ಬ್ರೇಕಿಂಗ್ ನ್ಯೂಸ್
07-06-21 03:22 pm Shreevatsa Joshi ಅಂಕಣಗಳು
ಅಗ್ಲಿಯೆಸ್ಟ್ ಲಾಂಗ್ವೇಜ್ ಯಾವುದು ಎಂದು ಪ್ರಶ್ನೆ ಟೈಪ್ ಮಾಡಿದರೆ ಕನ್ನಡ ಎಂಬ ಉತ್ತರ ತೋರಿಸುತ್ತಿದೆ ಗೂಗಲ್! - ಹೀಗೊಂದು ‘ಒಂದು ದಿನದ ರಾದ್ಧಾಂತ’ (ಒಂದು ದಿನದ ಕ್ರಿಕೆಟ್ ಪಂದ್ಯ ಇದ್ದಂತೆ) ನಡೆಯಿತು ಮೊನ್ನೆ ಗುರುವಾರದ ದಿನ. ಕರ್ನಾಟಕದೊಳಗಣ ಅಷ್ಟೇ ಅಲ್ಲ ಜಗದಗಲ ಹರಡಿರುವ ಕನ್ನಡಿಗರನ್ನೆಲ್ಲ ಅದು ರೊಚ್ಚಿಗೆಬ್ಬಿಸಿತಂತೆ. ವಾಟ್ಸಪ್ ಫೇಸ್‌ಬುಕ್ ಇತ್ಯಾದಿ ಸೋಶಿಯಲ್ ಮೀಡಿಯಾದಲ್ಲಿ ಆ ರೊಚ್ಚು ಕಾಳ್ಗಿಚ್ಚಿನಂತೆ ಹರಡಿತು. ನವಂಬರ್ ಮಾಸದ ಮೂವತ್ತು ದಿನಗಳನ್ನು ಹೊರತುಪಡಿಸಿ ಮಿಕ್ಕಂತೆ ವರ್ಷವಿಡೀ ಗಾಢನಿದ್ರೆಯಲ್ಲಿರುವ ಕನ್ನಡಾಭಿಮಾನವು ಜೂನ್ 3ರಂದು, ದುಃಸ್ವಪ್ನ ಕಂಡವರಂತೆ ಹಠಾತ್ತನೆ ಎಚ್ಚರವಾಗಿ ಚೀರಿತು. ಅರವಿಂದ ಲಿಂಬಾವಳಿ, ಪಿ.ಸಿ.ಮೋಹನ್, ಎಚ್.ಡಿ.ಕುಮಾರಸ್ವಾಮಿ... ಹೀಗೆ ಪಕ್ಷಭೇದ ಮರೆತು ಕರ್ನಾಟಕದ ರಾಜಕಾರಣಿಗಳು ಮೈಗೆ ಮಿರಮಿರ ತೋರುವಷ್ಟು ಎಣ್ಣೆ ಹಚ್ಚಿಕೊಂಡು ವೀರಗಚ್ಚೆ ಟೈಟ್ ಮಾಡಿಕೊಂಡು ಟ್ವಿಟ್ಟರ್ ಎಂಬ ಅಖಾಡಕ್ಕಿಳಿದರು. ವಿಜಯನಗರ ವೈಭವವೂ ಸೇರಿದಂತೆ ಕನ್ನಡದ ಹಿರಿಮೆಯನ್ನು ಸಾರಿ ಹೇಳುತ್ತ ಗೂಗಲ್‌ನ ಮುಸುಡಿಗೆ ಸೈಬರ್-ಗಾಳಿಯಲ್ಲೇ ಎರಡು ಗುದ್ದಿದರು. ಅಷ್ಟಕ್ಕೇ ಥರಥರ ನಡುಗಿದ ಗೂಗಲ್ ತನ್ನದಲ್ಲದ ತಪ್ಪಿಗೆ ಸಾರಿ ಹೇಳಿತು. ಇದೊಂದು ಪ್ರಳಯಸದೃಶ ಘಟನೆ ಘಟಿಸಿತೋ ಎಂಬಂತೆ, ಕೋವಿಡ್-ಗೀವಿಡ್ ಎಲ್ಲ ಇದರ ಮುಂದೆ ಏನೂ ಅಲ್ಲ ಎಂಬಂತೆ, ಭಾರತದ ಮಾಧ್ಯಮಗಳಷ್ಟೇ ಅಲ್ಲ, ಬಿಬಿಸಿ ಮತ್ತು ನ್ಯೂಯಾರ್ಕ್ ಟೈಮ್ಸ್ ಸಹ ‘ಅಗ್ಲಿಯೆಸ್ಟ್ ಲಾಂಗ್ವೇಜ್ ಕನ್ನಡ ಎಂದು ಗೂಗಲ್ ಹೇಳಿದೆ, ಕನ್ನಡಿಗರ ಕ್ರೋಧಕ್ಕೆ ತುತ್ತಾಗಿ ಕ್ಷಮೆ ಕೇಳಿದೆ’ ಎಂದು ಜಗತ್ತಿಗೆಲ್ಲ ಸಾರಿ ಹೇಳಿದವು. ಅತ್ತ ಕನ್ನಡಮ್ಮ ಭುವನೇಶ್ವರಿಯು ಉಟ್ಟುಕೊಂಡ, ಆಗಲೇ ಸಾಕಷ್ಟು ಮಾಸಲಾಗಿರುವ, ಕಡುಹಸುರು ಬಣ್ಣದ ಸಾರಿ ಹೇಳಿತು: ‘ಗೂಗಲ್ ಆ ರೀತಿ ಹೇಳಿದ್ದರಲ್ಲಿ ತಪ್ಪಿಲ್ಲ. ಗೂಗಲ್ ಎಲ್ಲಿಂದ ಆ ಮಾಹಿತಿಯನ್ನು ಸಂಗ್ರಹಿಸಿತೋ ಅವರದೂ ತಪ್ಪಿಲ್ಲ. ಒಂದಾನೊಂದು ಕಾಲದಲ್ಲಿ ನಾನು ಲೋಕಸುಂದರಿ ಆಗಿದ್ದದ್ದು ಹೌದು. ಆದರೆ ಈಗಿನ ಕನ್ನಡಿಗರು ನೀವೆಲ್ಲ ಸೇರಿ ಯದ್ವಾತದ್ವಾ ನನ್ನ ಅಗ್ಲೀಕರಣ ಮಾಡಿದ್ದೀರಿ, ಮಾಡುತ್ತಲೇ ಇದ್ದೀರಿ. ಗಮನಿಸಿದ ಹೊರಗಿನವರು ‘ಕಂಡದ್ದು ಕಂಡಹಾಗೆ ಹೇಳಿದ್ರೆ’ ನೀವೇಕೆ ಕೆಂಡದಂಥ ಕೋಪ ಮಾಡ್ಕೊಳ್ತೀರಿ?’
