ಗರ್ಭಿಣಿ ಆಸ್ಪತ್ರೆ ಅಲೆದಾಟ ಪ್ರಕರಣ ; ನ್ಯಾಯ ಏನು, ಎತ್ತ ? ಪರಿಹಾರ ಹೇಗೆ ?

06-06-21 10:55 pm       S .S Khazi, Advocate, Mangaluru   ಅಂಕಣಗಳು

ಇಲ್ಲಸಲ್ಲದ್ದನ್ನು ಬಿಟ್ಟು,  ತಪ್ಪಿಸ್ಥರ ವಿರುದ್ಧ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳುವುದು, ಜಾಸ್ಮಿನ್ ಅವರಿಗೆ  ಇರುವಂತಹ ಅತ್ಯಂತ ಸೂಕ್ತವಾದ ಮತ್ತು ಉಪಯುಕ್ತವಾದ ಮಾರ್ಗ.

ಮಂಗಳೂರು: ಗರ್ಭಿಣಿ ಮಹಿಳೆಯೊಬ್ಬರನ್ನು ವಿಜಯ ಕ್ಲಿನಿಕ್, ಸಿಟಿ ಹಾಸ್ಪಿಟಲ್, ಹೈಲ್ಯಾಂಡ್ ಹಾಸ್ಪಿಟಲ್, ಲೇಡಿಗೋಷನ್ ಹಾಸ್ಪಿಟಲ್( ಎರಡು ಬಾರಿ ), ಹೆಸರು ಬಹಿರಂಗಪಡಿಸದ ಇನ್ನೊಂದು ಖಾಸಗಿ ಆಸ್ಪತ್ರೆ, ಅಥೇನಾ ಹಾಸ್ಪಿಟಲ್, ಮಂಗಳ ಹಾಸ್ಪಿಟಲ್, ಸರಕಾರಿ ವೆನ್ಲಾಕ್ ಹಾಸ್ಪಿಟಲ್ ಇತ್ಯಾದಿಗಳಿಗೆ ಅಲೆದಾಡಿಸಲು ಕಾರಣರಾದ ಡಾಕ್ಟರ್ಗಳಾದ ಪ್ರಿಯಾ ಬಳ್ಳಾಲ್, ವೀಣಾ ಭಟ್, ವಿಜಯ್, ಜಯಪ್ರಕಾಶ್, ಮುರಳಿಧರ್ ಮುಂತಾದವರು  ವೈದ್ಯಕೀಯ ದೌರ್ಜನ್ಯ ಎಸಗಿದ್ದಾರೆ, ಮಹಿಳೆಯ ಮತ್ತು ಮಗುವಿನ ಪ್ರಾಣಕ್ಕೆ ಅಪಾಯ ಒಡ್ಡಿದ್ದಾರೆ ಇತ್ಯಾದಿ..ಆರೋಪಗಳು ಸುದ್ದಿ ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿವೆ.  'ಡಾಕ್ಟರ್ಸ್ ಮಾಫಿಯಾ' ಎಂಬ ಪದದ ಬಳಕೆಯಾಗಿದೆ. 'ಮಾಫಿಯಾ' ಅಂದರೆ ಇಟಲಿ ದೇಶದ ಕಳ್ಳರ ಗುಂಪಿನ ಹೆಸರು.

