ಮಗನ ಎಟಿಎಂ ಕಾರ್ಡ್ ಬ್ಲಾಕ್ ನೆಪದಲ್ಲಿ ಶಿಕ್ಷಕಿ ತಾಯಿ ಖಾತೆಗೆ ಕನ್ನ ; ಬರೋಬ್ಬರಿ ಎಂಟು ಲಕ್ಷ ರೂ. ಕಿತ್ತುಕೊಂಡ ಸೈಬರ್ ವಂಚಕರು ! 

24-06-22 10:38 pm       Mangalore Correspondent   ಕ್ರೈಂ

ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ, ಕೆವೈಸಿ ಅಪ್ಡೇಟ್ ಮಾಡಬೇಕೆಂದು ಹೇಳಿ ಕರೆ ಮಾಡಿ ಹಂತ ಹಂತವಾಗಿ ಎಂಟು ಲಕ್ಷ ರೂ. ಲಪಟಾಯಿಸಿದ ಘಟನೆ ನಡೆದಿದ್ದು ಮೋಸ ಹೋದ ಶಿಕ್ಷಕಿಯೊಬ್ಬರು ಪೊಲೀಸ್ ದೂರು ನೀಡಿದ್ದಾರೆ. 

ಪುತ್ತೂರು, ಜೂನ್ 24 : ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ, ಕೆವೈಸಿ ಅಪ್ಡೇಟ್ ಮಾಡಬೇಕೆಂದು ಹೇಳಿ ಕರೆ ಮಾಡಿ ಹಂತ ಹಂತವಾಗಿ ಎಂಟು ಲಕ್ಷ ರೂ. ಲಪಟಾಯಿಸಿದ ಘಟನೆ ನಡೆದಿದ್ದು ಮೋಸ ಹೋದ ಶಿಕ್ಷಕಿಯೊಬ್ಬರು ಪೊಲೀಸ್ ದೂರು ನೀಡಿದ್ದಾರೆ. 

ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಸಜಿಲಾ ಎಂಬವರು ಸರಕಾರಿ ಪ್ರೌಢಶಾಲೆ ಶಿಕ್ಷಕಿಯಾಗಿದ್ದು ಅವರ ಮಗನ ಮೊಬೈಲ್ ಸಂಖ್ಯೆಗೆ ಎಸ್ ಬಿಐ ಖಾತೆಯ ಎಟಿಎಂ ಬ್ಲಾಕ್ ಆಗಿರುವ ಬಗ್ಗೆ ಜೂನ್ 11 ರಂದು ಮೆಸೇಜ್ ಬಂದಿತ್ತು. ಆನಂತರ ಜೂನ್ 23 ರಂದು ಕೆವೈಸಿ ಅಪ್ಡೇಟ್ ಮಾಡಲು ಕಸ್ಟಮರ್ ಕೇರ್ ನಂಬರ್ ಎಂದು 8240871104 ಗೆ ಕರೆ ಮಾಡಲು ಮೆಸೇಜ್ ಬಂದಿತ್ತು. ಅದರಂತೆ ಮಗ ಪ್ರಣವ್ ಆ ಸಂಖ್ಯೆಗೆ ಕರೆ ಮಾಡಿದ್ದು ಆ ಕಡೆಯಿಂದ ನಿಮ್ಮ ಖಾತೆಯ ಪಿನ್ ಜನರೇಟ್ ಮಾಡಲು ಎಸ್ ಬಿಐ ಖಾತೆಯುಳ್ಳ ಮನೆಯ ಇತರ ಸದಸ್ಯರ ಮಾಹಿತಿ ಕೇಳಿದ್ದಾರೆ. 

ಆನಂತರ ತಾಯಿಯ ಎಸ್ ಬಿಐ ಖಾತೆಯ ವಿವರ ನೀಡಿದ್ದಾನೆ. ಬಳಿಕ ಅದೇ ಅಪರಿಚಿತ ವ್ಯಕ್ತಿ ಶಿಕ್ಷಕಿಯ ಮೊಬೈಲ್ ಸಂಖ್ಯೆಗೆ ಬಂದಿರುವ, ಓಟಿಪಿ ಸಂಖ್ಯೆ ಹೇಳುವಂತೆ ತಿಳಿಸಿದ್ದಾನೆ. ಕೊನೆಗೆ, ನೀವು ಹತ್ತಿರದ ಎಟಿಎಂ ಕೇಂದ್ರಕ್ಕೆ ಹೋಗಿ ಇಂಟರ್ನೆಟ್ ಬ್ಯಾಂಕಿಂಗ್ ಜನರೇಟ್ ಮಾಡುವಂತೆ ಸೂಚಿಸಿದ್ದ. ಆದರೆ ಅದೇ ದಿನ ಸಂಜೆ ಬ್ಯಾಂಕಿನಿಂದ ಕರೆ ಮಾಡಿ, ನೀವು ಬ್ಯಾಂಕ್ ಖಾತೆಯ ಮೊಬೈಲ್ ಸಂಖ್ಯೆ ಬದಲಿಸಿದ್ದೀರಾ ಎಂದು ಕೇಳಿದಾಗ ತಾಯಿ, ಮಗ ಮೋಸ ಹೋಗಿರುವುದು ಅರಿವಿಗೆ ಬಂದಿದೆ. 

ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ, ಖಾತೆಯಲ್ಲಿದ್ದ ಎಂಟು ಲಕ್ಷ ರೂ.ವನ್ನು ಹಂತ ಹಂತವಾಗಿ ಖಾಲಿ ಮಾಡಲಾಗಿತ್ತು. 25 ಸಾವಿರ, 30 ಸಾವಿರ, 50 ಸಾವಿರದಂತೆ ಮೂರು ಬಾರಿ, ಆನಂತರ ತಲಾ ಎರಡು ಲಕ್ಷದಂತೆ ಮೂರು ಬಾರಿ ಒಟ್ಟು 7,47,080 ರೂ. ಹಣವನ್ನು ಲಪಟಾಯಿಸಿರುವುದು ಪತ್ತೆಯಾಗಿದೆ. ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಬಳಿ ಕೇಳಿದಾಗ, ನಿಮ್ಮ ಖಾತೆಯಿಂದ ಎಂಟು ಲಕ್ಷ ರೂ. ಯಾರೋ ಲೋನ್ ಪಡೆದಿದ್ದಾಗಿ ತಿಳಿಸಿದ್ದಾರೆ. ಮೋಸದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೈಬರ್ ವಂಚಕರು ಎಟಿಎಂ ಬ್ಲಾಕ್ ಎಂದು ಹೇಳಿ ಯಾಮಾರಿಸಿ ಹಣ ಲಪಟಾಯಿಸಿದ್ದಾಗಿ ಪೊಲೀಸರು ಶಂಕಿಸಿದ್ದಾರೆ.

Mangalore Cyber crime, frauds loot 8 lakhs from teachers account in Puttur.