ಒಮ್ಮೆ ತಣ್ಣಗೆ ಕುಳಿತುಕೊಂಡು ಶಾಂತಚಿತ್ತದಿಂದ ಯೋಚಿಸೋಣ. ಪ್ರಪಂಚದ ಯಾವುದೇ ಭಾಷೆಯಾದರೂ ಅದು ಕುರೂಪಿ ಅಥವಾ ಕೊಳಕಿನದು ಎಂದು ಇರುತ್ತದೆಯೇ? ಭಾಷೆಯನ್ನಾಡುವ ಜನರ ಮನಸ್ಸು ಕೊಳಕಿನದಿರಬಹುದೇ ವಿನಾ ಭಾಷೆ ಹೇಗೆ ಕೊಳಕಾಗುತ್ತದೆ? ಭಾಷೆ ಎಂಬುದು ಮನುಷ್ಯರ ನಡುವೆ ಸಂವಹನಕ್ಕೊಂದು ಸಾಧನ ಅಷ್ಟೇ. ಆಯ್ತಪ್ಪಾ, ಯಾವನೋ ಕಿಡಿಗೇಡಿಯು ತಮಾಷೆ ನೋಡಲಿಕ್ಕಂತ ‘ಅಗ್ಲಿಯೆಸ್ಟ್ ಲಾಂಗ್ವೇಜ್ ಕನ್ನಡ’ ಎಂದು ವೆಬ್‌ಸೈಟ್ ಒಂದರಲ್ಲಿ ಹಾಕಿಟ್ಟ ಅಂತಿಟ್ಕೊಳ್ಳೋಣ; ಕೆಲಸವಿಲ್ಲದ ಬಡಗಿಗಳಾರೋ ‘ಅಗ್ಲಿಯೆಸ್ಟ್ ಲಾಂಗ್ವೇಜ್ ಯಾವುದು?’ ಎಂದು ಗೂಗಲ್‌ಗೆ ಪ್ರಶ್ನೆಯ ರೂಪದಲ್ಲಿ ಮಗುವಿನ ಅಂಡು ಕೆತ್ತುವ ಕೆಲಸ ಮಾಡಿದರು ಅಂತಿಟ್ಕೊಳ್ಳೋಣ; ಗೂಗಲ್ ತನ್ನ ಆಲ್ಗೋರಿದಂನಂತೆ ಸಿಕ್ಕ ಆ ಏಕಮಾತ್ರ ವೆಬ್‌ಸೈಟ್‌ನತ್ತ ಬೆರಳು ತೋರಿಸುತ್ತ ‘ಕನ್ನಡ’ ಎಂಬ ಉತ್ತರ ಕೊಟ್ಟಿತು ಅಂತಿಟ್ಕೊಳ್ಳೋಣ; ಏನೀಗ? ಆ ಹುಚ್ಚುನಾಯಿಗಳೆಲ್ಲ ಎಲ್ಲೋ ಮೂಲೆಯೊಂದರಲ್ಲಿ ಬೊಗಳಿದ ಮಾತ್ರಕ್ಕೇ ಕನ್ನಡ ಭಾಷೆ ಎಂಬ ದೇವಲೋಕ ಹಾಳಾಗುತ್ತದೆಯೇ? ಇದೂ ಒಂದು ಗಲಾಟೆ ಎಬ್ಬಿಸುವ ವಿಷಯವೇ? ಏನಾಗಿದೆ ನಮಗೆಲ್ಲ? ‘ಅಗ್ಲಿಯೆಸ್ಟ್ ಲಾಂಗ್ವೇಜ್ ಕನ್ನಡ’ ಎಂದು ಗೂಗಲ್‌ನಲ್ಲಿ ಟೈಪ್ ಮಾಡಿದಾಗ ಫಲಿತಾಂಶದಲ್ಲಿ ಆ ಕಿಡಿಗೇಡಿಯ ಒಂದೇ ವೆಬ್‌ಸೈಟ್ ಕಾಣುತ್ತಿದ್ದದ್ದಾದರೆ ಈಗ ಈ ಗಲಾಟೆಯಿಂದಾಗಿ ಅದೇ ಹುಡುಕು-ಪದಗಳಿಗೆ ನೂರಾರು ವೆಬ್‌ಸೈಟ್‌ಗಳ ಪಟ್ಟಿ ಬರುತ್ತದೆ! ಮೇಲೆ ಹೇಳಿದಂತೆ ನ್ಯೂಯಾರ್ಕ್ ಟೈಮ್ಸ್ ಮತ್ತು ಬಿಬಿಸಿಯಿಂದ ಹಿಡಿದು ‘ನಿಮಗಿದು ಗೊತ್ತೇ? ಗೊತ್ತಾದರೆ ಬೆಚ್ಚಿ ಬೀಳುತ್ತೀರಾ! ಶಾಕ್ ಆಗುತ್ತೀರಾ!’ ಎಂದು ಬೊಬ್ಬಿರಿಯುವ ಮೂರ್ಕಾಸಿನ ಜಾಲತಾಣಗಳವರೆಗೆ ಎಲ್ಲವೂ! ಇದು ಥೇಟ್ ಆ ‘ಬುದ್ಧಿವಂತನಿಗೆ ಮೂರುಕಡೆ’ ಕಥೆಯಂತೆಯೇ. ಅದೇ- ಹಳ್ಳಿಯ ಊರಿನ ಒಂದು ಕಾಲುದಾರಿಯಲ್ಲಿ ರಾತ್ರಿ ಒಬ್ಬ ದಡ್ಡ ನಡೆದುಕೊಂಡು ಹೋಗುತ್ತಿದ್ದ. ಅವನ ಕಾಲಿಗೆ ಏನೋ ಮೆತ್ತನೆ ವಸ್ತು ತಾಗಿದಂತಾಯಿತು. ಎಂಥದೋ ಏನೋ ಎಂದು ಅಂಗಾಲನ್ನು ರಸ್ತೆಗೆ ಒರೆಸಿ ಮುಂದೆ ಹೊರಟುಹೋದ. ಸ್ವಲ್ಪ ಹೊತ್ತಾದಮೇಲೆ ಅದೇ ದಾರಿಯಲ್ಲಿ ಬುದ್ಧಿವಂತನೊಬ್ಬ ನಡೆದು ಬಂದ. ಅವನ ಕಾಲಿಗೂ ಅದು ಸ್ವಲ್ಪ ತಾಗಿತು. ಅರೆರೆ! ಇದು ಏನಿರಬಹುದೆಂದು ಅಂಗಾಲಿನಲ್ಲಿಯೇ ನೆಲಕ್ಕೆ ಆಚೀಚೆ ತೀಡಿ ನೋಡಿದ. ಅಂಗಾಲಿಗೆಲ್ಲಾ ತಣ್ಣಗೆ ಆಯಿತೇ ವಿನಾ ಅದು ಏನೆಂದು ತಿಳಿಯಲಿಲ್ಲ. ಆಗ ಕೈಗೆ ಒರೆಸಿಕೊಂಡು