ಜಾಸ್ಮಿನ್ , ತನ್ನ ಎರಡನೇಯ ಹೆರಿಗೆಗಾಗಿ ಫ್ಯಾಮಿಲಿ ಡಾಕ್ಟರ್  ಪ್ರಿಯಾ ಬಳ್ಳಾಲ್ ಅವರವರಿಗೆ ಸಂಪರ್ಕಿಸಿದಾಗ, ಅವರು ಕೊರೋನಾ ಸೋಂಕಿನ ಕಾರಣ  ನೀಡಿ ದಿನವೊಂದಕ್ಕೆ ರೂಪಾಯಿ  50 ಸಾವಿರದಂತೆ 14ದಿನಗಳ ಆಸ್ಪತ್ರೆವಾಸದ ಸಲಹೆ ನೀಡಿದರು. ಅದಕ್ಕೆ ತಾನು ಒಪ್ಪದಾಗ, ಆನಂತರ ತಾನು ಭೇಟಿ ಮಾಡಿದ ಸುಮಾರು ಎಂಟು ಆಸ್ಪತ್ರೆಗಳಿಗೆ  ಕುಮ್ಮಕ್ಕು  ನೀಡಿ, ತನಗೆ ಯಾವ ಆಸ್ಪತ್ರೆಯವರೂ ಸರಿಯಾದ ಚಿಕಿತ್ಸೆ ನೀಡದಂತೆ  ಮಾಡಿ, ತನಗೆ ಮತ್ತು ತನ್ನ ಮಗುವಿನ ಪ್ರಾಣಕ್ಕೆ ಅಪಾಯಕಾರಿ ರೀತಿಯಲ್ಲಿ ವರ್ತಿಸಿದ್ದಾರೆ. ಡಾಕ್ಟರ್ ಶ್ರೀಧರ್ ಎಂಬವರು ತನ್ನ ಮಾಸ್ಕನ್ನು ತೆಗೆದುಹಾಕಿ, " ನೀನು ಬೇಗ ದರಲ್ಲಿ ಸಾಯುತ್ತಿ "ಎಂಬ ಬೆದರಿಕೆ ನೀಡಿದ್ದಾರೆ, ಮತ್ತು ಡಾಕ್ಟರ್ ಜಯಪ್ರಕಾಶ್ ಅವರು ಅನಗತ್ಯವಾದ ಏಳು  ಇಂಜೆಕ್ಷನ್ ಗಳನ್ನು ಕೊಟ್ಟು, "ಇವಳಿನ್ನು ಹೆಚ್ಚು ಸಮಯ ಬದುಕುವುದಿಲ್ಲ, ನಿಮ್ಮ ಮನೆಯವರಿಗೆ ಕರೆಯಿರಿ " ಎಂದು ಹೆದರಿಸುವ ಮಾತನಾಡುತ್ತ  ತನ್ನನ್ನು ಮತ್ತು ತನ್ನ  ಮಗುವನ್ನು  ಕೊಲ್ಲಲು ಪ್ರಯತ್ನಿಸಿದ್ದಾರೆ. ಆದರೆ ಡಾಕ್ಟರ್ ಶರಣ  ಮತ್ತು ಶ್ರದ್ಧಾ   ಎಂಬವರು ಲೇಡಿಗೋಷನ್ ಆಸ್ಪತ್ರೆಯಲ್ಲಿ ಸರಿಯಾದ ರೀತಿಯಲ್ಲಿ ಹೆರಿಗೆ ಕೈಗೊಂಡಿದ್ದಾರೆ. ಅಪರಾಧವೆಸಗಿದ ಡಾಕ್ಟರ್ ಗಳ ವಿರುದ್ಧ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದರೂ, ಪೊಲೀಸರು ಪಕ್ಷಪಾತದಿಂದ ವರ್ತಿಸುತ್ತ  ತಪ್ಪಿಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಲ್ಲ ಆದರೆ ಡಾಕ್ಟರ್ ಗಳ ವಿರುದ್ಧ  ಪ್ರತಿಭಟಿಸಿದವರ ವಿರುದ್ಧವೇ, ಡಾಕ್ಟರ್ ಗಳ ಮೇಲೆ ಹಲ್ಲೆ ನಡೆದಿದೆ ಎಂಬ ಸುಳ್ಳು ಹೇಳಿ, ಪ್ರಕರಣ ದಾಖಲಿಸಿ ಕೆಲವರನ್ನು ಅರೆಸ್ಟ್ ಮಾಡಿದ್ದಾರೆ ಇತ್ಯಾದಿ... ಇದು ಜಾಸ್ಮಿನ್ ಕಡೆಯವರ ವಾದ.

