಕೆಟ್ ಆಡುತ್ತಿದ್ದೆ. 8-9 ವಯಸ್ಸಿನ ವೇಳೆಗೆ ಕ್ರಿಕೆಟನ್ನು ಪೂರ್ತಿಯಾಗಿ ಇಷ್ಟಪಟ್ಟಿದೆ ಎಂದು ತಿಳಿಸಿದ್ದರು.

1990ರಲ್ಲಿ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ಲೀಗ್ ಮೂಲಕ ಪಾದಾರ್ಪಣೆ ಮಾಡಿ ಸುದೀರ್ಘ ಕಾಲ ಕ್ರಿಕೆಟ್ ಆಡಿದ್ದ ಸ್ಥಳೇಕರ್, ಆಸೀಸ್ ಪರ ನಾಲ್ಕು ವಿಶ್ವಕಪ್‍ಗಳನ್ನು ಆಡಿದ್ದಾರೆ. ಆಸೀಸ್ ಪರ 8 ಟೆಸ್ಟ್, 125 ಏಕದಿನ, 54 ಟಿ20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್‍ನಲ್ಲಿ 1 ಸಾವಿರ ರನ್ ಹಾಗೂ 100 ವಿಕೆಟ್ ಪಡೆದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನು ಹೊಂದಿದ್ದಾರೆ. ಕ್ರಿಕೆಟ್ ನಿವೃತ್ತಿ ಹೇಳಿದ ಬಳಿಕ ಕ್ರಿಕೆಟ್ ವಿಶ್ಲೇಷಣೆ, ಕೋಚ್, ಕ್ರಿಕೆಟ್ ಅಸೋಸಿಶಿಯೇಷನ್ ಸದಸ್ಯರಾಗಿ ಕ್ರಿಕೆಟ್ ಸೇವೆಯನ್ನು ಮುಂದುವರಿಸಿದ್ದಾರೆ.

ಕ್ರಿಕೆಟ್‍ನಲ್ಲಿ ಮಾತ್ರವಲ್ಲದೇ ಮೈದಾನದ ಹೊರಗೂ ಸ್ಥಳೇಕರ್ ಅನೇಕ ಮೈಲಿಗಲ್ಲುಗಳಿಗೆ ಕಾರಣರಾಗಿದ್ದು, ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಲ್ಲಿ ಸ್ಥಾನ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.