ಬೆರಳುಗಳಿಂದ ತಿಕ್ಕಿ ನೋಡಿದ. ಆಗಲೂ ಹೊಳೆಯಲಿಲ್ಲ. ವಾಸನೆಯಿಂದಾದರೂ ಗುರುತಿಸೋಣ ಎಂದು ಮೂಸಿ ನೋಡಿದ. ಅದು ಮೂಗಿಗೂ ಸಾಕಷ್ಟು ತಾಗಿತು. ಕೊನೆಗೆ ನೋಡಿದರೆ ಥೂ... ಯಾರೋ ನಡುದಾರಿಯಲ್ಲಿ ರಸ್ತೆಯಲ್ಲಿ ಹೇತು ಹೋಗಿದ್ದರು. ಅದನ್ನು ತುಳಿದಿದ್ದರೂ ಅಷ್ಟೇನೂ ತಲೆಕೆಡಿಸಿಕೊಳ್ಳದ ದಡ್ಡ ಅಲ್ಲೇ ರಸ್ತೆಗೆ ಒರೆಸಿ ಕಾಲನ್ನು ಸ್ವಚ್ಛಗೊಳಿಸಿ ಮುಂದೆ ಸಾಗಿದ್ದ. ಬಹಳ ವಿಚಾರ ಮಾಡಲು ಹೊರಟ ಬುದ್ಧಿವಂತನಿಗಾದರೋ ಕಾಲು, ಕೈ ಮತ್ತು ಮೂಗು- ಹೀಗೆ ಮೂರು ಕಡೆ ಹೊಲಸಾಯಿತು! ಅಗ್ಲಿಯೆಸ್ಟ್ ಲಾಂಗ್ವೇಜ್ ವಿಚಾರಕ್ಕೆ ರೊಚ್ಚಿಗೆದ್ದ ಕನ್ನಡಿಗರು ಆ ಬುದ್ಧಿವಂತನಿಗಿಂತಲೂ ಹೆಚ್ಚು ಬುದ್ಧಿ ತೋರಿದವರಾದರಲ್ಲ!
ಮೊನ್ನೆ ಕನ್ನಡಿಗರು ತೋರಿದ ರೊಚ್ಚು ‘ಕನ್ನಡಿಗರ ಭಾಷಾಭಿಮಾನವನ್ನು ಜಗತ್ತಿಗೇ ಸಾರಿತು!’ ಎಂದು ಯಾರಾದರೂ ಅಂದುಕೊಂಡರೆ ಅದರಷ್ಟು ಮೂರ್ಖತನ ಇನ್ನೊಂದಿಲ್ಲ. ಏಕೆಂದರೆ ಆ ರೊಚ್ಚಿನಿಂದ ಬೆತ್ತಲೆಯಾದದ್ದು ಈಗಿನ ಬಹಳಷ್ಟು ಕನ್ನಡಿಗರ ಟೊಳ್ಳುತನ ಮತ್ತು ಆತ್ಮವಿಶ್ವಾಸದ ಕೊರತೆ. ಅಲ್ಲವೇ ಮತ್ತೆ? ನಮ್ಮನ್ನು ಯಾರಾದರೂ ಹಳಿದರೆ ನಮಗದು ತಾಗುವುದು, ನಾವು ವ್ಯಗ್ರರಾಗುವುದು ಯಾವ ಸಂದರ್ಭಗಳಲ್ಲಿ? ಅವರು ಹಳಿಯುವುದರಲ್ಲಿ ಸ್ವಲ್ಪವಾದರೂ ಸತ್ಯಾಂಶವಿದ್ದಾಗ ಮಾತ್ರ. ಇಲ್ಲಿ ಈ ವಿಚಾರದಲ್ಲಿ ಮೋದಿಯವರ ಹೆಸರನ್ನು ತರುವುದಕ್ಕೆ ಏನೇನೂ ಸಂಬಂಧವಿಲ್ಲವಾದರೂ ಸುಲಭವಾಗಿ ಉದಾಹರಣೆಗೆ ಸಿಗುವವರು ಈಗ ಬಹುಶಃ ಅವರೊಬ್ಬರೇ. ಮೋದಿಯವರನ್ನು ಹಗಲಿರುಳೂ ಹಳಿಯುತ್ತಲೇ ಇರುವವರು ಒಬ್ಬಿಬ್ಬರೇ? ಮೇಲ್ನೋಟಕ್ಕೆ ನಾನಾ ಕಾರಣಗಳಿಗೆ, ಅಂತಿಮವಾಗಿ ಸ್ವಾರ್ಥದ ಒಂದೇ ಕಾರಣಕ್ಕೆ, ಮೋದಿನಿಂದನೆಯಲ್ಲೇ ದಿನದ ಇಪ್ಪತ್ತನಾಲ್ಕು ಗಂಟೆಗಳನ್ನೂ ವಾರದ ಏಳು ದಿನಗಳನ್ನೂ ಕಳೆಯುವ ಬಾಯಿಬಡುಕರು ಪ್ರಪಂಚದಲ್ಲಿ ಲಕ್ಷಾಂತರ ಜನರಿದ್ದಾರೆ. ಒಬ್ಬನ ಟೀಕೆಗಾದರೂ ಮೋದಿ ಉತ್ತರಿಸಲಿಕ್ಕೆ ಹೋಗುತ್ತಾರೆಯೇ? ವಿಚಲಿತರಾಗುತ್ತಾರೆಯೇ? ಇಲ್ಲ! ಏಕೆಂದರೆ ತನ್ನ ಇಂಟೆಗ್ರಿಟಿ ಏನೆಂಬುದು ಮತ್ತು ಅದು ಎಷ್ಟು ಸುದೃಢವಾದುದು ಎಂಬುವುದು ಮೋದಿಯವರಿಗೆ ಗೊತ್ತಿದೆ. ಆದ್ದರಿಂದ ಸುಮ್ಮನಿರುತ್ತಾರೆ. ಹೆಚ್ಚೆಂದರೆ ‘ಈ ಬೈಗುಳಗಳನ್ನೇ ನನ್ನ ಸ್ಟೇಪಲ್ ಫುಡ್ ಎಂದು ದಿನಾ ಸೇವಿಸುತ್ತಿದ್ದೇನೆ, ಇದೇ ನನ್ನ ಸೀಕ್ರೆಟ್ ಆಫ್ ಎನರ್ಜಿ’ ಎಂದು ಮಾತನ್ನು ಹಾರಿಸಿಬಿಡುತ್ತಾರೆ. ಈ ಗುಣವನ್ನು ನಾವೆಲ್ಲ ಏಕೆ ಮೈಗೂಡಿಸಿಕೊಳ್ಳುವುದಿಲ್ಲ? ಕನ್ನಡ ಭಾಷೆಯ ಹಿರಿಮೆ-ಗರಿಮೆ ನಮಗೆ ಸರಿಯಾಗಿ ಗೊತ್ತಿದೆಯಾದರೆ, ಕನ್ನಡ ಭಾಷೆಯ ಬಗ್ಗೆ ಅತ್ಯಂತ ಸಹಜ ರೀತಿಯ ಅಭಿಮಾನ ನಮಗಿದೆಯಾದರೆ, ‘ಅಗ್ಲಿಯೆಸ್ಟ್ ಲಾಂಗ್ವೇಜ್ ಕನ್ನಡ’ ಎಂದು ಯಾವನೋ ಬಾಯಿಬಡುಕ ಹೇಳಿಕೊಂಡರೆ ನಾವೇಕೆ ವಿಚಲಿತರಾಗಬೇಕು? ಆಗಬಾರದಿತ್ತು. ಆದೆವು, ರೊಚ್ಚಿಗೆದ್ದೆವು. ಏಕೆಂದರೆ ಕನ್ನಡ ಭಾಷೆಯ ಹಿರಿಮೆ ಗರಿಮೆಗಳ ಅರಿವು, ಅಭಿಮಾನ ನಮ್ಮಲ್ಲಿ ಶಿಥಿಲವಾಗಿದೆ. ಅವುಗಳ ಜಾಗವನ್ನು ಒಂಥರದ ಅನಾದರ, ಅಸಡ್ಡೆ, ಉಡಾಫೆಗಳು ಆಕ್ರಮಿಸಿಕೊಂಡಿವೆ. ಅಭಿಮಾನವೇನಿದ್ದರೂ ತೋರ್ಪಡಿಕೆ, ಅದೂ ನವೆಂಬರ್ ತಿಂಗಳಲ್ಲಿ ಮಾತ್ರ.
ಕನ್ನಡಮ್ಮ ಭುವನೇಶ್ವರಿಗೆ ಭಯಂಕರ ನಗು ಬಂದಿರಬೇಕು ಮೊನ್ನೆಯ ಗೂಗಲ್ ಘಟನೆಯನ್ನು ಕನ್ನಡದ ಸುದ್ದಿವಾಹಿನಿಗಳೂ ಸುದ್ದಿಯಾಗಿಸಿದಾಗ. ಅಲ್ಲ, ಕನ್ನಡವನ್ನು ಕೊಚ್ಚಿಕೊಚ್ಚಿ ಕುರೂಪಗೊಳಿಸುವುದನ್ನೇ ಕಾಯಕವಾಗಿಸಿಕೊಂಡಿರುವ ಈ ದರಿದ್ರ ವಾಹಿನಿಗಳಿಗೆ ಗೂಗಲ್ ಘಟನೆಯನ್ನು ಬಣ್ಣಬಳಿದು ಹೇಳುವುದಕ್ಕೆ ನೈತಿಕ ಹಕ್ಕಾದರೂ ಇದೆಯೇ? ಅವುಗಳ ನಿತ್ಯಪ್ರಾರ್ಥನೆಯೇ ‘ಕೊಚ್ಚೇವು ಕನ್ನಡದ shapeಅ... ಪದಪದದ ಶೇಪ... ವಾಕ್ಯಗಳ shapeಅ... ಕೊಚ್ಚುತ್ತ ಭಾಷೆಯು ಕುರೂಪ ಕೊಚ್ಚೇವು ಕನ್ನಡದ shapeಅ...’ ಎಂದು. ಹೌದು, ಅದೊಂದು ಅಣಕವಾಡು. ಈಗ ಹೇಳಿದ್ದು ಅದರ ಪಲ್ಲವಿಯನ್ನಷ್ಟೇ. ಮೂರು ಚರಣಗಳನ್ನೂ ಗಮನಿಸಿ ಆಮೇಲೆ ಹೇಳಿ ಇದು ಕನ್ನಡದ ಸುದ್ದಿವಾಹಿನಿಗಳಿಗೆ ಹೊಂದುತ್ತದೋ ಇಲ್ಲವೋ ಎಂದು. ಇಲ್ಲಿದೆ ಓದಿ: ‘ಬಲು ದಿನಗಳಿಂದ ವಾಹಿನಿಗಳಿಂದ ಕನ್ನಡವ ಕೊಚ್ಚೇ ಸಾಗೇವು| ಎಲ್ಲೆಲ್ಲಿ ‘ಅ’ ಇರಲು ಅಲ್ಲಲ್ಲಿ ‘ಹ’ ವೇ... ಎಲ್ಲೆಲ್ಲಿ ‘ಹ’ ವೋ ಅಲ್ಲಿಯೇ ‘ಅ’| ದ ಎಂದು ಇರಲಿ, ಧ ಎಂದು ಇರಲಿ ನಮಗೆಲ್ಲ ಒಂದೇ ಹುಚ್ಚಾರ| ಕೊಚ್ಚೇವು ಬರಹ ಕೊಚ್ಚೇವು ನುಡಿಯ ಕೊಚ್ಚೇವು ನಿಮ್ಮ ಸಿಹಿನುಡಿಯ| ನಮ್ಮ ನಾಲ್ಗೆ ಸೀಳಿ ಉಪ್ಹಾಕಿದ್ರೂನೂ ಕೊಚ್ಚೇವು ಕನ್ನಡದ shapeಅ ||1|| ಬ್ಲರ್ ಆದ ಚಿತ್ರ ಸ್ಕ್ರೋಲಿಂಗ್ ವಿಚಿತ್ರ ಅರ್ಥ ಅನರ್ಥಗಳ ಬೀರೇವು| ಕೊಚ್ಚಿರುವ ರೂಪದಲಿ ತಾಯ್ನುಡಿಯನು ಅಚ್ಚಳಿಯದಂತೆ ತೋರೇವು| ಒಡಲೊಳಲ ಕೊಚ್ಚೆಯ ಕಿಡಿಗಳನ್ನು ನಿಮ್ಮ ಬೆಡ್ರೂಮಿಗೇ ತೂರೇವು| ಏರಿರಲು ಟಿಆರ್ಪಿ ಎಲ್ಲಿಹುದು ಭೀತಿ ನಮಗಿರಲಿ ನಿಮ್ಮ ಹಿಡಿಶಾಪ| ಮನೆಮನೆಗಳಲ್ಲಿ ಮನಮನಗಳಲ್ಲಿ ಕೊಚ್ಚೇವು ಕನ್ನಡದ shapeಅ ||2|| ನಮ್ಮವರು ಕಟ್ಟಿದ ಚಾನೆಲ್‌ಉಳಿಸಲು ಹೆಲ್ಲಾರೂ ಹೊಂದುಗೂಡೇವು| ನಿಮ್ಮೆದೆಯು