ಡಾಕ್ಟರ್ಗಳು ಪತ್ರಿಕಾಗೋಷ್ಠಿಯನ್ನು ಕರೆದು ಸ್ಪಷ್ಟೀಕರಣ ನೀಡಲು ಪ್ರಯತ್ನಿಸಿದ್ದಾರೆ. ಇದೊಂದು ಡಾಕ್ಟರುಗಳ ತೇಜೋವಧೆ ಮಾಡುವ ಸಂಚು. ಸರಿಯಾಗಿ ಸೇವೆ ನೀಡಿದ ಡಾಕ್ಟರ್ ಗಳ ತೇಜೋವಧೆಗೆ ಪ್ರಯತ್ನ ನಡೆದಿದೆ. ಜಾಸ್ಮಿನ್ ಅವರು, ಡಾಕ್ಟರ್ ಪ್ರಿಯಾ ಬಳ್ಳಾಲ ವರ ಮಾರ್ಗದರ್ಶನದ ಪ್ರಕಾರ ನಡೆಯದ ಕಾರಣ, ವೆಂಟಿಲೇಟರ್ ವ್ಯವಸ್ಥೆಯಿರುವ ಆಸ್ಪತ್ರೆಯ ಹುಡುಕಾಟದಲ್ಲಿ, ಈ ಎಲ್ಲಾ ಘಟನೆಗಳು ನಡೆದಿವೆ..ಇತ್ಯಾದಿ, ಇದು ಡಾಕ್ಟರ್ಗಳು ನೀಡುವ ಸ್ಪಷ್ಟೀಕರಣ.

ಈ ಪ್ರಕರಣದಲ್ಲಿ ಕೆಲವು ಸಂಘಟನೆಗಳು ಮತ್ತು ರಾಜಕೀಯ ವ್ಯಕ್ತಿಗಳು ಶಾಮೀಲಾಗಿ, ಇದನ್ನೊಂದು ಸಾರ್ವಜನಿಕ ಸಮಸ್ಯೆ ಎನ್ನಾಗಿ ಪರಿವರ್ತಿಸುವುಅದರಲ್ಲಿ ಯಶಸ್ವಿಯಾಗಿದ್ದಾರೆ. ಇದೊಂದು ಸ್ವಾಗತಾರ್ಹ ವಿಷಯ. ಇನ್ನೊಂದು ಸ್ವಾಗತಾರ್ಹ ವಿಷಯವೆಂದರೆ, ಈ ಪ್ರಕರಣಕ್ಕೆ ಕೋಮು ಬಣ್ಣ ತಗಲಲಿಲ್ಲ, ಏಕೆಂದರೆ ಆರೋಪಿ ಸ್ಥಾನದಲ್ಲಿ ಎರಡೂ 'ಪಾರ್ಟಿಗಳು' ಇದ್ದಾರೆ-(joint venture )

ನನ್ನ ಪ್ರಕಾರ,ಇದೊಂದು ಸಾಮಾನ್ಯವಾದ ಸಾಮಾಜಿಕ ಮತ್ತು ಕಾನೂನು ಸಮಸ್ಯೆ( simple socio-legal issue) ಮತ್ತೆ ಇದಕ್ಕೆ ಕಾನೂನಿನಲ್ಲಿ ಸೂಕ್ತ ಪರಿಹಾರವಿದೆ. ಜಾಸ್ಮಿನ್ ಕಡೆಯವರಿಗೆ ನ್ಯಾಯಾಲಯಗಳ ಮೂಲಕ ಪರಿಹಾರ ಸಿಗುವ ಸಾಧ್ಯತೆ ಹೆಚ್ಚು. ಪರಿಹಾರವೆಂದರೆ, ಆರೋಪಿಗಳಿಗೆ ಶಿಕ್ಷೆ ಮತ್ತು ನೊಂದವರಿಗೆ ಸೂಕ್ತ ಹಣಕಾಸಿನ ಪರಿಹಾರ ( punishment and monetary compensation).

ತಾವು ಏನೇ ತಪ್ಪು ಮಾಡದಿದ್ದರೂ, ತಮ್ಮ ವಿರುದ್ಧ ಕೇವಲ ತೇಜೋವಧೆಯ ಉದ್ದೇಶದಿಂದ  ಆರೋಪಗಳನ್ನು ಮಾಡಲಾಗಿದೆ,  ಎನ್ನುವ ಡಾಕ್ಟರ್ ಗಳ ವಾದ ನ್ಯಾಯಾಲಯಗಳಲ್ಲಿನಡೆಯುವುದು ಕಷ್ಟ. ಹಾಗೆ ನೋಡಿದರೆ, ಲೇಡಿಗೋಷನ್ ಆಸ್ಪತ್ರೆಯಲ್ಲಿ  ಹೆರಿಗೆಯನ್ನು ಯಶಸ್ವಿಯಾಗಿ ಮಾಡಿದ ಡಾಕ್ಟರ್ ಶರಣ ಮತ್ತು ಶ್ರದ್ಧಾ ಇವರಿಬ್ಬರ ವಿರುದ್ಧ ಜಾಸ್ಮಿನ್ ಯಾವುದೇ ಆಪಾದನೆ ಮಾಡಿಲ್ಲ. ಕಾನೂನಿನಲ್ಲಿ,  'ಘಟನೆಗಳು ತಾವಾಗಿಯೇ ಸತ್ಯವನ್ನು ವಿವರಿಸುತ್ತವೆ' (Res Ipsa Loquitur) ಎಂಬ ತತ್ವವಿದೆ. ಅಂದರೆ, ಪ್ರಕರಣವೊಂದರ ಘಟನೆ ಗಳನ್ನು ಗಮನಿಸಿದಾಗ,  ಸತ್ಯ ತಾನಾಗಿ ಹೊರಬರುತ್ತದೆ ಎಂಬರ್ಥ. ಒಬ್ಬ ವ್ಯಕ್ತಿ ತನ್ನ ಕೈಯಲ್ಲಿ ಹೊಗೆಯಾಡುತ್ತಿರುವ ಪಿಸ್ತೂಲನ್ನು ಹಿಡಿದುಕೊಂಡು ಕೊಲೆಯಾದ ವ್ಯಕ್ತಿಯ ಬಳಿಯಲ್ಲಿ ಕಂಡು ಬಂದರೆ, ಆತ ಕೊಲೆಗಾರ ಎಂದು ಹೇಳಲು ಕಷ್ಟವಲ್ಲ. (person caught with smoking gun). ಈ ಪ್ರಕರಣದಲ್ಲಿ, ಜಾಸ್ಮಿನ್ ಏಳೆಂಟು ಆಸ್ಪತ್ರೆಗಳಿಗೆ, ತುಂಬು ಗರ್ಭಿಣಿ ಅವಸ್ಥೆಯಲ್ಲಿ, ಮಧ್ಯರಾತ್ರಿಯ ವೇಳೆ ಅಲೆದಿದ್ದಾಳೆ ಎಂದು ಡಾಕ್ಟರ್ಗಳು ಒಪ್ಪುತ್ತಾರೆ. ಇದರಿಂದ ಹೊರಹೊಮ್ಮುವ ಒಂದೇ  ಅರ್ಥವೆಂದರೆ, ಆಕೆಗೆ ವಿವಿಧ ವೈದ್ಯರು ಮತ್ತು ಆಸ್ಪತ್ರೆಗಳು ದುರುದ್ದೇಶಪೂರ್ವಕವಾಗಿ ಚಿಕಿತ್ಸೆ ನೀಡಲು ನಿರಾಕರಿಸಿವೆ ಎಂಬುದು ಮಾತ್ರ.
 ನಮ್ಮ ದೇಶದ ಮಾನ್ಯ ಸರ್ವೋಚ್ಚ ನ್ಯಾಯಾಲಯವು, ಜಿ.ಪರ್ಶ್ವನಾಥ್ -ವರ್ಸಸ್ - ಸ್ಟೇಟ್ ಆಫ್ ಕರ್ನಾಟಕ [ 2011(4) Kar. L. J.505(S. C)] ಪ್ರಕರಣದಲ್ಲಿ  ಹೀಗೆ ಉಚ್ಚರಿಸಿದೆ -

