IPL 2022: '7 ರಿಂದ 10 ರನ್‌ ಕಡಿಮೆಯಾಯಿತು'-ಸೋಲಿಗೆ ಕಾರಣ ತಿಳಿಸಿದ ಹಾರ್ದಿಕ್‌ ಪಾಂಡ್ಯ!

12-04-22 01:20 pm       Source: Vijayakarnataka   ಕ್ರೀಡೆ

ಸೋಮವಾರ ಡಿ ವೈ ಪಾಟೀಲ್‌ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಗುಜರಾತ್‌ ಟೈಟನ್ಸ್‌ ತಂಡ 8 ವಿಕೆಟ್‌ಗಳಿಂದ ಸೋಲು

ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟೂರ್ನಿಯ ಪಂದ್ಯದಲ್ಲಿ ಸೋಲು ಅನುಭವಿಸಿದ ಹೊರತಾಗಿಯೂ ಗುಜರಾತ್‌ ಟೈಟನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯ ಎದುರಾಳಿ ತಂಡದ ಬೌಲರ್‌ಗಳ ಕೊನೆಯ ಐದು ಓವರ್ ಬೌಲಿಂಗ್‌ ಪ್ರದರ್ಶನವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ಸೋಮವಾರ ಡಿ ವೈ ಪಾಟೀಲ್‌ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ನೀಡಿದ್ದ 163 ರನ್‌ ಗುರಿ ಹಿಂಬಾಲಿಸಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ನಾಯಕ ಕೇನ್ ವಿಲಿಯಮ್ಸನ್‌(57) ಹಾಗೂ ಅಭಿಷೇಕ್‌ ಶರ್ಮಾ(42) ಬ್ಯಾಟಿಂಗ್‌ ಸಹಾಯದಿಂದ 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಗುಜರಾತ್‌ ಟೈಟನ್ಸ್‌ ಐಪಿಎಲ್‌ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿತು.

SRH vs RR: Sunrisers Hyderabad Skipper Kane Williamson Fined For Slow  Over-Rate

ಸೋಲಿನ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಗುಜರಾತ್‌ ಟೈಟನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯ, "ಬ್ಯಾಟಿಂಗ್ ವಿಭಾಗವಾಗಿ ನಮಗೆ 7 ರಿಂದ 10 ರನ್‌ಗಳನ್ನು ಕಡಿಮೆಯಾಗಿದೆ. ಒಂದು ವೇಳೆ ಇಷ್ಟು ರನ್‌ಗಳನ್ನು ಅಧಿಕವಾಗಿ ಗಳಿಸಿದ್ದರೆ, ಪಂದ್ಯದ ಫಲಿತಾಂಶ ವಿಭಿನ್ನವಾಗಿರುತ್ತಿತ್ತು. ಬೌಲಿಂಗ್‌ ಬಗ್ಗೆ ಮಾತನಾಡುವುದಾದರೆ ನಮ್ಮ ಆರಂಭ ಚೆನ್ನಾಗಿತ್ತು, ಆದರೆ ಎರಡೇ ಎರಡು ಓವರ್‌ಗಳು ನಮ್ಮ ಪಾಲಿಗೆ ದುಬಾರಿಯಾಯಿತು," ಎಂದು ಹೇಳಿದರು.

ಎದುರಾಳಿ ತಂಡದ ಬೌಲರ್‌ಗಳ ಪ್ರದರ್ಶನದ ಬಗ್ಗೆ ಮಾತನಾಡಿ "ನನಗೆ ಅನಿಸಿದ ಹಾಗೆ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಬೌಲರ್‌ಗಳು ಕೊನೆಯ ಐದು ಓವರ್‌ಗಳಲ್ಲಿ ಅತ್ಯುತ್ತಮವಾಗಿ ಬೌಲ್‌ ಮಾಡಿದ್ದಾರೆ. ಎದುರಾಳಿ ತಂಡದ ಬೌಲಿಂಗ್‌ನಲ್ಲಿ ಬೌನ್ಸರ್‌ಗಳು ವಿಭಿನ್ನವಾಗಿದ್ದವು. ಇದರಿಂದ ನಮಗೆ ಸ್ವಲ್ಪ ಹಿನ್ನಡೆಯಾಯಿತು," ಎಂದು ತಿಳಿಸಿದರು.

