ಭಾರತೀಯ ಟೆನಿಸ್‌ನಲ್ಲಿ ಹೊಸ ಅಧ್ಯಾಯ ಬರೆದ ಸುಮಿತ್ ನಗಾಲ್

02-09-20 06:41 pm       Headline Karnataka News Network   ಕ್ರೀಡೆ

ಕಳೆದ 7 ವರ್ಷಗಳ ಇತಿಹಾಸದಲ್ಲಿ ಯುಎಸ್ ಓಪನ್‌ನಲ್ಲಿ ಮೊದಲ ಬಾರಿಗೆ ಪ್ರಧಾನ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಜಯಶಾಲಿಯಾದ ಮೊದಲ ಆಟಗಾರ ಸುಮಿತ್ ನಗಾಲ್

ನ್ಯೂಯಾರ್ಕ್, ಸೆಪ್ಟೆಂಬರ್.2: ಭಾರತದ ಸುಮಿತ್ ನಗಲ್ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ 7 ವರ್ಷಗಳ ನಂತರ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ 2ನೇ ಸುತ್ತು ಪ್ರವೇಶಿಸಿದ ಭಾರತೀಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದು  ಈ ಮೂಲಕ ಭಾರತೀಯ ಟೆನಿಸ್‌ನಲ್ಲಿ ಹೊಸ ಅಧ್ಯಾಯ ಬರೆದರು. ವಿಶ್ವದ ನಂ.122ನೇ ಆಟಗಾರ ನಗಾಲ್ ಎರಡನೇ ಸುತ್ತಿನಲ್ಲಿ ಎರಡನೇ ಶ್ರೇಯಾಂಕದ ಆಸ್ಟ್ರೀಯದ ಡೊಮಿನಿಕ್ ಥೀಮ್ ಸವಾಲು ಎದುರಿಸಲಿದ್ದಾರೆ.

ಮಂಗಳವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸುಮಿತ್ ಅಮೆರಿಕದ ಬ್ರಾಡ್ಲಿ ಕ್ಲಾನ್‌ರನ್ನು 6-1,6-3,3-6,6-1 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಫಲಿತಾಂಶದೊಂದಿಗೆ 23ರ ಹರೆಯದ ಸುಮಿತ್ ಏಳು ವರ್ಷಗಳ ಬಳಿಕ ಟೂರ್ನಿಯ ಪ್ರಮುಖ ಸುತ್ತಿನ ಮೊದಲ ಪಂದ್ಯವನ್ನು ಜಯಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಂಡರು. 2013ರಲ್ಲಿ ಸೋಮದೇವ್ ದೇವ್‌ವರ್ಮನ್ ಈ ಸಾಧನೆ ಮಾಡಿದ್ದರು. ದೇವವರ್ಮನ್ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಹಾಗೂ ಯು.ಎಸ್.ಓಪನ್‌ನಲ್ಲಿ ಎರಡನೇ ಸುತ್ತಿಗೆ ತಲುಪಿದ್ದಾರೆ.

ಕಳೆದ ವರ್ಷ ಯುಎಸ್ ಓಪನ್ ಮೊದಲ ಸುತ್ತಿನಲ್ಲಿ ರೋಜರ್ ಫೆಡರರ್‌ರನ್ನು ಎದುರಿಸಿದ್ದ ಸುಮಿತ್ ನಗಾಲ್ ಅಮೆರಿಕದ ಆಟಗಾರ ಕ್ಲಾನ್ ವಿರುದ್ಧ ಮೊದಲೆರಡು ಸೆಟ್‌ಗಳನ್ನು 6-1, 6-3 ಅಂತರದಿಂದ ಗೆದ್ದುಕೊಂಡು ಭರ್ಜರಿ ಆರಂಭವನ್ನು ಪಡೆದರು. 3ನೇ ಸೆಟ್‌ನ್ನು ಕಳೆದುಕೊಂಡರೂ ನಾಲ್ಕನೇ ಸೆಟ್‌ನ್ನು 6-1 ಅಂತರದಿಂದ ಜಯಿಸಿ ಪಂದ್ಯವನ್ನು ಜಯಿಸಿದರು.