" ಮನುಷ್ಯರು ಸುಳ್ಳು ಹೇಳಬಹುದು, ಆದರೆ ಘಟನೆಗಳು ಸುಳ್ಳು ಹೇಳುವುದಿಲ್ಲ'

ಇದಕ್ಕೆ ಘಟನಾ ಸಾಕ್ಷ್ಯ   ( circumstantial evidence) ಅಂತ ಹೇಳುತ್ತಾರೆ. ಈ ಸಾಕ್ಷ್ಯವು, ದಾಖಲಾತಿಗಳ ಸಾಕ್ಷ್ಯ ಅಥವಾ ಮೌಖಿಕ ಸಾಕ್ಷ್ಯಗಳಿಗಿಂತಲೂ ಹೆಚ್ಚು ನಂಬಲರ್ಹವಾಗಿದೆ.  

ಡಾಕ್ಟರ್ ಪ್ರಿಯಾ ಬಳ್ಳಾಲ ಅವರು, ಜಾಸ್ಮಿನ್ ತಮ್ಮ ಹಳೆಯ ಪೇಷಂಟ್ ಅಂತ ಒಪ್ಪುತ್ತಾರೆ. ಅವರಿಂದ ಚಿಕಿತ್ಸೆ ಸಾಧ್ಯವಿಲ್ಲದಿದ್ದರೂ, ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆಗೆ ದಾಖಲಾಗಲು ಮಾರ್ಗದರ್ಶನ ಮಾಡುವುದು ಅವರ ಕರ್ತವ್ಯವಾಗಿತ್ತು. ಅವರ ಹುದ್ದೆ ಮತ್ತು ವೈದ್ಯರ ವಲಯದಲ್ಲಿ ಅವರಿಗಿರುವ ಪ್ರಭಾವ ನೋಡಿದರೆ, ಇದು ಅವರಿಗೆ ಸುಲಭದ ವಿಷಯವಾಗಿತ್ತು. ಇದೇ ತತ್ವ, ಆನಂತರದ ಎಲ್ಲ ಡಾಕ್ಟರ್ ಗಳಿಗೆ ಅನ್ವಯಿಸುತ್ತದೆ. ಅಂತಹ ಗಂಭೀರ  ಪರಿಸ್ಥಿತಿಯಲ್ಲಿ, ಡಾಕ್ಟರ್ ಆದವನ ಒಂದೇ ಕರ್ತವ್ಯ ವೆಂದರೆ , ತನ್ನಿಂದ ಚಿಕಿತ್ಸೆ ಸಾಧ್ಯವಿಲ್ಲದಿದ್ದರೆ, ರೋಗಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಇದ್ದಲ್ಲಿಗೆ ವೇಳೆ ವ್ಯಯ ಮಾಡದೆ ಮುಟ್ಟಿಸುವುದು.

