ಆರ್‌ಸಿಬಿ ಕೊಹ್ಲಿ, ಎಬಿಡಿ ಮೇಲೆ ಅವಲಂಬಿತವಾಗಿಲ್ಲ - ಉಮೇಶ್ ಯಾದವ್

04-09-20 10:17 am       Headline Karnataka News Network   ಕ್ರೀಡೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಮೇಲೆ ಅವಲಂಬಿತವಾಗಿದೆ ಎಂಬ ಮಾತನ್ನು ಆರ್‌ಸಿಬಿ  ತಂಡದ ಅನುಭವಿ ವೇಗಿ ಉಮೇಶ್ ಯಾದವ್ ಅವರು ತಳ್ಳಿ ಹಾಕಿದ್ದಾರೆ.

ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಮೇಲೆ ಅವಲಂಬಿತವಾಗಿದೆ ಎಂಬ ಮಾತನ್ನು ಆರ್‌ಸಿಬಿ  ತಂಡದ ಅನುಭವಿ ವೇಗಿ ಉಮೇಶ್ ಯಾದವ್ ಅವರು ತಳ್ಳಿ ಹಾಕಿದ್ದಾರೆ.

ಆರ್‌ಸಿಬಿ ತಂಡ ಐಪಿಎಲ್ ಆಡಲು ಈಗಾಗಲೇ ಯುಎಇಗೆ ತೆರಳಿ ಅಭ್ಯಾಸವನ್ನು ಆರಂಭಿಸಿದೆ. ಈ ಬಾರಿ ಕಪ್ ಗೆಲ್ಲುವ ತವಕದಲ್ಲಿ ಭರ್ಜರಿ ಸಿದ್ಧತೆಯನ್ನು ಕೂಡ ನಡೆಸಿದೆ. ಅಂತಯೇ ತಂಡದ ಪ್ರಮುಖ ವೇಗಿ ಉಮೇಶ್ ಯಾದವ್ ಅವರು ಮಾತನಾಡಿ, ರಣಜಿಯಲ್ಲಿ ಖಾಲಿ ಮೈದಾನದಲ್ಲಿ ಆಡಿ ಅಭ್ಯಾಸವಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಆರ್‌ಸಿಬಿ ತಂಡ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಮೇಲೆ ಜಾಸ್ತಿ ಅವಲಂಬಿತವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಜನರು ನಾವು ಅವರ ಮೇಲೆ ಅವಲಂಬಿತವಾಗಿದ್ದೇವೆ ಎಂದು ಹೇಳುತ್ತಾರೆ. ಅವರು ಕೆಲ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ ನಿಜ. ಆದರೆ ಇಡೀ ತಂಡವೇ ಅವರ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಒಪ್ಪುವುದಿಲ್ಲ. ಒಂದು ಪಂದ್ಯ ಗೆಲ್ಲಬೇಕಾದರೆ ತಂಡದ ಪ್ರತಿಯೊಬ್ಬ ಆಟಗಾರನ ಶ್ರಮವಿರುತ್ತದೆ ಎಂದು ತಿಳಿಸಿದ್ದಾರೆ.

ತಂಡದಲ್ಲಿ 11 ಜನರು ಒಟ್ಟಿಗೆ ಆಡುತ್ತೇವೆ. ಅದರಲ್ಲಿ ನಾವು ಇಬ್ಬರೇ ಆಟಗಾರರ ಮೇಲೆ ಅವಲಂಬಿತವಾದರೆ, ಇನ್ನುಳಿದ ಆಟಗಾರರು ಏನೂ ಮಾಡುತ್ತಾರೆ. ತಂಡದಲ್ಲಿ ಪ್ರತಿಯೊಬ್ಬ ಆಟಗಾರನೂ ಕೂಡ ಪಂದ್ಯ ಗೆಲ್ಲಲು ತನ್ನದೇ ಆದ ಕೊಡುಗೆ ನೀಡಿರುತ್ತಾನೆ. ಆದರೆ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಉಳಿದ ಆಟಗಾರರಿಗಿಂತ ಜಾಸ್ತಿ ಕೊಡುಗೆ ನೀಡಿದ್ದಾರೆ ಅಷ್ಟೆ. ತಂಡಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಅವರು ಜಾಸ್ತಿ ಶ್ರಮಪಟ್ಟಿದ್ದಾರೆ ಎಂದು ಉಮೇಶ್ ಯಾದವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಖಾಲಿ ಮೈದಾನದಲ್ಲಿ ಐಪಿಎಲ್ ಆಡುವ ಬಗ್ಗೆ ಮಾತನಾಡಿರುವ ಅವರು, ಖಾಲಿ ಮೈದಾನದಲ್ಲಿ ಆಡುವುದು ನಮಗೆ ಹೊಸದೇನಲ್ಲ. ನಾವು ಅದನ್ನು ಯುಎಇಯಲ್ಲಿ ನೋಡಿಲ್ಲ. ಆದರೆ ಭಾರತದಲ್ಲಿ ಬಹಳ ರಣಜಿ ಟ್ರೋಫಿ ಪಂದ್ಯಗಳನ್ನು ಖಾಲಿ ಮೈದಾನದಲ್ಲಿ ಆಡಿದ್ದೇವೆ. ಹಲವಾರು ರಣಜಿ ಪಂದ್ಯದ ನಂತರ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಬಂದಿದ್ದೇನೆ. ಹೀಗಾಗಿ ಖಾಲಿ ಮೈದಾನದಲ್ಲಿ ನಮ್ಮನ್ನು ನಾವೇ ಹೇಗೆ ಹುರಿದುಂಬಿಸಿಕೊಳ್ಳಬೇಕು ಎಂದು ಗೊತ್ತಿದೆ ಎಂದಿದ್ದಾರೆ.

ಆರ್‌ಸಿಬಿ ಕಳೆದ ಅಗಸ್ಟ್ 21ರಂದೇ ಯುಎಇಗೆ ಹೋಗಿದ್ದು, ಆರು ದಿನಗಳ ಕ್ವಾಂರಟೈನ್ ಅವಧಿಯನ್ನು ಮುಗಿಸಿ ಅಭ್ಯಾಸವನ್ನು ಆರಂಭ ಮಾಡಿದೆ. ಸೆಪ್ಟಂಬರ್ 19ರಿಂದ ಖಾಲಿ ಮೈದಾನದಲ್ಲಿ ಐಪಿಎಲ್ ಆರಂಭವಾಗಲಿದೆ. ಮೊದಲ ಪಂದ್ಯ ಮುಂಬೈ ಮತ್ತು ಚೆನ್ನೈ ತಂಡಗಳ ನಡುವೆ ನಡೆಯಬೇಕಿತ್ತು. ಆದರೆ ಚೆನ್ನೈ ತಂಡದಲ್ಲಿ 13 ಮಂದಿಗೆ ಕೊರೊನಾ ಕಾಣಿಸಿಕೊಂಡ ಕಾರಣ ಆರ್‌ಸಿಬಿ ಆರಂಭಿಕ ಪಂದ್ಯವನ್ನು ಮುಂಬೈ ಎದುರು ಆಡಲಿದೆ ಎಂದು ಹೇಳಲಾಗಿದೆ.