ಪಣಂಬೂರು ಇಎಸ್ಐ ಡಿಸ್ಪೆನ್ಸರಿಯಲ್ಲಿ ಲಂಚ ಕೇಳಿ ಸಿಕ್ಕಿಬಿದ್ದ ಫಾರ್ಮಸಿಸ್ಟ್ ; ರೋಗಿಯಿಂದ ಹಣ ಪಡೀತಿದ್ದಾಗಲೇ ಅರೆಸ್ಟ್

04-06-22 09:31 pm       Mangalore Correspondent   ಕ್ರೈಂ

​​​​​​ಇಎಸ್ಐ ಪಣಂಬೂರು ವಿಭಾಗದ ಡಿಸ್ಪೆನ್ಸರಿ ಘಟಕದಲ್ಲಿ ಫಾರ್ಮಸಿಸ್ಟ್ ಆಗಿದ್ದುಕೊಂಡು ಕಾರ್ಮಿಕರ ಚಿಕಿತ್ಸೆಗೆ ಹಣ ಪಾವತಿಸಲು ಲಂಚ ಕೇಳಿದ ಆರೋಪದಲ್ಲಿ ಅಧಿಕಾರಿಯೊಬ್ಬರನ್ನು ಎಸಿಬಿ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ಮಂಗಳೂರು, ಜೂನ್ 4: ಇಎಸ್ಐ ಪಣಂಬೂರು ವಿಭಾಗದ ಡಿಸ್ಪೆನ್ಸರಿ ಘಟಕದಲ್ಲಿ ಫಾರ್ಮಸಿಸ್ಟ್ ಆಗಿದ್ದುಕೊಂಡು ಕಾರ್ಮಿಕರ ಚಿಕಿತ್ಸೆಗೆ ಹಣ ಪಾವತಿಸಲು ಲಂಚ ಕೇಳಿದ ಆರೋಪದಲ್ಲಿ ಅಧಿಕಾರಿಯೊಬ್ಬರನ್ನು ಎಸಿಬಿ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ವಿಷ್ಣುಮೂರ್ತಿ ಭಟ್ ಎಸಿಬಿ ಬಲೆಗೆ ಬಿದ್ದ ಫಾರ್ಮಸಿ ಅಧಿಕಾರಿ. ಪ್ರಕರಣದಲ್ಲಿ ಎಸಿಬಿಗೆ ದೂರು ನೀಡಿದ್ದ ಪ್ರಶಾಂತ್ ಕುಮಾರ್ ಅನಾರೋಗ್ಯಕ್ಕೆ ಒಳಗಾಗಿದ್ದು ಬೇಕರಿ ಒಂದರಲ್ಲಿ ನೌಕರಿಯಾಗಿದ್ದ ಪತ್ನಿಯ ಇಎಸ್ಐ ಸೌಲಭ್ಯ ಬಳಸಿಕೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆನಂತರ, ಖಾಸಗಿ ವೈದ್ಯರು ಬರೆದುಕೊಟ್ಟಿದ್ದ ಔಷಧಿ ಚೀಟಿಯಲ್ಲಿದ್ದ ಔಷಧಿಗಳು ಇಎಸ್ಐ ಡಿಸ್ಪೆನ್ಸರಿ ಘಟಕದಲ್ಲಿ ಸಿಕ್ಕಿರಲಿಲ್ಲ. ಹಾಗಾಗಿ ಬೇರೆ ಖಾಸಗಿ ಮೆಡಿಕಲ್ ನಿಂದ ಔಷಧಿಯನ್ನು ಪಡೆದುಕೊಂಡಿದ್ದರು.

ಆನಂತರ, ಔಷಧಿಯ ಬಿಲ್ ಮೊತ್ತವನ್ನು ಇಎಸ್ಐ ಡಿಸ್ಪೆನ್ಸರಿ ವಿಭಾಗಕ್ಕೆ ಕೊಟ್ಟು ಅಲ್ಲಿಂದ ಹಣವನ್ನು ಇಎಸ್ಐ ಸೌಲಭ್ಯ ಹೊಂದಿದ್ದ ಮಹಿಳೆಯ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕಿತ್ತು. ಆದರೆ, ಬಿಲ್ ಮೊತ್ತವನ್ನು ಪಾವತಿ ಮಾಡಬೇಕಿದ್ದಲ್ಲಿ ಎರಡು ಸಾವಿರ ರೂಪಾಯಿ ಲಂಚ ನೀಡುವಂತೆ ಅಲ್ಲಿನ ಅಧಿಕಾರಿ ಕೇಳಿದ್ದರು. ಈ ಬಗ್ಗೆ ಪ್ರಶಾಂತ್ ಕುಮಾರ್ ಎಸಿಬಿಗೆ ದೂರು ನೀಡಿದ್ದು, ಶನಿವಾರ ಮಧ್ಯಾಹ್ನ ಪೊಲೀಸರ ಸೂಚನೆಯಂತೆ ಹಣವನ್ನು ನೀಡುತ್ತಿದ್ದಾಗಲೇ ದಾಳಿ ನಡೆಸಿದ್ದಾರೆ. ಡಿವೈಎಸ್ಪಿ ಕೆ.ಸಿ.ಪ್ರಕಾಶ್, ಇನ್ಸ್ ಪೆಕ್ಟರ್ ಶ್ಯಾಮಸುಂದರ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.

Sleuths of the Anti-Corruption Bureau (ACB) apprehended a staff of ESI Hospital in Panambur accepting a bribe for releasing money to a patient.
The arrested has been identified as Vishnumurthi, who works as a senior pharmacist at the ESI Hospital in Panambur.