'ವೆಂಟಿಲೆಟರ್ ಇರುವ ಆಸ್ಪತ್ರೆಯ ಹುಡುಕಾಟ' ವನ್ನು,  ಈ ಮೇಲೆ ಹೇಳಲಾದ ಯಾವುದೇ ಡಾಕ್ಟರ್ ಮನಸ್ಸು ಮಾಡಿದ್ದರೆ ಅತ್ಯಂತ ಸುಲಭವಾಗಿ ತಪ್ಪಿಸಬಹುದಿತ್ತು. ಆದುದರಿಂದ, ಎಲ್ಲಾ ಆಸ್ಪತ್ರೆ ಮತ್ತು ಡಾಕ್ಟರ್ಗಳು, ಜಂಟಿಯಾಗಿ ಮತ್ತು ಬೇರೆಬೇರೆಯಾಗಿ (jointly and severally) ಜಾಸ್ಮಿನ್ ಗೆ ಸೂಕ್ತ ಪರಿಹಾರ ನೀಡಲು ಬದ್ಧರಾಗುತ್ತಾರೆ. ಡಾಕ್ಟರ್ಗಳು ಪತ್ರಿಕಾಗೋಷ್ಠಿಯಲ್ಲಿ ಹೇಳಿದಂತೆ, ಕೇವಲ 'ಅವರ ತೇಜೋವಧೆಗಾಗಿ' , ಜಾಸ್ಮಿನ್ ಕಡೆಯವರು ಇಷ್ಟು ದೊಡ್ಡ  ನಾಟಕವಾಡಿದ್ದಾರೆ, ಎಂಬುದು ಅವರ ವಾದ ವಾದರೆ, ಆರು-ಏಳು ಡಾಕ್ಟರ್ ಮತ್ತು ಏಳು -ಎಂಟು ಆಸ್ಪತ್ರೆಗಳ  ತೇಜೋವಧೆ ಮಾಡುವಂತಹ ಅವಶ್ಯಕತೆ ಅಥವಾ ಉದ್ದೇಶ ಜಾಸ್ಮಿನ್ ಅವರಿಗೆ  ಏನಿತ್ತು? ಎಂಬುದನ್ನು ಡಾಕ್ಟರ್ಗಳು ನ್ಯಾಯಾಲಯದಲ್ಲಿ ಸಮರ್ಥಿಸ ಬೇಕಾಗುತ್ತದೆ. ಒಂದು ವೇಳೆ ಡಾಕ್ಟರುಗಳು ಅಂತಹ ಒಂದು ಬಲವಾದ ಸಮರ್ಥನೆಯನ್ನು ನ್ಯಾಯಾಲಯದಲ್ಲಿ ನೀಡಲು ವಿಫಲರಾದರೆ, ಡಾಕ್ಟರ್ಗಳು ಮತ್ತು ಆಸ್ಪತ್ರೆಗಳು ಅಪರಾಧಿಗಳೆಂದು ತನ್ನಷ್ಟಕ್ಕೆ  ಧೃಡ ಗೊಳ್ಳುತ್ತದೆ.