ನಡುಗುವೀ ಮಾತಿನಲ್ಲಿ ಮಾತುಗಳ ಪೂಜೆ ಮಾಡೇವು| ನಮ್ಮುಸಿರು ಟಿಆರ್‌ಪಿ ಎಂಬುದೊಂದೇ ಮಂಗಗಳ ಗೀತ ಹಾಡೇವು| ತೊರೆದೇವು ಬಾಲ ಕಡೆದೇವು ಕೊಂಬ ಪಡೆದೇವು ಅಕ್ಷರಕೆ ಹೊಸರೂಪ| ಕರುಳನ್ನು ಕಿವುಚಿ ಕೊರಳನ್ನು ತಿರುಚಿ ಕೊಚ್ಚೇವು ಕನ್ನಡದ shapeಅ ||3||’ - ಈಗ ಹೇಳಿ. ಕನ್ನಡವನ್ನು ‘ಅಗ್ಲಿಯೆಸ್ಟ್’ ಮಾಡುತ್ತಿರುವವರಾರು? ಕನ್ನಡಿಗರು ನಿಜವಾಗಿ ರೊಚ್ಚಿಗೇಳಬೇಕಾಗಿದ್ದು ಯಾರ ವಿರುದ್ಧ? ಈ ಕೊಚ್ಚು ಕೊಲೆಗಡುಕರ ಮೇಲೆ ಅಲ್ಲವೇ? ಸುದ್ದಿನಿರೂಪಣೆಯೆಂದು ವಿಕರಾಳ ಕೊರಳಿಂದ ಇಪ್ಪತ್ತನಾಲ್ಕು ಇನ್‌ಟು ಸೆವೆನ್ ಕಿರಿಚುತ್ತಲೇ ಇರುವ ಪಿಶಾಚಿಗಳ ವಿರುದ್ಧವಲ್ಲವೇ?
ಕನ್ನಡ ಭಾಷೆಯ ‘ಅಗ್ಲೀಕರಣ’ದಲ್ಲಿ ಕನ್ನಡ ಪತ್ರಿಕೆಗಳ ಪಾತ್ರವೂ ಕಮ್ಮಿಯೇನಲ್ಲ. ಒಂದು ಕಾಲವಿತ್ತು, ಪತ್ರಿಕೆಗಳನ್ನೋದಿ ಭಾಷಾಜ್ಞಾನ ಹೆಚ್ಚಿಸಿಕೊಳ್ಳಬಹುದು ಎಂಬ ನಂಬಿಕೆ. ಅದು ಸಂಪೂರ್ಣ ಸತ್ಯದ್ದಾಗಿತ್ತು. ಈಗಿನ ಪತ್ರಿಕೆಗಳ ಭಾಷೆಯೋ, ಪುಟಪುಟದಲ್ಲೂ ಪುಟಿದೆದ್ದು ಕುಣಿಯುವ ತಪ್ಪುಗಳೋ, ವಿಭಕ್ತಿಪ್ರತ್ಯಯಗಳಿಗೆಲ್ಲ ತಿಲಾಂಜಲಿಯಿತ್ತು ಛಾಪಿಸುವ ‘ಅಜ್ಜಿ ಕೊಂದ ಆನೆ, ಗಾಂಧಿ ಬೈದ ಭೈರಪ್ಪ’ ರೀತಿಯ ತಲೆಬರಹಗಳೋ ದೇವರಿಗೇ ಪ್ರೀತಿ. ಅಕಾರ-ಹಕಾರಗಳ ಹಾಹಾಕಾರವಂತೂ ಸುದ್ದಿವಾಹಿನಿಗಳಲ್ಲಷ್ಟೇ ಇದ್ದದ್ದು ಈಗ ಪತ್ರಿಕೆಗಳಿಗೂ ದಾಳಿಯಿಟ್ಟಿದೆ. ಹಾಗಂತ ಈ ಅಧೋಗತಿ ಒಮ್ಮಿಂದೊಮ್ಮೆಲೇ ಆದದ್ದೇನಲ್ಲ. ರಸ್ತೆಯ ಡಾಮರೀಕರಣ, ರಸ್ತೆ ಅಗಲೀಕರಣ ಮುಂತಾದ ಕಲುಷಿತ ಕನ್ನಡ ಪದಬಳಕೆ ಪತ್ರಿಕೆಗಳಲ್ಲಿ ವರ್ಷಗಳ ಹಿಂದೆ ಆರಂಭವಾದಾಗಲೇ ವೆಂಕಟಸುಬ್ಬಯ್ಯರಂಥ ಭಾಷಾತಜ್ಞ ಮಹನೀಯರು ಆತಂಕ ವ್ಯಕ್ತಪಡಿಸಿದ್ದರು. ಈಗ ರಸ್ತೆ ಅಗಲೀಕರಣ ಅಲ್ಲ, ಪತ್ರಿಕೆಯ ತುಂಬೆಲ್ಲ ಕನ್ನಡ ಭಾಷೆಯ ‘ಅಗ್ಲೀಕರಣ’ ಆಗುತ್ತಿದೆ. ಕರಡು ತಿದ್ದುವ ಕ್ರಮವಿಲ್ಲ, ಅಸಲಿಗೆ ಅಂಥದೊಂದು ವಿಭಾಗವೇ ಇಲ್ಲ ಈಗ ಸುದ್ದಿಮನೆಗಳಲ್ಲಿ. ಹೀಗಾದರೆ ಕನ್ನಡ ಅಗ್ಲಿಯೆಸ್ಟ್ ಲಾಂಗ್ವೇಜ್ ಆಗದಿರುತ್ತದೆಯೇ? ಸುದ್ದಿವಾಹಿನಿಗಳು ಮತ್ತು ಪತ್ರಿಕೆಗಳನ್ನಷ್ಟೇ ದೂರಿದರಾಗದು. ‘ಭಾಷೆ ಇಲ್ಲದ’ ಸಿಬ್ಬಂದಿಗಳನ್ನು ವೃತ್ತಿಗೆ ತಯಾರು ಮಾಡಿ ಕಳುಹಿಸುವ ಶಿಕ್ಷಣ ಸಂಸ್ಥೆಗಳಲ್ಲಿದೆ ಈ ಸಮಸ್ಯೆಯ ಬೇರು. ಭಾಷಾಬೋಧನೆಗೆ ಮಹತ್ತ್ವ ಇಲ್ಲವೇಇಲ್ಲ. ಪಠ್ಯಪುಸ್ತಕಗಳಲ್ಲೇ ಪುಷ್ಕಳವಾಗಿ ತಪ್ಪುಗಳು. ಭಾಷಾವಿಷಯಗಳಲ್ಲೂ ಪರೀಕ್ಷೆಯಲ್ಲಿ 100/100 ಅಂಕ ಕೊಡುವ ಕ್ರಮ. ಆ ವಿದ್ಯಾರ್ಥಿಗೆ ಒಂದೂ ತಪ್ಪಿಲ್ಲದೆ ನೆಟ್ಟಗೆ ಒಂದು ಪ್ಯಾರಗ್ರಾಫ್‌ನಷ್ಟು ಕನ್ನಡದಲ್ಲಿ ಬರೆಯಲಿಕ್ಕೆ ಬರುತ್ತದೆಯೇ ಎನ್ನುವುದೂ ಅನುಮಾನವೇ. ವಿದ್ಯಾರ್ಥಿಗೆ ಏಕೆ, ಈಗಿನ ಎಷ್ಟೋ ಶಿಕ್ಷಕರಿಗೆ, ಸ್ನಾತಕೋತ್ತರ ಶಿಕ್ಷಣ ಪಡೆದ ಪ್ರಾಧ್ಯಾಪಕರಿಗೂ, ಕನ್ನಡ ಭಾಷೆಯಲ್ಲಿ ಒಂದು ಲೇಖನವನ್ನೋ ಪತ್ರ-ಪ್ರಬಂಧಗಳಂಥದ್ದನ್ನೋ ತಪ್ಪಿಲ್ಲದೆ ಬರೆಯುವುದು ಸಾಧ್ಯವಾಗುತ್ತಿಲ್ಲ. ಉನ್ನತ ಅಧಿಕಾರಿಗಳ ಕನ್ನಡವನ್ನಂತೂ ಕೇಳುವುದೇ ಬೇಡ. ಕೃತಜ್ಞ ಎಂದು ಬರೆಯಬೇಕಾದಲ್ಲಿ ಅವರು ಕೃತಘ್ನ ಎಂದೇ ಬರೆಯುತ್ತಾರೆ. ಹಾಗೆಯೇ ಉಚ್ಚರಿಸುತ್ತಾರೆ. ಕನ್ನಡ ಭಾಷೆಯ ಬಗೆಗೆ ಅವರ ಭಾವವೂ ಹಾಗೆಯೇ ಇದ್ದಮೇಲೆ ಬೇರೇನು ತಾನೆ ಮಾಡುತ್ತಾರೆ?
ಅಗ್ಲೀಕರಣದ ಹೊಣೆಗಾರರು ಇನ್ನೂ ಕೆಲವರಿದ್ದಾರೆ. ‘ಕನ್ನಡ ಭಾಷೆ ಮತ್ತು ಲಿಪಿ ರಿಪೇರಿಯಾಗಬೇಕಿದೆ, ಇಂಥಿಂಥ ಅಕ್ಷರಗಳನ್ನು ಕೈಬಿಡಬೇಕಾಗಿದೆ’ ಅಂತೆಲ್ಲ ಅರ್ಥಹೀನ ವಾದಗಳನ್ನು ಮಂಡಿಸುವ ಮೂರ್ಖ ಶಿಖಾಮಣಿಗಳು. ಕನ್ನಡ ಭಾಷೆಯನ್ನು ತಮ್ಮ ಕೈಗೂಸು ಎಂದುಕೊಂಡು ಕೆಲವರು ಅದಕ್ಕೆ ರಾಗಿಅಂಬಲಿ, ಕೆಲವರು ರವೆಗಂಜಿ, ಕೆಲವರು ಸಿರಿಲ್ಯಾಕ್, ಕೆಲವರು ಕುಚ್ಚಲಕ್ಕಿಗಂಜಿ, ಇನ್ನು ಕೆಲವರು ಗ್ರೈಪ್‌ವಾಟರ್... ಹೀಗೆ ತಮಗೆ ತೋಚಿದ ಆಹಾರವನ್ನೆಲ್ಲ ತಿನ್ನಿಸಿ ಈ ಕಾಲಮಾನದಲ್ಲಿ ಈ ಕೂಸಿನ ಹೊಟ್ಟೆ ಕೆಟ್ಟು ಹೊರಕಡೆ ಆಗುತ್ತಿರುವುದು. ಇದು ಅನಾರೋಗ್ಯಕರ ಬೆಳವಣಿಗೆ. ಸರಳವಾದ, ಸ್ಪಷ್ಟವಾದ, ಸಾಂಪ್ರದಾಯಿಕವಾದ, ಕಾಲದ ಓಟದಲ್ಲಿ ಉಳಿದು ಬೆಳೆದು ಬಂದ ಸುಂದರ ಭಾಷೆಯನ್ನು ನಾವ್ಯಾರೂ ರಿಪೇರಿ ಮಾಡಬೇಕಾಗಿಲ್ಲ. ಬಾಲ-ಕೊಂಬುಗಳನ್ನು ಕಡಿದು ಬಾಬ್‌ಕಟ್ ಮಾಡಿ ಸಿಂಗರಿಸಬೇಕಿಲ್ಲ. ಆದರೆ ಹಾಗೆ ಮಾಡಿಯೇ ತೀರುತ್ತೇವೆ ಎಂದು ಕೆಲವರದು ಮೊಂಡು ವಾದ. ಅಕ್ಷರಗಳ ಕೈಕಾಲು ಕತ್ತರಿಸಿ ಸರಳಗೊಳಿಸುತ್ತೇವೆ ಎನ್ನುವ ಅಲ್ಪಪ್ರಾಣಿಗಳು ಅವು. ಇನ್ನೊಂದು ನಮೂನೆ- ಟಿವಿ ವಾಹಿನಿಗಳಲ್ಲಿ ಕನ್ನಡದಲ್ಲಿ ಅಡುಗೆ ಕಾರ್ಯಕ್ರಮಗಳನ್ನು ನಡೆಸುವ ಕೆಲವು ನಾರೀಮಣಿಗಳದು. ಅವರು ಅಡುಗೆಗೆ ಸಂಬಂಧಿಸಿದ ಎಲ್ಲ ನಾಮಪದ ಕ್ರಿಯಾಪದಗಳಿಗೆ ಇಂಗ್ಲಿಷ್ ಪದಗಳನ್ನೇ ಬಳಸುತ್ತಾರೆ, ಅವುಗಳನ್ನು ಜೋಡಿಸುವ ವಿಭಕ್ತಿಪ್ರತ್ಯಯಗಳಷ್ಟೇ ಕನ್ನಡದವು. ಅಂದರೆ ಒಂದು ವಾಕ್ಯದಲ್ಲಿ ಸರಾಸರಿಯಾಗಿ ಹತ್ತು ಪದಗಳಿದ್ದರೆ ಅದರಲ್ಲಿ ಏಳು ಇಂಗ್ಲಿಷ್. ಮೂರು ಕನ್ನಡದವು. ಅವೂ ಎಲ್ಲ ಸರಿಯೇ ಇರುತ್ತವೆಂಬ ಭರವಸೆ ಇಲ್ಲ. ಮೂರನೆಯದು ಗೂಗಲ್ ಅನುವಾದ ಬಳಸುವವರ ಕನ್ನಡ. ಅವರಿಗೆ ‘ಡು ನೋಟ್ ಪಾಸ್ ಯುರಿನ್’ ಅಂತಿದ್ದದ್ದು ‘ಇಲ್ಲಿ ಮೂತ್ರ ತೇರ್ಗಡೆ ಹೊಂದಿಲ್ಲ’ ಆಗುತ್ತದೆ; ಮೆನ್ಸ್ ಆಕ್ಸೆಸ್ಸರೀಸ್ ಅಂತಿದ್ದದ್ದು ‘ಪುರುಷರ ಬಿಡಿಭಾಗಗಳು’ ಆಗುತ್ತದೆ. ದಂತಕಥೆ ಇದ್ದದ್ದು ಡೆಂಟಲ್ ಸ್ಟೋರಿ ಆಗುತ್ತದೆ!