"ಪಂದ್ಯದ ಗೆಲುವಿನ ಶ್ರೇಯ ಎದುರಾಳಿ ತಂಡದ ಬೌಲರ್‌ಗಳಿಗೆ ಸಲ್ಲಬೇಕು. ಒಟ್ಟಾರೆ ಪಂದ್ಯದ ಫಲಿತಾಂಶ ಏನಾಯಿತು ಎಂಬ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಇಂದಿನ(ಸೋಮವಾರ) ಪಂದ್ಯದಲ್ಲಿನ ತಪ್ಪುಗಳನ್ನು ಮುಂಬರುವ ಪಂದ್ಯಕ್ಕೆ ತಿದ್ದಿಕೊಳ್ಳುತ್ತೇವೆ. ಮುಂದಿನ ಹಣಾಹಣಿಗೆ ಇನ್ನೂ ಹಲವು ದಿನಗಳು ಬಾಕಿ ಇವೆ. ಹಾಗಾಗಿ ಆರಾಮದಾಯಕವಾಗಿ ತಯಾರಿ ನಡೆಸುತ್ತೇವೆ," ಎಂದರು.

ಇನ್ನು ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಗುಜರಾತ್‌ ಟೈಟನ್ಸ್‌ ತಂಡದ ಆರಂಭ ಉತ್ತಮವಾಗಿರಲಿಲ್ಲ. ಮ್ಯಾಥ್ಯೂ ವೇಡ್‌(19), ಶುಭಮನ್‌ ಗಿಲ್‌(7), ಸಾಯಿ ಸುದರ್ಶನ್‌(11) ಹಾಗೂ ಡೇವಿಡ್‌ ಮಿಲ್ಲರ್‌ ವಿಫಲರಾಗಿದ್ದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಹಾರ್ದಿಕ್‌ ಪಾಂಡ್ಯ 42 ಎಸೆತಗಳಲ್ಲಿ ಅಜೇಯ 50 ರನ್‌ ಗಳಿಸಿದ್ದರು ಹಾಗೂ ಅಭಿನವ್‌ ಮನೋಹರ್‌ ಕೊನೆಯ ಹಂತದಲ್ಲಿ 21 ಎಸೆತಗಳಲ್ಲಿ 35 ರನ್‌ ಸಿಡಿಸಿದ್ದರು.

IPL 2022: We were 10 runs short, says captain Hardik Pandya after Gujarat  Titans' loss to Sunrisers Hyderabad - Firstcricket News, Firstpost

ಬಳಿಕ ಗುಜರಾತ್‌ ಟೈಟನ್ಸ್ ನೀಡಿದ್ದ 163 ರನ್‌ ಗುರಿ ಹಿಂಬಾಲಿಸಿದ ಸನ್‌ರೈಸರ್ಸ್ ಹೈದರಾಬಾದ್‌ ತಂಡಕ್ಕೆ ಕೇನ್ ವಿಲಿಯಮ್ಸನ್‌ ಹಾಗೂ ಅಭಿಷೇಕ್‌ ಶರ್ಮಾ ಅತ್ಯುತ್ತಮ ಆರಂಭ ತಂದುಕೊಟ್ಟಿದ್ದರು. ಕಳೆದ ಪಂದ್ಯದಂತೆ ಈ ಹಣಾಹಣಿಯಲ್ಲಿಯೂ ಅತ್ಯುತ್ತಮ ಬ್ಯಾಟ್‌ ಮಾಡಿದ ವಿಲಿಯಮ್ಸನ್‌, 46 ಎಸೆತಗಳಲ್ಲಿ 57 ರನ್‌ ಗಳಿಸಿದರೆ, ಅಭಿಷೇಕ್‌ ಶರ್ಮಾ 42 ರನ್‌ ಗಳಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿ ವಿಕೆಟ್‌ ಒಪ್ಪಿಸಿದ್ದರು.

ಅಂತಿಮ ಹಂತದಲ್ಲಿ ನಿಕೋಲಸ್‌ ಪೂರನ್‌ ಕೇವಲ 18 ಎಸೆತಗಳಲ್ಲಿ ಅಜೇಯ 34 ರನ್‌ ಸಿಡಿಸುವ ಮೂಲಕ ಇನ್ನೂ 5 ಎಸೆತಗಳು ಬಾಕಿ ಇರುವಾಗಲೇ ಸನ್‌ರೈಸರ್ಸ್ ಹೈದರಾಬಾದ್‌ ತಂಡಕ್ಕೆ 8 ವಿಕೆಟ್‌ ಗೆಲುವು ತಂದಿತ್ತರು. 2022ರ ಐಪಿಎಲ್‌ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗೆ ಇದು ಎರಡನೇ ಗೆಲುವಾಯಿತು.

Ipl 2022 Batting Wise I Think We Were 7,10 Runs Short Says Hardik Pandya After Loss Against Sunrisers Hyderabad.