 ಕೆಲವು ವೈದ್ಯರು - ತಾವು 'ಕೋವಿಡ್ ಒತ್ತಡದ ಅಡಿಯಲ್ಲಿ ಕಾರ್ಯವೆಸಗುತ್ತಿದ್ದೇವೆ', ಎಂದು ಹೇಳಿಕೆ ನೀಡಿದ್ದಾರೆ. ಆದರೆ,ಇದು ಅವರ ಕರ್ತವ್ಯ, ಅವರು ಮಾಡುವ ಉಪಕಾರವಲ್ಲ ಎನ್ನು ವುದು  ಅವರಿಗೆ ಚೆನ್ನಾಗಿ  ಗೊತ್ತಿರಬೇಕು. ನಮ್ಮ ನಗರಗಳನ್ನು ಸ್ವಚ್ಛ ಇಡುವ ನಮ್ಮ ಪೌರಕಾರ್ಮಿಕರು, ನಮ್ಮ ವೈದ್ಯರು ಗಳಿಗಿಂತಲೂ ಹೆಚ್ಚು ಒತ್ತಡದ ಮತ್ತು ಸಹಿಸಲಸಾಧ್ಯವಾದ ವಾತಾವರಣದಲ್ಲಿ  ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಸೈನಿಕರೂ ಅಷ್ಟೇ. ಅವರು ವೈದ್ಯಕೀಯ ವೃತ್ತಿ ಆರಿಸುವಾಗ, ಇದನ್ನೆಲ್ಲ ಅವರು ತಿಳಿದುಕೊಂಡಿರಬೇಕು. ಹವಾನಿಯಂತ್ರಿತ ಕೋಣೆಗಳಲ್ಲಿ, ಐಷಾರಾಮಿ ಕಾರುಗಳಲ್ಲಿ, ಬಂಗಲೆಗಳಲ್ಲಿ ಜೀವಿಸುವುದು.. ನಾಣ್ಯದ ಒಂದು ಮುಖವಾದರೆ, ಇಂಥ ವಿಪತ್ತುಗಳಲ್ಲಿ ವೈದ್ಯಕೀಯ ಸೇವೆ ಸಲ್ಲಿಸುವುದು ನಾಣ್ಯದ ಇನ್ನೊಂದು ಮುಖ. ಯಾರೂ ನಾಣ್ಯದ ಒಂದು ಮುಖ ಮಾತ್ರ ಆರಿಸುವಂತಿಲ್ಲ. ಇಂಥ ಸಂದರ್ಭಗಳಲ್ಲಿ ಕೆಲಸ ಮಾಡುವುದು ಯಾವನಾದರೂ ವೈದ್ಯರಿಗೆ ಕಷ್ಟವಾದರೆ, ಅವರು ವೃತ್ತಿಯಿಂದ ಈಗಲೂ ನಿವೃತ್ತಿ  ಪಡೆಯಬಹುದು. ಇನ್ನು, ವೈದ್ಯಕೀಯ ಮತ್ತು ಆಸ್ಪತ್ರೆಗಳ ವಲಯದಲ್ಲಿ ಭ್ರಷ್ಟಾಚಾರ ( ಮಾಫಿಯಾ) ನಮ್ಮ ದೇಶದಲ್ಲಿ ಮಿತಿಮೀರಿದೆ ಎಂದು ಅನೇಕ ಪ್ರತಿಷ್ಠಿತ ವೈದ್ಯರೇ  ಬಹಿರಂಗವಾಗಿ ಒಪ್ಪುತ್ತಾರೆ. ಜನಸಾಮಾನ್ಯರು ಅದನ್ನು ಅನುಭವಿಸುತ್ತಿದ್ದಾರೆ. ಯೂಟ್ಯೂಬ್ನಲ್ಲಿ ಈಗಲೂ ಲಭ್ಯವಿರುವ,ಸಿನಿಮಾ ನಟ ಅಮೀರ್ ಖಾನ್ ಅವರ ಧಾರವಾಹಿ, 'ಸತ್ಯಮೇವ ಜಯತೆ' ನೋಡಿದರೆ, ವೈದ್ಯರು ರೋಗಿಗಳಿಗೆ ನೀಡಲಾಗುವ ಅನಾವಶ್ಯಕ ಔಷಧಿಗಳು ಮತ್ತು ಅದಕ್ಕಾಗಿ ಔಷಧಿ ಕಂಪನಿಗಳಿಂದ ವೈದ್ಯರಿಗೆ ದೊರೆಯುವ  ದೊಡ್ಡಮಟ್ಟದ ಕಮಿಷನ್: ರಕ್ತಪರೀಕ್ಷೆ, ಸ್ಕ್ಯಾನ್, ಎಕ್ಸರೇ ಇತ್ಯಾದಿ ದುಬಾರಿ ಪರೀಕ್ಷೆಗಳನ್ನು ಸೂಚಿಸುವ ವೈದ್ಯರಿಗೆ ಲ್ಯಾಬ್ ನವರು ನೀಡುವ ಪಾಲು ಇತ್ಯಾದಿ ಸಮಾಜವಿರೋಧಿ ಚಟುವಟಿಕೆಗಳ ಬಗ್ಗೆ ಪ್ರತಿಷ್ಠಿತ ಡಾಕ್ಟರುಗಳು  ವೈಯಕ್ತಿಕವಾಗಿ ಟಿವಿ ಮುಂದೆ ಬಂದು ಸಂದರ್ಶನ ನೀಡಿದ್ದಾರೆ. ಇದನ್ನೆಲ್ಲಾ ನೋಡುವಾಗ, 'ಡಾಕ್ಟರ್- ಮಾಫಿಯಾ' ಕೇವಲ ಕಲ್ಪನೆ ಅಥವಾ ಆರೋಪ  ಅಲ್ಲ, ಅದೊಂದು  ಕಟು ಸತ್ಯ ಎಂಬುದು ಎಲ್ಲರಿಗೂ ಗೊತ್ತಿದೆ.

