ತುಂಗಾ ಮೇಲ್ದಂಡೆ ಇಂಜಿನಿಯರ್ ಮನೆಯಲ್ಲಿ ಲೆಕ್ಕಕ್ಕೆ ಸಿಗದಷ್ಟು ಆಸ್ತಿ , 25 ಎಕರೆ ಭೂಮಿ ! ಪಿಡಬ್ಲ್ಯುಡಿ ಅಧಿಕಾರಿಯ ಸ್ನಾನದ ಕೊಠಡಿಯಲ್ಲೂ 5 ಲಕ್ಷ ! 

17-06-22 02:54 pm       HK News Desk   ಕ್ರೈಂ

ತುಂಗಾ ಮೇಲ್ದಂಡೆ ಯೋಜನೆಯ ಸಹಾಯಕ ಇಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ ನಡೆದಿದ್ದು ಅಕ್ರಮವಾಗಿ ಕೂಡಿಟ್ಟ ಕೋಟ್ಯಂತರ ಬೆಲೆಯ ಆಸ್ತಿಯನ್ನು ಪತ್ತೆ ಮಾಡಲಾಗಿದೆ.

ಹಾವೇರಿ, ಜೂನ್ 17 : ತುಂಗಾ ಮೇಲ್ದಂಡೆ ಯೋಜನೆಯ ಸಹಾಯಕ ಇಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ ನಡೆದಿದ್ದು ಅಕ್ರಮವಾಗಿ ಕೂಡಿಟ್ಟ ಕೋಟ್ಯಂತರ ಬೆಲೆಯ ಆಸ್ತಿಯನ್ನು ಪತ್ತೆ ಮಾಡಲಾಗಿದೆ. ರಾಣೇಬೆನ್ನೂರು ವಿಭಾಗದ ಅಪ್ಪರ್ ತುಂಗಾ ಸಹಾಯಕ ಇಂಜಿನಿಯರ್ ಚಂದ್ರಪ್ಪ ಓಲೇಕಾರ ಭ್ರಷ್ಟಾಚಾರದಿಂದ ಅಪಾರ ಪ್ರಮಾಣದ ಆಸ್ತಿ ಮಾಡಿದ್ದಾನೆ. 

ದಾಳಿ ವೇಳೆ 13 ಲಕ್ಷ 39 ಸಾವಿರ ರೂ. ನಗದು ಹಣ, 400 ಗ್ರಾಂ ಬಂಗಾರ, 1600 ಗ್ರಾಂ ಬೆಳ್ಳಿ ಪತ್ತೆಯಾಗಿದೆ. ಅತ್ತೆ, ಹೆಂಡತಿ ಹಾಗೂ ತನ್ನ ಹೆಸರಲ್ಲಿ ಸೇರಿ 5 ಸೈಟು ಖರೀದಿಸಿದ್ದು ಪ್ರತಿಯೊಂದರ ಮೌಲ್ಯ 40-50 ಲಕ್ಷ ಇದೆ. ರಾಣೇಬೆನ್ನೂರು ತಾಲೂಕಿನ ಗುಡುಗೂರು-ಮೈದೂರು ಗ್ರಾಮದ ಮಧ್ಯೆ 25 ಎಕರೆ ಜಮೀನು ಖರೀದಿಸಿದ್ದಾನೆ. ಇದರ ಮೌಲ್ಯ ಕೋಟಿಗೂ ಮಿಕ್ಕಿದೆ. 

ರಾಣೇಬೆನ್ನೂರಿನ ನಗರ ಸಿದ್ದಾರೋಡ ಕಾಲೋನಿ ಹಾಗೂ ಆಣೂರು ಎಂಬಲ್ಲಿ ಎರಡೆರಡು ಮನೆ ಹೊಂದಿದ್ದು ಅಲ್ಲಿಗೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ.‌ ಹಣ, ಬಂಗಾರದ ಆಭರಣ ಹಾಗೂ ಆಸ್ತಿ ನೋಡಿ ಎಸಿಬಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಎಸಿಬಿ ಡಿವೈಎಸ್ಪಿ ಗೋಪಿ ನೇತೃತ್ವದಲ್ಲಿ 25 ಮಂದಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