157 ವಾರಗಳ ಹಿಂದೆ ನಾನು ‘ಸ್ವಚ್ಛ ಭಾಷೆ’ ಅಂತೊಂದು ಅಭಿಯಾನ ಆರಂಭಿಸಿದಾಗ ಕನ್ನಡ ಭಾಷೆ ಬಳಕೆ ಬಗ್ಗೆ ಜನರಲ್ಲಿ ಇಷ್ಟೊಂದು ಅಸಡ್ಡೆ ಅನಾದರ ಇವೆ ಎಂಬ ಕಲ್ಪನೆ ನನಗಿರಲಿಲ್ಲ. ಶಿಷ್ಟ ಬರವಣಿಗೆಯಲ್ಲಿ ಅಲ್ಲೊಂದು ಇಲ್ಲೊಂದು ಆಗುವ ತಪ್ಪುಗಳನ್ನು ಗುರುತಿಸಿ ತಿದ್ದಿಕೊಂಡು ನಾವೆಲ್ಲರೂ ಸೇರಿ ಸ್ವಚ್ಛ ಭಾಷೆ ಬಳಸುವುದನ್ನು ಕಲಿಯೋಣ ಎಂದು ನಾನು ಆ ಅಭಿಯಾನವನ್ನು ಆರಂಭಿಸಿದ್ದಾಗಿತ್ತು. ನಾನೇನೂ ಕನ್ನಡ ಪಂಡಿತನಲ್ಲ, ಎಲ್ಲ ಬಲ್ಲವನಂತೂ ಖಂಡಿತ ಅಲ್ಲ. ಆದರೆ ಕಾಗುಣಿತ ತಪ್ಪುಗಳು, ಶಬ್ದಗಳ ಅಶುದ್ಧ ರೂಪಗಳು, ಅಪಪ್ರಯೋಗಗಳು, ತಲೆಬುಡವಿಲ್ಲದ ವಾಕ್ಯರಚನೆ ಮುಂತಾದುವು ಆಟೋರಿಕ್ಷಾ ಹಿಂಬರಹಗಳಲ್ಲಿ ಅಂಗಡಿಮುಂಗಟ್ಟುಗಳ ಫಲಕಗಳಲ್ಲಿ ಮಾತ್ರ ಇರುತ್ತವೇನೋ ಎಂದುಕೊಂಡಿದ್ದ ನನಗೆ ಅವು ಕರ್ನಾಟಕ ಸರಕಾರದ ಸುತ್ತೋಲೆಗಳಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಆಹ್ವಾನಪತ್ರದಲ್ಲಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆಯಲ್ಲಿ, ಕೊನೆಗೆ ಕನ್ನಡ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಯ ಫೇಸ್‌ಬುಕ್ ಪೋಸ್ಟ್‌ನಲ್ಲೂ ನಿರ್ಭೀತವಾಗಿ ರಾರಾಜಿಸುತ್ತಿವೆ ಎಂಬ ಅರಿವಾದಾಗ ನಿಜಕ್ಕೂ ದಿಗಿಲಾಯಿತು. ಇದು ನಿಜಕ್ಕೂ ‘ಹರ ಕೊಲ್ಲಲ್ ಪರ ಕಾಯ್ವನೇ?’ ಎಂಬಂತಲ್ಲವೇ? ಕನ್ನಡದ ಗರ್ಭಗುಡಿಯಲ್ಲೇ ಕನ್ನಡ ಭಾಷೆಯೆಂಬ ದೇವತೆಗೆ ಅಪಚಾರವಾಗುತ್ತಿದೆಯೆಂದರೆ ಎಂಥ ದಾರುಣ ಸ್ಥಿತಿ! ಹಿಂದಿನ ಕಾಲದಲ್ಲಿ ಮೊಳೆಗಳಲ್ಲಿ ಉಲ್ಟಾ ಅಕ್ಷರಗಳನ್ನು ಜೋಡಿಸಿ ಮುದ್ರಿಸುತ್ತಿದ್ದ ಕಾಲದಲ್ಲಿ ಒಂದೇಒಂದು ತಪ್ಪು ಕೂಡ ನುಸುಳುತ್ತಿರಲಿಲ್ಲ. ಈಗ ಡಿಟಿಪಿ ಮಾಡುವವರಿಗೆ ಕಂಪ್ಯೂಟರ್ ಪರದೆಯ ಮೇಲೆ ನೇರವಾಗಿ ಅಕ್ಷರಗಳು ಕಾಣಿಸುವ ವ್ಯವಸ್ಥೆಯಿದ್ದರೂ ಮುದ್ರಣವಾದಾಗ ಹತ್ತಾರು ತಪ್ಪುಗಳು. ಇದೆಲ್ಲ ಅಜ್ಞಾನದಿಂದ ಆಗುತ್ತಿರುವುದಲ್ಲ. ಅಸಡ್ಡೆ, ಅನಾದರ, ಉಡಾಫೆ ಮತ್ತು ಉದಾಸೀನಗಳಿಂದ. ವಿಪರ್ಯಾಸವೆಂದರೆ ಇವೆಲ್ಲ ತಪ್ಪುಗಳು ಜನಸಾಮಾನ್ಯರಿಗೆ ತಪ್ಪುಗಳೆಂದು ಗೊತ್ತೂ ಆಗುವುದಿಲ್ಲ. ‘ಅಯ್ಯೋ ಇದ ಗಮನಿಸುವರೇ ಇಲ್ಲವೇನಿಲ್ಲಿ?’ ಎಂದು ವಿದ್ಯುದಾಲಿಂಗನಕ್ಕೆ ಸಿಕ್ಕಿ ಸತ್ತ ಕಾಗೆಯ ಬಗ್ಗೆ ಕವಿ ಹೇಳಿದ ಹಾಗೆ.