ಅದೇ ರೀತಿ, ಕ್ರಿಮಿನಲ್ ಕಾನೂನು ಕಡೆ ಬಂದರೆ, ಸೆಕ್ಷನ್ 269, 270, 307,385, 387, 506 & 34 ಭಾರತೀಯ ದಂಡ ಸಂಹಿತೆ ಅಡಿಯಲ್ಲಿ(IPC ) ಮಾನವ ಜೀವನಕ್ಕೆಹಾನಿಕಾರಕ ರೀತಿಯಲ್ಲಿ ವರ್ತಿಸುವುದು, ಕೊಲೆಯತ್ನ, ಪ್ರಾಣ ಬೆದರಿಕೆ ಒಡ್ಡಿ ಹಣ ಸುಲಿಗೆ ಮಾಡುವುದು, ಜೀವಬೆದರಿಕೆ ನೀಡುವುದು ಇತ್ಯಾದಿ ಇತ್ಯಾದಿ ಮತ್ತು Karnataka Epidemic Diseases Act, 2020- Sections 4,5,8 ಮತ್ತು14 ಹಾಗೂ  Disaster Management Act Section 51, 53,54  ರಡಿಯಲ್ಲಿ ಶಿಕ್ಷಾರ್ಹ ಗಂಭೀರ  ಅಪರಾಧಗಳು ಮೇಲೆ ಹೇಳಿದ ಡಾಕ್ಟರ್ ಮತ್ತು ಆಸ್ಪತ್ರೆಯವರ ವಿರುದ್ಧ ಆಕರ್ಷಿತವಾಗುತ್ತವೆ. ಅಲ್ಲದೆ, ಡಾಕ್ಟರ್ ಗಳ ಮತ್ತು ಆಸ್ಪತ್ರೆಗಳ ವಿರುದ್ಧ  ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲು  ನಿರಾಕರಿಸಿದ ಪೊಲೀಸ್ ಅಧಿಕಾರಿ ಕೂಡ  ಸೆಕ್ಷನ್ 166 ಐ.ಪಿ.ಸಿ ಅಡಿಯಲ್ಲಿಅಪರಾಧಿ ಯಾಗುತ್ತಾರೆ. ಪೊಲೀಸ್ ಸ್ಟೇಷನ್ ನಲ್ಲಿ ಅಪರಾಧ ಪ್ರಕರಣ ದಾಖಲಿಸಲು ತಿರಸ್ಕರಿಸಲ್ಪಟ್ಟರೆ , ಅದನ್ನು ನ್ಯಾಯಾಲಯಗಳ ಮೂಲಕ ದಾಖಲಾಗುವಂತೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ.

ಇಲ್ಲಸಲ್ಲದ್ದನ್ನು ಬಿಟ್ಟು,  ತಪ್ಪಿಸ್ಥರ ವಿರುದ್ಧ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳುವುದು, ಜಾಸ್ಮಿನ್ ಅವರಿಗೆ  ಇರುವಂತಹ ಅತ್ಯಂತ ಸೂಕ್ತವಾದ ಮತ್ತು ಉಪಯುಕ್ತವಾದ ಮಾರ್ಗ.

By: ಎಸ್. ಎಸ್. ಖಾಝಿ, ಅಡ್ವಕೇಟ್.

Mangalore Renowned Advocate S S Khazi briefs on Laws and Judicial system of Court on Jasmine Katija. Mangalore Denied timely treatment Covid pregnant woman files Complaint on Doctors at Kadri Police Station. Few backs back family of the woman had assaulted and threatened the doctor for not treating her because of Covid in which Doctor Jayaprakash Shetty had filed a complaint at the same Kadri Police Station.