ದ್ವಿತೀಯ ದರ್ಜೆ ಸಹಾಯಕನಲ್ಲಿ ಕೋಟ್ಯಂತರ ಆಸ್ತಿ 

ಚಿಕ್ಕಮಗಳೂರಿನಲ್ಲಿ ಎಸಿಬಿ ಅಧಿಕಾರಿಗಳ ಬೇಟೆ ನಡೆದಿದ್ದು ದ್ವಿತೀಯ ದರ್ಜೆ ಸಹಾಯಕ ತಿಮ್ಮಯ್ಯ ಎಂಬ ಅಧಿಕಾರಿಯ ಮನೆಯಲ್ಲಿ ಕೋಟ್ಯಂತರ ಆಸ್ತಿ ಪತ್ತೆಯಾಗಿದೆ. ಡಿವೈಎಸ್ಪಿ ಅನಿಲ್‌ ರಾಥೋಡ್ ನೇತೃತ್ವದಲ್ಲಿ ಏಕಕಾಲದಲ್ಲಿ ಮನೆ, ಕಚೇರಿ, ಪೂರ್ವಿಕರ ನಿವಾಸದ ಮೇಲೂ ದಾಳಿಯಾಗಿದೆ.‌ ಕಡೂರು ಪಟ್ಟಣದಲ್ಲಿ ಮೂರು‌ ನಿವೇಶನ, 8 ಗುಂಟೆ ಜಮೀನು, ಬಸೂರು ಸಮೀಪ 80 ಲಕ್ಷ ಮೌಲ್ಯದ 20 ಎಕ್ರೆ ತೋಟ, ಬಸೂರು ನಲ್ಲಿ 5 ಎಕ್ರೆ ಖಾಲಿ ನಿವೇಶನ, 50 ಸಾವಿರ ನಗದು, 100 ಗ್ರಾಂ  ಬೆಳ್ಳಿ, 250 ಗ್ರಾಂ  ಚಿನ್ನ ಪತ್ತೆ ಮಾಡಲಾಗಿದೆ. ‌

ಸ್ನಾನದ ಕೊಠಡಿಯಲ್ಲೂ ಐದು ಲಕ್ಷ ನಗದು ಪತ್ತೆ 

ಬೆಳಗಾವಿಯ ಪಿಡಬ್ಲ್ಯುಡಿ ಅಧೀಕ್ಷಕ ಇಂಜಿನಿಯರ್ ಬಿವೈ ಪವಾರ್ ಎಂಬ ಭ್ರಷ್ಟ ಅಧಿಕಾರಿಯ ಮನೆ, ಕಚೇರಿ ಸೇರಿ ಆರು ಕಡೆ ಎಸಿಬಿ ದಾಳಿ ನಡೆದಿದ್ದು ಅಪಾರ ಆಸ್ತಿ ಸಿಕ್ಕಿದೆ. ನಿಪ್ಪಾಣಿ ನಗರದಲ್ಲಿರುವ ಮನೆ, ಬೋರಗಾಂವಿಯಲ್ಲಿರುವ ಈತನಿಗೆ ಸೇರಿದ್ದೆನ್ನಲಾದ ಕಾರ್ಖಾನೆಯಲ್ಲೂ ದಾಳಿ ನಡೆದಿದೆ. ನಿಪ್ಪಾಣಿಯ ಮನೆಯ ಸ್ನಾನದ ಕೊಠಡಿಯಲ್ಲಿ ಐದು ಲಕ್ಷ ನಗದು ಸಿಕ್ಕಿದೆ. ಪವಾರ್ ಇದೇ ಜೂನ್ 30 ಕ್ಕೆ ನಿವೃತ್ತರಾಗಲಿದ್ದು ಅಷ್ಟರಲ್ಲೇ ಎಸಿಬಿ ದಾಳಿ ನಡೆಸಿ ಭ್ರಷ್ಟಾಚಾರ ಬಯಲು ಮಾಡಲಾಗಿದೆ. ‌

ACB raid in PWDs house in Haveri, five lakhs found in bathroom, 25 acres of land records found.