ಪರಿಸ್ಥಿತಿ ಹೀಗಿರಲು, ಅಗ್ಲಿಯೆಸ್ಟ್ ಲಾಂಗ್ವೇಜ್ ಕನ್ನಡ ಎಂದು ಯಾರಾದರೂ ಬಾಯಿಬಡುಕರು ಹೇಳಿದರೆ ಅದಕ್ಕೆ ರೊಚ್ಚಿಗೇಳುವುದಲ್ಲ. ಆ ಮಾತನ್ನು ಸ್ವಲ್ಪವಾದರೂ ಮನಸ್ಸು-ಹೃದಯಗಳಿಗೆ ಚುಚ್ಚಿಸಿಕೊಂಡು, ಹೀಗೇಕಾಯ್ತು, ಇನ್ನು ಮುಂದೆ ಹೀಗಾಗದಂತೆ ಏನು ಮಾಡಬಹುದು ಎಂದು ಪ್ರತಿಯೊಬ್ಬ ಕನ್ನಡಿಗನೂ ಕನ್ನಡಿತಿಯೂ ಗಂಭೀರವಾಗಿ ಯೋಚಿಸಬೇಕಿದೆ.
By: ಶ್ರೀವತ್ಸ ಜೋಶಿ
26-12-24 05:11 pm
HK News Desk
Bangalore Case, Advocate Dhahina Bhanu, Fraud...
26-12-24 04:45 pm
MLA Munirathna Egg Attack: ಶಾಸಕ ಮುನಿರತ್ನ ಮೇಲೆ...
25-12-24 10:50 pm
Ct Ravi, Inspector Suspended: ಸಿಟಿ ರವಿ ಬಂಧನ ಪ...
25-12-24 10:10 pm
Kashmir Accident, karnataka soldiers killed:...
25-12-24 12:46 pm
25-12-24 04:21 pm
HK News Desk
Mohan Bhagwat: ಮೋಹನ್ ಭಾಗವತ್ ಸಂಘವನ್ನು ನಡೆಸುತ್ತ...
24-12-24 09:17 pm
ಕಾಸರಗೋಡಿನಲ್ಲಿ ಅಲ್ ಖೈದಾ ಉಗ್ರರ ಸ್ಲೀಪರ್ ಸೆಲ್ ರಚಿ...
23-12-24 05:23 pm
ರಾಮ ಮಂದಿರದಂತಹ ವಿವಾದಗಳನ್ನು ಎಲ್ಲೆಂದರಲ್ಲಿ ಹುಟ್ಟು...
20-12-24 05:01 pm
ಅಂಬೇಡ್ಕರ್ ಘೋಷಣೆ ಫ್ಯಾಶನ್ ಆಗಿಬಿಟ್ಟಿದೆ ಎಂದ ಅಮಿತ್...
19-12-24 05:40 pm
26-12-24 07:07 pm
Udupi Correspondent
Mangalore, Martyr Anoop Poojary, Mp Brijesh C...
26-12-24 11:57 am
DJ artist Sajanka, Mangalore, New Year Party:...
25-12-24 10:55 pm
MP Brijesh Chowta, Mangalore, Railway: ಕೊಂಕಣ...
25-12-24 05:24 pm
Mangalore Rohan Estate Mukka, Riverside Layou...
24-12-24 02:35 pm
26-12-24 07:41 pm
Bangalore Correspondent
Fake Gold Loan, Mangalore Samaja seva sahakar...
25-12-24 02:41 pm
ಸೈಬರ್ ವಂಚಕರ ನಕಲಿ ಷೇರು ಮಾರುಕಟ್ಟೆ ಜಾಲ ; ಕೇರಳದಲ್...
24-12-24 11:05 pm
Bangalore cyber fraud, Crime: ಬೆಂಗಳೂರಿನ ಸಾಫ್ಟ...
22-12-24 07:23 pm
Mangalore Police, Cyber Fraud: ಕಮಿಷನ್ ಆಸೆಗೆ ಬ...
22-12-24 04:44 pm