ನಾಸಿಕ್ ; ಮಾಜಿ ಕ್ರಿಕೆಟಿಗ ಶೇಖರ್ ಗಾವ್ಲಿ ಪ್ರಪಾತಕ್ಕೆ ಬಿದ್ದು ಸಾವು ! 

02-09-20 11:02 pm       Headline Karnataka News Network   ಕ್ರೀಡೆ

ಮಹಾರಾಷ್ಟ್ರದ ಮಾಜಿ ರಣಜಿ ಕ್ರಿಕೆಟರ್ ಶೇಖರ್ ಗಾವ್ಲಿ ಟ್ರಕ್ಕಿಂಗ್ ತೆರಳಿದ್ದ ವೇಳೆ ಆಯತಪ್ಪಿ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ. 

ಮುಂಬೈ, ಸೆಪ್ಟೆಂಬರ್ 2: ಮಹಾರಾಷ್ಟ್ರದ ಮಾಜಿ ರಣಜಿ ಕ್ರಿಕೆಟರ್ ಶೇಖರ್ ಗಾವ್ಲಿ (45) ಪಶ್ಚಿಮ ಘಟ್ಟಕ್ಕೆ ಟ್ರಕ್ಕಿಂಗ್ ತೆರಳಿದ್ದ ವೇಳೆ ಆಯತಪ್ಪಿ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ. 

ಮಹಾರಾಷ್ಟ್ರ ರಾಜ್ಯದ 23 ವರ್ಷದ ಒಳಗಿನ ಕ್ರಿಕೆಟ್ ತಂಡದ ಫಿಟ್ನೆಸ್ ಕೋಚ್ ಕೂಡ ಆಗಿದ್ದ ಶೇಖರ್ ಗಾವ್ಲಿ ನಿನ್ನೆ ನಾಶಿಕ್ ಬಳಿಯ ಇಗಾಟ್ ಪುರಿಗೆ ಟ್ರಕ್ಕಿಂಗ್ ತೆರಳಿದ್ದರು. ಈ ವೇಳೆ, 250 ಅಡಿ ಆಳಕ ಆಳಕ್ಕೆ ಬಿದ್ದಿದ್ದಾರೆ ಎನ್ನಲಾಗ್ತಿದೆ. ನಿನ್ನೆ ಸಂಜೆ ಘಟನೆ ಸಂಭವಿಸಿದ್ದು ಸ್ಥಳೀಯ ಗ್ರಾಮಸ್ಥರು ಮತ್ತು ಪೊಲೀಸರು ಸ್ಥಳದಲ್ಲಿ ಹುಡುಕಾಟ ನಡೆಸಿದ್ದರು. ಆದರೆ ರಾತ್ರಿಯಾದರೂ ಶೇಖರ್ ಗಾವ್ಲಿ ಪತ್ತೆ ಆಗಿರಲಿಲ್ಲ. ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭ ಆಗಿತ್ತು. ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಶೇಖರ್ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಗೆಳೆಯರ ಜೊತೆ ಟ್ರಕ್ಕಿಂಗ್ ತೆರಳಿದ್ದರು ಎನ್ನಲಾಗುತ್ತಿದ್ದು ಹೇಗೆ ಪ್ರಪಾತಕ್ಕೆ ಬಿದ್ದಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ತಿಳಿದುಬಂದಿಲ್ಲ. ಕೆಲವರ ಪ್ರಕಾರ, ಸೆಲ್ಫಿ ಕ್ಲಿಕ್ಕಿಸುತ್ತಿದ್ದಾಗ ಆಯತಪ್ಪಿ ಪ್ರಪಾತಕ್ಕೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.